ಕ್ಷುಲ್ಲಕ ಕಾರಣಕ್ಕೆ ಪಕ್ಕದ ಮನೆಯವರ ಮೇಲೆ ಗುಂಡು ಹಾರಿಸಿ ಕೊಂದ ಕಿರುತೆರೆ ನಟ: ಬಂಧನ
ಹಿಂದಿ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ನಟಿಸಿರುವ ನಟ ಭೂಪಿಂದರ್ ಸಿಂಗ್ ತಮ್ಮ ನೆರೆ ಹೊರೆಯ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಬಂಧಿಸಿದ್ದಾರೆ. ಮರ ಕಡಿಯುವ ವಿಷಯದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಘಟನೆ ನಡೆದಿದ್ದು, ನಟ ಭೂಪಿಂದರ್ ಸಿಂಗ್ ಮತ್ತು ಅವರ ಸಹಾಯಕರು ಒಬ್ಬ ವ್ಯಕ್ತಿಯನ್ನು ಕೊಂದು ಮೂವರನ್ನು ಗಂಭಿರವಾಗಿ ಗಾಯಗೊಳಿಸಿದ್ದಾರೆ. ಕೊಲೆ ಮತ್ತು ಹಲ್ಲೆ ಪ್ರಕರಣದಲ್ಲಿ ನಟನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಟ ಭೂಪಿಂದರ್ ಸಿಂಗ್ ಗುಂಡು ಹಾರಿಸಿದ್ದು ಏಕೆ?
ವರದಿಯ ಪ್ರಕಾರ, ನಟ ಭೂಪಿಂದರ್ ಸಿಂಗ್ ಮತ್ತು ಇತರರು ಪರವಾನಗಿ ಪಡೆದ ಮತ್ತು ಅಕ್ರಮ ಶಸ್ತ್ರಾಸ್ತ್ರಗಳಿಂದ ಒಂದು ಕುಟುಂಬದ ನಾಲ್ವರು ಸದಸ್ಯರ ಮೇಲೆ ಬರೋಬ್ಬರಿ 10 ಸುತ್ತು ಗುಂಡು ಹಾರಿಸಿದ್ದಾರೆ. ದುರ್ಘಟನೆಯಲ್ಲಿ 23 ವರ್ಷದ ಗೋವಿಂದ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬದ ಮೂವರು ಸದಸ್ಯರು ಗುರುದೀಪ್ ಸಿಂಗ್ (ತಂದೆ), ಮೀರಾ ಬಾಯಿ (ತಾಯಿ) ಮತ್ತು ಅಮರೀಕ್ ಸಿಂಗ್ (ಸಹೋದರ) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣದಲ್ಲಿ ಆಗಿರುವ ಬಂಧನದ ವಿವರ
ಘಟನೆಯ ನಂತರ ಮೊರಾದಾಬಾದ್ ಡಿಐಜಿ ಮುನಿರಾಜ್ ಸಂತ್ರಸ್ತ ಗಾಯಾಳುಗಳನ್ನು ಭೇಟಿ ಮಾಡಿದ್ದಾರೆ. ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ. ನವೆಂಬರ್ 19 ರಂದು ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಡಿಐಜಿಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಗುಂಡು ಹಾರಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣವೇನು?
ವರದಿಯ ಪ್ರಕಾರ, ಗುರುದೀಪ್ ಸಿಂಗ್ ತನ್ನ ಜಮೀನಿನಲ್ಲಿ ನೀಲಗಿರಿ ಮರಗಳನ್ನು ಕಡಿಯುವ ಬಗ್ಗೆ ತನ್ನ ನೆರೆಯ ಭೂಪಿಂದರ್ ಸಿಂಗ್ ಅವರೊಂದಿಗೆ ವಿವಾದವನ್ನು ಹೊಂದಿದ್ದರು. ನವೆಂಬರ್ 19ರಂದು ಬಾದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ, ಪೊಲೀಸರು ಆತನ ದೂರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇತ್ತೀಚೆಗೆ ಮರ ಕಡಿಯುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮತ್ತೆ ಜಗಳ ನಡೆದಿತ್ತು. ಘಟನೆಯಲ್ಲಿ ಕೋಪಗೊಂಡ ನಟ ಭೂಪಿಂದರ್ ಸಿಂಗ್ ಮತ್ತು ಅವರ ಸಹಾಯಕರು ತನ್ನ ಪರವಾನಗಿ ಪಡೆದ ರಿವಾಲ್ವರ್ ಮತ್ತು ಅಕ್ರಮ ಬಂದೂಕಿನಿಂದ ಸುಮಾರು 10 ಸುತ್ತು ಗುಂಡು ಹಾರಿಸಿದ್ದಾರೆ.
ಇನ್ನು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಡಿಐಜಿ ತಿಳಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ. ಪೊಲೀಸರ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸಲಾಗುವುದು. ಲೋಪ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ನಿರ್ಲಕ್ಷ್ಯ ತೋರಿದ ಬಾದಾಪುರ ಪೊಲೀಸ್ ಠಾಣೆಯ ಪ್ರಭಾರಿ ಸುಮಿತ್ ರಾಠಿ, ಇನ್ಸ್‌ಪೆಕ್ಟರ್ ಯಾಸಿನ್ ಮತ್ತು ಪೊಲೀಸ್ ಪೇದೆ ಕೃಷ್ಣ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ.
ನಟ ಭೂಪಿಂದರ್ ಸಿಂಗ್
ಭೂಪಿಂದರ್ ಅವರು ಯೇ ಪ್ಯಾರ್ ನಾ ಹೋಗಾ ಕಾಮ್, ಏಕ್ ಹಸೀನಾ ಥಿ, ಮಧುಬಾಲಾ -ಏಕ್ ಇಷ್ಕ್ ಏಕ್ ಜುನೂನ್, ರಿಷ್ಟನ್ ಕಾ ಚಕ್ರವ್ಯೂಹ್, ಜೈ ಮಹಾಭಾರತ್, 1857 ಕ್ರಾಂತಿ, ಕಾಲಾ ಟೀಕಾ, ತೇರೆ ಶೆಹರ್ ಮೇ ಮುಂತಾದ ಹಲವಾರು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರು ಶಾಮ್ ಘಂಶಮ್, ಬದ್ರಿ, ವಿಲನ್, ಅಂಜಿ, ಯುವರಾಜ್ ಮತ್ತು ಸೋಚ್ ಲೋ ಮುಂತಾದ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.


Click it and Unblock the Notifications











