BBK 12: ಹವಾ ಅಂದ್ರೆ ಇದು; 100 ದಿನ..10 ಲಕ್ಷ..ನನಸಾಯ್ತು ಗಿಲ್ಲಿ ಕನಸು - ಇನ್ನು ಟ್ರೋಫಿ ಎತ್ತೋದು ಒಂದೇ ಬಾಕಿ
ಬದುಕೇ ಹಾಗೆ ... ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ನಾನು ಅಂತಾ ಮೆರೆಯುವವರನ್ನು ನಡುಬೀದಿಗೆ ಬಿಡಬಹುದು; ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನೋ ಇದೆ ಅಂದುಕೊಳ್ಳುವುದರ ಜೊತೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಂಡವನು, ಮತ್ತದನ್ನು ಹೊರತೆಗೆಯುವಲ್ಲಿ ಶ್ರಮಿಸಿದರೆ ಒಂದಿಲ್ಲೊಂದು ದಿನ ಪ್ರತಿಫಲ ಸಿಕ್ಕಿಯೇ ಸಿಗುತ್ತೆ. ಇದಕ್ಕೆ ಉದಾಹರಣೆಯೇ ಗಿಲ್ಲಿ ನಟ.
ಹೌದು, ಗಿಲ್ಲಿ ನಟ ಸ್ವಸಾಮರ್ಥ್ಯದಿಂದ ಮೇಲೆ ಬಂದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರದ ಹಳ್ಳಿಯ ರೈತ ಕುಟುಂಬದಿಂದ ಬಂದ ಹುಡುಗ. ನಿರ್ದೇಶಕನಾಗಬೇಕೆಂಬ ಕನಸು ಕಂಡಿದ್ದು ಗಿಲ್ಲಿಗೆ ಕೈ ಹಿಡಿದಿದ್ದು ಅವರ ಮಾತು ಮತ್ತು ಅವರಲ್ಲಿನ ಹಾಸ್ಯ ಪ್ರಜ್ಞೆ.

''ನಲ್ಲಿ ಮೂಳೆ'' ಮೂಲಕ ಹಲವರಿಗೆ ಪರಿಚಯವಾದ ಗಿಲ್ಲಿ ಆ ನಂತರ ''ಕಾಮಿಡಿ ಕಿಲಾಡಿ''ಗಳು ಸೀಸನ್ 4ರಲ್ಲಿ ಹಾಸ್ಯದ ರಸದೌತಣ ಬಡಿಸಿದರು. ರನ್ನರ್ ಅಪ್ ಆಗಿ ಕೂಡ ಹೊರ ಹೊಮ್ಮಿದರು. 'ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ' ಕಾರ್ಯಕ್ರಮದ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದ ಗಿಲ್ಲಿ ಆ ನಂತರ ''ಭರ್ಜರಿ ಬ್ಯಾಚುಲರ್ಸ್'' ರಿಯಾಲಿಟಿ ಶೋನಲ್ಲಿ ಕೂಡ ಮಿಂಚಿದರು.
ಇಂಥಾ ಗಿಲ್ಲಿ ಸದ್ಯ ''ಬಿಗ್ ಬಾಸ್'' ಮನೆಯಲ್ಲಿ ಇದ್ದಾರೆ. ಅಖಂಡ ನೂರು ದಿನಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಈ ಬಾರಿಯ ''ಬಿಗ್ ಬಾಸ್''ನ ಜನಪ್ರಿಯತೆ ಹೆಚ್ಚಾಗಲು ಕೇವಲ ಸುದೀಪ್ ಮಾತ್ರ ಕಾರಣವಲ್ಲ. ಬದಲಿಗೆ ಗಿಲ್ಲಿ ಕೂಡ ಹೌದು.
ಮನೆಯಲ್ಲಿ ಕಾಮಿಡಿ ಪಂಚ್‌ಗಳನ್ನು ನೀಡುತ್ತಲೇ ''ಬನಿಯನ್ ರಾಜಾ'' ಎಂದೇ ಹೊರಗಡೆ ಪ್ರಖ್ಯಾತರಾಗಿರುವ ಗಿಲ್ಲಿ ಸದ್ಯ ಮನೆಯಲ್ಲಿ ಕುಳಿತುಕೊಂಡೆ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಹೌದು, ಅಸಲಿಗೆ ''ಬಿಗ್ ಬಾಸ್'' ಮನೆಯನ್ನು ಪ್ರವೇಶ ಮಾಡುವ ಸಮಯದಲ್ಲಿ ಗಿಲ್ಲಿ ಇನ್ನೂ ಹಲವರಿಗೆ ಅಪರಿಚಿತರಾಗಿದ್ದರು. ಗಿಲ್ಲಿ ಕೂಡ ಸಾಮಾನ್ಯ ವ್ಯಕ್ತಿಯಂತೆ ಮನೆಯೊಳಗೆ ಹೋದರು. ಆಗ ಇವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಿಂಬಾಲಿಸುತ್ತಿದ್ದವರು ಕೇವಲ ಒಂದು ಲಕ್ಷ ಜನ ಅಷ್ಟೇ.

ಆದರೆ.. ''ಬಿಗ್ ಬಾಸ್'' ಮನೆಯಲ್ಲಿ ದಿನಗಳು ಉರುಳಿದಂತೆ ಇವರ ಜನಪ್ರಿಯತೆ ಹೆಚ್ಚಾಗಲು ಶುರುವಾಯ್ತು. ಇವರ ಮಾತು-ಹಾವ-ಭಾವ ಹಲವರ ಹೃದಯ ಕದಿಯಲು ಶುರು ಮಾಡಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಈ ನೂರು ದಿನಗಳಲ್ಲಿ ಗಿಲ್ಲಿ ಹಿಂಬಾಲಕರ ಸಂಖ್ಯೆ ಹೆಚ್ಚಾಗಿದೆ. ಕೇವಲ ಒಂದು ಲಕ್ಷ ಇದ್ದ ಫಾಲೋವರ್ಸ್ ಸಂಖ್ಯೆ ಈಗ ಹತ್ತು ಲಕ್ಷದ ಗಡಿಯನ್ನು ದಾಟಿದೆ.
ಇಂದು ( ಜನವರಿ 9) 12 ಲಕ್ಷಕ್ಕೂ ಅಧಿಕ ಜನ ಗಿಲ್ಲಿ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಿಂಬಾಲಿಸುತ್ತಿದ್ದಾರೆ. ಕೇವಲ ಒಂದೇ ದಿನ ಸುಮಾರು 1.75 ಲಕ್ಷ ಜನ ಇವರನ್ನು ಫಾಲೋ ಮಾಡಿದ್ದು ಇವರ ಜನಪ್ರಿಯತೆಗೆ ಸಾಕ್ಷಿ. ಈ ಮೂಲಕ ಹೊಸದೊಂದು ದಾಖಲೆ ಗಿಲ್ಲಿ ಬರೆದಿದ್ದಾರೆ. ''ಬಿಗ್ ಬಾಸ್'' ಟ್ರೋಫಿಯನ್ನು ಗಿಲ್ಲಿ ಗೆಲ್ಲಲಿ ಬಿಡಲಿ ಆದರೆ ಮಂಡ್ಯದ ಮಣ್ಣಿನ ಸೊಗಡಿನ ಈ ಪ್ರತಿಭೆಗೆ ಇಡೀ ಕರ್ನಾಟಕವೇ ಜೈ ಎಂದಿರುವುದಕ್ಕೆ ಇದೇ ಅತ್ಯುತ್ತಮ ಕೈಗನ್ನಡಿ. ಜನರ ದೃಷ್ಟಿಯಲ್ಲಿ ಗಿಲ್ಲಿ ಈಗಾಗಲೇ ''ಬಿಗ್ ಬಾಸ್'' ಗೆದ್ದಾಗಿದೆ. ''ಬಿಗ್ ಬಾಸ್'' ಕಾರ್ಯಕ್ರಮ ಕೂಡ ಸಾಮಾನ್ಯರನ್ನ ಅಸಾಮಾನ್ಯರನ್ನಾಗಿ ಮಾಡುವುದರಲ್ಲಿ ಮತ್ತೊಮ್ಮೆ ಗೆದ್ದಿದೆ.
ಅಂದ್ಹಾಗೇ ಕೆಲ ದಿನಗಳ ಹಿಂದೆಯಷ್ಟೇ ಕಾವ್ಯಾ ಬಳಿ ಮಾತನಾಡುವ ಸಮಯದಲ್ಲಿ, ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಆಗಿರಬೇಕಿತ್ತು ಎಂದು ಗಿಲ್ಲಿ ಹೇಳಿದ್ದರು. ಈಗ ಗಿಲ್ಲಿ ಹೇಳಿದಂತೆಯೇ ಒಂದು ಮಿಲಿಯನ್ ಫಾಲೋವರ್ಸ್ ಗಿಲ್ಲಿಗೆ ಇದ್ದಾರೆ. ಇನ್ನುಳಿದಂತೆ ಸದ್ಯ ''ಬಿಗ್ ಬಾಸ್'' ಕೊನೆಯ ಹಂತಕ್ಕೆ ಬಂದು ತಲುಪಿದ್ದು ಈ ವಾರ ಮನೆಯಿಂದ ಯಾರು ಹೊರ ಬರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











