ನನ್ನ ಗಂಡ ಮತ್ತು ಮನೆಯವರಿಗಾಗಿ 12 ವರ್ಷ ನಾನು ತ್ಯಾಗ ಮಾಡಿದೆ, ಕೊನೆಗೆ ಉಳಿದಿದ್ದೇನು ? ಜಾಹ್ನವಿ ಕಣ್ಣೀರು
ಮದುವೆ ಒಂದು ಸಾಂಸ್ಥಿಕ ವ್ಯವಸ್ಥೆ ಎನ್ನುವ ಮಾತು ಹಿಂದೆ ಪ್ರಚಲಿತದಲ್ಲಿತ್ತು. ಆದರೆ ಈಗ ಬದಲಾದ ಸಾಮಾಜಿಕ.. ಆರ್ಥಿಕ.. ಶೈಕ್ಷಣಿಕ.. ವಿಚಾರಗಳು ಮದುವೆಯ ಪರಿಕಲ್ಪನೆ ಮತ್ತು ರೂಪುರೇಷೆಯನ್ನು ಬದಲಿಸಿವೆ. ಮದುವೆ ಈಗ ವ್ಯವಸ್ಥೆಯಾಗಿ ಉಳಿದಿಲ್ಲ. ಎರಡು ಮನಸುಗಳ ಬೆಸುಗೆಯಾಗದ ಮದುವೆ ಈಗ ಕೇವಲ ತೋರಿಕೆಯ ಸಂಪ್ರದಾಯವಾಗಿದೆ. ತೋರ್ಪಡಿಕೆಯ ಆಚರಣೆಯಾಗಿದೆ. ಬದಲಾದ ಈ ಕಾಲದಲ್ಲಿ.. ಹಲವರು ಸ್ವಾವಲಂಗಿಯಾಗುತ್ತಿದ್ದಾರೆ.
ಇವತ್ತು.. ಯಾರು.. ಯಾರ ಅಧೀನದಲ್ಲಿರಲು ಇಷ್ಟ ಪಡುವುದಿಲ್ಲ. ಹೆಣ್ಣಿಗಾಗಲಿ.. ಗಂಡಿಗಾಗಲಿ.. ಯಾರು ಯಾರಿಗೂ ಅನಿವಾರ್ಯವಲ್ಲ ಎಂಬ ಮನೋಭಾವ ಹೆಚ್ಚಾಗಿದೆ. ಮದುವೆ ಎಂಬ ವ್ಯವಸ್ಥೆ ನಶಿಸಿ ಹೋಗಲು ಇವೆಲ್ಲವೂ ಕಾರಣ ಎನ್ನುವ ಅಭಿಪ್ರಾಯ ಆಗಾಗ ವ್ಯಕ್ತವಾಗುತ್ತಲೆ ಇರುತ್ತದೆ.

ಇದಕ್ಕೆ ಪೂರಕವಾಗಿ ಈಗೀಗ ವಿಚ್ಛೇದನದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿಯಂತೂ ಡಿವೋರ್ಸ್ ಎನ್ನುವುದು ಮಾಮೂಲಿಯಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವಾರು ಜನ ಇಲ್ಲಿಯವರೆಗೆ ವಿಚ್ಛೇದನ ಪಡೆದಿದ್ದಾರೆ. ಆ ಪೈಕಿ ಜಾಹ್ನವಿ ಕೂಡ ಒಬ್ಬರು.
ಹೌದು, ಜಾಹ್ನವಿ.. ಮೊನ್ನೆ..ಮೊನ್ನೆಯಷ್ಟೇ ''ಬಿಗ್ ಬಾಸ್'' ಮನೆಯಿಂದ ಹೊರ ಬಂದ ಸ್ಫರ್ಧಿ. ಈ ಬಾರಿ ''ಬಿಗ್ ಬಾಸ್'' ಫಿನಾಲೆ ತಲುಪುವರ ಸಾಲಿನಲ್ಲಿ ಹಲವರ ಪ್ರಕಾರ ಜಾಹ್ನವಿ ಮುಂಚೂಣಿಯಲ್ಲಿದ್ದರು. ಆದರೆ..ಜಾಹ್ನವಿ ಅದೆಲ್ಲಿ ಎಡವಿದರು ಎನ್ನುವುದು ''ಬಿಗ್ ಬಾಸ್''ಗೆ ಗೊತ್ತಾದರೂ ಜಾಹ್ನವಿ ''ಬಿಗ್ ಬಾಸ್'' ಮನೆಯಲ್ಲಿದ್ದಾಗ ತಮ್ಮ ಡಿವೋರ್ಸ್ ವಿಚಾರ ಮಾತನಾಡಿದ್ದರು.
ಡಿವೋರ್ಸ್ ಆಗುವ ಮುಂಚೆಯೇ ಅವರಿಗೆ ಮದುವೆ ಆಗಿ ಮಗು ಇದ್ದ ವಿಚಾರ ಗೊತ್ತಾಯ್ತು. ಅವರು ಮದುವೆಯಾಗಿದ್ದು ಬೇರೆ ಯಾರು ಅಲ್ಲ ಬದಲಿಗೆ ನನ್ನ ಫ್ರೆಂಡ್‌ನ್ನೇ ಎಂದು ಹೇಳಿದ್ದರು. ಜಾಹ್ನವಿ ಮಾತುಗಳಿಂದ ಕೆರಳಿ ಕೆಂಡವಾಗಿದ್ದ ಇವರ ಮಾಜಿ ಕಾರ್ತಿಕ್ ಧಗಧಗಿಸಿದ್ದರು.
ಗಂಡನನ್ನು ಬಿಟ್ಟು ಬೇರೆ ವ್ಯಕ್ತಿ ಜೊತೆ ಕಮ್ಯೂನಿಕೇಷನ್‌ನಲ್ಲಿ ಇದ್ದಾಗ ಅದನ್ನು ಯಾರು ಸಹಿಸಿಕೊಳ್ತಾರೆ. ವಿವರವಾಗಿ ಹೇಳಲು ನನಗೆ ಇಷ್ಟವಿಲ್ಲ. ಅವಳು ಕೆಳಮಟ್ಟಕ್ಕೆ ಇಳಿದು ಮಾತನಾಡ್ತಾಳೆ ಅಂದ್ರೆ, ಆ ರೀತಿ ನನಗೆ ಮಾತನಾಡಲು ಇಷ್ಟವಿಲ್ಲ. ಹೆಣ್ಣು ಎನ್ನುವ ಕಾರಣಕ್ಕೆ ಗೌರವ ಕೊಡ್ತೀನಿ. ಅವಳು ಏನೇನೋ ಹೇಳಿಕೆ ಕೊಡಬಹುದು. ಅದು ಸತ್ಯ ಅಲ್ಲ. ಆಕೆ ಬೇರೆ ವ್ಯಕ್ತಿ ಜೊತೆ ಮಾತನಾಡುವುದು ನೋಡ್ತಾ ಸುಮ್ಮನಿರಲು ಸಾಧ್ಯವಿಲ್ಲ. ಹಂಗಾಗಿ ನಾನು ಕುಡಿದು ಆಕೆಗೆ ಹೊಡೆದಿದ್ದೀನಿ ಎಂದು ಗುಡುಗಿದ್ದರು ಕಾರ್ತಿಕ್.

ಸದ್ಯ ಜಾಹ್ನವಿ ''ಬಿಗ್ ಬಾಸ್'' ಮನೆಯಿಂದ ಹೊರ ಬಂದಿದ್ದಾರೆ. ಸಂಪ್ರದಾಯದಂತೆ ಮಾಧ್ಯಮದವರಿಗೆ ಸಂದರ್ಶನ ಕೊಡುತ್ತಿದ್ದಾರೆ. ಆದರೆ.. ಇಲ್ಲಿಯೂ ಕೂಡ ಜಾಹ್ನವಿ ತಮ್ಮ ''ಬಿಗ್ ಬಾಸ್'' ಅನುಭವ ಹಂಚಿಕೊಳ್ಳುತ್ತಿಲ್ಲ. ಬದಲಿಗೆ ಮತ್ತೆ ತಮ್ಮ ವ್ಯೆಯಕ್ತಿಕ ವಿಚಾರವನ್ನೇ ಮಾತನಾಡುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ''ಪ್ರಜಾ ಮಾರ್ಗ ನ್ಯೂಸ್'' ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿರುವ ಜಾಹ್ನವಿ ನಾನು ನನ್ನ ಗಂಡನ ಮನೆಯವರಿಗಾಗಿ ಹಲವು ತ್ಯಾಗಗಳನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ.
ಈ ಕುರಿತು ''ಪ್ರಜಾ ಮಾರ್ಗ ನ್ಯೂಸ್'' ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿರುವ ಜಾಹ್ನವಿ ''ಗಿಚ್ಚಿ ಗಿಲಿ ಗಿಲಿ'' ಕಾರ್ಯಕ್ರಮದ ನಂತರ ನಮ್ಮ ಸಂಬಂಧ ಹಾಳಾಯ್ತು ಎನ್ನುವುದೆಲ್ಲಾ ಸುಳ್ಳು, ಯಾಕೆಂದರೆ.. ಅದಕ್ಕೂ ಮೊದಲೇ ಒಂದು ಘಟನೆಯಿಂದ ನಮ್ಮ ನಡುವೆ ಬಿರುಕು ಮೂಡಿತ್ತು ಎಂದು ಹೇಳಿದ್ದಾರೆ. ಆಗ ನಾನು ''ನ್ಯೂಸ್ ಫಸ್ಟ್''ನಲ್ಲಿ ಕೆಲಸ ಮಾಡ್ತಿದ್ದೇ ಆದರೂ ಕೂಡ ನನ್ನ ಬದುಕಿನಲ್ಲಿ ಎದ್ದಿರುವ ಬಿರುಗಾಳಿಯ ಕುರಿತು ಯಾರಿಗೂ ನಮ್ಮ ಆಫೀಸ್‌ನಲ್ಲಿ ಸುಳಿವು ಇರಲಿಲ್ಲ ಎಂದಿದ್ದಾರೆ.
ನಾನು ನನ್ನ ಇನ್‌ಸ್ಟಾಗ್ರಾಮ್‌ನಲ್ಲಿ ನನ್ನ ಹೆಸರು ಬದಲಿಸಿದೆ, ಆಗ ಕೆಲವರಿಗೆ ಅನುಮಾನ ಬಂದಿತ್ತು. ಆದರೆ.. ನಾನು ಯಾರ ಬಳಿ ಕೂಡ ಹೇಳಿಕೊಂಡಿರಲಿಲ್ಲ ಎಂದು ಹೇಳಿರುವ ಜಾಹ್ನವಿ ಹನ್ನೆರಡು ವರ್ಷ ಎಲ್ಲವನ್ನೂ ಸಹಿಸಿಕೊಂಡು ಬಂದು ಒಮ್ಮೆಲೆ ಸಂಬಂಧ ಕಳಚಿ ಬಿದ್ದಾಗ ನೋವಾಗಿಯೇ ಆಗುತ್ತಲ್ವಾ..? ಎಂದು ಪ್ರಶ್ನೆ ಮಾಡಿದ್ದಾರೆ.
ನನ್ನ ಆಸೆ-ಆಕಾಂಕ್ಷೆಗಳೆಲ್ಲವನ್ನೂ ನಾನು ನನ್ನ ಫ್ಯಾಮಿಲಿಗೋಸ್ಕರ ತ್ಯಾಗ ಮಾಡಿದ್ದೇ ಹೀಗಾಗಿ ನನಗೆ ತುಂಬಾ ಬೇಜಾರಾಗಿತ್ತು ಎಂದು ಹೇಳಿರುವ ಜಾಹ್ನವಿ, ಸಿನಿಮಾ ಬೇಡ.. ಸೀರಿಯಲ್ ಬೇಡ.. ಎಂದು ಹೇಳಿದಾಗಲೂ ಕೂಡ ನಾನು ನನ್ನ ಕುಟುಂಬಕ್ಕೋಸ್ಕರ ಓಕೆ ಎಂದು ಹೇಳಿ ಸುಮ್ಮನಾದೆ, ಆ ನಂತರ ತುಂಬಾ ಕಷ್ಟ ಪಟ್ಟೇ, ಇದನ್ನು ನಾನು ಎಲ್ಲಿ ಬೇಕಾದರೂ ಹೇಳುತ್ತೇನೆ ಎಂದು ಹೇಳಿದ್ದಾರೆ.

ಮುಂದುವರೆದು ಇಷ್ಟೇನಾ..? ಇದು ಹಿಂಗಾಯ್ತು.. ! ಇವರಿಗೋಸ್ಕರಾನಾ ಹನ್ನೆರಡು ವರ್ಷ ತ್ಯಾಗ ಮಾಡಿದ್ದು..? ಇದಕ್ಕೇನಾ..? ಹೀಗೆ ಈ ವಿಚಾರಗಳೆಲ್ಲಾ ನನಗೆ ಆಫೀಸ್‌ನಲ್ಲಿದ್ದಾಗ ಕಾಡಲು ಶುರುವಾಗಿದ್ದವು ಎಂದು ಹೇಳಿರುವ ಜಾಹ್ನವಿ ನನ್ನ ಕನಸುಗಳನ್ನೆಲ್ಲಾ ಈಗಲಾದರೂ ನನಸು ಮಾಡಿಕೊಳ್ಳೋಣ ಎನ್ನುವ ತೀರ್ಮಾನಕ್ಕೆ ನಾನು ಆಗಲೇ ಬಂದೆ ಎಂದಿದ್ದಾರೆ. ಆಗಲೂ ಕೂಡ ನಾನು ಸಂಬಂಧದಿಂದ ಹೊರ ಬರಬೇಕು ಎಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ. ''ಗಿಚ್ಚಿ ಗಿಲಿ ಗಿಲಿ'' ಕಾರ್ಯಕ್ರಮಕ್ಕೆ ಹೋಗಿ ಬಂದು ಬಿಡೋಣ ಎಂದುಕೊಂಡಿದ್ದಷ್ಟೇ ಎಂದಿದ್ದಾರೆ.
''ಗಿಚ್ಚಿ ಗಿಲಿ ಗಿಲಿ''ಗೆ ಹೋದ ನಂತರ ಅವಕಾಶಗಳ ಬಾಗಿಲು ಒಂದೊಂದೇ ತೆರೆಯಲು ಶುರುವಾದವು ಎಂದು ಹೇಳಿರುವ ಜಾಹ್ನವಿ ಆ ನಂತರ ಪಾತ್ರ ಚೆನ್ನಾಗಿತ್ತು, ತಂಡ ಚೆನ್ನಾಗಿತ್ತು, ಎಂದು ಸಿನಿಮಾ ಮಾಡಿದೆ ಅಷ್ಟೇ ಎಂದು ಹೇಳಿದ್ದಾರೆ. ಚಿತ್ರರಂಗಕ್ಕೆ ಬರಬೇಕು, ನಟಿಯಾಗಿ ಗುರುತಿಸಿಕೊಳ್ಳಬೇಕು ಎನ್ನುವ ಆಸೆಯಲ್ಲಿ ನಾನು ಮನೆ ಮತ್ತು ಕುಟುಂಬ ಬಿಟ್ಟು ಬಂದೆ ಎನ್ನುವುದೆಲ್ಲಾ ಸುಳ್ಳು ಎಂದಿರುವ ಜಾಹ್ನವಿ ಹಾಗೇನಾದರೂ ಬಿಡಬೇಕು ಎಂದಿದ್ದರೆ ಅದಕ್ಕೂ ಮೊದಲೇ ನಾನು ಬಿಡಬಹುದಿತ್ತಲ್ವಾ ? ಎಂದು ಪ್ರಶ್ನೆ ಮಾಡಿದ್ದಾರೆ.
ಇದೆಲ್ಲದಕ್ಕೂ ಮೊದಲೇ ನನಗೆ ಒಳ್ಳೊಳ್ಳೆಯ ಅವಕಾಶಗಳು ಬಂದಿದ್ದವು ''ಕಿಚ್ಚ ಕ್ರಿಯೇಷನ್ಸ್'' ಅಡಿ ನಿರ್ಮಾಣವಾದ ''ವಾರಸ್ಧಾರ'' ಧಾರಾವಾಹಿಗೆ ನನ್ನನ್ನೇ ಅವರು ಕರೆದಿದ್ದರು. ಒಂದು ಅವಕಾಶ ಸಿಕ್ಕರೆ ಸಾಕು ಎಂದು ಹಲವಾರು ಜನ ಕಾಯುವ ಈ ಸಮಯದಲ್ಲಿ ಇಂತಹ ಅವಕಾಶ ಬಂದರೆ ಯಾರು ಬಿಡ್ತಾರೆ ಹೇಳಿ ಎಂದು ಪ್ರಶ್ನೆ ಮಾಡಿರುವ ಜಾಹ್ನವಿ ನನ್ನ ಫ್ಯಾಮಿಲಿಗೋಸ್ಕರ ಬಂದಿದ್ದ ಈ ಅವಕಾಶವನ್ನು ಕೂಡ ನಾನು ಎಡಗಾಲಿನಲ್ಲಿ ಒದ್ದಿದ್ದೆ ಎಂದು ಹೇಳಿದ್ಧಾರೆ. ಇಷ್ಟೆಲ್ಲಾ ತ್ಯಾಗಗಳನ್ನು ನಾನು ಮಾಡಿಕೊಂಡು ಬಂದರೂ ಕೊನೆಗೆ ಉಳಿದಿದ್ದೇನು..? ಅವರೇನು ಉಳಿಸಿಕೊಂಡರು..? ನಮ್ಮ ಆಸೆ-ಕನಸುಗಳು ನಮ್ಮೊಳಗೆ ಜೀವಂತವಾಗಿದ್ದರೆ, ಅದಕ್ಕೆ ನಾವು ಕಷ್ಟ ಪಡುತ್ತಿದ್ದರೆ, ಆ ಭಗವಂತ ಯಾವಾಗಲಾದರೂ ನೀರೆರೆಯುತ್ತಾನೆ ಎನ್ನುವುದಕ್ಕೆ ನಾನೇ ಉದಾಹರಣೆ ಎಂದು ಹೇಳಿದ್ದಾರೆ.


Click it and Unblock the Notifications











