ಕಿರುತೆರೆಯಲ್ಲಿ ಪ್ರಸಾರವಾದ ಪುರುಷ ಪ್ರಧಾನ ಧಾರಾವಾಹಿಗಳು ಇದುವೇ ನೋಡಿ
ಕಿರುತೆರೆ ಅದರಲ್ಲೂ ಧಾರಾವಾಹಿಗಳೆಂದರೆ ಸದಾ ಸ್ತ್ರೀ ಪ್ರಧಾನ ಕಥಾ ಹಂದರವನ್ನೇ ಹೊಂದಿರುತ್ತವೆ. ಸಾಮಾನ್ಯವಾಗಿ ಮನೆಯ ಮಹಿಳೆಯರೆಲ್ಲ ದಿನವಿಡಿ ಕೆಲಸ ಮಾಡಿ ಸಂಜೆ ಟಿವಿ ಮುಂದೆ ಕುಳಿತು ನೋಡುವ ಕಾರ್ಯಕ್ರಮಗಳು ಮನರಂಜನೆಯವಾಗಿರಬೇಕೆಂದು ಬಯಸುತ್ತಾರೆ.
ಮಹಿಳೆಯರೇ ವೀಕ್ಷಕ ವೃಂದದ ಬಹುದೊಡ್ಡ ಭಾಗವಾಗಿರುವುದರಿಂದ ಎಲ್ಲಾ ಧಾರಾವಾಹಿಗಳು ಹೆಚ್ಚಾಗಿ ಮಹಿಳಾ ಪ್ರಧಾನ ಕಥೆಗಳನ್ನೇ ತೋರಿಸುತ್ತವೆ. ಆದರೆ ಕನ್ನಡ ಕಿರುತೆರೆಯಲ್ಲಿ ಕೆಲ ಧಾರಾವಾಹಿಗಳು ಪುರುಷ ಪ್ರಧಾನ ಕಥೆಗಳನ್ನು ಪ್ರಸ್ತುತ ಪಡಿಸಿ ಗೆದ್ದಿವೆ. ಅಂತಹ ಧಾರಾವಾಹಿಗಳು ಇವೇ ನೋಡಿ.

ಪುರುಷೋತ್ತಮ
2013-14ರಲ್ಲಿ ಪ್ರಸಾರವಾಗುತ್ತಿದ್ದ 'ಪುರುಷೋತ್ತಮ' ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಪುರುಷ ಪ್ರಧಾನ ಧಾರಾವಾಹಿ ಎಂದರೆ ತಪ್ಪಾಗಲ್ಲ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯಲ್ಲಿ ನಟ ದಿಲೀಪ್ ರಾಜ್ ಹಾಗೂ ನಟಿ ಮೇಘನಾ ಲೋಕೇಶ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವೈಷ್ಣವಿ ಗೌಡ, ಚೈತ್ರಾ ರೈ ಅನುಶ್ರೀ ನಾಯರ್ ಸೇರಿದಂತೆ ಹಲವು ನಟಿಯರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ.
ಪುರುಷೋತ್ತಮ ಎಂಬ ಜವಾಬ್ದಾರಿಯುತ ಹುಡುಗ ತನ್ನ ತಂಗಿಯಂದರಿಗೆ ಮದುವೆ ಮಾಡುವುದೇ ತನ್ನ ಆದ್ಯ ಕರ್ತವ್ಯವೆಂದು ನಿರತನಾಗಿರುತ್ತಾನೆ. ಆದರೆ ಅವನ ಮೊದಲ ತಂಗಿಗೆ ಎಷ್ಟೇ ಕಷ್ಟಪಟ್ಟರು ವರ ಸಿಗುವುದಿಲ್ಲ. ಇಂತಹ ಸಂದಿಗ್ಧ ಸಂದರ್ಭಗಳಲ್ಲೆಲ್ಲ ಆತ ತನ್ನ ಗೆಳತಿಯಾದ ಚೈತ್ರಳೊಂದಿಗೆ ಸಂಕಟವನ್ನು ಹಂಚಿಕೊಳ್ಳುತ್ತಿರುತ್ತಾನೆ. ಕ್ರಮೇಣ ಚೈತ್ರಾಳಿಗೆ ಪುರುಷೋತ್ತಮನ ಮೇಲೆ ಪ್ರೀತಿ ಬೆಳೆಯುತ್ತದೆ. ಪುರುಷೋತ್ತಮನಿಗೂ ಈ ರೀತಿಯ ಭಾವನೆಗಳಿದ್ದರೂ ಸಹ ಜವಾಬ್ದಾರಿ ಹೆಚ್ಚಿದ್ದರಿಂದ ಈ ಕಡೆಗೆ ಹೆಚ್ಚಿನ ಗಮನ ಹರಿಸುವುದಿಲ್ಲ.
ಕೊನೆಗೂ ಪುರುಷೋತ್ತಮನ ಮೊದಲ ತಂಗಿಗೆ ಗಂಡು ಸಿಗುತ್ತಾರೆ, ಆದರೆ ಅವರು ಹಾಕುವ ಷರತ್ತಿಗೆ ಒಪ್ಪುವ ಅನಿವಾರ್ಯತೆ ಪುರುಷೋತ್ತಮನಿಗೆ ಎದುರಾಗುತ್ತದೆ. ಈ ಕಾರಣದಿಂದ ಆತ ಪ್ರೀತಿಸುತ್ತಿದ್ದ ಚೈತ್ರಾಳ ಕೈ ಬಿಡಬೇಕಾಗಿ ಬರುತ್ತದೆ. ತನ್ನ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಕುಟುಂಬಕ್ಕೋಸ್ಕರ ಪುರುಷೋತ್ತಮನ ಹಾಗೆಯೇ ಆತ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಈ ರೀತಿಯ ವಿಭಿನ್ನ ಕಥಾಂದರ ಹೊಂದಿದ್ದ ಈ ಧಾರಾವಾಹಿ ಬಹಳಷ್ಟು ಖ್ಯಾತಿಗಳಿಸಿದ್ದಲ್ಲದೆ, ಇಂದಿಗೂ ಜನಮನದಲ್ಲಿ ಅಚ್ಚಾಗಿ ಉಳಿದಿದೆ.
ಹಿಟ್ಲರ್ ಕಲ್ಯಾಣ
2021 ರಿಂದ 24ರ ವರೆಗೆ ಬರೋಬ್ಬರಿ ಮೂರು ವರ್ಷಗಳ ಕಾಲ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಜನ ಮನ ಸೆಳೆದಿತ್ತು. ಎ ಜೆ ಎನ್ನುವ ಕೋಪಿಷ್ಟ ಅನಿವಾರ್ಯ ಕಾರಣಗಳಿಂದ ಲೀಲಾ ಎನ್ನುವ ಹುಡುಗಿಯನ್ನು ವರಿಸುತ್ತಾನೆ. ಎಜೆಯ ಸ್ವಭಾವಕ್ಕೂ ಲೀಲಾಳ ಸ್ವಭಾವಕ್ಕೂ ಅಜಗಜಾಂತರ ವ್ಯತ್ಯಾಸ. ಈ ಕಾರಣದಿಂದ ಅವರ ಸಾಂಸಾರಿಕ ಜೀವನದಲ್ಲಿ ಹಲವಾರು ರೀತಿಯ ತೊಂದರೆಗಳು ಎದುರಾಗುತ್ತದೆ. ಎ ಜೆಯ ಅಹಂಕಾರ ಹಾಗೂ ಕೋಪವನ್ನು ತನ್ನ ಸರಳತೆಯಿಂದಲೇ ನಿವಾರಿಸಲು ಪಣತೊಡುತ್ತಾಳೆ ಲೀಲಾ. ಈ ರೀತಿ ಎಜೆ ಎಂಬ ಒಬ್ಬ ಪಾತ್ರದ ಸುತ್ತ ಸುತ್ತುವ ಈ ಕಥೆ, ಒಬ್ಬ ಪುರುಷನ ಜೀವನ ಹೇಗೆಲ್ಲ ಕ್ಲಿಷ್ಟಕರವಾಗಿರುತ್ತದೆ ಎಂಬುದನ್ನು ಬಹಳ ಅಚ್ಚುಕಟ್ಟಾಗಿ ತೋರಿಸುವ ಪ್ರಯತ್ನ ಮಾಡಿದೆ. ಕಲಾವಿದರಾದ ದಿಲೀಪ್ ರಾಜ್, ಮಲೈಕಾ ವಸುಪಾಲ್, ರವಿ ಭಟ್, ವಿದ್ಯಾಮೂರ್ತಿ, ನಂದಿನಿಮೂರ್ತಿ, ದೀಪಾ ಕಟ್ಟೆ, ದೀಪಿಕಾ ಆರಾಧ್ಯ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ.
ರಾಮಾಚಾರಿ
'ರಾಮಾಚಾರಿ' ಮಧ್ಯಮ ವರ್ಗದ ಜವಾಬ್ದಾರಿಯುತ ಹುಡುಗನೊಬ್ಬ ತನ್ನ ಮನೆ ಸಂಕಷ್ಟಗಳನ್ನು ನಿವಾರಿಸುವ ಪ್ರಯತ್ನದಲ್ಲಿ ಇರುತ್ತಾನೆ. ಈ ಚಾರು ಎಂಬ ಶ್ರೀಮಂತ ಹುಡುಗಿಯನ್ನು ಭೇಟಿಯಾಗುತ್ತಾನೆ. ಕ್ರಮೇಣ ಈ ಭೇಟಿ ಸ್ನೇಹ ಹಾಗೂ ಪ್ರೀತಿಗೆ ತಿರುಗಿ ರಾಮಾಚಾರಿ ಹಾಗೂ ಚಾರು ಮದುವೆಯಾಗುತ್ತಾರೆ. ಆದರೆ ಒಂದಾದ ಮೇಲೊಂದು ಬರುವಾಗ ಕಷ್ಟಗಳನ್ನು ಹೇಗೆ ಎದುರಿಸುತ್ತಾ ತನ್ನವರಿಗೆ ಹಾಗು ತನ್ನ ಕುಟುಂಬಕ್ಕೆ ಶ್ರಮಿಸುತ್ತಾನೆ ರಾಮಾಚಾರಿ ಎಂಬುದೇ ಈ ಧಾರಾವಾಹಿಯ ಕಥಾ ಹಂದರ. ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯಲ್ಲಿ, ಬಹಳಷ್ಟು ಟ್ವಿಸ್ಟ್ ಗಳು ಎದುರಾಗಿದ್ದು ಸದ್ಯ ರಾಮಾಚಾರಿಯ ತಮ್ಮ ಕೃಷ್ಣನ ಸುತ್ತ ಕತೆ ಸುತ್ತುತ್ತಿದೆ. ರಾಮಾಚಾರಿ ಹಾಗೂ ಕೃಷ್ಣ ಇಬ್ಬರು ಅವಳಿ ಜವಳಿ ಮಕ್ಕಳು. ಕೃಷ್ಣನ ಬದುಕಿನಲ್ಲಿ ರಾಮಾಚಾರಿ ಯಾವ ರೀತಿ ಸಹಾಯಕ್ಕೆ ನಿಲ್ಲುತ್ತಾನೆ ಎಂಬುದು ಸದ್ಯದ ಕಥೆಯ ತಿರುಳು. ಕಲಾವಿದರಾದ ಮೌನ ಗುಡ್ಡೆ ಮನೆ, ರಿತ್ವಿಕ್ ಕೃಪಾಕರ್, ಪುನೀತ ಗೌಡ, ಶಂಕರ್ ಅಶ್ವಥ್, ಭಾವನ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











