ನಟನೆಯಿಂದ ಕಾರ್ಯಕಾರಿ ನಿರ್ಮಾಪಕನಾದ ದೀಪಕ್ ಮಹಾದೇವ್; ಏನಿದು ಸುದ್ದಿ?
'ಮರಳಿ ಮನಸಾಗಿದೆ' ಧಾರಾವಾಹಿಯಲ್ಲಿ ಡಾಕ್ಟರ್ ಅಜಯ್ ಆಗಿ ಅಭಿನಯಿಸುತ್ತಿದ್ದ ಕಿರುತೆರೆ ನಟ ದೀಪಕ್ ಮಹಾದೇವ್ ಅವರು ಇದೀಗ ಧಾರಾವಾಹಿ ನಿರ್ವಹಣೆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ಕಿರುತೆರೆ ಮೂಲಕ ನಟನೆಗೆ ಕಾಲಿಟ್ಟ ನಟ ನಟಿಯರು ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. ಆದರೆ ದೀಪಕ್ ವಿಚಾರದಲ್ಲಿ ಹಾಗಗಲಿಲ್ಲ. ದೀಪಕ್ ಅವರು ನಟನಾಗಿ ಗುರುತಿಸಿಕೊಂಡ ಬಳಿಕ ಇದೀಗ ನಿರ್ಮಾಣ ನಿರ್ವಹಣೆಯ ಮೂಲಕ ಕಿರುಪರದೆಯಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಲಿರುವ ಹೊಚ್ಚ ಹೊಸ ಧಾರಾವಾಹಿ "ಕರಿಮಣಿ"ಯನ್ನು ನಿರ್ವಹಿಸಲಿದ್ದಾರೆ ದೀಪಕ್ ಮಹಾದೇವ್. ಅಂದ ಹಾಗೆ ದೀಪಕ್ ಅವರು ಧಾರಾವಾಹಿ ನಿರ್ವಹಣೆ ಮಾಡುತ್ತಿರುವುದು ಇದು ಮೊದಲೇನಲ್ಲ. ಇದಕ್ಕಿಂತಲೂ ಮೊದಲು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ"ಗಂಗೆ ಗೌರಿ" ಧಾರಾವಾಹಿಯನ್ನು ನಿರ್ವಹಣೆ ಮೂಲಕ ನಟನಿಂದ ಕಾರ್ಯಕಾರಿ ನಿರ್ಮಾಪಕರಾಗಿ ಭಡ್ತಿ ಪಡೆದಿದ್ದರು ದೀಪಕ್ ಮಹಾದೇವ್.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾ ನಿನ್ನ ಬಿಡಲಾರೆ'ಯಲ್ಲಿ ನಾಯಕ ಅಕ್ಷಯ್ ಪಾತ್ರದಲ್ಲಿ ದೀಪಕ್ ಮಹಾದೇವ್ ನಟಿಸಿದ್ದರು. ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸುವ ಸುವರ್ಣವಕಾಶ ಪಡೆದುಕೊಂಡಿದ್ದ ದೀಪಕ್ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ಹ್ಯಾಂಡ್ ಸಮ್ ಹುಡುಗ. ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಾಯಕಿ' ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ಆಗಿ ಗಮನ ಸೆಳೆದರು. 'ನಾಯಕಿ'ಯ ನಂತರ ಕೊಂಚ ಮಟ್ಟಿಗೆ ಕಿರುತೆರೆಯಿಂದ ದೂರವಿದ್ದ ದೀಪಕ್ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು ಕೂಡಾ ಉದಯ ವಾಹಿನಿಯ ಮೂಲಕವೇ.
ಉದಯ ವಾಹಿನಿಯ 'ನಿನ್ನಿಂದಲೇ' ಧಾರಾವಾಹಿಯಲ್ಲಿ ನಾಯಕ ವರುಣ್ ಪಾತ್ರಕ್ಕೆ ಇವರು ಜೀವ ತುಂಬಿದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ 2'ರಲ್ಲಿಅಭಯ್ ಪಾತ್ರದಲ್ಲಿ ದೀಪಕ್ ಕಾಣಿಸಿಕೊಂಡರು .

ಇದರ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮರಳಿ ಮನಸಾಗಿದೆ' ಧಾರಾವಾಹಿಯಲ್ಲಿಅಭಿನಯಿಸಿದ್ದರು. ನಾಯಕ್ ಕುಟಂಬದ ಹಿರಿ ಸೊಸೆ ಚಂದ್ರಲೇಖಾ ಅವರ ಮಗಳು ಸಾಹಿತ್ಯ ಪತಿ ಡಾಕ್ಟರ್ ಅಜಯ್ ಪಾತ್ರದಲ್ಲಿ ದೀಪಕ್ ನಟಿಸಿದ್ದರು. ಆ ಧಾರಾವಾಹಿ ಕಳೆದ ವರ್ಷ ತನ್ನ ಪ್ರಸಾರ ನಿಲ್ಲಿಸಿತ್ತು.
ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ದೀಪಕ್ ಮಹಾದೇವ್ ತದ ನಂತರ ತೆರೆಯ ಹಿಂದೆ ಕಾಣಿಸಿಕೊಂಡರು. ತನ್ನ ಮೊದಲ ಧಾರಾವಾಹಿಯನ್ನು ನಿರ್ಮಾಣ ಮಾಡಿದ ವೃದ್ಧಿ ಕ್ರಿಯೇಷನ್ಸ್ ತಂಡ ಸೇರಿದರು ದೀಪಕ್. ವರ್ಧನ್ ಹರಿ ಮತ್ತು ವಿನೋದ್ ವಿ ದೊಂಡಾಳೆ ಅವರ ತಂಡ ಸೇರಿದ ದೀಪಕ್ ಮಹಾದೇವ್ ಅವರು ನಿರ್ಮಾಣದ ನಿರ್ವಹಣೆಯನ್ನು ವಹಿಸಿದ್ದಾರೆ. ಇತ್ತೀಚೆಗಷ್ಟೇ ಉದಯ ವಾಹಿನಿಯಲ್ಲಿ ಶುರುವಾದ ಹೊಚ್ಚ ಹೊಸ ಧಾರಾವಾಹಿ 'ಗಂಗೆ ಗೌರಿ'ಯನ್ನು ನಿರ್ವಹಣೆ ಮಾಡಿ ಸೈ ಎನಿಸಿಕೊಂಡಿದ್ದರು ದೀಪಕ್ ಮಹಾದೇವ್. ಇದೀಗ ಎರಡನೇ ಧಾರವಾಹಿ 'ಕರಿಮಣಿ'ಯ ನಿರ್ವಹಣೆಯ ಕೆಲಸದಲ್ಲಿ ಬ್ಯುಸಿಯಾಗಿರುವ ದೀಪಕ್ ಮಹಾದೇವ್ ಮತ್ತೆ ನಟನೆಗೆ ಮರಳುತ್ತಾರಾ ಎಂದು ಕಾದು ನೋಡಬೇಕಾಗಿದೆ.


Click it and Unblock the Notifications











