ಕಾರು ತಗೊಂಡ್ರೆ, ಚೆನ್ನಾಗಿರೋ ಬಟ್ಟೆ ಹಾಕೊಂಡ್ರೆ ತಿರ್ಪೆ ಶೋಕಿ ಅಂತಾರೆ ; ನೋವು ಹಂಚಿಕೊಂಡ ಮಜಾಭಾರತದ ಸುಶ್ಮಿತಾ ಜಗಪ್ಪ
ಸೋಶಿಯಲ್ ಮೀಡಿಯಾದಲ್ಲಿ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ ಎನ್ನುವಂತಹ ಪೋಸ್ಟುಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರೋದು ಕಾಮನ್ನು. ಸೆಲೆಬ್ರೆಟಿಗಳೆಂದ ಮೇಲೆ ಅಷ್ಟೂ ಮಾಡದೇ ಇದ್ದರೆ ಹೇಗೆ..? ಎನ್ನುವುದು ಅನೇಕರ ಆಲೋಚನೆ. ಇದಕ್ಕೆ ಹಲವರು ತಲೆ ಕೆಡಿಸಿಕೊಳ್ಳದೇ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿತ್ತಾರೆ. ಇಂತಹ ಸಾಕಷ್ಟು ವಿವಾದಾತ್ಮಕ ವಿಚಾರಗಳಿಗೆ ಬಹುತೇಕ ಸೆಲೆಬ್ರೆಟಿಗಳು ಉರಿದು ಬೀಳುತ್ತಾರೆ.
ಇನ್ನೂ ಕೆಲವರು ತಮ್ಮ ಮನದ ಮಾತುಗಳನ್ನು ಹಂಚಿಕೊಳ್ಳುತ್ತಾರೆ. ಬೇಸರವನ್ನು ಹೊರ ಹಾಕುತ್ತಾರೆ. ಇದಕ್ಕೆ ಸುಶ್ಮಿತಾ ಜಗಪ್ಪ ಸದ್ಯದ ಉದಾಹರಣೆ. ಹೌದು, ಸುಶ್ಮಿತಾ ಜಗ್ಗಪ್ಪ .. ಮಜಾಭಾರತ ಮತ್ತು ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮಗಳ ಮೂಲಕ ಮನೆ ಮಾತಾದ ಬೆಡಗಿ.

8 ವರ್ಷ ಜಗ್ಗಪ್ಪ ಅವರನ್ನು ಪ್ರೀತಿಸಿ ಮದುವೆಯಾದ ಸುಶ್ಮಿತಾ ಆಗಾಗ ಟ್ರೋಲಿಗರಿಗೆ ಆಹಾರವೂ ಆಗಿದ್ದಾರೆ. ಈ ಟ್ರೋಲ್‌ಗಳಿಂದ ತಮ್ಮ ಮನಸಿನ ಮೇಲಾದ ಪರಿಣಾಮದ ಕುರಿತು ಸದ್ಯ ಸುಶ್ಮಿತಾ ಜಗ್ಗಪ್ಪ ಮಾತನಾಡಿದ್ದಾರೆ.
'ರ್ಯಾಪಿಡ್ ರಶ್ಮಿ' ಅವರಿಗೆ ನೀಡಿದ ಯೂಟ್ಯೂಬ್ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸುಶ್ಮಿತಾ ನನಗೆ ಈ ಇಂಡಸ್ಟ್ರೀಗೆ ಬರುವುದು ಕಷ್ಟ ಆಗಲಿಲ್ಲ ಆಕ್ಟರ್ ಆಗುವುದು ಕೂಡ ಕಷ್ಟ ಆಗಲಿಲ್ಲ ಆದರೆ ಈ ವಿವಾದಗಳನ್ನು ಸಹಿಸಿಕೊಳ್ಳುವುದು ಕಷ್ಟ ಆಗುತ್ತಿದೆ ಎಂದು ಹೇಳಿದ್ದಾರೆ.
ಆರಂಭದಲ್ಲಿ ನನಗೆ ಈ ಟ್ರೋಲ್‌ಗಳ ಬಗ್ಗೆ ಕಾಮೆಂಟ್‌ಗಳ ಬಗ್ಗೆ ಅರಿವು ಇರಲಿಲ್ಲ ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆಗಳಿರುತ್ತವೆ ಎನ್ನುವುದು ಕೂಡ ಗೊತ್ತಿರಲಿಲ್ಲ ಎಂದಿರುವ ಸುಶ್ಮಿತಾ ಬಟ್ಟೆ ಹಾಕುವ, ಕಾರು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಕೂಡ ಇವರೆಲ್ಲ ನನ್ನಿಂದ ಕಿತ್ತುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಮಜಾಭಾರತದಲ್ಲಿ ನಾನು ಹೆಚ್ಚು ಮೇಕಪ್ ಮಾಡಿಕೊಳ್ಳುತ್ತಿರಲಿಲ್ಲ. ಬಟ್ಟೆ ಕೂಡ ಅರಿಯಾಗಿ ಹಾಕಿಕೊಳ್ಳುತ್ತಿರಲಿಲ್ಲ ಯಾಕೆಂದರೆ ನನ್ನ ಪಾತ್ರಗಳೇ ಹಾಗೇ ಇರುತ್ತಿದ್ದವು ಎಂದಿರುವ ಸುಶ್ಮಿತಾ ಅಲ್ಲಿದ್ದಾಗ ನಾನು ಬಡವರ ಪಾತ್ರ ಮಾಡಿದ್ದೇನೆ.. ಭಿಕ್ಷುಕಿಯ ಪಾತ್ರವನ್ನು ಮಾಡಿದ್ದೇನೆ.. ತಲೆ ಕೂದಲೆಲ್ಲ ಕೆದರಿಕೊಂಡು ಅಭಿನಯಿಸಿದ್ದೇನೆ.. ಹಾಗಂಥ ನಿಜ ಜೀವನದಲ್ಲಿ ಕೂಡ ನಾನು ಹಾಗೇ ಇರಬೇಕು ಎಂದು ಬಯಸುವುದು, ಹೇಳುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಈಗೀಗ ನಮ್ಮನ್ನು ನಾವು ಅನ್ವೇಷಿಸುವಂತಹ ಅನೇಕ ಕಾರ್ಯಕ್ರಮಗಳು ಸಿಗುತ್ತಿವೆ, ಹಲವು ರಿಯಾಲಿಟಿ ಶೋಗಳಲ್ಲಿ ಗೆಸ್ಟ್ ಆಗಿ ಹೋಗುವ ಅವಕಾಶ ಸಿಗುತ್ತಿದೆ, ಹೀಗಾಗಿ ಚೂರು ಚೆನ್ನಾಗಿ ಡ್ರೆಸ್ ಮಾಡಿಕೊಂಡು ಆ ವೇದಿಕೆಗೆ ನಾವು ಹೋದರೆ ಆಗಲೂ ಕೂಡ ಕೊಂಕು ಮಾತುಗಳನ್ನಾಡುತ್ತಾರೆ ಎಂದಿರುವ ಸುಶ್ಮಿತಾ, ಮೊದಲೆಲ್ಲ ಬಡವರು ಅಂತ ಹೇಳಿಕೊಳ್ಳುತ್ತಿದ್ದರು ಈಗ ನೋಡು ತಿರ್ಪೆ ಶೋಕಿ ಅಂತಾ ಕಾಮೆಂಟ್‌ಗಳನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ. ಹೊಸ ಕಾರು ತಗೊಂಡು.. ಮನೆ ತಗೊಂಡು.. ಆ ಫೋಟೋಗಳನ್ನು ಹಂಚಿಕೊಳ್ಳುವ ಸ್ವಾತಂತ್ರ್ಯ ಕೂಡ ಇಲ್ಲದಂತಾಗಿದೆ ಎಂದು ಹೇಳಿದ್ಧಾರೆ.
ರಿಯಾಲಿಟಿ ಶೋಗಳು ಮತ್ತು ಸಿನಿಮಾಗಳನ್ನು ಮಾಡಿಯೂ ಕಾರು ಅಥವಾ ಮನೆ ತೆಗೆದುಕೊಳ್ಳುವ ಹಾಗಿಲ್ಲ, ತಗೊಂಡರೆ ಇದೆಲ್ಲ ಹೇಗೆ ಬಂತು ಎನ್ನುವ ಪ್ರಶ್ನೆ ಕೇಳ್ತಾರೆ ಎಂದು ತಮ್ಮ ನೋವನ್ನು ಹೊರಹಾಕಿರುವ ಸುಶ್ಮಿತಾ, ನನ್ನದು ಬಡ ಕುಟುಂಬ ಎಂದು ನಾನು ಎಲ್ಲಿಯೂ ಹೇಳಿಲ್ಲ. ಬೇರೆಯವರು ಬಡತನದಿಂದ ಬಂದಿರಬಹುದು ಆದರೆ ನನ್ನ ಮನೆಯಲ್ಲಿ ನನ್ನ ಅಪ್ಪ ಅಮ್ಮ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದಿದ್ದಾರೆ. ನಮಗೂ ಒಂದು ಕಾಲದಲ್ಲಿ ಕಷ್ಟ ಇತ್ತು ಆದರೆ ಆ ನಂತರ ನಾವು ಉದ್ಧಾರ ಆಗಿದ್ದೇವೆ ಎಂದು ಹೇಳಿರುವ ಸುಶ್ಮಿತಾ ನಾನು ಹುಟ್ಟಿ ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿಯೇ ಓದಿದ್ದು ಇಂಗ್ಲೀಷ್ ಮೀಡಿಯಂನಲ್ಲಿಯೇ ಎಂದು ಹೇಳಿದ್ದಾರೆ.
ಮುಂದುವರೆದು ಇನ್ನು ನಾನು ಇದೇ ಸಂದರ್ಶನದಲ್ಲಿ ಕೆಲ ಇಂಗ್ಲೀಷ್ ಪದಗಳನ್ನು ಬಳಸಿದ್ದೇನೆ ಇದೇ ರೀತಿ ನಾನು ಬೇರೆ ಇಂಗ್ಲೀಷ್ ಮಾತನಾಡಿದರೆ ಇಂಗ್ಲೀಷ್‌ಗೆ ಹುಟ್ಟಿದವಳಂತೆ ಆಡ್ತಾಳೆ, ಮಜಾಭಾರತದಲ್ಲಿ ಹೆಂಗಿದ್ಳು ಅಂತೆಲ್ಲ ಕೆಲವರು ನನಗೆ ಕಾಮೆಂಟ್‌ಗಳನ್ನು ಮಾಡುತ್ತಾರೆ ಎಂದು ಕೂಡ ಸುಶ್ಮಿತಾ ಜಗ್ಗಪ್ಪ ಹೇಳಿದ್ದಾರೆ.


Click it and Unblock the Notifications











