'ರಾಧಾ ರಮಣ' ನಟಿ ಕಾವ್ಯಾ ಗೌಡಗೆ ಸೀಮಂತ; ಸಂಭ್ರಮದಲ್ಲಿ ಭಾಗಿಯಾದ ತಾರೆಯರು!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಪೈಕಿ 'ರಾಧಾ ರಮಣ'ವೂ ಒಂದು. 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕಿ ಆರಾಧನಾ ಆಗಿ ನಟಿಸಿದ್ದ ಕಾವ್ಯಾ ಗೌಡ ತದ ನಂತರ ಯಾವ ಧಾರಾವಾಹಿಯಲ್ಲಿ ನಟಿಸಲಿಲ್ಲ. ಬಣ್ಣದ ಬದುಕಿನಿಂದ ಕೊಂಚ ದೂರವಿದ್ದ ಕಾವ್ಯಾ ಗೌಡ ಮುಂದೆ ದಾಂಪತ್ಯ ಜೀವನವಕ್ಕೆ ಕಾಲಿರಿಸಿದ್ದರು. ತಾನು ಮನಸಾರೆ ಪ್ರೀತಿಸಿದ ಹುಡುವ ಸೋಮಶೇಖರ್ ಅವರೊಂದಿಗೆ ಎರಡು ವರ್ಷಗಳ ಹಿಂದೆ ಸಪ್ತಪದಿ ತುಳಿದಿದ್ದರು ಕಾವ್ಯಾ ಗೌಡ.
ಇದೀಗ ಕಾವ್ಯಾ ಗೌಡ ಗರ್ಭಿಣಿಯಾಗಿದ್ದು ತಮ್ಮ ಎರಡನೇ ವಿವಾಹ ವಾರ್ಷಿಕೋತ್ಸವದ ಸಮಯದಲ್ಲಿ ಈ ಸಂತಸದ ವಿಚಾರವನ್ನು ಹಂಚಿಕೊಂಡಿದ್ದರು. ಬೇಬಿ ಬಂಪ್ ಫೋಟೋಶೂಟ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಾವು ತಾಯಿಯಾಗುತ್ತಿರುವ ಖುಷಿಯ ಸಂಗತಿಯನ್ನು ಆಕೆ ಬಹಿರಂಗಗೊಳಿಸಿದ್ದರು. ಜೊತೆಗೆ "ನಾವು ಇಲ್ಲಿಯ ತನಕ ಬಚ್ಚಿಟ್ಟುಕೊಂಡಿದ್ದ ಬೆಸ್ಟ್ ಸಿಕ್ರೇಟ್ ಇದು. ಇದೀಗ ಈ ಸಂತಸದ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. 2024ರಲ್ಲಿ ಮುದ್ದು ಕಂದನ ಆಗಮನವಾಗಲಿದೆ. ಈ ಸುಂದರ ಕ್ಷಣ, ಅನುಭವಕ್ಕಾಗಿ ಕಾಯುತ್ತಿದ್ದೇನೆ" ಎಂದು ಕಾವ್ಯಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.

ಇದೀಗ ಕಾವ್ಯಾ ಗೌಡ ಸೀಮಂತ ಕಾರ್ಯ ಬಹಳ ಅದ್ದೂರಿಯಾಗಿ ನಡೆದಿದ್ದು, ಅವರ ಫೋಟೋ, ವಿಡಿಯೋಗಳು ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ನಡೆದ ಈ ಸೀಮಂತ ಕಾರ್ಯಕ್ರಮಕ್ಕೆ ಸಿನಿಮಾ ಕಲಾವಿದರು ಮಾತ್ರವಲ್ಲದೇ ಸೀರಿಯಲ್ ಕಲಾವಿದರುಗಳು ಕೂಡಾ ಸಾಕ್ಷಿಯಾಗಿದ್ದರು.
ರಿಯಾಲಿಟಿ ಶೋ ಮೂಲಕ ಕಿರುಪರದೆಗೆ ಪರಿಚಿತರಾದ ಕಾವ್ಯಾ ಗೌಡ ಕಿರುತೆರೆ ಪಯಣ ಶುರುವಾಗಿದ್ದು 'ಮೀರಾ ಮಾಧವ' ಧಾರಾವಾಹಿಯ ಮೂಲಕ. ನಾಯಕಿ ಮೀರಾಳಾಗಿ ನಟಿಸಿ ಸೈ ಎನಿಸಿಕೊಂಡಿದ್ದ ಕಾವ್ಯ ಮುಂದೆ 'ಗಾಂಧಾರಿ' ಧಾರಾವಾಹಿಯಲ್ಲಿ ದೀಪ್ತಿ, ದೃಷ್ಟಿ ಎಂಬ ದ್ವಿಪಾತ್ರದಲ್ಲಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದುಬಿಟ್ಟರು. ಮನೋಜ್ಞ ನಟನೆಯ ಮೂಲಕ ತೆಲುಗು ಕಿರುತೆರೆಯಲ್ಲಿ ಮೋಡಿ ಮಾಡಿದ ಈಕೆ ಕೊನೆಯ ಬಾರಿ ನಟಿಸಿದ್ದು 'ರಾಧಾ ರಮಣ' ಧಾರಾವಾಹಿಯಲ್ಲಿ.
'ರಾಧಾ ರಮಣ' ಧಾರಾವಾಹಿಯಲ್ಲಿ ಆರಾಧನಾ ಆಗಿ ಅಭಿನಯಿಸುತ್ತಿದ್ದ ಶ್ವೇತಾ ಪ್ರಸಾದ್ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಾಗ ಆ ಜಾಗಕ್ಕೆ ಬಂದವರೇ ಕಾವ್ಯಾ ಗೌಡ. ಆರಾಧನಾ ಆಲಿಯಾಸ್ ರಾಧಾ ಮಿಸ್ ಆಗಿ ನಟಿಸಿದ ಕಾವ್ಯಾ ಗೌಡ ಮುಂದೆ ನಟನೆಗೆ ಬ್ರೇಕ್ ಹಾಕಿದರು. ಮದುವೆಯ ನಂತರ ನಟನೆಯಿಂದ ದೂರವೇ ಉಳಿದಿದ್ದ ಈಕೆ ಉದ್ಯಮಿಯಾಗಿಯೂ ಭಡ್ತಿ ಪಡೆದಿದ್ದರು.

ಮೊದಲಿನಿಂದಲೂ ಉತ್ತಮ ರೀತಿಯ ಫ್ಯಾಷನ್ ಸೆನ್ಸ್ ಹೊಂದಿದ್ದ ಈಕೆ ಅದರ ಮೂಲಕವೇ ಸಾಕಷ್ಟು ಸುದ್ದಿಯಲ್ಲಿದ್ದರು. ನಂತರ ಇಟಾಲಿಯನ್ ಜ್ಯುವೆಲ್ಲರಿ ಬ್ರಾಂಡ್‌ವೊಂದಕ್ಕೆ ಜ್ಯುವೆಲ್ಲರಿ ಡಿಸೈನರ್ ಆಗಿ ಕೆಲಸ ಮಾಡುವ ಅವಕಾಶವನ್ನು ಕಾವ್ಯಾ ಪಡೆದುಕೊಂಡಿದ್ದರು.


Click it and Unblock the Notifications











