ಬಿಗ್‌ಬಾಸ್ ಗೆದ್ದ ತೇಜಸ್ವಿ ಪ್ರಕಾಶ್: ಬಹುಮಾನ ಎಷ್ಟು ಲಕ್ಷ?
ಹಿಂದಿ ಬಿಗ್‌ಬಾಸ್ ಸೀಸನ್ 15ರ ಗ್ರ್ಯಾಂಡ್ ಫಿನಾಲೆ ನಿನ್ನೆ ನಡೆದಿದ್ದು ಟಿವಿ ನಟಿ ತೇಜಸ್ವಿ ಪ್ರಕಾಶ್ ಈ ಬಾರಿಯ ಬಿಗ್‌ಬಾಸ್ ವಿತೇರಾಗಿ ಹೊರಹೊಮ್ಮಿದ್ದಾರೆ.
ಫಿನಾಲೆಯಲ್ಲಿ ನಟಿ ಶಮಿತಾ ಶೆಟ್ಟಿ, ಕರಣ್ ಕುಂದ್ರಾ, ನಿಶಾಂತ್ ಭಟ್, ಪ್ರತೀಕ್ ಸೆಹಾಜ್‌ಪಾಲ್ ಹಾಗೂ ತೇಜಸ್ವಿ ಪ್ರಕಾಶ್ ಇದ್ದರು. ಫೈನಲಿಸ್ಟ್‌ಗಳಲ್ಲಿ ನಿಶಾಂತ್ ಭಟ್ 10 ಲಕ್ಷ ಹಣ ಪಡೆದು ಸ್ಪರ್ಧೆಯಿಂದ ಹೊರನಡೆದರು. ಶಮಿತಾ ಶೆಟ್ಟಿ ಕಡಿಮೆ ಓಟುಗಳಿಂದಾಗಿ ಹೊರನಡೆದರು, ಬಳಿಕ ಕರಣ್ ಕುಂದ್ರಾ ಸಹ ಕಡಿಮೆ ಮತಗಳಿಂದಾಗಿ ಶೋನಿಂದ ಹೊರನಡೆಯಬೇಕಾಯಿತು. ಅಂತಿಮ ಸುತ್ತಿಗೆ ತೇಜಸ್ವಿ ಪ್ರಕಾಶ್ ಹಾಗೂ ಪ್ರತೀಕ್ ಇಬ್ಬರೇ ಉಳಿದುಕೊಂಡರು. ಇವರಿಬ್ಬರಲ್ಲಿ ತೇಜಸ್ವಿ ಪ್ರಕಾಶ್ ಅನ್ನು ವಿನ್ನರ್ ಆಗಿ ಶೋನ ನಿರೂಪಕ ಸಲ್ಮಾನ್ ಖಾನ್ ಘೋಷಿಸಿದರು.
ಬಿಗ್‌ಬಾಸ್ ಸೀಸನ್ 15 ಗೆದ್ದ ತೇಜಸ್ವಿ ಪ್ರಕಾಶ್‌ಗೆ 40 ಲಕ್ಷ ರುಪಾಯಿ ನಗದು ಹಾಗೂ ಟ್ರೋಫಿ ನೀಡಲಾಯಿತು. ಜೊತೆಗೆ ವೇದಿಕೆ ಮೇಲೆಯೇ ಧಾರಾವಾಹಿಯ ಲೀಡ್ ರೋಲ್ ಒಂದನ್ನು ನೀಡಲಾಗಿದ್ದು ವಿಶೇಷ.

ಗೆಲುವಿನ ಬಳಿಕ ಟ್ರೋಫಿ ಹಿಡಿದು ತನ್ನ ತಂದೆ ತಾಯಿಯೊಟ್ಟಿಗೆ ತೆಗೆಸಿಕೊಂಡ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ತೇಜಸ್ವಿ ಪ್ರಕಾಶ್, ''ಬಿಗ್‌ಬಾಸ್ ಗೆಲ್ಲಲು ಕಾರಣರಾದ 'ತೇಜಾ ಅಭಿಮಾನಿಗಳು' ಹಾಗೂ ಇತರ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ನಾಲ್ಕು ತಿಂಗಳ ಬಹಳ ಸವಾಲಿನ ಪಯಣದ ಬಳಿಕ ನನ್ನ ಕನಸು ಸಾಕಾರಗೊಂಡಿದೆ. ಬಿಗ್‌ಬಾಸ್ ಟ್ರೋಫಿ ಮನೆಗೆ ಬಂದಿದೆ'' ಎಂದಿದ್ದಾರೆ.

ಬಿಗ್‌ಬಾಸ್ ಸೀಸನ್ ಫಿನಾಲೆ ರಂಗು ರಂಗಾಗಿತ್ತು. ಮಾಜಿ ಬಿಗ್‌ಬಾಸ್ ವಿನ್ನರ್‌ಗಳಾದ ಶ್ವೇತಾ ತಿವಾರಿ, ಗೌತಮ್ ಗುಲಾಟಿ, ಊರ್ವಶಿ ಡೋಲಕಿಯಾ, ರುಬಿನಾ ದಿಲೈಕಾ, ಗೌಹಾರ್ ಖಾನ್ ಹಾಗೂ ಮಾಜಿ ಬಿಗ್‌ಬಾಸ್ ಸ್ಪರ್ಧಿ ಶೆಹನಾಜ್ ಗಿಲ್ ಅವರುಗಳು ಫಿನಾಲೆಯಲ್ಲಿ ನೃತ್ಯ ಪ್ರದರ್ಶನ ತೋರಿದರು. ಶೆಹನಾಜ್ ಗಿಲ್, ಸಿದ್ಧಾರ್ಥ್ ಶುಕ್ಲ ಅನ್ನು ನೆನಪು ಮಾಡಿಕೊಂಡು ಮಾಡಿದ ನೃತ್ಯ ಭಾವುಕಗೊಳಿಸಿತು. ನಟ ಸಲ್ಮಾನ್ ಖಾನ್ ಸಹ ಶೆಹನಾಜ್ ಗಿಲ್ ಅನ್ನು ತಬ್ಬಿಕೊಂಡು ವೇದಿಕೆ ಮೇಲೆಯೇ ಕಣ್ಣೀರು ಸುರಿಸಿದರು.
ಬಿಗ್‌ಬಾಸ್ ಫಿನಾಲೆಗೆ ನಟಿ ದೀಪಿಕಾ ಪಡುಕೋಣೆ, ಅನನ್ಯಾ ಪಾಂಡೆ ಹಾಗೂ ಸಿದ್ಧಾಂತ್ ಚತುರ್ವೇದಿ ಅವರುಗಳು ಅತಿಥಿಗಳಾಗಿ ಆಗಮಿಸಿದ್ದರು. ಫೆಬ್ರವರಿ 11 ರಂದು ಬಿಡುಗಡೆ ಆಗುತ್ತಿರುವ ತಮ್ಮ ಸಿನಿಮಾ 'ಗೆಹ್ರಾಹಿಯಾ'ದ ಪ್ರಚಾರಕ್ಕಾಗಿ ಅವರು ಆಗಮಿಸಿದ್ದರು.
ಬಿಗ್‌ಬಾಸ್ ಸೀಸನ್ 15 ಕಳೆದ ವರ್ಷ ಅಕ್ಟೋಬರ್ 02ರಂದು ಪ್ರಾರಂಭವಾಗಿತ್ತು. ಶೋನಲ್ಲಿ 24 ಸ್ಪರ್ಧಿಗಳು ಭಾಗವಹಿಸಿದ್ದರು. ಸತತ 120 ದಿನಗಳ ಕಾಲ ಶೋ ನಡೆಯಿತು.


Click it and Unblock the Notifications











