ಬಿಗ್‌ಬಾಸ್ ಬಹುಮಾನ ₹50 ಲಕ್ಷದಲ್ಲಿ ಜಿಎಸ್‌ಟಿ ಅಂತ ಅರ್ಧಕ್ಕೂ ಹೆಚ್ಚು ಸರ್ಕಾರಕ್ಕೆ ಹೋಗುತ್ತೆ ಎಂದ ವಿನ್ನರ್
ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ ಬಿಗ್‌ಬಾಸ್ ಶೋ ಯಶಸ್ವಿಯಾಗಿದೆ. ಬೇರೆ ಬೇರೆ ಕ್ಷೇತ್ರಗಳ ವ್ಯಕ್ತಿತ್ವಗಳನ್ನು ಒಂದು ಮನೆಯಲ್ಲಿ ಕೂಡಿ ಹಾಕಿ ಸುತ್ತಾ ಕ್ಯಾಮರಾ ಇಟ್ಟು ಟಾಸ್ಕ್‌ಗಳನ್ನು ಕೊಟ್ಟು ವೀಕ್ಷಕರನ್ನು ರಂಜಿಸೋ ಶೋ ಬಿಗ್‌ಬಾಸ್. 100 ದಿನ ಮನೆಯಲ್ಲಿ ಉಳಿದುಕೊಂಡು ಗೆದ್ದವರಿಗೆ 50 ಲಕ್ಷ ರೂ. ಬಹುಮಾನದ ಮೊತ್ತ ಸಿಗುತ್ತದೆ.
ಬಿಗ್‌ಬಾಸ್ ವಿಜೇತರಿಗೆ 50 ಲಕ್ಷ ರೂ. ಬಹುಮಾನದ ಹಣದ ಜೊತೆಗೆ ಬೇರೆ ಬೇರೆ ಬಹುಮಾನಗಳು ಸಿಗುತ್ತದೆ. ಈ ಬಾರಿ ಕನ್ನಡದಲ್ಲಿ 10ನೇ ಸೀಸನ್ ನಡೀತಿದೆ. ಈ ಸೀಸನ್‌ನಲ್ಲಿ ಗೆದ್ದವರಿಗೂ 50 ಲಕ್ಷ ರೂ. ಪ್ರೈಜ್ ಮನಿ ಸಿಗುತ್ತದೆ ಎಂದು ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಪ್ರಶಾಂತ್ ನಾಯಕ್ ಹೇಳಿದ್ದಾರೆ. ವಿಜೇತರಿಗೆ ಅಷ್ಟು ದೊಡ್ಡ ಮೊತ್ತ ಸಿಕ್ಕರೂ ಕೂಡ ಟ್ಯಾಕ್ಸ್ ರೂಪದಲ್ಲಿ ಹೆಚ್ಚಿನ ಹಣ ಸರ್ಕಾರಕ್ಕೆ ಹೋಗುತ್ತದೆ.

ಜಿಎಸ್‌ಟಿ ಜಾರಿಗೆ ಬಂದಮೇಲೆ ಬಿಗ್‌ಬಾಸ್ ವಿಜೇತರಿಗೆ ಸಿಗುವ ಹಣದಲ್ಲಿ ಹೆಚ್ಚು ಮೊತ್ತ ಸರ್ಕಾರಕ್ಕೆ ಹೋಗುತ್ತಿದೆ. ಸಾಮಾನ್ಯವಾಗಿ ಬಿಗ್‌ಬಾಸ್‌ನಲ್ಲಿ ಗೆದ್ದವರಿಗೆ 50 ಲಕ್ಷ ರೂ. ಸೂಟ್‌ಕೇಸ್ ಕೊಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಟ್ಯಾಕ್ಸ್ ಎಲ್ಲಾ ಕಳೆದು ಉಳಿದ ಹಣ ಮಾತ್ರ ಕೊಡುತ್ತಾರೆ ಅನ್ನೋದು ಬಹಳಷ್ಟು ಜನಕ್ಕೆ ಗೊತ್ತಿಲ್ಲ.
100 ದಿನ ಕಷ್ಟಬಿದ್ದು ಆಟ ಆಡಿ, ಸಾಕಷ್ಟು ನೋವುಂಡು, ಉಳಿದ ಸ್ಪರ್ಧಿಗಳನ್ನೆಲ್ಲಾ ಮೀರಿ ಗೆದ್ದರೆ ಬಹುಪಾಲು ಬಹುಮಾನದ ಹಣ ಸರ್ಕಾರಕ್ಕೆ ಹೋಗುತ್ತದೆ ಎಂದು ತೆಲುಗು ಬಿಗ್‌ಬಾಸ್ ಸೀಸನ್-5ರ ವಿಜೇತ ಸನ್ನಿ ಬೇಸರ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಟ್ಯಾಕ್ಸ್ ರೂಪದಲ್ಲಿ 10 ಲಕ್ಷ ರೂ. ಹೋಗುತ್ತಿತ್ತು ಎನ್ನಲಾಗುತ್ತದೆ. ಆದರೆ 2017ರಲ್ಲಿ ಜಿಎಸ್‌ಟಿ ವಿಧಾನ ಜಾರಿಗೆ ಬಂದ ಬಳಿಕ ಶೇ. 50ರಷ್ಟು ಹಣ ಸರ್ಕಾರದ ಪಾಲಾಗುತ್ತಿದೆ.
ಬಿಗ್‌ಬಾಸ್ ಬಹುಮಾನ ಹಣದ ಬಗ್ಗೆ ವಿಜೆ ಸನ್ನಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಆಡಿ ಗೆದ್ದಿದ್ದು ನಾನು. ಗೆದ್ದಿದ್ದು ಮಾತ್ರ ಸರ್ಕಾರ ಎನ್ನುವಂತೆ ಸನ್ನಿ ಹೇಳಿದ್ದಾರೆ. ಜಿಎಸ್ಟಿ ರೂಪದಲ್ಲಿ ಸರ್ಕಾರ ಅಂದಾಜು 27 ಲಕ್ಷ ರೂ. ತೆಗೆದುಕೊಂಡಿದೆ ಎಂದಿದ್ದಾರೆ.

"ನಾನು ವಿಜೇತನಾದರೂ ಅಭಿನಂದನೆ ನನ್ನೊಬ್ಬನಿಗೆ ಹೇಳಿಕೊಳ್ಳಲಿಲ್ಲ. ಸರ್ಕಾರಕ್ಕೂ ಹೇಳಿದ್ದೇನೆ. ಯಾಕಂದರೆ ಜಿಎಸ್‌ಟಿ ರೂಪದಲ್ಲಿ ನನಗಿಂತ ಹೆಚ್ಚು ಹೆಚ್ಚು ಕಡಿಮೆ 50% ಶೇರ್ ಪಡೆದುಕೊಂಡಿದೆ. ಆಟ ನನ್ನದು ಪ್ರೈಸ್ ಮನಿ ಮಾತ್ರ ಅವರದ್ದು"
"ನಾನು ಗೆದ್ದ 50 ಲಕ್ಷ ರೂ.ಗಳಲ್ಲಿ ಸುಮಾರು 27 ಲಕ್ಷ ರೂ. ಅಷ್ಟು ಹಣವನ್ನು ತೆರಿಗೆ ರೂಪದಲ್ಲಿ ತೆಗೆದುಕೊಳ್ಳಲಾಗಿದೆ. ಎಷ್ಟು ಎಂದು ನನಗೆ ಸರಿಯಾಗಿ ನೆನಪಿಲ್ಲ.ಆದರೆ ಸುಮಾರು ಅರ್ಧದಿಂದ ಅರ್ಧದಷ್ಟು ಮೊತ್ತವನ್ನು ತೆರಿಗೆಯಾಗಿ ತೆಗೆದುಕೊಂಡರು. ಸರ್ಕಾರದ ತೆರಿಗೆಯನ್ನು ಕಡಿತಗೊಳಿಸಿದ ಬಳಿಕ ನನಗೆ ಉಳಿದ ಮೊತ್ತ ಸಿಕ್ಕಿತು. ಸರ್ಕಾರ ಟ್ಯಾಕ್ಸ್ ರೂಪದಲ್ಲಿ ಕಡಿತಗೊಳಿಸಿ ಉಳಿದ ಮೊತ್ತವನ್ನೇ ಚಾನಲ್ ನೀಡುತ್ತದೆ. ಹಾಗಾಗಿ ನಮ್ಮ ಕೈಯಲ್ಲಿ ಏನು ಇರಲ್ಲ. ಡೊನೇಷನ್ ರೂಪದಲ್ಲಿ ಕೆಲವರು ಟ್ಯಾಕ್ಸ್ ಉಳಿಸಿಕೊಳ್ಳುತ್ತಾರೆ. ಆದರೆ ನಮಗೆ ಅಷ್ಟು ಜಾಣ್ಮೆ ಇಲ್ಲ. ಹಾಗಾಗಿ ಸಂಪೂರ್ಣ ಹಣ ಟ್ಯಾಕ್ಸ್ ರೂಪದಲ್ಲಿ ಕಟ್ಟುವಂತಾಯಿತು" ಎಂದು ವಿಜೆ ಸನ್ನಿ ವಿವರಿಸಿದ್ದಾರೆ.
ಕನ್ನಡ ಬಿಗ್‌ಬಾಸ್ ಶೋನಲ್ಲೂ ವಿಜೇತರಿಗೆ 50 ಲಕ್ಷ ರೂ. ಬಹುಮಾನದ ಮೊತ್ತ ಸಿಗುತ್ತದೆ. ತೆರಿಗೆ ಹಣವನ್ನು ಕಡಿತಗೊಳಿಸಿದ ಬಳಿಕ ಉಳಿದ ಹಣ ಕೊಡುತ್ತಾರೆ. ಕೆಲವರಿಗೆ ಈ ವಿಚಾರ ಅಚ್ಚರಿ ಅನ್ನಿಸುವುದು ಸುಳ್ಳಲ್ಲ. 50 ಲಕ್ಷ ಸಂಪೂರ್ಣವಾಗಿ ವಿಜೇತರಿಗೆ ಸಿಗುತ್ತದೆ ಎಂದುಕೊಂಡಿದ್ದಾರೆ.


Click it and Unblock the Notifications











