Tripura sundari: ಯುಕ್ತಿಯ ಕುತಂತ್ರದಿಂದ ರಾಜಕುಮಾರನನ್ನು ಕಳೆದುಕೊಳ್ಳುತ್ತಾಳಾ ಆಮ್ರಪಾಲಿ..?
ಗಂಧರ್ವ ಲೋಕದ ರಾಜಕುಮಾರಿ ತನ್ನ ರಾಜಕುಮಾರನನ್ನು ಅರಸಿ ಭೂಮಿಗೆ ಬಂದಿದ್ದಾಳೆ. ಭೂಮಿಗೆ ಬಂದಾಗ ಎಲ್ಲೆಲ್ಲೋ ಇಳಿ, ಇನ್ನೆಲ್ಲೋ ಸಿಕ್ಕಿಬಿದ್ದು, ಕಡೆಗೆ ತನ್ನ ರಾಜಕುಮಾರ ಇರುವಲ್ಲಿಗೆ ಬಂದಿಳಿದಿದ್ದಾಳೆ. ಆದರೆ, ಅಲ್ಲಿ ಒಂದು ಯಡವಟ್ಟು ಆಗಿ ಹೋಗಿದೆ. ಅದುವೇ ರಾಜಕುಮಾರನನ್ನು ಗುರುತಿಸಲು ಇದ್ದ ಒಂದೇ ಒಂದು ಪದಕ. ಕಳ್ಳರಿಂದ ಆ ಪದಕವನ್ನು ಉಳಿಸಿಕೊಳ್ಳುವುದಕ್ಕೆ ಆಮ್ರಪಾಲಿಯಿಂದ ಸಾಧ್ಯವಾಗಲಿಲ್ಲ.
ಅಪಘಾತದಲ್ಲಿ ರಾಜಕುಮಾರ ಅಂದ್ರೆ, ಭೂಲೋಕದಲ್ಲಿ ಜನಿಸಿರುವ ಪ್ರದ್ಯುಮ್ನನ ಕೈಗೆ ಸಿಕ್ಕಿದ್ದಾಳೆ ಆಮ್ರಪಾಲಿ. ಅಲ್ಲಿಂದ ಈಗ ಸದ್ಯ ಪ್ರದ್ಯುಮ್ನನ ಮನೆಯಲ್ಲಿಯೇ ಆಸರೆ ಪಡೆದುಕೊಂಡಿದ್ದಾಳೆ. ಮನೆಯಲ್ಲಿ ತಂದೆ ಮಗನಿಗೆ ಯಾವಾಗಲೂ ಜಗಳವಾಗುತ್ತಲೇ ಇರುತ್ತದೆ. ಆದರೂ ಪ್ರದ್ಯುಮ್ನ ತನ್ನ ನೋವನ್ನು ಯಾರ ಬಳಿಯೂ ತೋರಿಸದೆ, ಎಲ್ಲರಿಗೂ ಒಳ್ಳೆಯದ್ದನ್ನೇ ಮಾಡುತ್ತಾನೆ. ಈಗ ಆಮ್ರಪಾಲಿ, ಯುಕ್ತಿಯ ಕುತಂತ್ರಕ್ಕೆ ಬಲಿಯಾಗುವ ಸಮಯ ಬಂದಿದೆ.

ಆಮ್ರಪಾಲಿಗೆ ಬೆಂಗವಾಲಾಗಿ ನಿಂತಿರುವ ಪ್ರದ್ಯುಮ್ನ
ಆಮ್ರಪಾಲಿಗೆ ಅಪಘಾತವಾದಂತ ಸಂದರ್ಭದಲ್ಲಿ ಪ್ರದ್ಯುಮ್ನನಿಗೆ ಸಿಕ್ಕಿದ್ದಳು. ಭೂಲೋಕದ ಬಗ್ಗೆ ಗಂಧ ಗಾಳಿಯೂ ತಿಳಿಯದ ಆಮ್ರಪಾಲಿಯನ್ನು ಕಂಡು ಮನೆಯವರೆಲ್ಲಾ ಆಕ್ಸಿಡೆಂಟ್ ಆಗಿರುವುದಕ್ಕೆ ಈ ರೀತಿ ಆಗಿದೆ ಎಂದೇ ಭಾವಿಸಿದ್ದಾರೆ. ಮಾತು ಕೂಡ ದೇವಲೋಕದ ರೀತಿಯಲ್ಲಿಯೇ ಮಾತನಾಡುತತಾಳೆ ಆಮ್ರಪಾಲಿ. ಮನೆಗೆ ಕರೆದುಕೊಂಡು ಬಂದ ಪ್ರದ್ಯುಮ್ನ ಅವಳ ಬೆಂಗವಾಲಾಗಿ ನಿಂತಿದ್ದಾನೆ. ಅವಳಿಗೆ ಬೇಕಾಗಿದ್ದೆಲ್ಲವನ್ನು ಕೊಡಿಸುತ್ತಾನೆ.
ಅರಸು ಮನೆಯಲ್ಲಿ ಸದಾ ಒಂದಲ್ಲ ಒಂದು ಕಾರಣಕ್ಕೆ ಜಗಳ ಆಗುತ್ತಲೇ ಇರುತ್ತದೆ. ಅದರಲ್ಲೂ ತಂದೆ ಮಗನ ವಿಚಾರದಲ್ಲಿಯೇ ಹೆಚ್ಚಾಗಿರುತ್ತೆ ಆ ಜಗಳ. ಪ್ರದ್ಯುಮ್ನನನ್ನು ಕಂಡರೆ ಆಗುವುದಿಲ್ಲ. ಯಾಕಂದ್ರೆ, ಅವನು ಸತ್ಯಜಿತ್ ಮಗನಲ್ಲ. ಮಗನೇ ಅಲ್ಲದೇ ಹೋದರೂ ಎಲ್ಲಾ ಅಧಿಕಾರವನ್ನು ಮಾಯಿ ಅವನಿಗೆ ನೀಡುತ್ತಿರುವುದು ಸತ್ಯಜಿತ್‌ಗೆ ಇಷ್ಟವಿಲ್ಲ. ಮಗನನ್ನು ಕಂಡರೇನೆ ಆಗುವುದಿಲ್ಲ. ಇನ್ನು ಮಗ ಕರೆದುಕೊಂಡು ಬಂದಿರುವ ಹುಡುಗಿಯನ್ನು ಕಂಡರೆ ಸುಮ್ಮನೆ ಇರುತ್ತಾನಾ? ಆಮ್ರಪಾಲಿ ಬಗ್ಗೆ ಸತ್ಯಜಿತ್ ಯಾವಾಗಲೂ ಕೆಂಡಕಾರುತ್ತಿರುತ್ತಾನೆ. ಆಗಲೂ ಪ್ರದ್ಯುಮ್ನ, ಆಮ್ರಪಾಲಿಯ ಜೊತೆಗೆ ನಿಂತಿದ್ದಾನೆ.

ಯುಕ್ತಿ ಮಾತು ಕೇಳಿ ಸಂಕಷ್ಟಕ್ಕೆ ಸಿಲುಕಿದ ಆಮ್ರಪಾಲಿ
ಯುಕ್ತಿಯ ತಾಯಿ ಈಶ್ವರಿ ಹಣದ ಆಸೆಗಾಗಿ ತವರು ಸೇರಿದ್ದಾಳೆ. ಎಲ್ಲಾ ಆಸ್ತಿ ಪ್ರದ್ಯುಮ್ನನ ಹೆಸರಿನಲ್ಲಿಯೇ ಇದೆ ಎಂಬ ಕಾರಣಕ್ಕೆ ತನ್ನ ಮಗಳನ್ನು ಸೊಸೆ ಮಾಡಲು ಹೊರಟಿದ್ದಾಳೆ. ಯುಕ್ತಿಗೋ ತಲೆಯಲ್ಲಿ ಬುದ್ದಿಯೂ ಇಲ್ಲ, ತಾಳ್ಮೆಯೂ ಇಲ್ಲ. ಪ್ರದ್ಯುಮ್ನನ ಜೊತೆಗೆ ಆಮ್ರಪಾಲಿ ಸಲಿಗೆಯಿಂದ ಇರುವುದನ್ನೇ ಅವಳು ಸಹಿಸುವುದಿಲ್ಲ. ಅದಕ್ಕೆಂದೇ ಈಗ ಹೊಸ ಕಿತಾಪತಿ ಮಾಡಿದ್ದಾಳೆ. ಮೊನ್ನೆಯಷ್ಟೇ ಮೊಬೈಲ್‌ನಲ್ಲಿ ಪ್ರಾಣಿಗಳ ಸದ್ದು ಬರುವಂತೆ ಮಾಡಿ, ಎಲ್ಲರಿಂದ ಆಮ್ರಪಾಲಿಗೆ ಬೈಗುಳ ತಿನ್ನಿಸಿದ್ದಳು. ಈಗ ಮತ್ತೊಂದು ಹೆಜ್ಜೆ ಮುಂದೇ ಹೋಗಿ ಹೊಸ ಪ್ಲ್ಯಾನ್ ಮಾಡಿದ್ದಾಳೆ.
ವೋವನ್‌ನಲ್ಲಿ ಮೊಬೈಲ್ ಇಡುವಂತೆ ಯುಕ್ತಿ ಹೇಳಿದ್ದಳು. ಅದನ್ನು ಕೇಳಿದ ಆಮ್ರಪಾಲಿ ಅದೇ ರೀತಿ ಮಾಡಿದ್ದಳು. ಆದರೆ, ಅದು ಹೀಟ್ ಆಗಿ ಬ್ಲಾಸ್ಟ್ ಆಗಿತ್ತು. ಛಾಯಾಳ ಕೈಗೆ ಗಾಯವಾಗುವಂತೆ ಮಾಡಿತ್ತು. ಇದರಿಂದ ಪ್ರದ್ಯುಮ್ನ ಸಿಟ್ಟಾಗಿದ್ದ. ಯಾಕಂದ್ರೆ, ಮನೆಯವರೆಂದರೆ ಪ್ರದ್ಯುಮ್ನನಿಗೆ ತುಂಬಾ ಪ್ರೀತಿ. ಯಾರಿಗೂ ನೋವಾಗುವುದಕ್ಕೆ ಬಿಡುವುದಿಲ್ಲ. ಯಾವತ್ತೂ ಬೈಯ್ಯದ ಪ್ರದ್ಯುಮ್ನ ಇಂದು ಗದರಿದ್ದಾನೆ. ಅಷ್ಟಕ್ಕೆ ಕ್ಷಮೆ ಕೇಳಿ ಅಲ್ಲಿಂದ ಹೊರಟಿದ್ದಾಳೆ. ಆದ್ರೆ ಪ್ರದ್ಯುಮ್ನನ ಮಾತು ಆಮ್ರಪಾಲಿಯ ಮನಸ್ಸನ್ನು ಕೆದಕಿದೆ. ಅಪ್ಪ ಹೇಳಿದಂತೆ ಆಮ್ರಪಾಲಿಯಿಂದ ಮನೆಯವರಿಗೆ ತೊಂದರೆಯಾಗಬಹುದೇನೊ ಎಂದಾಗ, ಮನೆಯಲ್ಲಿರುವುದಾ ಬೇಡವಾ ಎಂಬ ಯೋಚನೆಗೆ ಸಿಲುಕಿದ್ದಾಳೆ ಆಮ್ರಪಾಲಿ.


Click it and Unblock the Notifications











