"ಜನರು ಇನ್ನೂ ವರದಕ್ಷಿಣೆ ಕೇಳುತ್ತಾರೆಯೇ ಅಥವಾ ನೀಡುತ್ತಾರೆಯೇ?";ದನಿ ಎತ್ತಿದ ಕಿರುತೆರೆ ನಟಿ ಶ್ವೇತಾ ಪ್ರಸಾದ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಅಂತರಪಟ'ವೂ ಒಂದು. ವಿಭಿನ್ನ ಕಥೆಯ ಜೊತೆಗೆ ಹೊಸ ನಾಯಕ ನಾಯಕಿಯ ಮೂಲಕ ಕಿರುತೆರೆ ವೀಕ್ಷಕರನ್ನು 'ಅಂತರಪಟ' ಧಾರಾವಾಹಿ ರಂಜಿಸುತ್ತಿದೆ. ಕಿರುತೆರೆ ನಟಿ ಶ್ವೇತಾ ಪ್ರಸಾದ್ ಅವರು ಈ ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕ ಗಮನಸೆಳೆದಿದ್ದರು. ಐಎಎಸ್ ಅಧಿಕಾರಿಯಾಗಿ 'ಅಂತರಪಟ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ಶ್ವೇತಾ ಪ್ರಸಾದ್ ವರದಕ್ಷಿಣೆಯ ವಿಚಾರವಾಗಿ ದನಿ ಎತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟಿವ್ ಆಗಿರುವ ಶ್ವೇತಾ ಪ್ರಸಾದ್ ಇತ್ತೀಚೆಗಷ್ಟೇ ಹಾಕಿರುವ ಪೋಸ್ಟ್ ಒಂದು ವೈರಲ್ ಆಗುತ್ತಿದೆ. "ಅಂತರಪಟ ಧಾರಾವಾಹಿಯಲ್ಲಿ ನಾನು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ ಎಂಬುದು ನಿಮಗೆ ತಿಳಿದೇ ಇದೆ. ನೀವೆಲ್ಲರೂ ಆ ಪಾತ್ರವನ್ನು ಮನಸಾರೆ ಇಷ್ಟಪಟ್ಟಿದ್ದೀರಿ ಎಂದು ನಾನು ಭಾವಿಸಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ "ನಾನು ಈ ಪಾತ್ರವನ್ನು ಒಪ್ಪಿಕೊಳ್ಳಲು ಕೂಡಾ ಕಾರಣವಿದೆ. ವರದಕ್ಷಿಣೆಯ ವಿರುದ್ಧ ದನಿ ಎತ್ತುವ ಹೆಣ್ಣು ಮಗಳಿನ ಪಾತ್ರವದು. ಜನರು ಇನ್ನೂ ವರದಕ್ಷಿಣೆ ಕೇಳುತ್ತಾರೆಯೇ ಅಥವಾ ನೀಡುತ್ತಾರೆಯೇ ಎಂದು ತಿಳಿಯಲು ನನಗೆ ಕುತೂಹಲವಿದೆ. ನಿಮ್ಮ ಕುಟುಂಬ ಅಥವಾ ಸಮಾಜದಲ್ಲಿ ನೀವು ವೈಯಕ್ತಿಕವಾಗಿ ಈ ಪರಿಸ್ಥಿತಿಯನ್ನು ಎದುರಿಸಿದ್ದೀರಾ?" ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ಶ್ವೇತಾ ಪ್ರಸಾದ್.
ಅಂದ ಹಾಗೇ ಶ್ವೇತಾ ಪ್ರಸಾದ್ ಅವರು ಈ ಹಿಂದೆ ಇದೇ ಸೀರಿಯಲ್ ನಲ್ಲಿ ಸ್ಯಾನಿಟರಿ ನ್ಯಾಪ್ ಕಿನ್‌ನ ಬಗ್ಗೆ ಅರಿವು ಮೂಡಿಸಿದ್ದರು. ಆ ಮೂಲಕ ಸೀರಿಯಲ್ ಪ್ರಿಯರ ಮನ ಸೆಳೆದಿದ್ದರು. ಇದೀಗ ಸಮಾಜದ ಪಿಡುಗು ವರದಕ್ಷಿಣೆ ವಿರುದ್ಧವೂ ದನಿ ಎತ್ತಿದ್ದು ಕಿರುತೆರೆ ಪ್ರಿಯರಿಗೆ ಮಗದಷ್ಟು ಖುಷಿ ನೀಡಿದೆ.
ಅಂದ ಹಾಗೆ 'ರಾಧಾ ರಮಣ' ಧಾರಾವಾಹಿಯಲ್ಲಿ ಆರಾಧನಾಳಾಗಿ ನಟಿಸಿದ್ದ ಶ್ವೇತಾ ಪ್ರಸಾದ್ ತದ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ನಂತರ ಅಂತತಪಟ ಧಾರಾವಾಹಿಯ ರಾಧಾ ಪಾತ್ರಕ್ಕೆ ಜೀವ ತುಂಬುವ ಅವಕಾಶ ಆಕೆಗೆ ದೊರಕಿತು. ಪಾತ್ರ ವಿಭಿನ್ನವಾಗಿದ್ದ ಕಾರಣ ಖುಷಿಯಾಗಿ ನಟಿಸಲು ಅಸ್ತು ಎಂದರು ಶ್ವೇತಾ ಪ್ರಸಾದ್. ಆರಂಭದಲ್ಲಿ ಅದು ಒಂದು ದಿನದ ಸಂಚಿಕೆ ಎಂದಿತ್ತು. ಆದರೆ, ಆಮೇಲೆ ಅವರು ಅದನ್ನು ಕೆಲವು ಸಂಚಿಕೆಗಳವರೆಗೆ ವಿಸ್ತರಿಸಿದರು ಎಂದು ಈ ಹಿಂದೆ ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದರು ಶ್ವೇತಾ ಪ್ರಸಾದ್.

ಕಿರುತೆರೆಯ ಹೊರತಾಗಿ ಹಿರಿತೆರೆಯಲ್ಲಿಯೂ ನಟನಾ ಛಾಪನ್ನು ಮೂಡಿಸಿದ ಬೆಡಗಿ ಶ್ವೇತಾ ಪ್ರಸಾದ್. ಇತ್ತೀಚೆಗಷ್ಟೇ ತೆರೆ ಕಂಡಿರುವ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾ 'ಕಾಟೇರ'ದಲ್ಲಿ ಈಕೆ ನಟಿಸಿದ್ದರು. 'ಕಾಟೇರ' ಸಿನಿಮಾದಲ್ಲಿ ಫೋರೆನ್ಸಿಕ್ ತಜ್ಞೆ ರೀನಾ ಡಿಸೋಜಾ ಪಾತ್ರದಲ್ಲಿ ಶ್ವೇತಾ ಪ್ರಸಾದ್ ಕಾಣಿಸಿಕೊಂಡಿದ್ದರು. ಇದರ ಜೊತೆಗೆ "ಡಿ ಬಾಸ್ ಜೊತೆಗೆ ಒಂದು ಮುಖ್ಯವಾದ ಪಾತ್ರ ಮಾಡಿದರೆ ಎಷ್ಟು ಜನಪ್ರಿಯತೆ ಸಿಗುತ್ತದೆ ಎನ್ನುವುದು ನನಗೆ ಗೊತ್ತಾಗಿದ್ದು ಆಗಲೇ" ಎಂದು ಅಂದು ಫಿಲ್ಮಿಬೀಟ್ ಜೊತೆಗೆ ಹೇಳಿಕೊಂಡಿದ್ದರು ಶ್ವೇತಾ ಪ್ರಸಾದ್.


Click it and Unblock the Notifications











