Ashok Sharma: ಸೀತಾರಾಮ ಧಾರಾವಾಹಿಯ ಅಶೋಕ್ ಶರ್ಮ ನಟನಷ್ಟೇ ಅಲ್ಲ ಗಾಯಕನೂ ಹೌದು
ಕನ್ನಡ ಕಿರುತೆರೆಯಲ್ಲಿ ಇದೀಗ ಆದ ಬದಲಾವಣೆಗಳೆಂದರೆ ಹತ್ತಾರು ಹೊಸ ಸೀರಿಯಲ್‌ಗಳು ಶುರುವಾಗಿರುವುದು. ಹೌದು, ಕನ್ನಡ ಕಿರುತೆರೆಯಲ್ಲಿ ಇದೀಗ ಹೊಸ ಸೀರಿಯಲ್ ಗಳು ಆರಂಭವಾಗಿದ್ದು ಜನರು ಪ್ರೇಕ್ಷಕರು ಕಿರುತೆರೆ ಪ್ರಿಯರು ಹೊಸ ಕಥೆಗಳಿಗೆ ಕಥಾ ಹಂದರಕ್ಕೆ ಫಿದಾ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ.
ಇಂತಹ ಹೊಸ ಧಾರವಾಹಿಗಳಲ್ಲಿ 'ಸೀತಾರಾಮ' ಧಾರಾವಾಹಿ ಕೂಡ ಒಂದು. 'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ ಅವರು ಇದರ ಪ್ರಮುಖ ಭೂಮಿಗೆಯಲ್ಲಿದ್ದು, 'ಪುಟ್ಟಗೌರಿ ಮದುವೆ' ಖ್ಯಾತಿಯ ಗಗನ್ ಚಿನ್ನಪ್ಪ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ನೆಚ್ಚಿನ ಆಕರ್ಷಣೆ ಎಂದರೆ ಪುಟಾಣಿ ಕಲಾವಿದೆ ರಿತು ಸಿಂಗ್.

ಇದೆಲ್ಲದರ ಜೊತೆಗೆ 'ಸೀತಾರಾಮ' ಧಾರಾವಾಹಿಯಲ್ಲಿ ನಟ ಅಶೋಕ್ ಶರ್ಮ ಅವರದ್ದು ಒಂದು ಪ್ರಮುಖ ಪಾತ್ರ ಎಂದರೆ ತಪ್ಪಾಗಲ್ಲ. ಈವರೆಗೂ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡ ನಟ ಅಶೋಕ್ ಶರ್ಮ ಇದೀಗ ಧಾರವಾಹಿಗೆ ಬಂದಿದ್ದು ತಮ್ಮ ನಟನೆಯ ಮೂಲಕ ಸಖತ್ ಅಭಿಮಾನಿಗಳನ್ನು ಪಡೆಯುತ್ತಿದ್ದಾರೆ. ಇತ್ತೀಚೆಗಂತೂ ಬಹಳ ವೈರಲ್ ಆಗಿದ್ದ "ಜಿಂಗಿಚಕ ಜಿಂಗಿಚಕ" ಹಾಡನ್ನು ಹಾಡಿದ್ದು ಇವರೆಂದು ತಿಳಿದ ಮೇಲೆ ಇವರ ಪಾಪುಲ್ಯಾರಿಟಿ ಇನ್ನು ಹೆಚ್ಚಾಗಿದೆ.
ಅಸಲಿಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಅಶೋಕ್ ಶರ್ಮಾ ಅವರು ಖಾಸ ದೋಸ್ತ್‌ಗಳು. ಹೌದು! 'ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ' ಎಂಬ ಸಿನಿಮಾ ಎಲ್ಲರಿಗೂ ಗೊತ್ತೇ ಇದೆ . ಈ ಸಿನಿಮಾದಲ್ಲಿ ಇಬ್ಬರು ನಟರು ಭಾವ ಮೈದುನನ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ ಜನರ ಮನ ಗೆದ್ದಿದ್ದರು. ಅಂದ ಹಾಗೇ ಇವರಿಬ್ಬರದು ಎರಡು ದಶಕವನ್ನು ಮೀರಿದ ಸ್ನೇಹವಾಗಿದ್ದು ಯಶ್ ಅವರು ನಟಿಸಿರುವ ಹಲವಾರು ಸಿನಿಮಾಗಳಲ್ಲಿ ಅಶೋಕ್ ಶರ್ಮ ಅವರು ಪಾತ್ರ ಮಾಡಿದ್ದಾರೆ.
ನಟನೆಯ ಹೊರತಾಗಿ ಅಶೋಕ್ ಶರ್ಮ ಅವರು ಗಾಯಕ ಕೂಡ ಹೌದು. ಆರಂಭದ ದಿನಗಳಲ್ಲಿ ಆರ್ಕೆಸ್ಟ್ರಾದಲ್ಲಿ ಹಾಡುಗಳನ್ನು ಹಾಡುತ್ತಿದ್ದರು. ಇವರ ಕಲೆಯನ್ನು ನೋಡಿ ಬಹಳಷ್ಟು ಆರ್ಕೆಸ್ಟ್ರಾ ಇವರನ್ನು ಹಾಡು ಹೇಳಲು ಕಲಾವಿದನಾಗಿ ಕರೆಸಿಕೊಳ್ಳುತ್ತಿತ್ತು. ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಆರ್ಕೆಸ್ಟ್ರಾಗಳಲ್ಲಿ ಕಲಾವಿದನಾಗಿ ಹಾಡು ಹೇಳಲು ಶುರು ಮಾಡಿದರು.

ಕ್ರಮೇಣ ಅವರಿಗೆ ಸಿನಿಮಾದಲ್ಲಿಯೂ ಹಾಡು ಹಾಡಲು ಅವಕಾಶ ಸಿಕ್ಕಿತ್ತು. ಈಗಾಗಲೇ ಅವರು ಹಲವಾರು ಸಿನಿಮಾಗಳಿಗೆ ಹಾಡಿದ್ದಾರೆ. ಅದರಲ್ಲಿ ಇತ್ತೀಚೆಗಂತೂ ಬಹಳ ವೈರಲ್ ಆಗಿ ಜನರನ್ನು ಮರಳು ಮಾಡಿದ ಹಾಡೆಂದರೆ ಜಿಂಗಿಚಕ ಜಿಂಗಿಚಕ. ಇವರ ವಾಯ್ಸ್ ಹಾಗೂ ಸ್ಟೇಟ್ ಅಪಿಯರೆನ್ಸ್ ಅನ್ನು ನೋಡಿ ಇವರಿಗೆ ಆಂಕರಿಂಗ್ ಮಾಡಲು ಒಂದಷ್ಟು ಜನ ಸಲಹೆ ಇತ್ತರಂತೆ.
ನಿಧಾನಕ್ಕೆ ಆ್ಯಂಕರಿಂಗನ್ನು ಕೈಗೆತ್ತಿಕೊಂಡ ಅಶೋಕ್ ಶರ್ಮ ಹಲವಾರು ಕಾರ್ಯಕ್ರಮಗಳಲ್ಲಿ ಆ್ಯಂಕರಿಂಗ್ ಕೂಡ ಮಾಡಿದ್ದಾರೆ. ಸುವರ್ಣ ವಾಹಿನಿಯಲ್ಲಿ, ಹೃದಯ ಹೃದಯ ಮ್ಯೂಸಿಕ್‌ನಲ್ಲಿ ಆ್ಯಂಕರ್ ಆಗಿದ್ದ ಅಶೋಕ್ ಶರ್ಮ ಅದಾದ ಮೇಲೆ ರಾಜ್ ಮ್ಯೂಸಿಕ್ ನಲ್ಲೂ ಆ್ಯಂಕರ್ ಆಗಿ ಕೆಲಸ ಮಾಡಿದ್ದಾರೆ.
ನಟ, ನಿರ್ದೇಶಕ, ನಿರೂಪಕ ಮಾಸ್ಟರ್ ಆನಂದ್ ಅವರ ನಿರ್ದೇಶನದ "ಎಸ್ ಎಸ್ ಎಲ್ ಸಿ ನನ್ನ ಮಕ್ಕಳು" ಸೀರಿಯಲ್ ನಿಂದ ಕಿರುತೆರೆಗೆ ಕಾಲಿಟ್ಟ ಇವರು ಇದೀಗ 'ಸೀತಾರಾಮ' ಸೀರಿಯಲ್‌ನಲ್ಲಿ ಪಾಪ್ಯುಲಾರಿಟಿ ಪಡೆಯುತ್ತಿದ್ದಾರೆ. ಹತ್ತಾರು ಸಿನಿಮಾ, ಶಾರ್ಟ್ ಸಿನಿಮಾ ಧಾರಾವಾಹಿಗಳಲ್ಲಿ ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಿರುವ ಇವರು ಮಲ್ಟಿ ಟ್ಯಾಲೆಂಟೆಡ್ ಪರ್ಸನ್ ಎಂದು ಹೇಳಬಹುದು. ಇದೆಲ್ಲವನ್ನು ನೋಡಿದಾಗ ಇವರು ತಮ್ಮ ಪರಿಶ್ರಮ ಹಾಗೂ ಪ್ರತಿಭೆಯಿಂದಲೇ ನಿಧಾನಕ್ಕೆ ಮುಂದೆ ಬಂದ ನಟ ಎಂಬುದು ಸ್ಪಷ್ಟವಾಗುತ್ತದೆ.


Click it and Unblock the Notifications











