Gilli Nata ; ಬಿಗ್ ಬಾಸ್ ಗೆದ್ದ ಗಿಲ್ಲಿಯ ಮುಂದಿನ ಪ್ಲ್ಯಾನ್ ಏನು ? ಸಿನಿಮಾ, ವ್ಯವಸಾಯ-ಹೇಳಿದ್ದೇನು ದೊಡ್ಮನೆ ದೊರೆ?
ಬದುಕೇ ಹಾಗೆ ... ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ನಾನು ಅಂತಾ ಮೆರೆಯುವವರನ್ನು ನಡುಬೀದಿಗೆ ಬಿಡಬಹುದು; ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನೋ ಇದೆ ಅಂದುಕೊಳ್ಳುವುದರ ಜೊತೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಂಡವನು, ಮತ್ತದನ್ನು ಹೊರತೆಗೆಯುವಲ್ಲಿ ಶ್ರಮಿಸಿದರೆ ಒಂದಿಲ್ಲೊಂದು ದಿನ ಪ್ರತಿಫಲ ಸಿಕ್ಕಿಯೇ ಸಿಗುತ್ತೆ. ಇದಕ್ಕೆ ಉದಾಹರಣೆಯೇ ಗಿಲ್ಲಿ ನಟ.
ಹೌದು, ಗಿಲ್ಲಿ ನಟ ಸ್ವಸಾಮರ್ಥ್ಯದಿಂದ ಮೇಲೆ ಬಂದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರದ ಹಳ್ಳಿಯ ರೈತ ಕುಟುಂಬದಿಂದ ಬಂದ ಹುಡುಗ. ನಿರ್ದೇಶಕನಾಗಬೇಕೆಂಬ ಕನಸು ಕಂಡಿದ್ದು ಗಿಲ್ಲಿಗೆ ಕೈ ಹಿಡಿದಿದ್ದು ಅವರ ಮಾತು ಮತ್ತು ಅವರಲ್ಲಿನ ಹಾಸ್ಯ ಪ್ರಜ್ಞೆ.

''ನಲ್ಲಿ ಮೂಳೆ'' ಮೂಲಕ ಹಲವರಿಗೆ ಪರಿಚಯವಾದ ಗಿಲ್ಲಿ ಆ ನಂತರ ''ಕಾಮಿಡಿ ಕಿಲಾಡಿ''ಗಳು ಸೀಸನ್ 4ರಲ್ಲಿ ಹಾಸ್ಯದ ರಸದೌತಣ ಬಡಿಸಿದರು. ರನ್ನರ್ ಅಪ್ ಆಗಿ ಕೂಡ ಹೊರ ಹೊಮ್ಮಿದರು. 'ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ' ಕಾರ್ಯಕ್ರಮದ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದ ಗಿಲ್ಲಿ ಆ ನಂತರ ''ಭರ್ಜರಿ ಬ್ಯಾಚುಲರ್ಸ್'' ರಿಯಾಲಿಟಿ ಶೋನಲ್ಲಿ ಕೂಡ ಮಿಂಚಿದರು.
ಇಂಥಾ ಗಿಲ್ಲಿ ಸದ್ಯ ಕರುನಾಡಿನ ಮನ ಗೆದ್ದಿದ್ದಾರೆ. ಕರುನಾಡಿನೆಲ್ಲೆಡೆ ಮನೆ ಮಾತಾಗಿದ್ದಾರೆ. ಅಸಂಖ್ಯಾತ ಜನರ ಆಶಯದಂತೆ ''ಬಿಗ್ ಬಾಸ್'' ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಗೆದ್ದ ನಂತರ ಭಾವುಕರಾಗಿದ್ದಾರೆ. ತಮ್ಮ ಮುಂದಿನ ಕನಸು ಮತ್ತು ಯೋಜನೆಗಳ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ''ಪಬ್ಲಿಕ್ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಗಿಲ್ಲಿ ತುಂಬಾ ಖುಷಿ ಆಯ್ತು, ನನಗೆ ಇನ್ನೂ ನಂಬೋಕೆ ಆಗ್ತಿಲ್ಲ ಎಂದು ಹೇಳಿದ್ದಾರೆ. ಇನ್ನು ಗಿಲ್ಲಿ ಕೇವಲ ''ಬಿಗ್ ಬಾಸ್'' ಟ್ರೋಫಿ ಗೆದ್ದಿಲ್ಲ. ಕನ್ನಡಿಗರ ಹೃದಯವನ್ನು ಗೆದ್ದಿಲ್ಲ. ಹಣವನ್ನು ಕೂಡ ಗಿಲ್ಲಿ ''ಬಿಗ್ ಬಾಸ್'' ಮೂಲಕ ಸಂಪಾದಿಸಿದ್ದಾರೆ. ₹50 ಲಕ್ಷ ಬಹುಮಾನದ ಜೊತೆ ಕಿಚ್ಚ ಸುದೀಪ್ ಸೇರಿ ಹಲವರಿಂದ ಬೋನಸ್ ಕೂಡ ಪಡೆದಿದ್ದಾರೆ. ಈ ಹಿನ್ನೆಲೆ ಹಲವರಲ್ಲಿ ಗಿಲ್ಲಿ ಇಷ್ಟೊಂದು ಹಣ ತಗೊಂಡು ಮುಂದೇನು ಮಾಡ್ತಾರೆ ಎನ್ನುವ ಕುತೂಹಲ ಇದ್ದೇ ಇರುತ್ತೆ. ಈ ಪ್ರಶ್ನೆಗೆ ಕೂಡ ಉತ್ತರ ನೀಡಿರುವ ಗಿಲ್ಲಿ ₹ 50 ಲಕ್ಷದಲ್ಲಿ ಜಮೀನು ತಗೊಂಡು ವ್ಯವಸಾಯ ಏನಾದ್ರೂ ಮಾಡ್ಬೇಕು ಎಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಮುಂದುವರೆದು ನನಗೆ ಈಗಲೂ ನಂಬೋದಕ್ಕೆ ಆಗ್ತಿಲ್ಲ. ಇದು ನಿಜನಾ, ಸುಳ್ಳಾ ಅಂತ ಗೊತ್ತಾಗ್ತಿಲ್ಲ ಎಂದು ಹೇಳಿರುವ ಗಿಲ್ಲಿ ತಮ್ಮ ವೈರಲ್ ಹಾಡಿನ ಹಿಂದಿನ ಸತ್ಯವನ್ನು ಕೂಡ ಹೇಳಿದ್ದಾರೆ. ನಾನು ದೊಡ್ಡಮ್ಮ.. ದೊಡ್ಡಮ್ಮ ದ್ವಾಸೆ ಕೊಡು.. ಹಾಡನ್ನ ಶಾಲೆಗೆ ಹೋಗುವಾಗ ಕಲಿತಿದ್ದು, ಅದು ಹಾಗೆ ಮನೇಲಿ ಹೇಳಿದ್ದು ಎಂದಿರುವ ಗಿಲ್ಲಿ ಆ ಹಾಡು ಇಷ್ಟೊಂದು ಜನಜನಿತವಾಗುತ್ತೆ ಎಂದು ಗೊತ್ತಿರಲಿಲ್ಲ, ಹೊರಗಡೆ ಬಂದ್ಮೇಲೆಯೇ ಗೊತ್ತಾಯ್ತು ಎಂದು ಹೇಳಿದ್ದಾರೆ.
ಇನ್ನು ಗಿಲ್ಲಿ ಮತ್ತು ಕಾವ್ಯ ಈ ಬಾರಿಯ ''ಬಿಗ್ ಬಾಸ್'' ಮನೆಯ ಕೇಂದ್ರಬಿಂದುವಾಗಿದ್ದರು. ಈ ಜೋಡಿಯನ್ನು ನೋಡಿದ ಹಲವರಿಗೆ ಇವರನ್ನು ಗಂಡ ಹೆಂಡ್ತಿಯನ್ನಾಗಿ ನೋಡುವ ಆಸೆ. ಮದುವೆ ಮಾಡಿಸಲು ಸದ್ಯ ಗಿಲ್ಲಿ ಅಭಿಮಾನಿಗಳೇ ತಯಾರಾಗಿದ್ದಾರೆ. ಈ ಕುರಿತು ಕೂಡ ಮಾತನಾಡಿರುವ ಗಿಲ್ಲಿ, ಕಾವ್ಯ ಜೊತೆ ಮದುವೆ ಎಲ್ಲ ಏನೂ ಇಲ್ಲ. ಎಂಟ್ರಿ ಕೊಡುವಾಗ ಜಂಟಿಯಾಗಿ ನಾನು ಮತ್ತು ಕಾವ್ಯ ಹೋಗಿದ್ವಿ. ಆವಾಗ ಸುಮ್ನೆ ಹೇಳಿದ್ದು, ಅದೇ ಸಿಂಕ್ ಆಗೋಯ್ತು ಎಂದು ಹೇಳಿದ್ದಾರೆ. ಕಾವ್ಯ ಶೈವ ಅವರು ನನ್ನ ಸ್ನೇಹಿತರು. ಕಾವ್ಯ ನನ್ನ ಸ್ನೇಹಿತರಾಗಿ ಇರುತ್ತಾರೆ ಅಷ್ಟೇ ಎಂದಿದ್ದಾರೆ.
ಮನೆಯಲ್ಲಿ ಚಡ್ಡಿ, ಬನಿಯನ್ನಲ್ಲಿ ಓಡಾಡಿದ್ದಕ್ಕೆ ಕೂಡ ಪ್ರತಿಕ್ರಿಯೆ ನೀಡಿರುವ ಗಿಲ್ಲಿ, ಚಡ್ಡಿ, ಬನಿಯನ್ನೇ ನಂಗಿಷ್ಟ, ''ಬಿಗ್ ಬಾಸ್'' ಮನೆಗೆ ಹೋದಾಗ ನಾನು ಶರ್ಟು-ಪ್ಯಾಂಟು ಹಾಕೊಂಡು ಕುತ್ಕೊಳ್ತಿದ್ದೆ. ಯಾಕೋ ಕಷ್ಟ ಅನ್ಸೋದು. ಆಮೇಲೆ ಆಗಲ್ಲ ಇದು ಅಂತ ಬಿಟ್ಬಿಟ್ಟೆ ಎಂದು ಹೇಳಿದ್ದಾರೆ.
ಅಂದ್ಹಾಗೇ ಎಲ್ಲರಿಗೆ ಗೊತ್ತಿರುವಂತೆ ಗಿಲ್ಲಿ ಈಗಾಗಲೇ ''ಡೆವಿಲ್'' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರ ಬಿಡುಗಡೆಯೂ ಆಗಿದೆ. ಆದರೆ, ಬಿಡುಗಡೆ ಸಮಯದಲ್ಲಿ ಗಿಲ್ಲಿ ''ಬಿಗ್ ಬಾಸ್'' ಮನೆಯೊಳಗೆ ಇದ್ದರು. ಬಿಡುಗಡೆಯಾದ ವಿಚಾರ ಕೂಡ ಗೊತ್ತಾಗಿರಲಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಕೂಡ ನಡೆದಿತ್ತು. ಇದರ ಕುರಿತು ಕೂಡ ಮಾತನಾಡಿರುವ ಗಿಲ್ಲಿ ''ಡೆವಿಲ್'' ಸಿನಿಮಾದಲ್ಲಿ ನನ್ನ ನೋಡಿ ಜನ ಇಷ್ಟ ಪಟ್ರಂತೆ ಖುಷಿ ಆಯ್ತು ಎಂದು ಹೇಳಿದ್ದಾರೆ. ರಿಲೀಸ್ ಆಯ್ತು ಅಂತಾನೂ ಗೊತ್ತಾಗಿಲ್ಲ. ದರ್ಶನ್ ಸರ್ ಸಿನಿಮಾ. ದರ್ಶನ್ ಅಣ್ಣನ ಜೊತೆ ಮೊದಲ ಸಿನಿಮಾ ಮಾಡಿದ್ದು ಖುಷಿ ಆಯ್ತು ಎಂದು ಹೇಳಿರುವ ಗಿಲ್ಲಿ ಮುಂದೆ ಕೂಡ ಹೀಗೇ ಸಿನಿಮಾ ಮಾಡ್ಕೊಂಡು ಹೋಗುವ ಆಲೋಚನೆ ಇದೆ ಎಂದಿದ್ದಾರೆ.


Click it and Unblock the Notifications









