38ನೇ ವಯಸ್ಸಿನಲ್ಲಿ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದ ಖ್ಯಾತ ಕಿರುತೆರೆ ನಟಿ
ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್‌ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು ಅಸಾಧ್ಯ.
ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಈ ಸಾವಿಗೆ ಲಿಂಗ, ಜಾತಿ, ಧರ್ಮದ ಭೇದ ಭಾವ ಕೂಡ ಇಲ್ಲ. ಸಾವು ಯಾವಾಗ ಬೇಕಾದರೂ ಯಾರನ್ನ ಬೇಕಾದರು ಕರೆಯಬಹುದು. ಇದಕ್ಕೆ ಪ್ರಿಯಾ ಮರಾಠೆಯ ಅಕಾಲಿಕ ನಿಧನ ಮತ್ತೊಂದು ಉದಾಹರಣೆ.

ಹೌದು, ಪ್ರಿಯಾ ಮರಾಠೆ.. ಹಿಂದಿ ಮತ್ತು ಮರಾಠಿ ಕಿರುತೆರೆಯ ಪ್ರಖ್ಯಾತ ಹೆಸರು. ಕಳೆದ 19 ವರ್ಷಗಳಿಂದ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಪ್ರಿಯಾ ಹಲವಾರು ಧಾರಾವಾಹಿ ಮತ್ತು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಆ ಪೈಕಿ ಸುಶಾಂತ್ ಸಿಂಗ್ ರಜಪೂತ್ ಮತ್ತು ಅಂಕಿತಾ ಲೋಖಂಡೆ ಅಭಿನಯದ ''ಪವಿತ್ರ ರಿಶ್ತಾ'' ಇವರಿಗೆ ಅಪಾರವಾದ ಹೆಸರನ್ನು ನೀಡಿತ್ತು.
''ಚಾರ್ ದಿವಸ್ ಸಾಸುಚೇ''.. ''ಬಡೇ ಅಚ್ಚೇ ಲಗ್ತೇ ಹೈ''.. ''ಸಾಥ್ ನಿಭಾನಾ ಸಾಥಿಯಾ''.. ಹೀಗೆ ಹಲವು ಜನಪ್ರಿಯಗಳಲ್ಲಿ ಅಭಿನಯಿಸಿದ್ದ ಪ್ರಿಯಾ ಮರಾಠೆ ಕ್ಯಾನ್ಸರ್‌ನಿಂದಾಗಿ ತಮ್ಮ 38ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು (ಆಗಸ್ಟ್31) ಬೆಳಗ್ಗೆ 4 ಗಂಟೆಯ ಸುಮಾರಿಗೆ ಪ್ರಿಯಾ ಇಹಲೋಕ ತ್ಯಜಿಸಿದ್ದು ಪ್ರಿಯಾ ಮರಾಠೆ ಅವರ ಅಗಲಿಕೆಯ ಸುದ್ದಿ ಕೇಳಿ ಹಿಂದಿ ಮತ್ತು ಮರಾಠಿ ಕಿರುತೆರೆ ವಲಯ ಆಘಾತಕ್ಕೊಳಗಾಗಿದೆ. ಪ್ರಿಯಾ ಸಾವಿಗೆ ಕಂಬನಿ ಮಿಡಿದಿದೆ.
ಕಳೆದ ಎರಡು ವರ್ಷಗಳಿಂದ ಪ್ರಿಯಾ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಪ್ರಿಯಾ ಕೊನೆಯದಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ''ತುಝೇಚ್ ಮೀ ಗೀತ್ ಗಾತ್ ಆಹೇ'' ಧಾರಾವಾಹಿಯಲ್ಲಿ. ತುಂಬಾನೇ ಇಷ್ಟ ಪಟ್ಟು ಈ ಧಾರಾವಾಹಿಯನ್ನು ಒಪ್ಪಿಕೊಂಡಿದ್ದ ಪ್ರಿಯಾ ಮರಾಠೆ ಈ ಚಿತ್ರದಲ್ಲಿ ಮೋನಿಕಾ ಎಂಬ ಖಳನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದರು. ಇವರ ಈ ಪಾತ್ರಕ್ಕೆ ಕೂಡ ಅನೇಕ ಪ್ರೇಕ್ಷಕರು ಮನ ಸೋತಿದ್ದರು.
ಆದರೆ 2023ರಲ್ಲಿ ಈ ಧಾರಾವಾಹಿಯಿಂದ ಹೊರ ಬಂದಿದ್ದ ಪ್ರಿಯಾ ಅನಾರೋಗ್ಯದಿಂದ ಧಾರಾವಾಹಿಯಿಂದ ಹೊರ ಬಂದಿರುವುದಾಗಿ ತಮ್ಮ ಅಭಿಮಾನಿಗಳಿಗೆ ಹೇಳಿದ್ದರು.''ತುಝೇಚ್ ಮೀ ಗೀತ್ ಗಾತ್ ಆಹೇ''ದಲ್ಲಿ ತುಂಬಾ ಖುಷಿ ಖುಷಿಯಿಂದ ಮೋನಿಕಾ ಪಾತ್ರವನ್ನು ನಿರ್ವಹಿಸುತ್ತಿದ್ದೆ ಆದರೆ ಆರೋಗ್ಯ ಪದೇ ಪದೇ ನನಗೆ ಕೈ ಕೊಡುತ್ತಿದೆ. ಆರೋಗ್ಯ ಸಮಸ್ಯೆ ಇದ್ದಕ್ಕಿದ್ದಂತೆಯೇ ಹೆಚ್ಚಾಗಿದೆ ಎಂದು ಹೇಳಿದ್ದ ಪ್ರಿಯಾ ನನ್ನಿಂದ ಧಾರಾವಾಹಿ ತಂಡಕ್ಕೆ ತೊಂದರೆಯಾಗುವುದು ಬೇಡ ಎಂದು ನಾನೇ ಹೊರ ಬರುತ್ತಿದ್ದೇನೆ ಎಂದು ಹೇಳಿದ್ದರು.

ಏಪ್ರಿಲ್ 24-2012ರಲ್ಲಿ ಮರಾಠಿಯ ಖ್ಯಾತ ನಟ ಶಾಂತನು ಮೋಘೆ ಅವರನ್ನು ಪ್ರಿಯಾ ಮದುವೆಯಾಗಿದ್ದರು. ಸುಖಿ ಸಂಸಾರ ನಡೆಸಿಕೊಂಡು ಬಂದಿದ್ದರು. ಹಿಂದಿ ಮತ್ತು ಮರಾಠಿ ಕಿರುತೆರೆಯಲ್ಲಿ ಇವರಿಬ್ಬರನ್ನು ಆದರ್ಶ ಜೋಡಿ ಎಂದೇ ಪರಿಗಣಿಸಲಾಗುತ್ತಿತ್ತು. ಆದರೆ ಈಗ ಪ್ರಿಯಾ ಮರಾಠೆ ಬಾರದ ಲೋಕಕ್ಕೆ ಎದ್ದು ನಡೆದಿದ್ದಾರೆ. ಪ್ರಿಯಾ ಮರಾಠೆ ಅವರ ನಿಧನಕ್ಕೆ ಅವರ ಹಲವಾರು ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದು ಹಿಂದಿ ಮತ್ತು ಮರಾಠಿಯ ಹಲವಾರು ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.


Click it and Unblock the Notifications











