ಮನೆಗಾಗಿ ಮನೆಯಲ್ಲಿ ಮಹಾಭಾರತ ; ನಾನು ಮೌನವಾಗಿದ್ದೇನೆ ಅಂದ್ರೆ ಭಯದಿಂದಲ್ಲ- ರಾಧಾರಮಣ ಕಾವ್ಯ ಗೌಡ
''ಮೀರಾ ಮಾಧವ''.. ''ಗಾಂಧಾರಿ''.. ''ರಾಧಾ ರಮಣ''.. ಧಾರಾವಾಹಿಗಳಲ್ಲಿ ಮಿಂಚಿ ಮರೆಯಾದವರು ಕಾವ್ಯ ಗೌಡ. 2021ರಲ್ಲಿ ಸೋಮಶೇಖರ್ ಅವರನ್ನು ಮದುವೆಯಾದ ಕಾವ್ಯಾ ಗೌಡ ಆ ನಂತರ ಮನೆ-ಗಂಡ-ಸಂಸಾರ ಎಂದು ಬ್ಯುಸಿಯಾದರು. ಜ್ಯುವೆಲ್ಲರಿ ಡಿಸೈನಿಂಗ್ ಬ್ಯುಸಿನೆಸ್ ಹಾಗೂ ಮ್ಯಾನಿಫೆಸ್ಟೇಷನ್ ಕ್ಲಾಸ್ ಎಂದು ತಮ್ಮದೇ ಪ್ರಪಂಚದಲ್ಲಿ ಕಳೆದು ಹೋದರು.
ಇಂಥಾ ಕಾವ್ಯ ಗೌಡ ಸದ್ಯ ಏಕಾಏಕಿ ಮತ್ತೆ ಸುದ್ದಿಯಲ್ಲಿದ್ದಾರೆ. ಮನೆಯಲ್ಲಿನ ಕಲಹ ಬೀದಿಗೆ ಬಂದ ಹಿನ್ನೆಲೆ ಮಾಧ್ಯಮಗಳಲ್ಲಿ ಮತ್ತು ಸಾರ್ವತ್ರಿಕ ವಲಯದಲ್ಲಿ ಚರ್ಚೆಗೀಡಾಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ಕೂಡ ದಾಖಲಾಗಿದೆ. ನನ್ನ ಮೇಲೆ ಮತ್ತು ನನ್ನ ಪತಿಯ ಮೇಲೆ ವಾರಗಿತ್ತಿ ಪ್ರೇಮಾ ಅವರ ತಂದೆ ರವಿಕುಮಾರ್ ಹಲ್ಲೆ ಮಾಡಿದ್ದಾರೆ, ಅ*ತ್ಯಾಚಾರದ ಬೆದರಿಕೆ ಹಾಕಿದ್ದಾರೆ ಎಂದು ಕಾವ್ಯ ಗೌಡ ಹೇಳಿದ್ದಾರೆ.

ಇಷ್ಟೇ ಅಲ್ಲ ನನಗೆ ರಾಜಕೀಯದಲ್ಲಿ ಎಲ್ಲರೂ ಗೊತ್ತು. ನೂರು ಜನರ ಮುಂದೆ ಅ*ತ್ಯಾಚಾರ ಮಾಡಿ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ನನ್ನ ರೇ*ಪ್ ಮಾಡೋದಕ್ಕೆ ಅವರು ಯಾರು? ರೇಪ್ ಅಂದ್ರೆ ಅಷ್ಟು ಸುಲಭ ಅಂದ್ಕೊಂಡು ಬಿಟ್ಟಿದ್ದಾರಾ. ಕಾನೂನು ಅಷ್ಟು ಸುಲಭವಾಗಿದ್ಯಾ..? ಎಂದು ಕಾವ್ಯ ಗೌಡ ಮಾಧ್ಯಮದವರ ಎದುರು ಗುಡುಗಿದ್ದಾರೆ.
ಮತ್ತೊಂದು ಕಡೆ ನನ್ನ ತಂದೆ ರವಿಕುಮಾರ್‌ಗೆ ಕರೆ ಮಾಡಿ ಧಮ್ಕಿ ಹಾಕಿದ್ದಾರೆ, ನನ್ನ ಸಹೋದರಿ ಕಸ್ತೂರಿ ಮೇಲೆ ಕಾವ್ಯ ಹಾಗೂ ಸಂಬಂಧಿಕರು ಹಲ್ಲೆ ಮಾಡಿದ್ದಾರೆ, ಕಾವ್ಯ ಸಹೋದರಿ ಭವ್ಯಾ ನನ್ನನ್ನು ಮತ್ತೆ ನನ್ನ ಗಂಡ ನಂದೀಶ್ ಅವರನ್ನು ಚಪ್ಪಲಿಯಿಂದ ಹೊಡೆದಿದ್ದಾರೆ, ಅಲ್ಲದೇ ಮಾಂಗಲ್ಯ ಸರವನ್ನು ಕಿತ್ತು ಹಾಕಿದ್ದಾರೆ ಎಂದು ಕಾವ್ಯಾ ಅವರ ವಾರಗಿತ್ತಿ ಪ್ರೇಮಾ ತಮ್ಮ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಮುಂದುವರೆದು ಕಾವ್ಯಾಳ ಗಂಡ ಸೋಮಶೇಖರ್ ಓರ್ವ ಮಾದಕ ವ್ಯಸನಿ, ನಿತ್ಯವೂ ಆತ ಡ್ರಗ್ಸ್ ತೆಗೆದುಕೊಳ್ಳುತ್ತಾನೆ ಎಂದು ಹೇಳಿರುವ ಪ್ರೇಮಾ, ಇಷ್ಟೆಲ್ಲ ಆದರೂ ಆತ ಪೊಲೀಸ್ ಠಾಣೆಗೆ ಬಂದಿಲ್ಲ. ಕಾವ್ಯಾನೇ ಎಲ್ಲವನ್ನು ನೋಡಿಕೊಳ್ಳುತ್ತಿದ್ದಾಳೆ ಎಂದಿದ್ದಾರೆ. ರಕ್ತದ ಸ್ಯಾಂಪಲ್ ತೆಗೆದುಕೊಂಡುಬಿಡುತ್ತಾರೆ ಅನ್ನೋ ಭಯದಲ್ಲಿ ಠಾಣೆಗೆ ಬರುತ್ತಿಲ್ಲ. ಆಸ್ಪತ್ರೆಯಲ್ಲಿದ್ದಾರೆ ಎಂದು ಡ್ರಾಮಾ ಮಾಡುತ್ತಿದ್ದಾರೆ ಎಂದು ''ವಿಜಯವಾಣಿ''ಗೆ ನೀಡಿದ ಸಂದರ್ಶನದಲ್ಲಿ ಆರೋಪವನ್ನು ಕೂಡ ಪ್ರೇಮಾ ಮಾಡಿದ್ದಾರೆ.
ಕಾವ್ಯ ಮತ್ತು ಪ್ರೇಮಾ ಅವರ ಈ ರಂಪ-ರಾಮಾಯಣದಲ್ಲಿ ಯಾರ ತಪ್ಪಿದೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರು ಸದ್ಯ ಕಾಲವೇ ನನ್ನ ಪರವಾಗಿ ಮಾತನಾಡುತ್ತೆ ಎಂದು ಹೇಳಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಕಾವ್ಯ ಗೌಡ ನಾನು ಮೌನವಾಗಿದ್ದೇನೆ ಅಂದರೆ ಭಯದಿಂದಲ್ಲ, ಕಾಲದ ಮೇಲಿನ ನಂಬಿಕೆಯಿಂದ ಎಂದು ಹೇಳಿದ್ದಾರೆ. ಇಂದು ಅಲ್ಲದಿದ್ದರೂ ನಾಳೆ ಕಾಲವೇ ಸತ್ಯವನ್ನು ಹೊರತರುತ್ತದೆ ಎಂದು ಹೇಳಿರುವ ಕಾವ್ಯಾ ಗೌಡ ಇಂದು ನನ್ನ ಮಾತು ಕೇಳಿಸದಿದ್ದರೂ, ಪರವಾಗಿಲ್ಲ. ನಾಳೆ ಕಾಲವೇ ನನ್ನ ಪರವಾಗಿ ಮಾತನಾಡುತ್ತದೆ ಎಂದು ಹೇಳಿದ್ದಾರೆ.
ಮುಂದುವರೆದು ನೋವು ಸಹಿಸಿಕೊಂಡೆ, ಮೌನ ಆಯ್ಕೆ ಮಾಡಿಕೊಂಡೆ ,ಕಾರಣ ಕಾಲಕ್ಕೆ ನ್ಯಾಯ ಕೊಡಲು ಸಮಯ ಬೇಕು. ಕಾಲ ಕಷ್ಟ ಕೊಟ್ಟರು ಭಯ ಇಲ್ಲ. ಇಂದು ನನ್ನ ನೋವು ಅರ್ಥವಾಗದಿದ್ದರೂ, ನಾಳೆ ಕಾಲವೇ ಎಲ್ಲವನ್ನು ಹೇಳುತ್ತದೆ ಎಂದು ಹೇಳಿರುವ ಕಾವ್ಯಾ ಗೌಡ ಮಹಾಕಾಳೇಶ್ವರ ನನ್ನ ಜೊತೆ ಇದ್ದಾನೆ. ಓಂ ಸಾಯಿ ರಾಮ್ ಎಂದು ತಮ್ಮ ಇನ್‌ಸ್ಟಾಗ್ರಾಮ್‌ನ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಒಟ್ನಲ್ಲಿ ದೂರು ಪ್ರತಿದೂರಿನ ನಡುವೆ ಕಾವ್ಯ ಗೌಡ ತಾವು ಯಾವುದೇ ರೀತಿಯ ತಪ್ಪು ಮಾಡಿಲ್ಲ ಎನ್ನುವ ಸಂದೇಶವನ್ನು ಈ ಪೋಸ್ಟ್ ಮೂಲಕ ರವಾನೆ ಮಾಡುವ ಪ್ರಯತ್ನ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











