ಮನೆಯಲ್ಲಿನ ಕೊನೆಯ ದಿನ ; ಆ ನೋವು ಇವತ್ತು ಕಾಡುತ್ತೆ-ಬಿಗ್ ಬಾಸ್ ರಕ್ಷಿತಾ ಭಾವುಕ
ಕಿರುತೆರೆಯ ಪ್ರೇಕ್ಷಕರಲ್ಲಿ ಹಲವರ ಪಾಲಿಗೆ ''ಬಿಗ್ ಬಾಸ್'' ಪ್ರತಿ ವರ್ಷ ಬರುವ ಹಬ್ಬ. ಈ ಹಬ್ಬದಲ್ಲಿ ದೈಹಿಕವಾಗಿ ಹದಿನೈದು ಇಪ್ಪತ್ತು ಜನ ಭಾಗವಾದರೆ ಮಾನಸಿಕವಾಗಿ ಹಲವಾರು ಜನ ತಮ್ಮ ಮನೆಯಲ್ಲಿ ಈ ಹಬ್ಬ ಆಚರಿಸುತ್ತಾರೆ. ಆ ಮನೆಯಲ್ಲಿ ದಿನ ನಿತ್ಯ ನಡೆಯುವ ವಿದ್ಯಮಾನದ ಕುರಿತು ತಮ್ಮ ಮನೆಯಲ್ಲಿ ಚರ್ಚೆ ಮಾಡುತ್ತಾರೆ. ಸಾಮಾಜಿಕ ಜಾಲತಾಣದ ಸಹಾಯದ ಮೂಲಕವೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಒಂದರ್ಥದಲ್ಲಿ ''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ಅಲ್ಲ. ಹಲವರ ಪಾಲಿಗೆ ಭಾವನಾತ್ಮಕವಾದ ರಣರಂಗ. ಇನ್ನೂ ಸ್ಫರ್ಧಿಗಳ ಪಾಲಿಗೆ ಬದುಕು ಬದಲಿಸಬಲ್ಲ.. ಅಪಾರವಾದ ಹೆಸರನ್ನು ನೀಡಬಲ್ಲ.. ದೊಡ್ಡ ಮೊತ್ತದ ಹಣವನ್ನು ಕೂಡ ಕೊಡಬಲ್ಲ.. ಕಾರ್ಯಕ್ರಮ ''ಬಿಗ್ ಬಾಸ್''.

ಇಂಥಾ ''ಬಿಗ್ ಬಾಸ್'' ಮನೆಗೆ ಮತ್ತೊಮ್ಮೆ ತಾತ್ಕಾಲಿಕ ಬೀಗ ಬಿದ್ದಿದೆ. ಆದರೆ, ಅಲ್ಲಿನ ನೆನಪುಗಳು ಸ್ಫರ್ಧಿಗಳ ಮನದಲ್ಲಿ ಇನ್ನೂ ಹಚ್ಚ ಹಸಿರಾಗಿವೆ. ಇದಕ್ಕೆ ಕೈಗನ್ನಡಿ ಎಂಬಂತೆ ''ಬಿಗ್ ಬಾಸ್'' ಮುಕ್ತಾಯವಾಗಿ ಮೂರು ವಾರವಾದರೂ ರಕ್ಷಿತಾ ಇನ್ನೂ ಬಿಗ್ ಬಾಸ್ ಗುಂಗಿನಲ್ಲಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ರಕ್ಷಿತಾ ಶೆಟ್ಟಿ ಹೇಳಿದ್ದೇನು..? ಎಂದು ತಿಳಿಯಲು ಮುಂದೆ ಓದಿ.
ರಕ್ಷಿತಾ ಶೆಟ್ಟಿ ಬರಹ
ನನ್ನ ಜೀವನದಲ್ಲಿ ಎಂದಿಗೂ ಮರೆತೇ ಹೋಗಲಾರದ ದಿನ - ಬಿಗ್ ಬಾಸ್ ಮನೆಯಲ್ಲಿನ ಕೊನೆಯ ದಿನ. ಮೂರು ತಿಂಗಳುಗಳ ಕಾಲ ಎಲ್ಲವೂ ಇತ್ತು - ಸಂತೋಷ, ಕಣ್ಣೀರು, ನೋವು, ಅಸೂಯೆ, ಪ್ರೀತಿ ಮತ್ತು ಬೆಳವಣಿಗೆ. ಸ್ಪರ್ಧೆಯಾಗಿ ಆರಂಭವಾದ ಈ ಮನೆ, ಸಮಯದೊಂದಿಗೆ ನಿಜವಾದ ಮನೆಯಾಗಿಬಿಟ್ಟಿತು. ಭಾವನೆಗಳು, ಬಾಂಧವ್ಯ ಮತ್ತು ಅನೇಕ ನೆನಪುಗಳಿಂದ ಕಟ್ಟಿದ ಮನೆ ಅದು ಎಂದು ರಕ್ಷಿತಾ ಶೆಟ್ಟಿ ಬರೆದುಕೊಂಡಿದ್ದಾರೆ.

ಇದು ಕೇವಲ ಒಂದು ಪ್ರಯಾಣವಲ್ಲ, ನಾನು ಇಲ್ಲಿ ಅನೇಕ ಸಂಬಂಧಗಳನ್ನು ಕಟ್ಟಿಕೊಂಡೆ. ಬಹಳಷ್ಟು ಅಣ್ಣಂದಿರು, ಅಮೂಲ್ಯವಾದ ಬಾಂಧವ್ಯಗಳು - ಇವು ಸದಾ ನನ್ನ ಹೃದಯದಲ್ಲಿರುತ್ತವೆ. ಸುದೀಪ್ ಸರ್ ಮನೆಗೆ ಪ್ರವೇಶಿಸಿದ ಕ್ಷಣ ತುಂಬಾ ಸಂತೋಷ ತಂದಿತು. ಆದರೆ ಮನೆ ಬಿಟ್ಟು ಹೊರಡುವ ಸಮಯ... ಅದು ನನ್ನ ಜೀವನದ ಅತ್ಯಂತ ಕಠಿಣ ಮತ್ತು ನೋವಿನ ಕ್ಷಣಗಳಲ್ಲಿ ಒಂದಾಗಿತ್ತು ಎಂದು ರಕ್ಷಿತಾ ಶೆಟ್ಟಿ ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ.
ಮುಂದುವರೆದು, ಈ ಎಲ್ಲಾ ತಿಂಗಳುಗಳ ನಂತರ ಈ ಮನೆಯನ್ನು ಬಿಟ್ಟು ಹೋಗುವುದು ಸುಲಭವಾಗಿರಲಿಲ್ಲ. ಇಂದಿಗೂ ಆ ನೋವು ಮನಸ್ಸಿನಲ್ಲಿ ಉಳಿದಿದೆ.ಕೆಲವು ಸ್ಥಳಗಳು ನಮ್ಮನ್ನು ಬಿಟ್ಟು ಹೋಗಲು ಬಿಡುವುದಿಲ್ಲ... ಅವು ನಮ್ಮೊಳಗೇ ಉಳಿದುಬಿಡುತ್ತವೆ.ಮನೆಯ ಹೊರಗಿದ್ದ ನನ್ನ ಜನರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿ, ಬೆಂಬಲ, ಪ್ರಾರ್ಥನೆಗಳು ಮತ್ತು ಮತಗಳು ನನಗೆ ಶಕ್ತಿ ನೀಡಿದವು.ನಾನು ಅಷ್ಟು ದೂರ ಈ ಮನೆಯಲ್ಲಿ ಉಳಿಯಲು ನೀವೇ ಕಾರಣ. ಯಾವತ್ತೂ ಕೃತಜ್ಞತೆ. ಯಾವತ್ತೂ ನೆನಪುಗಳು ಎಂದು ''ಬಿಗ್ ಬಾಸ್''ರನ್ನರ್ ಅಪ್ ರಕ್ಷಿತಾ ತಮ್ಮ ಬರಹವನ್ನು ಅಂತ್ಯಗೊಳಿಸಿದ್ದಾರೆ.
ಇನ್ನುಳಿದಂತೆ ''ಬಿಗ್ ಬಾಸ್'' ಮನೆಗೆ ಹೋಗಿ ಬಂದ ನಂತರ ರಕ್ಷಿತಾ ಅವರ ಕ್ರೇಜ್ ಹೆಚ್ಚಾಗಿದೆ. ''ಬಿಗ್ ಬಾಸ್'' ಗೆದ್ದ ಗಿಲ್ಲಿಗೆ ಹೇಗೆ ಎಲ್ಲೆಡೆ ಅದ್ಧೂರಿ ಸ್ವಾಗತ ಸಿಕ್ತಿದೆಯೋ, ಜನರ ಪ್ರೀತಿ ಸಿಗುತ್ತಿದೆಯೋ ಅಷ್ಟೇ ಪ್ರೀತಿ ಮತ್ತು ಅಭಿಮಾನಕ್ಕೆ ರಕ್ಷಿತಾ ಕೂಡ ಪಾತ್ರವಾಗಿದ್ದಾರೆ. ಸದ್ಯ ತಮಗೆ ಸಿಕ್ ಈ ಜನ ಬೆಂಬಲದಿಂದ ಖುಷಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ರಕ್ಷಿತಾ ಶೆಟ್ಟಿ ಏನ್ಮಾಡ್ತಾರೆ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











