"ಬಡವ್ರ ಮಕ್ಳು ಬೆಳಿಬೇಕು" ಅನ್ನೋದು ದೊಡ್ಡ ಆಶಯ; ರಾಜ್ ಹೇಳಿದ್ದನ್ನು ತಪ್ಪಾಗಿ ಅರ್ಥೈಸಲಾಗಿದೆ- ಧನಂಜಯ್
ಬಡವರ ಮಕ್ಕಳು ಬೆಳೆಯಬೇಕಾ? ಪ್ರತಿಭೆ ಇದ್ದವರು ಬೆಳೆಯಬೇಕಾ? ಎನ್ನುವ ಚರ್ಚೆ ಸ್ಯಾಂಡಲ್‌ವುಡ್‌ನಲ್ಲಿ ಶುರುವಾಗಿದೆ. ಅದಕ್ಕೆ ಕಾರಣ ನಟ ಧನಂಜಯ್ ಹಾಗೂ ನಟ, ನಿರ್ದೇಶಕ ರಾಜ್. ಬಿ ಶೆಟ್ಟಿ ನೀಡಿದ್ದ ಹೇಳಿಕೆಗಳು. 'ಬಡವ ರಾಸ್ಕಲ್' ಸಿನಿಮಾ ಸಮಯದಲ್ಲೇ "ಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ" ಎಂದು ಧನಂಜಯ್ ಹೇಳಿದ್ದರು. ಅದು ವೈರಲ್ ಆಗಿತ್ತು.
ನಟ ಧನಂಜಯ್ ಹೇಳಿಕೆಯನ್ನು ಎಲ್ಲರೂ ಒಪ್ಪಿಕೊಂಡಿದ್ದರು. ಬಡವರಿಗೆ ಸರಿಯಾಗಿ ಅವಕಾಶಗಳು ಸಿಗುತ್ತಿಲ್ಲ. ಹಿಂದುಳಿದವರಿಗೆ ಅವಕಾಶ ಸಿಕ್ಕರೆ ಅವರು ಮೇಲೆ ಬರುತ್ತಾರೆ. ಅವರಿಗೆ ಒಂದು ದಾರಿ ಆಗುತ್ತದೆ. ಇದೇ ಅರ್ಥದಲ್ಲಿ ಧನು ಮಾತನಾಡಿದ್ದರು. ಆದರೆ ಇತ್ತೀಚೆಗೆ '45' ಸಿನಿಮಾ ಪ್ರಚಾರದ ವೇಳೆ ರಾಜ್ ಬಿ ಶೆಟ್ಟಿ ನೀಡಿದ್ದ ಹೇಳಿಕೆ ಕೂಡ ವೈರಲ್ ಆಗಿ ಹೊಸ ಚರ್ಚೆಗೆ ಕಾರಣವಾಗಿತ್ತು. "ಬಡವರ ಮಕ್ಕಳು ಬೆಳೆಯಬೇಕು ಎನ್ನುವುದು ಪ್ರಶ್ನೆಯಲ್ಲ. ಅರ್ಹತೆ ಮಾತ್ರ ಪ್ರಶ್ನೆ ಆಗುತ್ತೆ" ಎಂದಿದ್ದರು. ರಾಜ್ ಹೇಳಿಕೆಯನ್ನು ಸಾಕಷ್ಟು ಜನ ಸಮರ್ಥಿಸಿಕೊಂಡಿದ್ದರು. ಇದೇ ವಿಚಾರದ ಬಗ್ಗೆ ಇದೀಗ ನಟ ಧನಂಜಯ್ ಪ್ರತಿಕ್ರಿಯಿಸಿದ್ದಾರೆ.

"ಬಡವ್ರ ಮಕ್ಳು ಬೆಳಿಬೇಕು ಅನ್ನೋದು ದೊಡ್ಡ ಆಶಯ. ಆದರೆ ಅದೇ ಟ್ರಂಪ್ ಕಾರ್ಡ್ ಆಗಬಾರದು. ಇಲ್ಲದೇ ಇರುವವನಿಗೆ ಒಂದಷ್ಟು ವ್ಯವಸ್ಥೆ ಕೊಡಿ ಎನ್ನುವುದು, ಇರುವವರಿಗೆ ಅಭದ್ರತೆ ಉಂಟು ಮಾಡಬಾರದು. ಅದು ಎಲ್ಲರಿಗೂ ಅರ್ಥವಾಗುತ್ತದೆ. ಅದರ ಅರ್ಥ ಎಲ್ಲರಿಗೂ ಸಮಾನ ಅವಕಾಶ ಕೊಡಿ, ಅವಕಾಶಗಳು ಸಿಗಲಿ ಎನ್ನುವುದು. ಹಾಗಂತ ಇರುವವರಿಗೆ ಅವಕಾಶ ಕೊಡಬೇಡಿ ಅಂತ ಅಲ್ಲ. ನಿಮ್ಮ ಬಳಿ ಎಲ್ಲಾ ಇದ್ದಾಗ ನಿಮಗೆ ಬೇರೆ ಆಯ್ಕೆ ಇರುತ್ತೆ. ನಮಗೆ ಸಿನ್ಮಾಗೆ ಬಂದು ಸೋತ್ರೆ ಬೇರೆ ಆಯ್ಕೆ ಇರಲ್ಲ. ಅಂತಿಮವಾಗಿ ಪ್ರತಿಭೆ ಇರಲೇಬೇಕು. ಆದ್ರೆ ಪ್ರತಿಭೆ ಇದ್ದವರಿಗೆ ಅವಕಾಶ ಇದೆ ಅಂತಲ್ಲ. ನಮಗೆ ಈ ವ್ಯವಸ್ಥೆಯಿಂದ ಸಾಕಷ್ಟು ಸಿಕ್ಕಿದೆ. ಅದು ಮುಂದೆ ಬರುವವರಿಗೆ ಸಿಗಬೇಕು ಅಷ್ಟೆ" ಎಂದು ಧನಂಜಯ್ ಹೇಳಿದ್ದಾರೆ.
ಮಾತು ಮುಂದುವರೆಸಿದ ಧನು "ನನ್ನ ಹೇಳಿಕೆ ಯಾರಿಗಾದರೂ ಅಭದ್ರತೆ ಕ್ರಿಯೇಟ್ ಮಾಡಿದ್ರೆ, ಏನೋ ಸಮಸ್ಯೆ ಇದೆ ಅಂತ ಅರ್ಥ.. ರಾಜ್ ಬಿ ಶೆಟ್ಟಿ ಬೇರೆ ರೀತಿ ಹೇಳ್ತಿದ್ರು. ಅದು ಬೇರೆ ರೀತಿ ಅರ್ಥ ಪಡೆದುಕೊಂಡಿದೆ. ಅವ್ರು ಕೂಡ ಯಾವ ಹಿನ್ನೆಲೆಯಿಂದ ಬಂದಿದ್ದಾರೆ ಗೊತ್ತು. ಅವ್ರು ನನ್ನ ಜೊತೆ ಮಾತನಾಡಿದ್ರು. ಅವ್ರು ಒಳ್ಳೆ ಅರ್ಥದಲ್ಲಿ ಹೇಳಿದ್ರು. ಶತಮಾನಗಳು ಕಳೆದರೂ ಆ ಹೇಳಿಕೆ ಆಶಯ ಅದೇ ರೀತಿ ಇರುತ್ತದೆ. ಇಂತಹ ನಡೆಯಲಿ ಪರವಾಗಿಲ್ಲ" ಎಂದು ವಿವರಿಸಿದ್ದಾರೆ.
ಅಂದು ಶಿವಣ್ಣನ ಹಿನ್ನಲೆ ಬಗ್ಗೆ ಮಾತನಾಡುತ್ತಾ ರಾಜ್ ಈ ವಿಚಾರ ಪ್ರಸ್ತಾಪಿಸಿದ್ದರು. ಅಣ್ಣಾವ್ರ ಮಗನಾದರೂ ಶಿವಣ್ಣ ನಟನೆ ಕಲಿತು ಬಂದ್ರು. ಆದರೆ ಈಗ ನಾನು ಹೀರೊ ಆಗಬಹುದಾ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡ್ತಾರೆ. "ಬಡವರ ಮಕ್ಕಳು ಬೆಳೆಯಬೇಕು ಎನ್ನುವುದು ಪ್ರಶ್ನೆಯಲ್ಲ. ಅರ್ಹತೆ ಮಾತ್ರ ಪ್ರಶ್ನೆ ಆಗುತ್ತೆ. ಒಬ್ಬ ಬಡವನ ಮನ ಪ್ರತಿಭೆ ಇರಲ್ಲ, ಒಬ್ಬ ಶ್ರೀಮಂತನ ಮಗ, ಬಹಳ ಪ್ರತಿಭಾವಂತನಾಗಿರುತ್ತಾನೆ. ಇದರಲ್ಲಿ ಬಡವ ಅಂತ ಅವನಿಗೆ ಅವಕಾಶ ಕೊಡಬೇಕಾ? ಪ್ರತಿಭಾವಂತ ಅಂತ ಇವನಿಗೆ ಕೊಡಬೇಕಾ?" ಎಂದು ಪ್ರಶ್ನಿಸಿದ್ದರು.
ಧನಂಜಯ್ ಹಾಗೂ ರಾಜ್ ಬಿ. ಶೆಟ್ಟಿ ಇಬ್ಬರೂ ಹೇಳಿದ್ದು ಸರಿ ಇದೆ. ಪ್ರತಿಭೆ ಇರುವ ಬಡವರಿಗೆ ಅವಕಾಶ ಸಿಗಲಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಒಳ್ಳೆ ಈ ವಿಚಾರ ಒಳ್ಳೆ ರೀತಿಯಲ್ಲಿ ಚರ್ಚೆ ಆಗುತ್ತಿದೆ.


Click it and Unblock the Notifications











