ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಕನ್ನಡದ ನಟ ನಟಿಯರು ಯಾರು ಗೊತ್ತಾ?
ಕಿರುತೆರೆಯ ಮೂಲಕ ನಟನೆಗೆ ಕಾಲಿಟ್ಟು ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವವರಿಗೇನೂ ಕಡಿಮೆಯಿಲ್ಲ. ಈಗ ಕನ್ನಡದ ಹಲವು ನಟ ನಟಿಯರು ತಮ್ಮ ಸಹಜ ನಟನೆಯ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.
ಅಂದ ಹಾಗೇ ಇವರ ಕಿರುತೆರೆ ಪಯಣ ಶುರುವಾಗಿದ್ದು ಮಾತ್ರ ರಿಯಾಲಿಟಿ ಶೋಗಳ ಮೂಲಕ. ಹೌದು, ರಿಯಾಲಿಟಿ ಶೋ ಮೂಲಕ ಕಿರು ಪರದೆಗೆ ಕಾಲಿಟ್ಟು ಮುಂದೆ ನಟ ಅಥವಾ ನಟಿಯರಾಗಿ ಬದಲಾದವರಿದ್ದಾರೆ.

ಅನುಪಮಾ ಗೌಡ
'ಚಿ.ಸೌ. ಸಾವಿತ್ರಿ' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡರು ಅನುಪಮಾ. ಮುಂದೆ 'ಅಕ್ಕ' ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದ ಅನುಪಮಾ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು. ನಂತರ ಸಿನಿಮಾಗಳತ್ತ ಮುಖ ಮಾಡಿ ಅಲ್ಲೂ ಸೈ ಎನಿಸಿಕೊಂಡ ಅನುಪಮಾ ಗೌಡ ಕಿರುಪರದೆಗೆ ಕಾಲಿಟ್ಟಿದ್ದು 'ಹಳ್ಳಿ ದುನಿಯಾ' ರಿಯಾಲಿಟಿ ಶೋ ಮೂಲಕ. ಕಸ್ತೂರಿ ವಾಹಿನಿಯಲ್ಲಿ ಈ ಶೋ ಪ್ರಸಾರವಾಗಿತ್ತು.

ಚಂದನ್ ಕುಮಾರ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮರಳಿ ಮನಸ್ಸಾಗಿದೆ' ಧಾರಾವಾಹಿಯಲ್ಲಿ ಎಸಿಪಿ ವಿಕ್ರಾಂತ್ ಆಗಿ ನಟಿಸಿದ್ದರು ಚಂದನ್ ಕುಮಾರ್. 'ರಾಧಾ ಕಲ್ಯಾಣ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟು, 'ಲಕ್ಷ್ಮಿ ಬಾರಮ್ಮ', 'ಸರ್ವ ಮಂಗಳ ಮಾಂಗಲ್ಯೇ', ಧಾರಾವಾಹಿಯಲ್ಲಿ ಮೋಡಿ ಮಾಡಿದ್ದರು ಚಂದನ್ ಕುಮಾರ್. ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಚಂದನ್ ಕುಮಾರ್ 'ಪ್ಯಾಟೆ ಮಂದಿ ಕಾಡಿಗ್ ಬಂದ್ರು' ರಿಯಾಲಿಟಿ ಶೋ ಮೂಲಕ ಮೊದಲ ಬಾರಿ ಕಿರುಪರದೆಯಲ್ಲಿ ಕಾಣಿಸಿಕೊಂಡರು.

ಕಾವ್ಯಾ ಗೌಡ
'ಮೀರಾ ಮಾಧವ' ಧಾರಾವಾಹಿಯ ಮೀರಾಳಾಗಿ ಕಿರುತೆರೆಯಲ್ಲಿ ಮಿಂಚಿದ್ದರು ಕಾವ್ಯಾ ಗೌಡ. ತದ ನಂತರ 'ಗಾಂಧಾರಿ' ಧಾರಾವಾಹಿಯಲ್ಲಿ ದೃಷ್ಟಿ, ದೀಪ್ತಿ ಎಂಬ ದ್ವಿಪಾತ್ರದಲ್ಲಿ ಈಕೆ ಕಾಣಿಸಿಕೊಂಡರು. ಕೊನೆಯದಾಗಿ 'ರಾಧಾ ರಮಣ' ಧಾರಾವಾಹಿಯಲ್ಲಿ ಆರಾಧನಾಳಾಗಿ ನಟಿಸಿದ್ದ ಕಾವ್ಯಾ ಗೌಡ 'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ರಿಯಾಲಿಟಿ ಶೋ ಮೂಲಕ ಕಿರುಪರದೆಯಲ್ಲಿ ಕಾಣಿಸಿಕೊಂಡರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಶೋ ಪ್ರಸಾರ ಆಗಿತ್ತು.

ನಯನಾ ಪುಟ್ಟಸ್ವಾಮಿ
ಈಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಚಿಟ್ಟೆ ಹೆಜ್ಜೆ' ಧಾರಾವಾಹಿಯಲ್ಲಿ ನಟಿಸಿದ್ದ ನಯನಾ ಪುಟ್ಟಸ್ವಾಮಿ ಕಿರುಪರದೆಗೆ ಪಾದಾರ್ಪಣೆ ಮಾಡಿದ್ದು ರಿಯಾಲಿಟಿ ಶೋ ಮೂಲಕ. ಹೌದು, ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ಮೂಲಕ ಕಿರುಪರದೆಗೆ ಕಾಲಿಟ್ಟರು ನಯನಾ ಪುಟ್ಟಸ್ವಾಮಿ. ಮಾತ್ರವಲ್ಲ ಅವರು ಆ ಶೋವಿನ ವಿನ್ನರ್ ಕೂಡಾ ಆಗಿದ್ದರು.

ಕೋಳಿ ರಮ್ಯಾ
'ಸೊಸೆ ತಂದ ಸೌಭಾಗ್ಯ' ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಕೋಳಿ ರಮ್ಯಾ 'ಮಿಥುನ ರಾಶಿ' ಧಾರಾವಾಹಿಯಲ್ಲಿ ಖಳನಾಯಕಿ ಕವಿತಾಳಾಗಿ ಮೋಡಿ ಮಾಡಿದ್ದರು. ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಿರುವ ಈಕೆಯೂ ಮೊದಲು ಕಾಣಿಸಿಕೊಂಡಿದ್ದು ರಿಯಾಲಿಟಿ ಶೋವಿನಲ್ಲಿ. 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಶೋವಿನ ಮೂಲಕ ಈಕೆ ಮೊದಲ ಬಾರಿ ಕಿರುತೆರೆಗೆ ಕಾಲಿಟ್ಟರು.


Click it and Unblock the Notifications











