ಮದುವೆ ಬೇಡ ಲಿವ್ ಇನ್ ಸಂಬಂಧದಲ್ಲಿರು ; ನಟನ ಜೊತೆ ಇರುವಂತೆ ಮಗಳಿಗೆ ಒತ್ತಾಯ ಮಾಡಿದ ತಾಯಿ
ಸಾಮಾನ್ಯವಾಗಿ ಗಂಡು ಮಕ್ಕಳ ವಿಷಯದಲ್ಲಿ ಮೃದು ಧೋರಣೆ ತೋರುವ ಪೋಷಕರು, ಹೆಣ್ಣು ಮಕ್ಕಳ ವಿಚಾರದಲ್ಲಿ ಚಿಕ್ಕಂದಿನಿಂದಲೇ ಕಟ್ಟುಪಾಡು ವಿಧಿಸುತ್ತಾರೆ. ಲಿಂಗ ಸಮಾನತೆಯ ಪಾಠವನ್ನು ಮಾಡದೇ ನೀನು ಇದನ್ನು ಮಾಡಬೇಡ.. ಹೀಗೆ ಮಾತನಾಡಬೇಡ.. ಈ ಡ್ರೆಸ್ ಹಾಕಬೇಡ.. ಮನೆಗೆ ತಡವಾಗಿ ಬರಬೇಡ.. ಹುಡುಗರ ಜೊತೆ ಸಲುಗೆಯಿಂದ ಇರಬೇಡ..
ಹೀಗೆ ಹಲವರು ಹಲವು ಮಾತುಗಳನ್ನು ಮನೆಯಲ್ಲಿಯೇ ಹೇಳುತ್ತಾರೆ. ಈ ಎಲ್ಲಾ ಬೇಡಗಳ ನಡುವೆಯೇ ಹೆಣ್ಣು ಮಕ್ಕಳು ಬೆಳೆಯುತ್ತಾರೆ. ನಿಜ. ಕಾಲ ಈಗ ಬದಲಾಗಿದೆ. ಆದರೂ ಕೂಡ ಹೆಣ್ಣು ಮಕ್ಕಳು ಅಂದರೆ ಮನೆಯನ್ನು ಕ್ಲೀನ್ ಮಾಡಲು, ಮದುವೆಯಾಗಿ ಮಕ್ಕಳ ಲಾಲನೆ ಪಾಲನೆ ಮಾಡಲು, ಅಡುಗೆ ಮಾಡಲು ಎಂಬಂತೆ ಹಲವರು ವರ್ತಿಸುತ್ತಾರೆ.

ಹೀಗಿರುವಾಗ ನೀನು ಮದುವೆಯಾಗಬೇಡ ಬದಲಿಗೆ ಲಿವ್ ಇನ್ ಸಂಬಂಧದಲ್ಲಿರು ಎಂದು ತಾಯಿಯೇ ಮಗಳಿಗೆ ಹೇಳಿದರೆ..? ಮದುವೆ ಮುನ್ನ ಒಂದೇ ಸೂರಿನಡಿ ಹುಡುಗನ ಜೊತೆ ಬದುಕು ಎಂದು ಒತ್ತಡ ಹಾಕಿದರೆ..? ಹೆತ್ತವರ ಈ ಪ್ರಗತಿಪರ ಚಿಂತನೆಗೆ ಕೈಗನ್ನಡಿಯೇ ತೇಜಸ್ವಿ ಪ್ರಕಾಶ್ ಅವರ ವೈಯಕ್ತಿಕ ಬದುಕು.
ಹೌದು, ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್.. ಹಿಂದಿ ಕಿರುತೆರೆಯ ಖ್ಯಾತ ಸ್ಟಾರ್ಸ್ ''ಕಿತನಿ ಮೊಹಬ್ಬತ್ ಹೈ' ' ಧಾರಾವಾಹಿಯ ಮೂಲಕ 2009ರಲ್ಲಿ ಕಿರುತೆರೆಯನ್ನು ಪ್ರವೇಶ ಮಾಡಿದ ಕರಣ್ ಕುಂದ್ರಾ ಆ ನಂತರ ''ಯೇ ಕಹಾನ್ ಆ ಗಯೇ ಹಮ್''..''ದಿಲ್ ಹೀ ತೋ ಹೈ''.. ''ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ''.. ಧಾರಾವಾಹಿಗಳ ಮೂಲಕ ಜನ ಮನ ಗೆದ್ದರು. ''MTV ರೋಡೀಸ್''..''ಲವ್ ಸ್ಕೂಲ್''..''ಟೆಂಪ್ಟೇಶನ್ ಐಲ್ಯಾಂಡ್ ಇಂಡಿಯಾ''.. ಅಂತಹ ಶೋಗಳಿಗೆ ನಿರೂಪಕನಾಗಿ ಕೆಲಸ ಮಾಡಿದರು.
ಇನ್ನು ತೇಜಸ್ವಿ ಪ್ರಕಾಶ್ ಅವರಿಗೆ ''ಸ್ವರಾಗಿಣಿ'' ಬೇಕಿದ್ದ ಬ್ರೇಕ್ ನೀಡಿತು. ''ಪೆಹ್ರೆದಾರ್ ಪಿಯಾ ಕಿ''..''ರಿಶ್ತಾ ಲಿಖೇಂಗೆ ಹಮ್ ನಯಾ''.. ಧಾರಾವಾಹಿಯಲ್ಲಿ ಕಾಣಿಸಿಕೊಂಡ ತೇಜಸ್ವಿ ಪ್ರಕಾಶ್ ಅವರ ಬದುಕನ್ನು ''ನಾಗಿನ್ 6'' ಧಾರಾವಾಹಿ ಸಂಪೂರ್ಣ ಬದಲಿಸಿತು. ''ಖತ್ರೋನ್ ಕೆ ಖಿಲಾಡಿ 10'' ರಲ್ಲಿ ಕೂಡ ಕಾಣಿಸಿಕೊಂಡಿದ್ದರು ತೇಜಸ್ವಿ ಪ್ರಕಾಶ್
ಇಂಥಾ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ 2021ರಲ್ಲಿ ''ಬಿಗ್ ಬಾಸ್'' ಮನೆಗೆ ಹೋಗಿದ್ದರು. ಇದೇ ಸಮಯದಲ್ಲಿ ಇಬ್ಬರು ನಡುವೆ ಪ್ರೇಮಾಂಕುರವಾಗಿತ್ತು.''ಬಿಗ್ ಬಾಸ್''ನ ಈ 15ನೇ ಸೀಸನ್‌ನಲ್ಲಿ ತೇಜಸ್ವಿ ಪ್ರಕಾಶ್ ಟ್ರೋಫಿ ಮುಡಿಗೇರಿಸಿಕೊಂಡರೆ ಕರಣ್ ಕುಂದ್ರಾ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು.

ಹೀಗೆ ''ಬಿಗ್ ಬಾಸ್'' ಮನೆಯಿಂದ ಹೊರ ಬಂದ ಇಬ್ಬರು ಗ್ರಹಸ್ಥಾಶ್ರಮಕ್ಕೆ ಕಾಲಿಡಲು ಮುಂದಾಗಿದ್ದರು. ಆದರೆ.. ತೇಜಸ್ವಿ ಅವರ ತಾಯಿ ಜೊತೆಯಲ್ಲಿ ಇಬ್ಬರು ಇನ್ನೂ ಕೆಲ ದಿನ ಕಾಲ ಕಳೆಯುವಂತೆ ಸಲಹೆ ನೀಡಿದರು. ಈ ವಿಚಾರವನ್ನು ಸದ್ಯ ತೇಜಸ್ವಿ ಪ್ರಕಾಶ್ ಮತ್ತು ಕರಣ್ ಕುಂದ್ರಾ ಹೇಳಿದ್ದಾರೆ. ಈ ಮೂಲಕ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ.
ಹೌದು, ನೇಹಾ ಧೂಪಿಯಾ ಮತ್ತು ಅವರ ಪತಿ ಅಂಗದ್ ಬೇಡಿಗೆ ನೀಡಿದ ಸಂದರ್ಶನದಲ್ಲಿ ಈ ಜೋಡಿ ಲವ್, ಮದುವೆ ಮತ್ತು ಲಿವ್ ಇನ್ ಸಂಬಂಧದ ಕುರಿತು ಮಾತನಾಡಿದ್ದಾರೆ. ಈ ಕುರಿತು ಮಾತನಾಡಿರುವ ತೇಜಸ್ವಿ ಪ್ರಕಾಶ್, ಮದುವೆ ಮುನ್ನ ಲಿವ್ ಇನ್ ಸಂಬಂಧದಲ್ಲಿ ಇರುವಂತೆ ನನ್ನ ತಾಯಿಯೇ ಒತ್ತಾಯ ಮಾಡಿದರು ಎಂದು ಹೇಳಿದ್ದಾರೆ.
ಮದುವೆ ಮುಂಚೆಯೇ ಹುಡುಗನ ಜೊತೆ ಒಂದೇ ಮನೆಯಲ್ಲಿರುತ್ತೇನೆ ಎಂದರೆ ಹಲವರು ಕೆರಳಿ ಕೆಂಡವಾಗುತ್ತಾರೆ, ಆದರೆ ನನ್ನ ತಾಯಿ ಸಂಪೂರ್ಣ ತದ್ವಿರುದ್ದ ಎಂದು ಹೇಳಿರುವ ತೇಜಸ್ವಿ ಪ್ರಕಾಶ್ ನಾವು ಇಬ್ಬರು ಮೊದಲು ಜೊತೆಯಲ್ಲಿ ಬದುಕಿ, ಒಬ್ಬರನ್ನೊಬ್ಬರು ಮೊದಲು ಅರ್ಥ ಮಾಡಿಕೊಳ್ಳಬೇಕೆನ್ನುವುದು ನನ್ನ ತಾಯಿಯ ಯೋಚನೆ ಆಗಿತ್ತು ಎಂದಿದ್ದಾರೆ.
ಇದೇ ವಿಚಾರಕ್ಕೆ ಕರಣ್ ಕುಂದ್ರಾ ಕೂಡ ಮಾತನಾಡಿದ್ದು ಅವರ ತಂದೆಗೆ ಯಾವುದೇ ಸಮಸ್ಯೆ ಇರಲಿಲ್ಲ, ಅವರು ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದರು, ಆದರೆ ತೇಜಸ್ವಿ ತಾಯಿಗೆ ನನ್ನ ಮೇಲೆಗಿಂತ ಸ್ವಂತ ಮಗಳ ಮೇಲೆಯೇ ನಂಬಿಕೆ ಇರಲಿಲ್ಲ ಎಂದು ನಕ್ಕಿದ್ದಾರೆ. ನನ್ನ ಮಗಳ ಮೇಲೆ ನನಗೆ ಸಂಪೂರ್ಣ ನಂಬಿಕೆ ಇಲ್ಲ, ಅವಳು ಸರಿಯಿಲ್ಲ, ಅವಳ ಬಗ್ಗೆ ಯೋಚನೆ ಮಾಡಲು ನನಗೆ ಸಮಯ ಬೇಕು ಎಂದು ಅವರು ಹೇಳಿ ಲಿವ್ ಇನ್ ಸಂಬಂಧದಲ್ಲಿರುವಂತೆ ಒತ್ತಾಯ ಮಾಡಿದರು ಎಂದಿದ್ದಾರೆ.
ಮುಂದುವರೆದು ತಮ್ಮ ಪ್ರೇಮ ಕಥೆ ''ಬಿಗ್ ಬಾಸ್''ನಲ್ಲಿ ಶುರುವಾಯ್ತು ಎಂದು ಹೇಳಿರುವ ತೇಜಸ್ವಿ ಪ್ರಕಾಶ್, ಆರಂಭದಲ್ಲಿ ನನ್ನ ಇಷ್ಟ ಪಡುತ್ತಿರುವುದಾಗಿ ಕರಣ್ ಹೇಳಿದಾಗ, ಪ್ರಾಮಾಣಿಕರು ಎಂದು ಅನಿಸಿತು, ಆದರೂ ಕೂಡ ಅವರ ಈ ಪ್ರಾಮಾಣಿಕತೆಯನ್ನು ಪರೀಕ್ಷೆ ಮಾಡಲು ಸಮಯ ತಗೊಂಡೆ, ಅವರು ಹೇಳುವುದು ನಿಜಾನಾ ಎಂದು ಖಚಿತಪಡಿಸಿಕೊಳ್ಳಲು ಬಯಸಿದ್ದೆ, ನನ್ನ ಅದೃಷ್ಟ ತಮ್ಮ ಪ್ರೀತಿಯನ್ನು ಅವರು ಪ್ರತಿ ಬಾರಿಯೂ ಸಾಬೀತುಪಡಿಸಿದರು ಎಂದಿದ್ದಾರೆ.
ಸದ್ಯ ತೇಜಸ್ವಿ ಪ್ರಕಾಶ್ ಮತ್ತು ಕರಣ್ ಕುಂದ್ರಾ ಅವರ ಈ ಮಾತು-ಮಂಥನ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಂದ್ಹಾಗೇ ಮೊನ್ನೆ ಮೊನ್ನೆಯಷ್ಟೇ ''ದೇಸಿ ಬ್ಲಿಂಗ್'' ಕಾರ್ಯಕ್ರಮದಲ್ಲಿ ತೇಜಸ್ವಿ ಪ್ರಕಾಶ್‌ಗೆ ಕರಣ್ ಕುಂದ್ರಾ ಅದ್ದೂರಿಯಾಗಿ ಪ್ರಪೋಸ್ ಮಾಡಿದ್ದಾರೆ. ಶೀಘ್ರದಲ್ಲಿ ಇಬ್ಬರ ಮದುವೆ ನಡೆಯುವ ನಿರೀಕ್ಷೆ ಇವರ ಅಭಿಮಾನಿಗಳಿಗಿದೆ. ಇನ್ನುಳಿದಂತೆ ಕಳೆದ ನಾಲ್ಕೈದು ವರ್ಷಗಳಿಂದ ಲಿವ್ ಇನ್ ಸಂಬಂಧದಲ್ಲಿರುವ ಇವರಿಬ್ಬರ ನಡುವೆ 9 ವರ್ಷಗಳ ಅಂತರ ಇದೆ.


Click it and Unblock the Notifications