'ನಾಗಿಣಿ 2', 'ಆಸೆ' ಧಾರಾವಾಹಿಯ ನಿನಾದ್ ಹರಿತ್ಸ ಜರ್ನಿ ಆರಂಭಿಸಿದ್ದು ಬಾಲನಟನಾಗಿ; ಅದ್ಯಾವುದು ಗೊತ್ತೇ?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಆಸೆ' ಧಾರಾವಾಹಿಯೂ ಒಂದು. ಸ್ಯಾಂಡಲ್‌ವುಡ್‌ನ ಎವರ್ ಗ್ರೀನ್ ಹೀರೋ ಎಂದೇ ಗುರುತಿಸಲ್ಪಡುವ ರಮೇಶ್ ಅರವಿಂದ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಆಸೆ' ಧಾರಾವಾಹಿಯಲ್ಲಿ ನಾಯಕ ಸೂರ್ಯ ಆಗಿ ನಟಿಸುತ್ತಿರುವ ಹ್ಯಾಂಡ್‌ಸಮ್ ಹುಡುಗನ ಹೆಸರು ನಿನಾದ್ ಹರಿತ್ಸ.
ಮುದ್ದಾದ ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಿನಾದ್ ಹರಿತ್ಸ ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ 2' ರಲ್ಲಿ ನಾಯಕ ತ್ರಿಶೂಲ್ ಪಾತ್ರದಲ್ಲಿ ಅಭಿನಯಿಸಿದ್ದರು. ಅಲ್ಲೂ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ನಿನಾಡ್‌ಗೆ ಬಾಲ್ಯದಿಂದಲೂ ನಟನೆಯತ್ತ ವಿಶೇಷ ಒಲವು ಇತ್ತು. ಆರು ವರ್ಷದ ಹುಡುಗನಾಗಿದ್ದಾಗಲೇ ಕಿರುತೆರೆಗೆ ಕಾಲಿಟ್ಟ ಇವರು ಮೊದಲು ನಟಿಸಿದ್ದು 'ಟೈಂ ಪಾಸ್ ತೆನಾಲಿ' ಧಾರಾವಾಹಿಯಲ್ಲಿ.

ಈ ಧಾರಾವಾಹಿಯ ಬಳಿಕ ನಟನೆಯಿಂದ ದೂರವಿದ್ದ ನಿನಾದ್ ಓದಿನತ್ತ ಗಮನ ಕೊಟ್ಟಿದ್ದೇ ಹೆಚ್ಚು. ಮುಂದೆ ರಂಗಭೂಮಿಯತ್ತ ವಾಲಿದ ಈ ಹ್ಯಾಂಡ್‌ಸಮ್ ಹುಡುಗ 'ತಕ್ಷ್ ಥಿಯೇಟರ್ಸ್' ಎಂಬ ರಂಗತಂಡ ಸೇರಿಕೊಂಡರು. ಜೊತೆಗೆ ಒಂದಷ್ಟು ನಾಟಕಗಳಲ್ಲಿಯೂ ಇವರು ಅಭಿನಯಿಸಿದ್ದರು. ಏಳು ವರ್ಷಗಳ ಕಾಲ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ನಿನಾದ್ ಕಿರು ತೆರೆಯತ್ತ ಮುಖ ಮಾಡಿದ್ದು 'ಅರಮನೆ' ಧಾರಾವಾಹಿಯ ಮೂಲಕ.
ಉದಯ ವಾಹಿನಿಯ 'ಅರಮನೆ' ಧಾರಾವಾಹಿಯಲ್ಲಿ ನಾಯಕನ ತಮ್ಮ ಆಗಿ ಕಾಣಿಸಿಕೊಂಡ ನಿನಾದ್ ಮುಂದೆ ಬದಲಾದುದು ಅಗಸ್ತ್ಯನಾಗಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬಿಳಿ ಹೆಂಡ್ತಿ' ಧಾರಾವಾಹಿಯಲ್ಲಿ ಅಗಸ್ತ್ಯನಾಗಿ ನಟಿಸಿದ ಇವರು ನಟಿಸಿದ್ದು ಪೋಷಕ ಪಾತ್ರಗಳಲ್ಲಿ ಆದರೂ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ, ಮನೆ ಸೆಳೆದ ಹುಡುಗ.
ಮುಂದೆ 'ನಾಗಿಣಿ 2' ಧಾರಾವಾಹಿಯಲ್ಲಿ ನಾಯಕ ತ್ರಿಶೂಲ್ ಆಗಿ ನಟಿಸಿ ಸೈ ಎನಿಸಿಕೊಂಡಿರುವ ನಿನಾದ್ ಅವರು 'ಪ್ರಯಾಣಿಕರ ಗಮನಕ್ಕೆ' ಎನ್ನುವ ಕಿರುಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ. ಸದ್ಯ 'ಆಸೆ' ಧಾರಾವಾಹಿಯ ಸೂರ್ಯ ಪಾತ್ರದಲ್ಲಿ ಬ್ಯುಸಿಯಾಗಿರುವ ನಿನಾದ್ ಅವರಿಗೆ ನಟನೆಯ ನಂಟು ಬೆಳೆಯಲು ಪೋಷಕರೇ ಪ್ರಮುಖ ಕಾರಣ ಎಂದು ಹೇಳಿದರೆ ತಪ್ಪಾಗಲಾರದು.

ಹೌದು, ನಿನಾದ್ ಹರಿಗ್ಸ ಅವರ ತಂದೆ ತಾಯಿ ಕೂಡಾ ನಟನಾ ಜಗತ್ತಿನಲ್ಲಿ ಗುರುತಿಸಿಕೊಂಡವರು ಎಂಬ ವಿಚಾರ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದ ಪ್ರಸನ್ನ ರಾವ್ ಮತ್ತು ಮಾಲತಿ ರಾವ್ ದಂಪತಿಗಳ ಮಗನಾಗಿರುವ ಇವರಿಗೆ ನಟನೆ ಎಂಬುದು ಹಿರಿಯರಿಂದ ಬಂದ ಬಳುವಳಿಯೂ ಹೌದು. ಮನೆಯಲ್ಲಿ ಸಂಪೂರ್ಣ ಕಲೆಯ ವಾತಾವರಣವಿದ್ದ ಕಾರಣದಿಂದಲೋ ಏನೋ ನಿನಾದ್ ಅವರು ನಾಟಕಗಳನ್ನು ನೋಡುತ್ತಲೇ ಬೆಳೆದವರು. ಅಲ್ಲಿಂದಲೇ ನಟನೆಯ ಬಗ್ಗೆ ಒಲವು ಮೂಡಿಸಿಕೊಂಡಿದ್ದ ನಿನಾದ್ ಅವರು ಇಂದು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಷ್ಟೇ ಇವರು ನಟಿಸಿದ್ದರೂ ನಟನೆಯ ಮೂಲಕ ಗುರುತಿಸಿಕೊಂಡಿರುವ ಹುಡುಗ. ಕಿರುತೆರೆಯಲ್ಲಿ ನಟನಾ ಛಾಪನ್ನು ಪಸರಿಸುತ್ತಿರುವ ಇವರು ಮುಂದೊಂದು ದಿನ ಹಿರಿತೆರೆಯಲ್ಲಿ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ.


Click it and Unblock the Notifications











