ತಾಯಂದಿರ ದಿನಕ್ಕೆ 'ತಾಯಿಗೆ ತಕ್ಕ ಮಗ' ಸಿನಿಮಾ ಪ್ರಸಾರ
ಮೇ 12ರ ಭಾನುವಾರ ತಾಯಂದಿರ ದಿನ. ಈ ವಿಶೇಷ ದಿನ 'ತಾಯಿಗೆ ತಕ್ಕ ಮಗ' ಸಿನಿಮಾ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದೆ.
ಜೀ ಕನ್ನಡ ವಾಹಿನಿಯಲ್ಲಿ ಮೇ 12ರ ಭಾನುವಾರದಂದು ಮಧ್ಯಾಹ್ನ 2 ಗಂಟೆಗೆ ಸಿನಿಮಾ ಪ್ರಸಾರ ಆಗಲಿದೆ. ಚಿತ್ರದ ಪ್ರಸಾರದ ದಿನಾಂಕವನ್ನು ಜೀ ಕನ್ನಡ ವಾಹಿನಿ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
'ತಾಯಿಗೆ ತಕ್ಕ ಮಗ' ಅಜಯ್ ರಾವ್ ನಟನೆಯ 25ನೇ ಸಿನಿಮಾ ಆಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡದ್ದೆ, ಇದ್ದರೂ ಸಿನಿಮಾದಲ್ಲಿ ಇರುವ ವಿಷಯ ಮೆಚ್ಚುಗೆ ಪಡೆದಿತ್ತು.

ಆಶಿಕಾ ರಂಗನಾಥ್ ಸಿನಿಮಾದ ನಾಯಕಿಯಾಗಿದ್ದರು. ಸುಮಲತಾ ಅಜಯ್ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಶಶಾಂಕ್ ಈ ಸಿನಿಮಾದ ನಿರ್ದೇಶನ ಮಾಡಿದ್ದರು. ಮಾತ್ರವಲ್ಲದೆ ತಮ್ಮದೆ ಬ್ಯಾನರ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಶಶಾಂಕ್ ಸಿನಿಮಾಸ್ ಬ್ಯಾನರ್ ನಲ್ಲಿ ಬಂದ ಮೊದಲ ಸಿನಿಮಾ ಇದಾಗಿತ್ತು.
ಸಿನಿಮಾದ ಹಾಡುಗಳು ಕೇಳುಗರಿಗೆ ಇಷ್ಟ ಆಗಿದ್ದವು. ಜೂಡಾ ಸ್ಯಾಂಡಿ ಸಂಗೀತ ನೀಡಿದ್ದರು. ಜಯಂತ್ ಕಾಯ್ಕಿಣಿ, ರಾಘವೇಂದ್ರ ಸಿ ವಿ ಹಾಗೂ ಶಶಾಂಕ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದರು. ರಾಘವೇಂದ್ರ ಸಿ ವಿ ಅವರ ಮೊದಲ ಸಿನಿಮಾ ಇದಾಗಿದ್ದು, 'ಸಕ್ಕರೆ ನಗುವ ಚೆಲುವೆ..' ಎಂದು ಬರೆಯುವ ಮೂಲಕ ಗೀತರಚನೆಕಾರನಾದರು.


Click it and Unblock the Notifications











