BBK12; ಬಿಗ್ ಬಾಸ್ ಮನೆಯಲ್ಲಿ ಟ್ವಿಸ್ಟ್ ; ಸ್ಪಂದನಾ ಬದಲು ಹೊರ ಬಂದ ಮಾಳು
''ಬಿಗ್ ಬಾಸ್'' ಮನೆಗೆ ಪ್ರತಿ ವರ್ಷ ಹಲವರು ಅತ್ಯುತ್ಸಾಹದಿಂದ ಹೋಗುತ್ತಾರೆ. ಮನೆಯೊಳಗೆ ತೆರಳುವ ಮುನ್ನ ವೇದಿಕೆಯಲ್ಲಿ ಮಾತನಾಡುವಾಗ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಮನೆಯಲ್ಲಿ ನಡೆಯುವ ರಂಪ-ರಾಮಾಯಣದಲ್ಲಿ ಕೂಡ ಭಾಗವಹಿಸುತ್ತಾರೆ. ಮನೆಯಲ್ಲಿ ಸ್ಫರ್ಧಿಗಳ ನಡುವೆ ಬೆಂಕಿಯನ್ನು ಕೂಡ ಹಚ್ಚುವುದರಲ್ಲಿ ಮುಂದಿರುತ್ತಾರೆ. ಆದರೆ.. ಮನೆಯೊಳಗೆ ಹೋದ ಸ್ಫರ್ಧಿಗಳಲ್ಲಿ ಪ್ರತಿವಾರ ಯಾರಾದರೂ ಒಬ್ಬರು ಮನೆ ಹೊರಗಡೆ ಬರಲೇಬೇಕು. ಅದೇ ನಿಯಮ.
ಹೀಗಾಗಿಯೇ ಪ್ರತಿ ವಾರ ಜೊಳ್ಳುಗಳನ್ನ ಉದುರಿಸಿ ಗಟ್ಟಿ ಕಾಳು ಉಳಿಸಿಕೊಳ್ಳಲು ''ಬಿಗ್ ಬಾಸ್'' ಜರಡಿ ಹಿಡಿಯುತ್ತೆ. ಒಬ್ಬರನ್ನು ಮನೆಯ ಹೊರಗೆ ದಬ್ಬಲಾಗುತ್ತೆ. ಈ ಹಿನ್ನೆಲೆ ನಿನ್ನೆ ( ಡಿಸೆಂಬರ್ 27 ) ಕನ್ನಡದ ''ಬಿಗ್ ಬಾಸ್'' ಮನೆಯಿಂದ ಸೂರಜ್ ಸಿಂಗ್ ಹೊರ ಬಂದಿದ್ದಾರೆ. ಇಂದು (ಡಿಸೆಂಬರ್ 28) ಮಾಳು ನಿಪನಾಳ ಸರದಿ.

ಹೌದು, ಅಸಲಿಗೆ ಇಂದು ಸ್ಪಂದನಾ ಮತ್ತು ಮಾಳು ನಿಪನಾಳ ಅವರ ಮೇಲೆ ತೂಗುಕತ್ತಿ ನೇತಾಡುತ್ತಿತ್ತು. ಇಬ್ಬರನ್ನು ಕರೆದೊಯ್ಯಲು ಕಾರ್ ಕೂಡ ಮನೆಯೊಳಗೆ ಬಂದಿತ್ತು. ಈ ಸಮಯದಲ್ಲಿ ಇಬ್ಬರಲ್ಲಿ ಕೂಡ ಆತಂಕ ಇತ್ತು. ಇನ್ನೂ ಯಾರಾದರೂ ಮನೆಯ ಹೊರಗಡೆ ಹೋಗಬೇಕಾದರೆ ಮನೆಯ ಒಳಗೆ ಇರುವ ಸ್ಫರ್ಧಿಗಳ ಅಭಿಪ್ರಾಯ ಕೂಡ ಮುಖ್ಯ. ಹೀಗಾಗಿ ಎಲ್ಲರ ಅಭಿಪ್ರಾಯ ಕೇಳಲಾಯ್ತು. ಆಗ ಸ್ಪಂದನಾ ಮತ್ತು ಮಾಳು ಕುರಿತು ಮನೆಯ ಉಳಿದ ಸದಸ್ಯರು ತಮ್ಮ ಮನದ ಮಾತು ಹಂಚಿಕೊಂಡರು. ಸ್ಪಂದನಾ ಯಾರು ಎನ್ನುವುದಕ್ಕೆ ಇಲ್ಲಿಯವರೆಗೆ ನನಗೆ ಸ್ಪಷ್ಟ ಚಿತ್ರಣ ಸಿಗಲಿಲ್ಲ ಎಂದು ಗಿಲ್ಲಿ ಹೇಳಿದರೆ ಮಾಳು ಯಾವತ್ತು ತಮ್ಮ ನಿಲುವು ಸ್ಪಷ್ಟ ಪಡಿಸಲಿಲ್ಲ ಎಂದು ಧನುಷ್ ಹೇಳಿದರು.
ಹೀಗೆ ಮನೆಯ ಹೊರಗೆ ಮತ್ತು ಒಳಗೆ ಒಂದೊಂದು ಕಾಲಿಟ್ಟಿದ್ದ ಸ್ಪಂದನಾ ಮತ್ತು ಮಾಳು ಮನೆಗೆ ಬಂದಿದ್ದ ಕಾರನ್ನು ಹತ್ತಿದರು. ಆ ಪೈಕಿ ಒಂದು ಕಾರು ಮರಳಿ ಬಂತು. ಈ ಮೂಲಕ ಸ್ಪಂದನಾ ಸೋಮಣ್ಣ ಅವರ ''ಬಿಗ್ ಬಾಸ್'' ಪ್ರಯಾಣ ಮುಂದುವರೆಯಿತು. ಮತ್ತೊಂದು ಕಡೆ ಮಾಳು ಅವರ ಪ್ರವಾಸ ಮುಕ್ತಾಯವಾಯ್ತು.

ಅಂದ್ಹಾಗೇ ಕನ್ನಡದಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮ ಶುರುವಾಗಿ ಇಂದಿಗೆ ( ಡಿಸೆಂಬರ್ 28 ) 92 ದಿನಗಳಾಗಿವೆ. ಈ 92 ದಿನದಲ್ಲಿ ಯಾರಾದರೂ ಮನೆಯಿಂದ ಹೊರಗಡೆ ಬಂದಾಗ ಹಲವರು ಮಾಳು ಅವರನ್ನು ಯಾಕೆ ಮನೆಯಲ್ಲಿದ್ದಾರೆ ಎಂದು ಚರ್ಚೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಮಾಡುತ್ತಿದ್ದರು. ಮಾಳು ನಿಪನಾಳ ಅವರನ್ನು ಮನೆಯ ಹೊರಗಡೆ ಕಳುಹಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಇವರೆಲ್ಲರ ಆಸೆ ಇಂದು ಈಡೇರಿದ್ದು ಸದ್ಯ ಸ್ಪಂದನಾ ತಮ್ಮ 92 ದಿನದ ''ಬಿಗ್ ಬಾಸ್'' ಜರ್ನಿಯನ್ನು ಮುಗಿಸಿದ್ದಾರೆ. ಕಿಚ್ಚ ಸುದೀಪ್ ಅವರ ಅನುಪಸ್ಥಿತಿಯಲ್ಲಿ ಮನೆಯಿಂದ ಹೊರಗಡೆ ಬಂದಿದ್ದಾರೆ.
ಸದ್ಯ ಮನೆಯೊಳಗೆ ಗಿಲ್ಲಿ.. ಅಶ್ವಿನಿ ಗೌಡ.. ರಘು.. ಧ್ರುವಂತ್.. ಕಾವ್ಯ.. ರಕ್ಷಿತಾ ಶೆಟ್ಟಿ.. ರಾಶಿಕಾ.. ಸ್ಪಂದನಾ ಮತ್ತು ಧನುಷ್ ಇದ್ದಾರೆ. ಈ ಪೈಕಿ ಗ್ರ್ಯಾಂಡ್ ಫಿನಾಲೆ ಮುನ್ನ ಇನ್ನು ನಾಲ್ಕು ಜನ ಹೊರ ಬರಲಿದ್ದಾರೆ. ಕೊನೆಯಲ್ಲಿ ಮನೆಯಲ್ಲಿ ಉಳಿದುಕೊಳ್ಳುವ ಐದು ಅದೃಷ್ಟಶಾಲಿಗಳು ಯಾರು ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ''ಬಿಗ್ ಬಾಸ್'' ಕಾರ್ಯಕ್ರಮವನ್ನು ತಪ್ಪದೇ ನೋಡುವ ಪ್ರೇಕ್ಷಕರ ಪ್ರಕಾರ ಗಿಲ್ಲಿ ಮತ್ತು ಅಶ್ವಿನಿ ನಡುವೆ ಜಿದ್ದಾಜಿದ್ದಿನ ಯುದ್ಧ ನಡೆಯಲಿದೆ. ಇನ್ನೂ ಹಲವರ ಪ್ರಕಾರ ಈ ಯುದ್ಧದಲ್ಲಿ ಜಯಶಾಲಿಯಾಗುವುದು, ''ಬಿಗ್ ಬಾಸ್'' ಟ್ರೋಫಿ ಮುಡಿಗೇರಿಸಿಕೊಳ್ಳುವುದು ಗಿಲ್ಲಿನೇ. ಈ ಊಹೆ ನಿಜವಾಗುತ್ತಾ..? ಯಾರಿಗೆ ಈ ಬಾರಿ ಅದೃಷ್ಟ ಒಲಿಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications