ಆ ಮನೆಗೆ ನಾವು ಹೋಗೋದಾ? ಆ ತರ ಏನು ಇಲ್ವಲ್ಲಾ ಎನ್ನುತ್ತಲೇ ಬಿಗ್ ಬಾಸ್ ಮನೆಗೆ ಹೋದ ಸ್ಫರ್ಧಿಗಳು ಇವರು
ಪ್ರತಿ ವರ್ಷ ''ಬಿಗ್ ಬಾಸ್'' ಸುತ್ತ ಮುತ್ತ ಕುತೂಹಲ ಮನೆ ಮಾಡುತ್ತೆ. ಈ ವರ್ಷ ಯಾರೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡುತ್ತೆ. ಇದಕ್ಕೆ ಪೂರಕವಾಗಿ ಪ್ರತಿ ವರ್ಷ ಕಾರ್ಯಕ್ರಮ ಶುರುವಾಗುವ ಒಂದೆರಡು ತಿಂಗಳ ಮುನ್ನವೇ ಸ್ಪರ್ಧಿಗಳ ಕುರಿತು ಚರ್ಚೆ ಶುರುವಾಗುತ್ತೆ. ಅಂತೆ-ಕಂತೆಯ ಸಂತೆಯಲ್ಲಿ ಹಲವಾರು ಜನರ ಹೆಸರು ಕೇಳಿ ಬರುತ್ತೆ.
ಆ ಭಾಷೆ ಈ ಭಾಷೆ ಅಲ್ಲ. ಎಲ್ಲಾ ಭಾಷೆಯಲ್ಲಿ ಕೂಡ ಈ ಕುರಿತು ಪ್ರತಿ ವರ್ಷ ಚರ್ಚೆ ನಡೆಯುತ್ತಲೇ ಇರುತ್ತೆ. ಆ ಪೈಕಿ ಕೆಲವರು ನೇರಾನೇರವಾಗಿಯೇ ತಮ್ಮ ಕುರಿತು ಹರಡಿರುವ ಸುದ್ದಿಗೆ ಪ್ರತಿಕ್ರಿಯೆಯನ್ನು ಕೊಡುತ್ತಾರೆ. ''ಬಿಗ್ ಬಾಸ್''ನಲ್ಲಿ ಭಾಗವಹಿಸುತ್ತಿರುವ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಾರೆ. ಸುಖಾ ಸುಮ್ಮನೆ ತಮ್ಮ ಹೆಸರನ್ನು ಎಳೆದು ತರದಂತೆ ಮನವಿಯನ್ನು ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಕೆರಳಿ ಕೆಂಡವಾದಂತೆ ಅಭಿನಯಿಸುತ್ತಾರೆ. ಮಾಧ್ಯಮದವರ ಎದುರು ಸುಳ್ಳು ಹೇಳುತ್ತಾರೆ. ಉದಾಹರಣೆಗೆ ಕಾಕ್ರೋಚ್ ಸುಧಿ ಮತ್ತು ಜಾಹ್ನವಿ ಅವರನ್ನೇ ತೆಗೆದುಕೊಳ್ಳಿ.

ಹೌದು, ಹೆಚ್ಚೇನು ಇಲ್ಲ.. ಕಳೆದೊಂದುವರೆ ತಿಂಗಳ ಹಿಂದೆ ''ಗಿಚ್ಚಿ ಗಿಲಿ ಗಿಲಿ'' ಖ್ಯಾತಿಯ ಜಾಹ್ನವಿ ಅವರಿಗೆ ''ಬಿಗ್ ಬಾಸ್'' ಕುರಿತು ಪ್ರಶ್ನೆ ಎದುರಾಗಿತ್ತು. ಈ ಸಮಯದಲ್ಲಿ ''ವಿಜಯ ಕರ್ನಾಟಕ'' ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಜಾಹ್ನವಿ ತುಂಬಾನೇ ಅಮಾಯಕರಂತೆ ಉತ್ತರ ನೀಡಿದ್ದರು. ''ಬಿಗ್ ಬಾಸ್'' ಅಂದ್ರೇನೇ ಹಾಗೇ ಅಲ್ಲಿ ಯಾರು ಬರ್ತಾರೆ..? ಯಾರು ಬರಲ್ಲ..? ಎನ್ನುವುದಕ್ಕೆ ಕೊನೆವರೆಗೆ ಉತ್ತರ ಸಿಗಲ್ಲ ಎಂದು ಹೇಳಿದ್ದ ಜಾಹ್ನವಿ ಹೋಗಬೇಕೆಂಬ ಆಲೋಚನೆ ನನಗೆ ಖಂಡಿತ ಇದೆ. ಆದರೆ ನನಗೆ ಇದುವರೆಗೆ ಆ ತರಹದ ಯಾವ ಕರೆಗಳು ಬಂದಿಲ್ಲ ಎಂದು ಹೇಳಿದ್ದರು.
ನಾನೇನಾದರೂ ''ಬಿಗ್ ಬಾಸ್'' ಮನೆಗೆ ಹೋದರೆ ಇಲ್ಲಿ ಅಮ್ಮ ಮತ್ತು ಮಗನನ್ನು ನೋಡಿಕೊಳ್ಳೋರು ಯಾರು ? ಅವರನ್ನು ಮ್ಯಾನೇಜ್ ಮಾಡೋರು ಯಾರು ? ಎಂಬ ಸಣ್ಣ ಗೊಂದಲ ಕೂಡ ನನಗೆ ಇದೆ ಎಂದು ಹೇಳಿದ್ದ ಜಾಹ್ನವಿ ''ಬಿಗ್ ಬಾಸ್'' ಗೆ ಅದ್ರದ್ದೇ ಆದ ಮಾನದಂಡಗಳಿವೆ, ವೆರೈಟಿ ಕ್ಯಾರೆಕ್ಟರ್‌ಗಳನ್ನು ಅವರು ಮೊದಲು ಸೆಲೆಕ್ಟ್ ಮಾಡ್ತಾರೆ ಅವರ ಈ ಕ್ಯಾಟಗರಿಯಲ್ಲಿ ನಾನು ಸೂಕ್ತ ಮತ್ತು ಅರ್ಹ ಅಭ್ಯರ್ಥಿ ಎಂದು ಅವರಿಗೆ ಅನಿಸಿದರೆ ಕರೆಯುತ್ತಾರೆ. ಇಲ್ಲಿಯವರೆಗೆ ನನಗೆ ಯಾವ ಕರೆ ಬಂದಿಲ್ಲ ನೋಡೋಣ ಆ ಸಂದರ್ಭದಲ್ಲಿ ತಲೆಯಲ್ಲಿ ಏನು ಓಡುತ್ತೋ ಹಾಗೇ ಎಂದು ಹೇಳಿದ್ದರು. ಆಶ್ಚರ್ಯ ಅಂದರೆ ಜಾಹ್ನವಿ ಈ ಮಾತು ಹೇಳಿ ಎರಡು ತಿಂಗಳಾಗಿಲ್ಲ ಆಗಲೇ ಇವರು ''ಬಿಗ್ ಬಾಸ್'' ಮನೆಯಲ್ಲಿದ್ದಾರೆ.
ಇನ್ನೂ ಕಾಕ್ರೋಚ್ ಸುಧಿ ಕಥೆ ಕೂಡ ಭಿನ್ನವಾಗಿಲ್ಲ. ಭಾವನೆಗಿಂತ ಸಂಭಾವನೆ ಮುಖ್ಯ ಎಂದು ಹೇಳುತ್ತಲೇ ಇದ್ದ ಕಾಖ್ರೋಚ್ ಸುಧಿ ಮೊನ್ನೆ ಮೊನ್ನೆಯಷ್ಟೇ ''ಬಿಗ್ ಬಾಸ್'' ಕುರಿತ ಪ್ರಶ್ನೆಗೆ ಹೌದಾ..? ನಾನಾ..? ಎಂದೆಲ್ಲಾ ಉದ್ಘಾರ ತೆಗೆದಿದ್ದರು. ಯಾಕೆ ಎಲ್ಲರೂ ನಾನು ಬಿಗ್ ಬಾಸ್‌ಗೆ ಹೋಗ್ತೀನಿ ಅಂತ ಹೇಳ್ತಾ ಇದ್ದಾರೋ ಗೊತ್ತಿಲ್ಲ. ನನಗೆ ಬಿಗ್ ಬಾಸ್‌ನಿಂದ ಎರಡ್ಮೂರು ಸಲ ಆಫರ್ ಬಂದಿತ್ತು. ಆದರೆ, ನಾನು ಡೇಟ್ ಇಲ್ಲ ಅಂತ ಹೇಳಿದ್ದಕ್ಕೆ, ಅಯ್ಯೋ ಈ ಹುಡುಗ ಬರಲ್ಲ ಅಂತೇಳಿ ಅವರೇ ನನ್ನನ್ನ ಬೈದು ಬಿಟ್ಟುಬಿಟ್ಟವ್ರೇ ಅಂತ ಅನಿಸುತ್ತದೆ. ನಾನು ಸದ್ಯಕ್ಕೆ ಬಿಗ್ ಬಾಸ್‌ಗೆ ಹೋಗ್ತಿಲ್ಲ ಎಂದು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳಿದ್ದರು. ಈಗ ನೋಡಿದರೆ ''ಬಿಗ್ ಬಾಸ್'' ಮನೆಗೆ ಹೋಗಿದ್ದಾರೆ.


Click it and Unblock the Notifications











