ಆರ್ಥಿಕ ಸಂಕಷ್ಟದಿಂದ ಆತ್ಮ*ಹತ್ಯೆಗೆ ಶರಣಾದ 36 ವರ್ಷದ ಖ್ಯಾತ ಕಿರುತೆರೆ ನಟ
ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರ ಅಲ್ಲ. ಸಮಸ್ಯೆಗಳನ್ನು ಎದುರಿಸಿ ಬದುಕುವ ಶಕ್ತಿ ಹೊಂದಬೇಕು. ಸಮಸ್ಯೆ ಬಂದಾಗ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಆದರೆ ವಿಶ್ವದೆಲ್ಲೆಡೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹಿಂದೊಮ್ಮೆ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಇದು ಸಾಮಾಜಿಕ ಸಮಸ್ಯೆ ಎಂದು ಕೂಡ ಹೇಳಿದೆ. ಪ್ರತಿ 100 ಜನರಲ್ಲಿ 70 ಜನ ಪುರುಷರೇ
ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಎನ್‌ಸಿಆರ್‌ಬಿ { ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ } ಕೂಡ ವರದಿ ನೀಡಿದೆ. ಈ ವರದಿಯ ಪ್ರಕಾರ ಭಾರತದಲ್ಲಿ 30 ರಿಂದ 45 ವರ್ಷ ವಯಸ್ಸಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾನಾ ಸಮಸ್ಯೆಗಳಿಂದ ಬೇಸತ್ತು, ತಾಳ್ಮೆಯ ಕೊರತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಲಲಿತ್ ಮಂಚಂದ ಸಾವು ಮತ್ತೊಂದು ಉದಾಹರಣೆ.

ಹೌದು, ಲಲಿತ್ ಮಂಚಂದ .. ಹಿಂದಿ ಕಿರುತೆರೆಯ ಖ್ಯಾತ ಹೆಸರು. ಹಿಂದಿಯ ಪ್ರಸಿದ್ಧ ಧಾರಾವಾಹಿ ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ ನೋಡಿದವರು ಇವರನ್ನು ಮರೆಯಲು ಸಾಧ್ಯ ಇಲ್ಲ. ಪಾತ್ರ ಚಿಕ್ಕದಾಗಿದ್ದರು ಕೂಡ ಈ ಧಾರಾವಾಹಿಯಲ್ಲಿ ತಮ್ಮ ಅಭಿನಯದಿಂದ ಅನೇಕರ ಹೃದಯ ಗೆದ್ದಿದ್ದ 36 ವರ್ಷದ ಲಲಿತ್ ಮಂಚಂದ ಇಂದು ಉತ್ತರ ಪ್ರದೇಶದ ಮೀರತ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇನ್ನು, ಆತ್ಮಹತ್ಯೆಗೆ ನಿಖರವಾದ ಕಾರಣ ಸದ್ಯ ಗೊತ್ತಾಗದಿದ್ದರು 'ಅಮರ್ ಉಜಾಲಾ' ವರದಿ ಮಾಡಿರುವಂತೆ ಲಲಿತ್ ಮಂಚಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹಣಕಾಸಿನ ಕೊರತೆಯಿಂದಾಗಿ ಆರು ತಿಂಗಳ ಹಿಂದೆ ಮುಂಬೈನ ಮನೆ ಖಾಲಿ ಮಾಡಿ ಮರಳಿ ತಮ್ಮೂರು ಮೀರತ್‌ಗೆ ತೆರಳಿದ್ದರು.
ಇನ್ನು ಸ್ಥಳೀಯ ಮಾಧ್ಯಮಗಳು ಲಲಿತ್ ಮಂಚಂದ ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡಕ್ಕೊಳಗಾಗಿದ್ದರು, ವ್ಯೆಯಕ್ತಿಕ ಬದುಕಿನಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದರು ಎಂದು ವರದಿಯನ್ನು ಮಾಡಿವೆ. ಸದ್ಯ ಲಲಿತ್ ಮಂಚಂದ ಅವರ ಸಾವಿನ ಕುರಿತು ತನಿಖೆಯನ್ನು ಮಾಡುತ್ತಿರುವ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇನ್ನು ಮನೆಯಲ್ಲಿ ಯಾವುದೇ ಸೂಸೈಡ್ ನೋಟ್ ಸಿಗದ ಹಿನ್ನೆಲೆ ಲಲಿತ್ ಮಂಚಂದ ಅವರ ಸಾವಿನ ಹಿಂದೆ ಬೇರೆಯವರ ಕೈವಾಡ ಇದೆಯಾ ಎನ್ನುವ ದಿಸೆಯಲ್ಲಿ ಕೂಡ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಲಲಿತ್ ಮಂಚಂದ ಅವರ ಅಕಾಲಿಕ ನಿಧನಕ್ಕೆ ಸಿನಿ ಮತ್ತು ಟಿವಿ ಆರ್ಟಿಸ್ಟ್ ಅಸೋಸಿಯೇಶನ್ (CINTAA) ಕಂಬನಿ ಮಿಡಿದಿದ್ದು ಕಿರುತೆರೆಯ ಅನೇಕರು ಈ ಸುದ್ದಿಯನ್ನು ಕೇಳಿ ದಿಗ್ಬ್ರಾಂತಿಗೆ ಒಳಗಾಗಿದ್ದಾರೆ. ಲಲಿತ್ ಮಂಚಂದ ಅಶ್ರುತರ್ಪಣ ಸಲ್ಲಿಸಿದ್ದಾರೆ.
'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ' ಹೊರತು ಪಡಿಸಿದರೆ ಲಲಿತ್ ಮಂಚಂದ 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' , 'ಇಂಡಿಯಾಸ್ ಮೋಸ್ಟ್ ವಾಟೆಂಡ್' , 'ಕ್ರೈಮ್ ಪೆಟ್ರೋಲ್' , 'ಸೇವಾಂಚಲ ಕೀ ಪ್ರೇಮ ಕಥಾ' , ಹೀಗೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.
ಇನ್ನು ಇತ್ತೀಚಿಗೆ ವೆಬ್ ಸರಣಿಯಲ್ಲಿ ಕೂಡ ಅಭಿನಯಿಸಿದ್ದ ಲಲಿತ್ ಈ ಸರಣಿಯ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಕೊಂಡಿದ್ದರು. ವೆಬ್ ಸರಣಿಯ ಪ್ರಸಾರದ ದಿನಕ್ಕೆ ಎದುರು ನೋಡುತ್ತಿದ್ದರು. ಪತ್ನಿ ತಾರು, 18 ವರ್ಷದ ಮಗ ಉಜ್ವಲ್ ಮತ್ತು ಮಗಳು ಶ್ರೇಯಾ ಅವರನ್ನು ಲಲಿತ್ ಮಂಚಂದ ಅಗಲಿದ್ದಾರೆ.


Click it and Unblock the Notifications











