ಕಿರುತೆರೆ ನಟ ರವಿಕಿರಣ್ ವಿರುದ್ಧ ಗೋಲ್ಮಾಲ್ ಆರೋಪ ; ಸದಸ್ಯರಿಂದ ದೂರು
ಕಿರುತೆರೆಯ ರವಿಚಂದ್ರನ್ ಎಂದೇ ಖ್ಯಾತಿಯನ್ನ ಗಳಿಸಿದವರು ರವಿಕಿರಣ್. ಸದಾ ಸೀರಿಯಲ್ ಗುಂಗಿನಲ್ಲಿಯೇ ಇರುವ ರವಿಕಿರಣ್ ಅವರ ಮೇಲೆ ಈಗ ಆರೋಪವೊಂದನ್ನ ಮಾಡಲಾಗಿದೆ. ಅದು ಅವರ ಸಹೋದ್ಯೋಗಿಗಳಿಂದನೇ
ಹೌದು, ಅಸಲಿಗೆ ಕಿರುತೆರೆ ಕಲಾವಿದರಿಗಾಗಿಯೇ ಟೆಲಿವಿಷನ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್' ಇದೆ. ಕಳೆದ 20 ವರ್ಷದಿಂದ ಇರುವ ಈ ಕ್ಲಬ್ ಗೆ ರವಿಕಿರಣ್ ಅವರು ಮೊದಲಿಂದ ಕಾರ್ಯದರ್ಶಿ. ಆದರೆ.. ಸರ್ಕಾರ ಕೊಟ್ಟ ಅನುದಾನದಲ್ಲಿ ನಿರ್ಮಾಣವಾದ ಈ ಕ್ಲಬ್ ಗೆ ಸಂಬಂಧಿಸಿದಂತೆ GST, ಬಿಬಿಎಂಪಿ ಟ್ಯಾಕ್ಸ್ ಸೇರಿ ಯಾವುದೇ ತೆರಿಗೆ ಪಾವತಿ ಮಾಡಿಲ್ಲ. ಬದಲಿಗೆ ಹಣವನ್ನು ಪಾವತಿಸದೇ ಅದರ ಹೆಸರಲ್ಲಿ ಕ್ಲಬ್ ಸದಸ್ಯರಿಂದ ವಸೂಲಿ ಮಾಡಲಾಗಿದೆ ಎಂಬ ಆರೋಪವನ್ನ ಈಗ ಅನೇಕರು ಮಾಡುತ್ತಿದ್ದಾರೆ

ಸಾವಿರಾರು ಕಲಾವಿರನ್ನೊಳಗೊಂಡ ಈ ಕ್ಲಬ್ ಗೆ ಸರ್ಕಾರವೇ 3 ಕೋಟಿಗೂ ಅಧಿಕ ಹಣವನ್ನು ನೀಡಿದೆ. ಆದರೂ ಸರ್ಕಾರದ ಕಣ್ಣಿಗೆ ಮಣ್ಣೇರಚುವ ಪ್ರಯತ್ನವನ್ನ ರವಿಕಿರಣ್ ಮಾಡ್ತಿದ್ದಾರೆ ಎಂಬ ಆರೋಪ ಮಾಡ್ತಿರುವ ಕ್ಲಬ್ ನ ಸದಸ್ಯರು ಈ ಹಿಂದೆ ಚರ್ಚಿಸಿ ರವಿಕಿರಣ್ ಅವರನ್ನ ಕ್ಲಬ್ ನಿಂದ ಅಮಾನತ್ತು ಮಾಡಿದ್ದರು. ಆದರೂ ಕ್ಲಬ್ ಗೆ ಬಾರದಂತೆ ಆದೇಶ ಇದ್ದರೂ ರವಿಕಿರಣ್ 6 ಲಕ್ಷ ರೂಪಾಯಿ ಹಣವನ್ನ ಪಡೆದಿದ್ದಾರೆ. ಅನುಮತಿ ಇರದೇ ಇದ್ದರೂ ನಿನ್ನೆ ಕ್ಲಬ್ ಗೆ ಬಂದಿದ್ದಾರೆ. ಈ ಕಾರಣಕ್ಕೆ ಕೆರಳಿರುವ ಉಳಿದ ಕಲಾವಿದರು ರವಿಕಿರಣ್ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ
ರವಿಕಿರಣ್ ವಿರುದ್ಧ ಕ್ಲಬ್ನಲ್ಲಿ ಅವ್ಯವಹಾರದ ಆರೋಪ ಮಾಡಿ, ಕಿರುತೆರೆಯ ಕಲಾವಿದರು ದೂರು ನೀಡಿದ ಹಿನ್ನೆಲೆಯಲ್ಲಿ ಸುಬ್ರಮಣ್ಯಪುರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕೋರ್ಟ್ನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಇನ್ಸ್ಪೆಕ್ಟರ್ ಅರ್ಜುನ್ ಮನವರಿಕೆ ಮಾಡಿದ್ದಾರೆ. ಅವರ ಮಾತು ಒಪ್ಪಿ ಸದಸ್ಯರು ತೆರಳಿರುವುದಾಗಿ ಪೊಲೀಸರಿಂದ ಮಾಹಿತಿ ಲಭ್ಯವಾಗಿದೆ.

ಕಳೆದ ವರ್ಷ ಸ್ವಾಮಿಜಿಯೊಬ್ಬರಿಂದ ಮೋಸಕ್ಕೊಳಗಾಗಿದ್ದ ರವಿಕಿರಣ್
ಕಾರ್ಯಕ್ರಮವೊಂದರಲ್ಲಿ ರವಿಕಿರಣ್ ಅವರಿಗೆ ಪರಿಚಿತವಾಗಿದ್ದ ನವೀನ್ ಭಾಗ್ಯಶ್ರೀ ಎಂಬ ಸ್ವಾಮೀಜಿ, ರವಿಕಿರಣ್ ಅವರಿಗೆ ನಾಲ್ಕು ಲಕ್ಷಕ್ಕೂ ಅಧಿಕ ಹಣದ ಪಂಗನಾಮವನ್ನ ಹಾಕಿದ್ದರು. ಸ್ವಾಮೀಜಿಯೊಬ್ಬರಿಂದ ಮೋಸ ಹೋಗಿರುವುದಾಗಿ ರವಿಕಿರಣ್ ನ್ಯಾಯಾಲಯದ ಮೊರೆ ಹೋಗಿದ್ದರು. ದುಬೈನಲ್ಲಿ ಕಾರ್ಯಕ್ರಮ, ಕಡಿಮೆ ಬೆಲೆಯಲ್ಲಿ ಚಿನ್ನ, ಹೊಸಕೋಟೆ ಬಳಿ ಸೈಟ್ ಹೀಗೆ ಹತ್ತು ಹಲವು ರೀತಿಯಲ್ಲಿ ರವಿಕಿರಣ್ ಅವರನ್ನ ನಂಬಿಸಿದ್ದ ಸ್ವಾಮಿಜಿ 4 ಲಕ್ಷದ 35 ಸಾವಿರ ರೂ.ಗಳನ್ನು ರವಿಕಿರಣ್ ಅವರಿಂದ ಪೀಕಿದ್ದರು.
ಒಟ್ಟಿನಲ್ಲಿ ಸದ್ಯಕ್ಕೆ ಕಿರುತೆರೆಯ ಸದಸ್ಯರೇ ತಮ್ಮ ಮನೆಯ ಪ್ರಮುಖ ಸದಸ್ಯ ರವಿಕಿರಣ್ ಅವರ ಮೇಲೆ ಆರೋಪ ಮಾಡಿದ್ದಾರೆ. ರವಿಕಿರಣ್ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಟೆಲಿವಿಷನ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಈ ಅವ್ಯವಹಾರದ ಪ್ರಕರಣ ಎಲ್ಲಿ ಹೋಗಿ ಮುಟ್ಟುತ್ತೆ ಅನ್ನುವುದನ್ನ ಈಗ ಕಾದು ನೋಡಬೇಕಿದೆ.


Click it and Unblock the Notifications










