ಟಿಎನ್ ಸೀತಾರಾಮ್ ನಿರ್ದೇಶಿಸಿದ ಯಾವ ಧಾರಾವಾಹಿ ನಿಮ್ಮ ಫೇವರಿಟ್? ಎವರ್‌ಗ್ರೀನ್ ಸೀರಿಯಲ್ ಯಾವುದು?
ಕನ್ನಡ ಕಿರುತೆರೆ ಈಗಾಗಲೇ ನೂರಾರು ಧಾರಾವಾಹಿಗಳನ್ನು ಕಂಡಿದೆ. ಆದರೆ 'ಎವರ್ ಗ್ರೀನ್' ಎಂಬ ಕೆಲವೇ ಕೆಲವು ಧಾರಾವಾಹಿಗಳು ಪ್ರೇಕ್ಷಕರ ಮನಃ ಪಟಲದಲ್ಲಿ ಅಚ್ಚಾಗಿ ಕೂತಿದೆ ಎಂದರೆ ತಪ್ಪಾಗಲ್ಲ. ಅದರಲ್ಲೂ ನಟ, ನಿರ್ದೇಶಕ, ಟಿ ಎನ್ ಸೀತಾರಾಮ್ ಅವರ ಧಾರಾವಾಹಿಗಳು ಅಂದರೆ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಬಹಳ ಅಚ್ಚುಮೆಚ್ಚು.
ಸಾಮಾನ್ಯವಾಗಿ ಕಿರುತೆರೆ ಅದರಲ್ಲೂ ಧಾರಾವಾಹಿಗಳನ್ನು, ದಿನವಿಡೀ ಮನೆ ಕೆಲಸ ಹಾಗೂ ಇನ್ನಿತರ ಕೆಲಸಗಳಲ್ಲಿ ಬ್ಯುಸಿಯಾಗಿರುವ ಮನೆಯ ಗೃಹಿಣಿಯರು ಸಂಜೆ ಟಿವಿ ಮುಂದೆ ಕುಳಿತು ನೋಡುತ್ತಾರೆ. ಆದರೆ ನಿರ್ದೇಶಕ ಟಿ ಎನ್ ಸೀತಾರಾಮ ಅವರ ಧಾರಾವಾಹಿಗಳನ್ನು, ಮಹಿಳೆಯರಷ್ಟೇ ಅಲ್ಲ ಪುರುಷರು ಕೂಡ ಅಷ್ಟೇ ಆಸಕ್ತಿಯಿಂದ ನೋಡುತ್ತಿದ್ದರು.

'ಮಾಯಾಮೃಗ' ಧಾರಾವಾಹಿ ಮೂಲಕ ನಿರ್ದೇಶಕ ಟಿ ಎನ್ ಸೀತಾರಾಮ ಅವರು ಕಿರುತೆರೆ ನಿರ್ದೇಶಕನಾಗಿ ವೃತ್ತಿ ಆರಂಭಿಸಿದರು. ಡಿ ಡಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಾಯಾಮೃಗ' ಸುಮಾರು 25 ವರ್ಷಗಳ ಹಿಂದೆಯೇ ಜನಮನ ಗೆದ್ದು ಬಹಳಷ್ಟು ಪಾಪ್ಯುಲಾರಿಟಿಯನ್ನು ತಂದು ಕೊಟ್ಟಿತ್ತು. ಹಿರಿಯ ಕಲಾವಿದರಾದ ದತ್ತಣ್ಣ, ವೈಶಾಲಿ ಕಾಸರವಳ್ಳಿ, ಲಕ್ಷ್ಮಿ ಚಂದ್ರಶೇಖರ್, ಎಸ್. ಎನ್ ಸೇತುರಾಮ್ ಸೇರಿದಂತೆ, ನಟರಾದ ಮಾಳವಿಕಾ, ಅವಿನಾಶ್, ರಾಜೇಶ್ ನಟರಂಗ, ಸುಂದರ್, ವೀಣಾ ಸುಂದರ್, ಜಯಶ್ರೀ, ಮಂಜು ಭಾಷಿಣಿ ಹೀಗೆ ಇಂದು ಧಾರಾವಾಹಿ ಕ್ಷೇತ್ರದಲ್ಲಿ ಖ್ಯಾತಿಗಳಿಸಿರುವ ಎಲ್ಲಾ ನಟ ನಟಿಯರು ಮಾಯಾಮೃಗದ ಮೂಲಕವೇ ತಮ್ಮ ನಟನಾ ಜರ್ನಿ ಆರಂಭಿಸಿದರು ಎಂದರೆ ತಪ್ಪಾಗಲ್ಲ.
'ಮಿಂಚು', 'ಮುಕ್ತ', 'ಮುಕ್ತ ಮುಕ್ತ', 'ಮಹಾಪರ್ವ', 'ಮಗಳು ಜಾನಕಿ', 'ಮತ್ತೆ ಮಾಯಾಮೃಗ' ಹೀಗೆ ಬ್ಯಾಕ್ ಟು ಬ್ಯಾಕ್ ಹಲವಾರು ಪಾಪ್ಯುಲರ್ ಧಾರಾವಾಹಿಗಳನ್ನು ನೀಡಿರುವ ಖ್ಯಾತಿ ನಿರ್ದೇಶಕ ಟಿ ಎನ್ ಸೀತಾರಾಮ್ ಅವರದ್ದು.
ಇವರ ಧಾರಾವಾಹಿಗಳು ಯಾವುದೇ ರೀತಿಯ ಉತ್ಪ್ರೇಕ್ಷೆ ಇಲ್ಲದೆ, ನೈಜವಾಗಿ ಮಧ್ಯಮ ವರ್ಗ ಕುಟುಂಬಗಳ ಸುಖ ದುಃಖ ನೋವು ನಲಿವುಗಳನ್ನು ತೋರಿಸುವುದರಿಂದ, ಜನರ ಮನಕ್ಕೆ ಬಹಳ ಹತ್ತಿರವಾಗಿದ್ದವು. ಅಷ್ಟೇ ಅಲ್ಲದೆ ಸಮಾಜದಲ್ಲಿ ನಡೆಯುವ ಅನಾಚಾರಗಳನ್ನು ಹಾಗೂ ಅದಕ್ಕೆ ಕಾನೂನಿನ ಮೂಲಕ ಪಡೆಯಬಹುದಾದ ನ್ಯಾಯವನ್ನು ಬಹಳ ಅದ್ಭುತ ರೀತಿಯಲ್ಲಿ ತೋರಿಸಿಕೊಟ್ಟವರು ನಿರ್ದೇಶಕ ಟಿ ಎನ್ ಸೀತಾರಾಮ್.
'ಮುಕ್ತ' ಹಾಗೂ 'ಮುಕ್ತ ಮುಕ್ತ' ಧಾರಾವಾಹಿಗಳಲ್ಲಂತೂ ಇವರ ಕೋರ್ಟ್ ಸೀನ್ ಗಳಿಗೆ ಪ್ರೇಕ್ಷಕರು ಕಾಯುತ್ತಿದ್ದರು ಎಂದರೆ ಉತ್ಪೇಕ್ಷೆ ಅಲ್ಲ. ಕಥೆಯ ಜೊತೆಗೆ ನಟರನ್ನು ಆಯ್ಕೆ ಮಾಡುವಾಗಲೂ ಮತ್ತು ನಟನೆಯ ವಿಚಾರದಲ್ಲೂ ಬಹಳ ಖಡಕ್ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಿದ್ದ ಈ ನಿರ್ದೇಶಕ ಇಂದು ಕನ್ನಡ ಕಿರುತೆರೆಗೆ ಬಹಳ ಅದ್ಭುತ ನಟರ ಬಹುದೊಡ್ಡ ತಾರಾಗಣವನ್ನೇ ಕೊಟ್ಟಿದ್ದಾರೆ ಎಂದರೆ ಖಂಡಿತ ಉತ್ಪ್ರೇಕ್ಷೆ ಆಗುವುದಿಲ್ಲ.

ಇವರ 'ಮಾಯಾಮೃಗ' ಧಾರಾವಾಹಿ ಅದೆಷ್ಟು ಖ್ಯಾತಿಗಳಿಸಿತೆಂದರೆ, ಅದರ ಮುಂದುವರಿದ ಭಾಗವಾಗಿ 25 ವರ್ಷಗಳ ನಂತರ 'ಮತ್ತೆ ಮಾಯಾಮೃಗ' ಎಂಬ ಧಾರಾವಾಹಿಯನ್ನು ಪ್ರಸಾರ ಮಾಡುವಂತೆ ಒತ್ತಾಯ ಮಾಡಿದ್ದಷ್ಟೇ ಅಲ್ಲದೆ, ನಿರ್ದೇಶಕ ಟಿ ಎನ್ ಸೀತಾರಾಮ್ ಅವರ ಅಭಿಮಾನಿಗಳೇ ಒಂದಷ್ಟು ಹಣವನ್ನು ಹೂಡಿಕೆ ಮಾಡಿ ಟಿ ಎನ್ ಸೀತಾರಾಮ ಅವರ ಭೂಮಿಕ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುವಂತೆ ಮಾಡಿದ್ದು ಈ ನಿರ್ದೇಶಕರ ಹಾಗೂ ಆ ಕಥೆಯ ಖ್ಯಾತಿ ಹಾಗೂ ಸಾಮರ್ಥ್ಯವನ್ನು ಎತ್ತಿ ಹಿಡಿಯುತ್ತದೆ.
ದಶಕದ ಹಿಂದೆ ಪ್ರಸಾರವಾಗುತ್ತಿದ್ದ ಇವರ 'ಮುಕ್ತ' ಹಾಗೂ 'ಮಿಂಚು' ಧಾರಾವಾಹಿಗಳು ಇವರದ್ದೇ ಭೂಮಿಕಾ ಟಾಕೀಸ್ ಎಂಬ ಯುಟ್ಯೂಬ್ ಚಾನೆಲ್‌ನಲ್ಲಿ ಪ್ರತಿದಿನ ಪ್ರಸಾರವಾಗುತ್ತಿದ್ದು, ಇಂದಿಗೂ ಅಷ್ಟೇ ಪಾಪುಲಾರಿಟಿಯಿಂದ ಜನ ವೀಕ್ಷಣೆ ಪಡೆಯುತ್ತಿದೆ. ಮೂಲತಃ ಲಾಯರ್ ಆಗಿದ್ದ ಟಿ ಎನ್ ಸೀತಾರಾಮ ಅವರು, ಕಿರುತೆರೆ ಕ್ಷೇತ್ರಕ್ಕೆ ಕಾಲಿಟ್ಟು ಕನ್ನಡ ಕಿರುತೆರೆ ಹಿಂದೆಂದೂ ಕಾಣದಂತಹ ಎವರ್ ಗ್ರೀನ್ ಹಾಗೂ ನೈಜ ಕಥಾಹಂದರವಿರುವ ಅದ್ಭುತ ಧಾರಾವಾಹಿಗಳನ್ನು ನೀಡಿದ್ದಾರೆ.


Click it and Unblock the Notifications











