ಟಿಆರ್‌ಪಿ ಹಾವು ಏಣಿ ಆಟದಲ್ಲಿ ಈ ವಾರ ಮೇಲೇರಿದ್ದು ಯಾರು? ಕೆಳಗಿಳಿದಿದ್ದು ಯಾರು?
ಮತ್ತೊಂದು ವಾರ ಕಳೆದಿದೆ. ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿಆರ್‌ಪಿ ರೇಟಿಂಗ್ ಲಿಸ್ಟ್ ಹೊರಬಿದ್ದಿದೆ. ಯಾವ ಯಾವ ಧಾರಾವಾಹಿಯನ್ನು ವೀಕ್ಷಕರು ಹೆಚ್ಚು ವೀಕ್ಷಣೆ ಮಾಡುತ್ತಿದ್ದಾರೆ ಎನ್ನುವುದರ ಪಕ್ಕಾ ಮಾಹಿತಿ ಬಹಿರಂಗವಾಗಿದೆ.
ಟಿಆರ್‌ಪಿ ರೇಟಿಂಗ್ ಲಿಸ್ಟ್‌ನಲ್ಲಿ ಜನಪ್ರಿಯ ಧಾರಾವಾಹಿಗಳ ಹಾವು ಏಣಿ ಆಟ ಮುಂದುವರೆದಿದೆ. ಕಳೆದ ವಾರ ಮೇಲೆ ಇದ್ದವರು ಈ ವಾರ ಕೆಳಗಿಳಿದಿದ್ದಾರೆ. ಕಳೆದ ವಾರ ಕೆಳಗಿದ್ದರು ಮೇಲೇರಿದ್ದಾರೆ.
ವೀಕ್ಷಕರನ್ನು ಸೆಳೆಯಲು ಕಥೆಯಲ್ಲಿ ರೋಚಕತೆ ತುಂಬಿ, ಟ್ವಿಸ್ಟ್- ಟರ್ನ್‌ಗಳನ್ನು ಇಟ್ಟು ಕುತೂಹಲ ಹೆಚ್ಚುವಂತೆ ಮಾಡಲಾಗುತ್ತಿದೆ. ಕೆಲವರ ಲೆಕ್ಕಾಚಾರ ವರ್ಕೌಟ್ ಆಗುತ್ತಿದ್ದು ಧಾರಾವಾಹಿ ವೀಕ್ಷಕರ ಸಂಖ್ಯೆ ಹೆಚ್ಚುತ್ತಿದೆ.

ಮೊದಲ ಸ್ಥಾನದಲ್ಲಿ 'ಪುಟ್ಟಕ್ಕನ ಮಕ್ಕಳು'
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಟಾಪ್ ಒನ್ ಸ್ಥಾನವನ್ನು ಉಳಿಸಿಕೊಂಡಿದೆ. ಪುಟ್ಟಕ್ಕನ ಎರಡನೇ ಮಗಳು ಹೇಗೋ ಮೆಸ್ ಹಾಗೂ ಮನೆಯನ್ನು ರಾಜಿಯ ಕೈಯಿಂದ ವಾಪಸ್ ಕಿತ್ತುಕೊಂಡು ಸರಿಯಾಗಿ ರಾಜೇಶ್ವರಿಗೆ ಬುದ್ದಿ ಕಲಿಸಿದ್ದಾಳೆ. ಬಂಗಾರಮ್ಮನ ಮಗ ಕಂಠಿ ಎಂದು ಪುಟ್ಟಕ್ಕ ತಿಳಿದುಕೊಳ್ಳುವ ಕಾಲ ಬಂದಿದೆ. ಈ ಧಾರಾವಾಹಿ 9.0 ಟಿಆರ್‌ಪಿಯನ್ನು ಪಡೆದುಕೊಂಡಿದೆ.

2ನೇ ಸ್ಥಾನಕ್ಕೇರಿದ 'ಗಟ್ಟಿಮೇಳ'
ಕಳೆದ ವಾರ ಮೂರನೇ ಸ್ಥಾನದಲ್ಲಿ ಇದ್ದ 'ಗಟ್ಟಿಮೇಳ' ಧಾರಾವಾಹಿ ಈ ವಾರ ಎರಡನೇ ಸ್ಥಾನವನ್ನು ಅಲಂಕರಿಸಿದೆ. ವೇದಾಂತ್ ಅಮೂಲ್ಯ ಮತ್ತೆ ಕೋಳಿ ಜಗಳ ಮಾಡುತ್ತಿದ್ದಾರೆ. ಅದಿತಿ, ಧ್ರುವನನ್ನು ಪ್ರೀತಿ ಮಾಡುತ್ತಿರುವ ವಿಷಯ ಅಮೂಲ್ಯಗೆ ಗೊತ್ತಾಗಿದೆ. ಈ ಧಾರಾವಾಹಿ 8.7 ಟಿಆರ್‌ಪಿಯನ್ನು ಪಡೆದುಕೊಂಡಿದೆ.

3ನೇ ಸ್ಥಾನ ಪಡೆದ 'ಶ್ರೀರಸ್ತು ಶುಭಮಸ್ತು'
ಜೀ ಕನ್ನಡದಲ್ಲಿ ಪ್ರಸಾರವಾಗುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರಿದೆ. ದತ್ತ, ಮಾಧವನನ್ನು ಮನೆಗೆ ಊಟಕ್ಕೆ ಆಹ್ವಾನಿಸಿದ್ದಾರೆ. ಈ ಕಡೆ ತುಳಸಿಗೆ ಮಗಳು ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದಾಳೆ. ದತ್ತ, ಮಾಧವನ ಜೊತೆಗೆ ಚೆಸ್ ಆಟವನ್ನು ಆಡಲು ಮತ್ತೊಮ್ಮೆ ಆಹ್ವಾನಿಸಿದ್ದಾನೆ. ಈ ಧಾರಾವಾಹಿ 7.5 ಟಿಆರ್‌ಪಿಯನ್ನು ಪಡೆದುಕೊಂಡಿದೆ.

ಒಂದು ಸ್ಥಾನ ಏರಿದ 'ಹಿಟ್ಲರ್ ಕಲ್ಯಾಣ'
ಐದನೇ ಸ್ಥಾನದಲ್ಲಿದ್ದ ಹಿಟ್ಲರ್ ಕಲ್ಯಾಣ ನಾಲ್ಕನೇ ಸ್ಥಾನ ಪಡೆದಿದೆ. ಲೀಲಾಗೆ ಮರು ಮಾಂಗಲ್ಯ ಧಾರಣೆ ಮಾಡಿಸಲು ಅಜ್ಜಿ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಲೀಲಾ ಮನೆಗೆ ಎಜೆ ಬಂದಿದ್ದಾನೆ. ಲೀಲಾ, ಎಜೆಯನ್ನು ಅಪ್ಪನ ಜೊತೆಗೆ ಮಾರ್ಕೆಟ್‌ಗೆ ಕಳುಹಿಸಿದ್ದಾಳೆ. ಈ ಕಡೆ ಲೀಲಾಳ ತಾಯಿ ಇವರು ಆಸ್ತಿ ಕಳೆದುಕೊಂಡು ನಮ್ಮ ಮನೆಗೆ ಬಂದಿದ್ದಾರೆ ಎಂದುಕೊಂಡಿದ್ದಾಳೆ. ಈ ಧಾರಾವಾಹಿ 6.8 ಟಿಆರ್‌ಪಿಯನ್ನು ಪಡೆದುಕೊಂಡಿದೆ.

ಇಬ್ಬರಿಗೆ 5ನೇ ಸ್ಥಾನ
ಏಳನೇ ಸ್ಥಾನದಲ್ಲಿದ್ದ 'ಸತ್ಯ' ಧಾರಾವಾಹಿ ಐದನೇ ಸ್ಥಾನವನ್ನು ಅಲಂಕರಿಸಿದೆ. ಸತ್ಯ ಮತ್ತು ಕಾರ್ತಿಕ್ ಇಬ್ಬರು ಅವಾರ್ಡ್ ಫಂಕ್ಷನ್‌ಗೆ ಬಂದಿದ್ದಾರೆ. ಅಲ್ಲಿಗೆ ಬಾಲ ಮತ್ತು ದಿವ್ಯ ಸಹ ಬಂದಿದ್ದಾರೆ ಬಾಲ ಕಾರ್ತಿಕ್ ಹುರಿದುಕೊಳ್ಳಬೇಕೆಂದು ದಿವ್ಯನಿಗೆ ಹತ್ತಿರವಾಗಿರುವಂತೆ ಆಕ್ಟ್ ಮಾಡುತ್ತಿದ್ದಾನೆ. 'ಭಾಗ್ಯಲಕ್ಷ್ಮೀ' ಧಾರಾವಾಹಿ ಸಹ ಐದನೇ ಸ್ಥಾನ ಪಡೆದಿದೆ. ಕಳೆದ ಬಾರಿ ಎರಡನೇ ಸ್ಥಾನವನ್ನು ಈ ಧಾರಾವಾಹಿ ಅಲಂಕರಿಸಿತ್ತು. ವೈಷ್ಣವ್ ನನ್ನ ಇಷ್ಟಪಟ್ಟು ಮದಯವೆಯಾಗುತ್ತಿಲ್ಲ ಎಂದು ಲಕ್ಷ್ಮೀ ಗೆ ತಿಳಿದಿದೆ. ಇವೆರಡು ಧಾರಾವಾಹಿ 6.6 ಟಿಆರ್‌ಪಿಯನ್ನು ಪಡೆದುಕೊಂಡಿದೆ.

ಟಾಪ್ 6ನೇ ಸ್ಥಾನದಲ್ಲಿ 'ಗೀತಾ'
'ಗೀತಾ' ಧಾರಾವಾಹಿ ಆರನೇ ಸ್ಥಾನ ಪಡೆದುಕೊಂಡಿದೆ. ಸೂರ್ಯಪ್ರಕಾಶ್ ಕೊಲೆಯ ಆರೋಪಿ ಕಂಡು ಹಿಡಿಯಲು ಹಲವಾರು ಯೋಜನೆಗಳನ್ನು ಪೊಲೀಸರು ರೂಪಿಸಿದ್ದಾರೆ. ಇದಕ್ಕೆ ಭಾನುಮತಿ ಸಹ ಪ್ರತಿತಂತ್ರವನ್ನು ರೂಪಿಸಿ ತಪ್ಪಿಸಿಕೊಳ್ಳಲು ನೋಡುತ್ತಿದ್ದಾಳೆ. ಟಾಪ್ ಏಳರಲ್ಲಿ 'ಉಧೋ ಉಧೋ ಯಲ್ಲಮ್ಮ' ಧಾರಾವಾಹಿ ಸ್ಥಾನವನ್ನು ಪಡೆದಿದೆ. ಧಾರ್ಮಿಕತೆಯನ್ನು ತುಂಬಿರುವ ಧಾರಾವಾಹಿಯನ್ನು ಜನರು ಇಷ್ಟಪಟ್ಟು ನೋಡುತ್ತಿದ್ದಾರೆ.

8ನೇ ಸ್ಥಾನದಲ್ಲಿ 'ತ್ರಿಪುರ ಸುಂದರಿ'
ಟಾಪ್ ಎಂಟರಲ್ಲಿ 'ತ್ರಿಪುರ ಸುಂದರಿ' ಹಾಗೂ 'ಜೊತೆ ಜೊತೆಯಲಿ' ಧಾರಾವಾಹಿ ಪಡೆದುಕೊಂಡಿದೆ. ಇನ್ನೂ ಟಾಪ್ ಒಂಭತ್ತನ್ನು 'ಯಡಿಯೂರು ಸಿದ್ದಲಿಂಗೇಶ್ವರ' ಹಾಗೂ 'ರಾಮಾಚಾರಿ' ಧಾರಾವಾಹಿ ಪಡೆದುಕೊಂಡಿವೆ. ಟಾಪ್ ಹತ್ತರಲ್ಲಿ 'ಲಕ್ಷಣ', 'ಪುನರ್ ವಿವಾಹ', 'ವೈದೇಹಿ ಪರಿಣಯ' ಧಾರಾವಾಹಿಗಳು ಪಡೆದುಕೊಂಡಿವೆ.


Click it and Unblock the Notifications











