ಸೆಲ್ಫಿ ವಿಡಿಯೋ ಮಾಡಿ ಕೊರಿಯೋಗ್ರಫರ್ ಚೈತನ್ಯಾ ಆತ್ಮಹತ್ಯೆ: ಈ ದುಡುಕಿನ ನಿರ್ಧಾರಕ್ಕೆ ಕಾರಣ ಏನು?
ತೆಲುಗು ಕಿರುತೆರೆಗೆ ಬರಸಿಡಿಲು ಬಂದೆರಗಿದೆ. 'ಢೀ' ಡ್ಯಾನ್ಸ್ ಶೋನಲ್ಲಿ ಕೊರಿಯೋಗ್ರಫರ್ ಆಗಿ ಕೆಲಸ ಮಾಡುತ್ತಿದ್ದ ಡ್ಯಾನ್ಸ ಮಾಸ್ಟರ್ ಚೈತನ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಭಾದೆ ತಾಳಲಾರದೇ ತಮ್ಮ ಜೀವನಕ್ಕೆ ಅಂತ್ಯ ಹಾಡುತ್ತಿರುವುದಾಗಿ ಚೈತನ್ಯಾ ಸೆಲ್ಫಿ ವಿಡಿಯೋ ಮಾಡಿ ಹೇಳಿಕೊಂಡಿದ್ದಾರೆ. ಸದ್ಯ ಆ ವಿಡಿಯೋ ಸಖತ್ ವೈರಲ್ ಆಗ್ತಿದ್ದು ಉದಯೋನ್ಮುಖ ಕೊರಿಯೋಗ್ರಫರ್ ಅಗಲಿಕೆಗೆ ತೆಲುಗು ಕಿರುತೆರೆ ದಿಗ್ಬ್ರಮೆ ವ್ಯಕ್ತಪಡಿಸಿದೆ.
'ಢೀ' ಡ್ಯಾನ್ಸ್ ಶೋನಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿದ್ದ ಚೈತನ್ಯಾ ಆರ್ಥಿಕ ಸಮಸ್ಯೆಯಿಂದ ಕಂಗೆಟ್ಟಿದ್ಧಾರೆ. ನೆಲ್ಲೂರು ಕ್ಲಬ್ ಹೋಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ದುಡುಕಿನ ನಿರ್ಧಾರ ಕೈಗೊಳ್ಳುತ್ತಿರುವುದಕ್ಕೆ ಚೈತನ್ಯಾ ಪೋಷಕರು, ಸಹೋದರಿ, ಡ್ಯಾನ್ಸರ್ಸ್ ಹಾಗೂ ಸ್ನೇಹಿತರಲ್ಲಿ ಕ್ಷಮೆ ಕೇಳಿದ್ದಾರೆ. ತಮಗಿರುವ ಹಣಕಾಸಿನ ಸಮಸ್ಯೆಯನ್ನು ಸಹಿಸಲು ಆಗುತ್ತಿಲ್ಲ, ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ ಎಂದು ಭಾವುಕರಾಗಿದ್ದಾರೆ. ಒಬ್ಬರ ಸಾಲ ತೀರಿಸಲು ಮತ್ತೊಬ್ಬರ ಬಳಿ ಸಾಲ, ಹೀಗೆ ಸಾಕಷ್ಟು ಸಾಲ ಮಾಡಿಕೊಂಡಿದ್ದೇನೆ ಎಂದಿದ್ದಾರೆ.

"ಮಮ್ಮಿ, ಡ್ಯಾಡಿ, ಸಹೋದರಿ ತಮ್ಮನ್ನು ಚೆನ್ನಾಗಿ ನೋಡಿಕೊಂಡರು. ನನಗೆ ಯಾವುದೇ ಕಷ್ಟ ಬರದಂತೆ ಜೊತೆಗಿದ್ದರು. ನನಗಿರುವ ಕಷ್ಟಗಳಿಂದ ಈ ನಿರ್ಧಾರ ಕೈಗೊಳ್ಳುತ್ತಿದ್ದೇನೆ. ಫೀಲ್ ಆಗಬೇಡ ಎಂದು ಸಹೋದರಿಗೆ ಹೇಳಿ, ಬಹಳ ಮಾಡಬೇಕು ಎಂದುಕೊಂಡೆ ಆದರೆ ಸಾಧ್ಯವಾಗುತ್ತಿಲ್ಲ. 'ಢೀ' ಶೋನ ತಮ್ಮ ಆತ್ಮೀಯ ಸ್ಪರ್ಧಿಗಳು, ಡ್ಯಾನ್ಸ್ ಮಾಸ್ಟರ್ಸ್‌ನ ನೆನಪಿಸಿಕೊಂಡಿದ್ದಾರೆ. ತಮ್ಮ ಮೇಲೆ ಇಟ್ಟುಕೊಂಡಿದ್ದ ನಂಬಿಕೆಯನ್ನು ಹಣದ ವಿಚಾರದಲ್ಲಿ ಕಳೆದುಕೊಂಡಿದ್ದಕ್ಕೆ ಕ್ಷಮೆ ಕೇಳಿದ್ದಾರೆ. ಸಾಲ ಮಾಡಿದರೆ ತೀರಿಸುವ ಛಲ ಇರಬೇಕು. ಆದರೆ ನಾನು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗುತ್ತಿಲ್ಲ, ಅದೇ ರೀತಿ 'ಢೀ' ಶೋನಲ್ಲಿ ಒಳ್ಳೆ ಫೇಮ್ ಸಿಗುತ್ತೆ ಆದರೆ ಕಮ್ಮಿ ಸಂಪಾದನೆ ಇದೆ."
"ಜಬರ್ದಸ್ತ್ ಶೋನಲ್ಲಿ ಇದಕ್ಕಿಂತ ಹೆಚ್ಚು ಆದಾಯ ಇದೆ. ಆದರೆ ಇಲ್ಲಿ ಅದು ಸಾಧ್ಯವಾಗುತ್ತಿಲ್ಲ. ಒಳ್ಳೆ ನೇಮು, ಫೇಮು ಸಿಕ್ತು, ಅದನ್ನು ಉಳಿಸಿಕೊಳ್ಳಬೇಕು, ಆದರೆ ನಾನು ಕಾಪಾಡಿಕೊಳ್ಳುತ್ತಿಲ್ಲ. ಆದರೆ ಈ ಸಾಲವನ್ನು ಮಾತ್ರ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು ತಪ್ಪಿನಿಂದ ಮತ್ತೊಂದು ತಪ್ಪು, ಅದರಿಂದ ತಪ್ಪು. ಅದರ ಮೇಲೆ ಮತ್ತೊಂದು, ಅಬ್ಬಾ ಖಂಡಿತ ನನ್ನಿಂದ ಸಾಧ್ಯವಾಗುತ್ತಿಲ್ಲ. ಬಹಳ ಜನರಿಗೆ ಸಮಸ್ಯೆ ತಂದೊಡ್ಡುತ್ತಿದ್ದೀನಿ. ಲವ್ ಯು ಮಮ್ಮಿ ಡ್ಯಾಡಿ. ಜಾಗ್ರತೆಯಿಂದ ಇರಿ. ನನ್ನಿಂದ ಸಾಧ್ಯವಾಗುತ್ತಿಲ್ಲ. ಈ ಜೀವನ ಸಾಕು, ಸಾಧ್ಯವಾಗುತ್ತಿಲ್ಲ. ನೆಲ್ಲೂರು ಹೋಟೆಲ್‌ನಲ್ಲಿ ಇದ್ದೀನಿ, ಇದು ನನ್ನ ಕೊನೆ ದಿನ" ಎಂದು ವಿಡಿಯೋ ಮುಗಿಸಿದ್ದಾರೆ.
ಶನಿವಾರ ವರ್ಲ್ಡ್ ಡ್ಯಾನ್ಸ್ ಶೋ ಹಿನ್ನೆಲೆಯಲ್ಲಿ ನೆಲ್ಲೂರಿನ ಟೌನ್‌ಹಾಲ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚೈತನ್ಯಾ ಭಾಗಿ ಆಗಿದ್ಧಾರೆ. ನೆಲ್ಲೂರು ಕ್ಲಬ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಕೊಡಿಯೋಗ್ರಫರ್ ಸೆಲ್ಫಿ ವಿಡಿಯೋ ಮಾಡಿ ಅಲ್ಲೇ ನೇಣು ಬಿಗಿದುಕೊಂಡಿದ್ದಾರೆ. ಚೈತನ್ಯಾ ಆತ್ಮಹತ್ಯೆಗೆ ಆತ್ಮೀಯರು ಸಂತಾಪ ಸೂಚಿಸುತ್ತಿದ್ದಾರೆ. ಜೊತೆಗೆ ಬಹಳ ದುಡುಕಿನ ನಿರ್ಧಾರ ಕೈಗೊಂಡು ಬಿಟ್ರಿ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಿರೂಪಕಿ ರಶ್ಮಿ ಸೇರಿದಂತೆ ಹಲವರು ಈ ಬಗ್ಗ ಪ್ರತಿಕ್ರಿಯಿಸಿದ್ದಾರೆ. ಎಲ್ಲಾ ಕಷ್ಟಗಳಿಗೂ ಸಾವು ಒಂದೇ ಪರಿಹಾರ ಅಲ್ಲ ಎನ್ನುತ್ತಿದ್ದಾರೆ.

ಚೈತನ್ಯಾ ಅಗಲಿಕೆಯ ಬಗ್ಗೆ ಡ್ಯಾನ್ಸರ್ ಕಂಡೆಕ್ಟರ್ ಝಾನ್ಸಿ ಭಾವುಕರಾಗಿದ್ದರು. ಅಣ್ಣಾ ಯಾಕೆ ಇಂತಹ ಕೆಲಸ ಮಾಡಿದೆ? ಎಂದಿದ್ದಾರೆ. ಚೈತನ್ಯಾ ನಿರ್ಧಾರದಿಂದ ಈಗ ಅವರ ಕುಟುಂಬ ಸಂಕಷ್ಟ ಎದುರಿಸುವಂತಾಗಿದೆ. ಅವರು ಯಾರಿಗೆ ಹಣ ಕೊಡಬೇಕಿತ್ತೋ ಅವರೊಟ್ಟಿಗೆ ಕೂತು ಚರ್ಚಿಸಬೇಕಿತ್ತು. ಎಲ್ಲರೂ ಅವರೊಟ್ಟಿಗೆ ಇದ್ದವರೇ, ಈಗ ನನ್ನ ಪರಿಸ್ಥಿತಿ ಹೀಗಿದೆ ಸತ್ತು ಹೋಗಬೇಕು ಎನಿಸುತ್ತಿದೆ ಎಂದಿದ್ದರೆ ಇಂತಹ ದುರಂತ ಸಂಭವಿಸುತ್ತಿರಲಿಲ್ಲ ಎಂದಿದ್ದಾರೆ.


Click it and Unblock the Notifications











