ಕಿರುತೆರೆಯ ಶಾರುಖ್ ಖಾನ್ ಮುಡಿಗೆ ಬಿಗ್ ಬಾಸ್ ಕಿರೀಟ - ಗೆದ್ದ ಹಣ ಎಷ್ಟು ? ರನ್ನರ್ ಅಪ್ ಯಾರು ?
ಪ್ರತಿ ವರ್ಷದ ದ್ವೀತಿಯಾರ್ಧದಲ್ಲಿ ಭಾರತವನ್ನು ''ಬಿಗ್ ಬಾಸ್'' ಆವರಿಸಿಕೊಳ್ಳುತ್ತೆ. ಜೂನ್ ನಂತರ ಯಾವ ಭಾಷೆಯಲ್ಲಿ ನೋಡಿದರು ಕೂಡ ''ಬಿಗ್ ಬಾಸ್'' ಕುರಿತು ಚರ್ಚೆ ಶುರುವಾಗುತ್ತೆ. ಈ ವರ್ಷ ಕೂಡ ಇದರಿಂದ ಹೊರತಾಗಿಲ್ಲ. ಈಗಾಗಲೇ ಎಲ್ಲೆಡೆ ''ಬಿಗ್ ಬಾಸ್'' ಜಾತ್ರೆ ನಡೆಯುತ್ತಿದೆ. ನಾಗಾರ್ಜುನ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ತೆಲುಗು ''ಬಿಗ್ ಬಾಸ್'' ಕಾರ್ಯಕ್ರಮ 78 ದಿನಗಳನ್ನು ಪೂರೈಸಿದೆ.
ಸುದೀಪ್ ನೇತೃತ್ವದ ''ಬಿಗ್ ಬಾಸ್'' ಕಾರ್ಯಕ್ರಮ 72 ದಿನಗಳನ್ನು ಪೂರೈಸಿದ್ದರೆ, ವಿಜಯ್ ಸೇತುಪತಿ ನಡೆಸಿಕೊಡುವ ತಮಿಳು ''ಬಿಗ್ ಬಾಸ್'' 64 ದಿನಗಳನ್ನು ಪೂರೈಸಿದೆ. ಇನ್ನೂ ಮಲಯಾಳಂನಲ್ಲಿ ಈ ವರ್ಷದ ''ಬಿಗ್ ಬಾಸ್'' ಕಾರ್ಯಕ್ರಮ ಮುಕ್ತಾಯವಾಗಿದೆ. ಹೀಗೆ.. ಎಲ್ಲೆಡೆ ''ಬಿಗ್ ಬಾಸ್'' ಯಶಸ್ವಿಯಾಗಿ ನಡೆಯುತ್ತಿದ್ದು ಮೋಹನ್ ಲಾಲ್ ಬೆನ್ನಲ್ಲೇ ಈ ವರ್ಷದ ''ಬಿಗ್ ಬಾಸ್''ಗೆ ನಿನ್ನೆ ( ಡಿಸೆಂಬರ್ 7 ) ಸಲ್ಮಾನ್ ಖಾನ್ ಕೂಡ ಮಂಗಳ ಹಾಡಿದ್ಧಾರೆ.

ಹೌದು, 106 ದಿನಗಳ ಬಳಿಕ ಹಿಂದಿಯ ''ಬಿಗ್ ಬಾಸ್''ನ ಸೀಸನ್ 19 ನಿನ್ನೆ ( ಭಾನುವಾರ ) ಮುಕ್ತಾಯವಾಗಿದೆ. ಅದ್ಧೂರಿಯಾಗಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಹಿಂದಿ ಕಿರುತೆರೆಯ ಶಾರುಖ್ ಖಾನ್ ಎಂದೇ ಕರೆಯಲ್ಪಡುವ ಗೌರವ್ ಖನ್ನಾ ಹೊರ ಹೊಮ್ಮಿದ್ದಾರೆ.
ಗೌರವ್ ಖನ್ನಾ ಜೊತೆ ಮನೆಯೊಳಗೆ 17 ಸ್ಫರ್ಧಿಗಳು ಹೋಗಿದ್ದರು. ಆ ಪೈಕಿ.. ಅಮಾಲ್ ಮಲ್ಲಿಕ್.. ತಾನ್ಯಾ ಮಿತ್ತಲ್.. ಪ್ರಣಿತ್ ಮೋರೆ.. ಫರ್ಹಾನಾ ಭಟ್.. ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದು ತಲುಪಿದ್ದರು. ಈ ಐವರ ಪೈಕಿ ಮೊದಲು ಅಮಾಲ್ ಮಲ್ಲಿಕ್ ಮನೆಯಿಂದ ಹೊರ ಬಂದರು. ನಂತರ ತಾನ್ಯಾ ಮಿತ್ತಲ್ ಅವರಿಗೆ ಅದೃಷ್ಟ ಕೈ ಕೊಡ್ತು.
ಕೊನೆಯಲ್ಲಿ ಪ್ರಣೀತ್ ಮೋರೆ..ಗೌರವ್ ಖನ್ನಾ ಮತ್ತು ಫರ್ಹಾನಾ ಭಟ್ ಉಳಿದುಕೊಂಡಿದ್ದರು. ಪ್ರಣೀತ್ ಮತ್ತು ಫರ್ಹಾನಾ ಅವರನ್ನು ಹಿಂದಿಕ್ಕಿ ಕೊನೆಯಲ್ಲಿ ಗೌರವ್ ಖನ್ನಾ ಟ್ರೋಫಿ ಮುಡಿಗೇರಿಸಿಕೊಂಡರು.ಟ್ರೋಫಿ ಜೊತೆ ಗೌರವ್ ಖನ್ನಾ ಅವರಿಗೆ ₹50ಲಕ್ಷ ಹಣ ಕೂಡ ಸಿಕ್ಕಿದೆ.
ಇಷ್ಟೇ ಅಲ್ಲ 105 ದಿನ ''ಬಿಗ್ ಬಾಸ್'' ಮನೆಯಲ್ಲಿದ್ದ ಕಾರಣಕ್ಕೆ ಕಾರನ್ನು ಕೂಡ ಗೌರವ್ ಖನ್ನಾ ಅವರಿಗೆ ಉಡುಗೊರೆಯನ್ನಾಗಿ ನೀಡಲಾಗಿದೆ. ಇನ್ನು ''ಬಿಗ್ ಬಾಸ್'' ಟ್ರೋಫಿ ಗೆದ್ದ ನಂತರ "ಮೂರು ತಿಂಗಳ ಪ್ರಯಾಣ ಅಂತಿಮವಾಗಿ ಮುಕ್ತಾಯಗೊಂಡಿದೆ... ಎಂತಹ ಅದ್ಭುತ ಅಂತ್ಯವಿದು. ಟ್ರೋಫಿ ಮನೆಗೆ ಬಂದಿದೆ" ಎಂದು ಗೌರವ್ ಖನ್ನಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇನ್ನೂ ಕೊಯಿಮೊಯಿ ವರದಿಯ ಪ್ರಕಾರ ಈ ವರ್ಷ ಅತೀ ಹೆಚ್ಚು ಸಂಭಾವನೆ ಪಡೆದ ಸ್ಫರ್ಧಿಗಳಲ್ಲಿ ಗೌರವ್ ಖನ್ನಾ ಮೊದಲಿಗರು. ವಾರಕ್ಕೆ 17.5 ಲಕ್ಷವನ್ನು ಇವರಿಗೆ ನೀಡಲಾಗುತ್ತಿತ್ತು. ಆ ಪ್ರಕಾರ ಹದಿನಾಲ್ಕು ವಾರ ಮನೆಯಲ್ಲಿ ಇದ್ದ ಗೌರವ್ ಖನ್ನಾ ಸಂಭಾವನೆಯ ಮೂಲಕವೇ 2.62 ಕೋಟಿಯನ್ನು ಪಡೆದಿದ್ದಾರೆ. ಗೆದ್ದಿರುವ 50 ಲಕ್ಷ ಕೇವಲ ಬೋನಸ್ ಮಾತ್ರ.
ಇನ್ನುಳಿದಂತೆ ''ಬಿಗ್ ಬಾಸ್'' ಫಿನಾಲೆ ಮುನ್ನ ಮನೆಗೆ ಬಂದಿದ್ದ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಗೌರವ್ ಖನ್ನಾ, ಈ ಕಾರ್ಯಕ್ರಮವನ್ನು ನಾನು ರಂಪ ರಾಮಾಯಣದಿಂದ ಗೆಲ್ಲಲು ಬಯಸುವುದಿಲ್ಲ ಬದಲಿಗೆ ಪ್ರೀತಿಯಿಂದ ಗೆಲ್ಲಲು ಬಯಸುತ್ತೇನೆ ಎಂದು ಹೇಳಿದ್ದರು. ಅಸಭ್ಯವಾಗಿ ವರ್ತಿಸದೆ, ಯಾರನ್ನು ನಿಂದಿಸದೇ ಈ ಕಾರ್ಯಕ್ರಮ ಗೆಲ್ಲಬೇಕೆನ್ನುವ ಉದ್ದೇಶದಿಂದ ತಾವು ಸ್ಫರ್ಧೆ ಮಾಡಿರುವುದಾಗಿ ಹೇಳಿದ್ದರು. ಅದರಂತೆ ಈಗ ಗೌರವ್ ಖನ್ನಾ ಗೆದ್ದಿದ್ದಾರೆ. ಸದ್ಯ ಗೌರವ್ ಖನ್ನಾ ಅವರಿಗೆ ಹಲವರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಅಭಿನಂದನೆ ಸಲ್ಲಿಸುತ್ತಿದ್ದಾರೆ.


Click it and Unblock the Notifications











