ಬಿಗ್ ಬಾಸ್ ಟ್ರೋಫಿ ಮುಡಿಗೇರಿಸಿಕೊಂಡ ದಿವ್ಯಾಗೆ ಸಿಕ್ಕ ಹಣ ಎಷ್ಟು ? ಗಿಲ್ಲಿಗಿಂತ ಜಾಸ್ತೀನಾ ? ಕಡಿಮೆನಾ?
''ಬಿಗ್ ಬಾಸ್'' ಕೇವಲ ಕಾರ್ಯಕ್ರಮ ನಡೆಸಿಕೊಡುವ ಸ್ಟಾರ್ ನಿರೂಪಕರಿಗೆ ಮಾತ್ರ ಚಿನ್ನದ ಮೊಟ್ಟೆ ಇಡುವ ಕೋಳಿ ಅಲ್ಲ. ಬದಲಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಫರ್ಧಿಗಳಿಗೆ ಕೂಡ ಇಲ್ಲಿ ಭಾರೀ ಹಣವನ್ನು ನೀಡಲಾಗುತ್ತೆ. ಕೆಲವರು ಇಲ್ಲಿ ವಾರಕ್ಕೆ ಲಕ್ಷ ಎಣಿಸಿದರೆ ಇನ್ನೂ ಕೆಲವರ ಸಂಭಾವನೆ ವಾರದ ಲೆಕ್ಕ ತಪ್ಪಿ ಹೋಗುವಷ್ಟಿರುತ್ತೆ. ''ಬಿಗ್ ಬಾಸ್''ನಲ್ಲಿ ಹೇಗಾದರೂ ಮಾಡಿ ಭಾಗವಹಿಸಬೇಕು ಎಂದು ಹಲವರು ಕನಸು ಕಾಣಲು ಇದು ಕೂಡ ಪ್ರಮುಖ ಕಾರಣ.
ಇಂತಹ ''ಬಿಗ್ ಬಾಸ್'' ಕಾರ್ಯಕ್ರಮ ಮರಾಠಿ ಹೊರತು ಪಡಿಸಿದರೆ ಬೇರೆ ಎಲ್ಲಾ ಭಾಷೆಯಲ್ಲಿ ಮುಕ್ತಾಯವಾಗಿದೆ. ಆ ಪೈಕಿ ಕನ್ನಡದಲ್ಲಿ ಈ ಬಾರಿ ನಿರೀಕ್ಷೆಯಂತೆ ಗಿಲ್ಲಿ ''ಬಿಗ್ ಬಾಸ್'' ಟ್ರೋಪಿ ಮುಡಿಗೇರಿಸಿಕೊಂಡರೆ ತಮಿಳಿನಲ್ಲಿ ದಿವ್ಯಾ ಗಣೇಶ್ ಬಿಗ್ ಬಾಸ್ ಆಗಿ ಹೊರ ಹೊಮ್ಮಿದ್ದಾರೆ. ವಿಶೇಷ ಅಂದರೆ ದಿವ್ಯಾ ಗಣೇಶನ್ ಮನೆಯೊಳಗೆ ಎಲ್ಲರ ಜೊತೆ ಹೋಗಿರಲಿಲ್ಲ. ಬದಲಿಗೆ ಕಾರ್ಯಕ್ರಮ ಶುರುವಾಗಿ 28 ದಿನಗಳ ನಂತರ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಹೋಗಿದ್ದರು. ಆದರೂ ಕೂಡ ನೋಡುಗರ ಹೃದಯವನ್ನು ಕದ್ದ ದಿವ್ಯಾ ಗಣೇಶನ್ ಮನೆಯಿಂದ ಕೇವಲ ಟ್ರೋಫಿ ಮತ್ತು 50 ಲಕ್ಷ ಹಣದ ಜೊತೆ ತಮ್ಮ ಮನೆಗೆ ಮರಳಿ ಬಂದಿಲ್ಲ. ಬದಲಿಗೆ ಇನ್ನೂ ಹೆಚ್ಚಿನ ಹಣವನ್ನು ದಿವ್ಯಾ ''ಬಿಗ್ ಬಾಸ್'' ಮೂಲಕ ಸಂಪಾದಿಸಿದ್ದಾರೆ.

ಹೌದು, ಕಾನೂನು ಪದವಿಧರೆ ಆಗಿದ್ದರೂ ಕೂಡ ಮಾಡೆಲಿಂಗ್ ಲೋಕದಲ್ಲಿ ಮಿಂಚುತ್ತಲೇ ಮೆಲ್ಲನೆ 2015ರಲ್ಲಿ ತಮಿಳು ಕಿರುತೆರೆಯನ್ನು ಪ್ರವೇಶ ಮಾಡಿದ ದಿವ್ಯಾ ಗಣೇಶ್ ''ಭಾಗ್ಯಲಕ್ಷ್ಮಿ''..''ಕೆಲಡಿ ''ಕಣ್ಮಣಿ.. ''ಚೆಲ್ಲಮ್ಮ''..''ಸುಮಂಗಲಿ''.. ''ಲಕ್ಷ್ಮಿ ವಂದಾಚು''.. ''ಮಹಾನದಿ'' ಮತ್ತು ''ವಿನ್ನೈತಾಂಡಿ ವರುವಾಯಾ''.. ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದರು. ಕಮಲ್ ಹಾಸನ್ ಅಭಿನಯದ ''ಇಂಡಿಯನ್ 2'' ಚಿತ್ರದಲ್ಲಿಯೂ ಚಿಕ್ಕ ಪಾತ್ರ ಮಾಡಿದ್ದರು. ಇಷ್ಟೇ ಅಲ್ಲ ತೆಲುಗು ಕಿರುತೆರೆಯಲ್ಲಿ ಕೂಡ ''ಭಾಗ್ಯರೇಖಾ'' ಧಾರಾವಾಹಿಯ ಮೂಲಕ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು.
ಇಂಥಾ ದಿವ್ಯಾ ಗಣೇಶ್ ''ಬಿಗ್ ಬಾಸ್'' ಮನೆಯಲ್ಲಿ 77 ದಿನಗಳಿದ್ದರು. ಈ 77 ದಿನಕ್ಕೆ ದಿವ್ಯಾ ಭರ್ಜರಿ ಸಂಭಾವನೆಯನ್ನು ಪಡೆದಿದ್ದಾರೆ. ಹೌದು, ''ಒನ್ ಇಂಡಿಯಾ'' ತಮಿಳು ವರದಿಯ ಪ್ರಕಾರ ದಿವ್ಯಾ ಗಣೇಶ್ ''ಬಿಗ್ ಬಾಸ್'' ಮನೆಯಲ್ಲಿರಲು ದಿನ ನಿತ್ಯ 30,000 ಸಂಭಾವನೆ ಪಡೆದಿದ್ದಾರೆ. ಈ ಹಿನ್ನೆಲೆ 77 ದಿನ ಇದ್ದ ದಿವ್ಯಾ ಕೇವಲ ಸಂಭಾವನೆಯಿಂದಲೇ ₹23,10,000 ಹಣ ಗಳಿಸಿದ್ದಾರೆ. ಇದರ ಮೇಲೆ ''ಬಿಗ್ ಬಾಸ್'' ಟ್ರೋಫಿಯ ಜೊತೆ ಮಾರುತಿ ಸುಜುಕಿ SUV ಕಾರನ್ನು ಕೂಡ ಪಡೆದಿರುವ ದಿವ್ಯಾ ₹50 ಲಕ್ಷ ಹಣವನ್ನು ಬಹುಮಾನದ ರೂಪದಲ್ಲಿ ಪಡೆದಿದ್ದಾರೆ. ಈ ಮೂಲಕ ಒಟ್ಟು ₹73.1 ಲಕ್ಷ ಹಣವನ್ನು ದಿವ್ಯಾ ಗಣೇಶ್ ''ಬಿಗ್ ಬಾಸ್'' ಮೂಲಕ ಕೇವಲ 77 ದಿನದಲ್ಲಿ ಗಳಿಸಿದ್ದಾರೆ.

ಇನ್ನೂ ರನ್ನರ್ ಅಪ್ ಆದರೂ ಕೂಡ ಸಬರಿನಾಥನ್‌ಗೆ ಯಾವ ಬಹುಮಾನವನ್ನು ಕೂಡ ನೀಡಿಲ್ಲ. ಆದರೆ ಇವರಿಗೆ ದಿನಕ್ಕೆ ₹20,000 ಸಾವಿರ ಸಂಭಾವನೆ ನಿಗದಿ ಮಾಡಲಾಗಿತ್ತು. ಆ ಪ್ರಕಾರ 105 ದಿನ ಮನೆಯಲ್ಲಿದ್ದ ಸಬರಿನಾಥನ್ ₹21 ಲಕ್ಷವನ್ನು ಗಳಿಸಿದ್ದಾರೆ.
ಅಂದ್ಹಾಗೇ ಕನ್ನಡದಲ್ಲಿ ಗಿಲ್ಲಿಗೆ ₹50 ಲಕ್ಷ ಬಹುಮಾನದ ರೂಪದಲ್ಲಿ ನೀಡಲಾಗಿದೆ. ಇದರ ಜೊತೆಯಲ್ಲಿ ಕಾರನ್ನು ಕೂಡ ನೀಡಲಾಗಿದೆ. ಜೊತೆಯಲ್ಲಿ ಸುದೀಪ್ ಕೂಡ ವ್ಯೆಯಕ್ತಿಕವಾಗಿ ₹10 ಲಕ್ಷ ಹಣ ನೀಡಿದ್ದಾರೆ.

ಇನ್ನು ಕೆಲ ಮಾಧ್ಯಗಳಲ್ಲಿ ವರದಿಯಾದಂತೆ ಗಿಲ್ಲಿ ಮನೆಯಲ್ಲಿರಲು ₹22,000 ಸಂಭಾವನೆ ಪಡೆದಿದ್ದರು. 112 ದಿನ ಮನೆಯಲ್ಲಿದ್ದರು. ಆ ಪ್ರಕಾರ ನೋಡುವುದಾದರೆ ಸಂಭಾವನೆ ರೂಪದಲ್ಲಿ ಇವರಿಗೆ ₹25 ಲಕ್ಷ ಹಣ ಸಿಕ್ಕಂತಾಗಿದೆ. ಒಟ್ಟು 85 ಲಕ್ಷ ಹಣವನ್ನು ಗಿಲ್ಲಿ ಪಡೆದಂತಾಗಿದೆ.
ಗಿಲ್ಲಿಯ ಈ ಸಂಭಾವನೆಯ ಕುರಿತು ''ಕಲರ್ಸ್ ಕನ್ನಡ'' ಆಗಲಿ ''ಬಿಗ್ ಬಾಸ್'' ಆಯೋಜಕರಾಗಲಿ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಗಿಲ್ಲಿ ಕೂಡ ಹೇಳಿಲ್ಲ. ಆದರೆ, ಗಿಲ್ಲಿ ಸಂಭಾವನೆ ಸುದ್ದಿ ಅಂತೆ ಕಂತೆಯ ಸಂತೆಯಲ್ಲಿ ಸದ್ಯ ಚಾಲ್ತಿಯಲ್ಲಿದೆ. ಆ ಪ್ರಕಾರ ಲೆಕ್ಕ ಹಾಕಿದರೆ ತಮಿಳಿನ ದಿವ್ಯಾ ಗಣೇಶನ್ ಅವರಿಗಿಂತ ಗಿಲ್ಲಿ ನಟ ಹೆಚ್ಚಿನ ಹಣವನ್ನು ''ಬಿಗ್ ಬಾಸ್'' ಮೂಲಕ ಗಳಿಸಿದ್ದಾರೆ.


Click it and Unblock the Notifications











