TRP scam Part 2: ಟಿ ಆರ್ ಪಿ ಡಮಾರ್! ಡಿಜಿಟಲ್ ಕಮಾಲ್ !

By ಅನಾಮಿಕ

ಕನ್ನಡ ಕಿರುತೆರೆಯೂ ಸೇರಿ ಇಡೀ ಭಾರತದಲ್ಲಿ ಇದೂವರೆಗೆ ನಡೆಯುತ್ತಿದ್ದ ಟಿ ಆರ್ ಪಿ ಕಳ್ಳಾಟ ಮತ್ತು ಮುಂದಿನ ದಿನಗಳಲ್ಲಿ ಅದು ಹೇಗೆ ಇಲ್ಲವಾಗುತ್ತೆ ಎಂಬ ಬಗೆಗಿನ ಅತ್ಯಂತ ವಿವರವಾದ ವರದಿಯ ಕೊನೆಯ ಭಾಗ ಇದು. ಮುಂದಿನ ದಿನಗಳಲ್ಲಿ ಟಿ.ವಿ ಲೋಕದ ಬದಲಾವಣೆಗಳನ್ನು ಇದೇ ರೀತಿ ನಿಮ್ಮ ಮುಂದೆ ಅನಾವರಣಗೊಳಿಸುವ ಪ್ರಯತ್ನ ಮಾಡುತ್ತೇವೆ.

ಕೆಲವು ದಿನಗಳಿಂದ ಇಡೀ ಭಾರತದ ಟಿ ಆರ್ ಪಿ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಶುರುವಾಗಿದೆ. ಇಷ್ಟು ದಿನ ಬಾರ್ಕ್ ಸಂಸ್ಥೆ ಒಂದಷ್ಟು ಮನೆಗಳಲ್ಲಿ ಪೀಪಲ್ ಮೀಟರುಗಳನ್ನು ಅಳವಡಿಸಿ ಅದರ ಮೂಲಕ ವೀಕ್ಷಕರು ಯಾವ ವಾಹಿನಿಯ ಯಾವ ಕಾರ್ಯಕ್ರಮವನ್ನು ಎಷ್ಟು ಹೊತ್ತು ನೋಡುತ್ತಾರೆ ಎಂಬ ಡೇಟಾ ಕಲೆಕ್ಟ್ ಮಾಡಿ ಚಾನಲ್‌ಗಳಿಗೆ ಕಳಿಸಿ ಕೊಡುತ್ತಿತ್ತು. ರೇಟಿಂಗ್ ಟ್ಯಾಂಪರಿಂಗ್‌ನಲ್ಲಿ ಡಬ್ಬಲ್ ಡಿಗ್ರಿ ಪಡೆದಿರುವ ಕೆಲ ಅಡ್ಡ ಕಸುಬಿಗಳು ಈ ಮೀಟರ್ ಇರುವ ಮನೆಗಳನ್ನು ಪತ್ತೆ ಮಾಡಿ ಅಥವಾ ಪತ್ತೆಮಾಡುವ ಗ್ಯಾಂಗ್ ನವರನ್ನು ಹಿಡಿದು "ತಮ್ಮ ಧಾರಾವಾಹಿಗಳನ್ನು ಮಾತ್ರ ನೋಡಿ.." ಎಂದು ಹಣದ ಆಮಿಷ ಒಡ್ಡುತ್ತಿದ್ದರು. ಹಾಗಾಗಿ ಇವರ ಧಾರಾವಾಹಿಗಳನ್ನು ಜನ ನೋಡದೆಯೇ, ಇವರ 'ಅದ್ಭುತ' ಕಟೆಂಟ್‌ಗಳ ಬಗ್ಗೆ ನೋಡುಗರು ಮಾತನಾಡದೆಯೇ ಇವರಿಗೆ 'ಒಳ್ಳೆಯ' ಟಿ ಆರ್ ಪಿ ಬರುತ್ತಿತ್ತು.

TRP scam Part 2 entertainment channels seeking advertising revenue from digital views

ಟಿ ಆರ್ ಪಿ ಡಮಾರ್.. ಡಿಜಿಟಲ್ ಕಮಾಲ್!

ಆದರೆ, ಈಗ ಕಾಲ ಬದಲಾಗಿದೆ ಕಿರುತೆರೆಯಲ್ಲಿ ಡಿಜಿಟಲ್ ಯುಗ ಆರಂಭವಾಗಿದೆ. ಅಂದರೆ ಈಗ ಮೊದಲಿನಂತೆ ಬಾರ್ಕ್ ಮೀಟರುಗಳು ಕೊಡುವ ರೇಟಿಂಗ್ ಗಳನ್ನು ಆಧಾರಾವಾಗಿಟ್ಟುಕೊಂಡು ಧಾರಾವಾಹಿಗಳ Advertising revenue ಡಿಸೈಡ್ ಮಾಡಲಾಗುತ್ತಿಲ್ಲ ಬದಲಿಗೆ ಡಿಜಿಟಲ್ ಪ್ಲಾಟ್ ಫಾರಂ ಗಳಲ್ಲಿ (ಹಾಟ್ ಸ್ಟಾರ್ ಜೀ- ಫೈವ್ ಹಾಗೂ ಸನ್ ನೆಕ್ಸ್ಟ್ ನಂತಹ ಒಟಿಟಿ ಗಳಲ್ಲಿ)ವೀಕ್ಷಕರು ಎಷ್ಟು ಹೊತ್ತು ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ ಎಂಬುದರ ಮೇಲೆ Advertising revenue ನಿರ್ಧಾರ ಮಾಡಲಾಗುತ್ತಿದೆ. ಇಷ್ಟು ದಿನ ಟಿ.ವಿ ಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ ಅಥವಾ ಕಾರ್ಯಕ್ರಮಗಳ ರೇಟಿಂಗ್ ಗಳನ್ನು ಕೇಂದ್ರವಾಗಿರಿಸಿಕೊಂಡು Advertising revenue ನಿರ್ಧಾರವಾಗುತ್ತಿತ್ತು.ಈಗ ಟಿ.ವಿಯಲ್ಲಿ ಪ್ರಸಾರಕ್ಕೂ ಮೊದಲೇ ಧಾರಾವಾಹಿಗಳು ಡಿಜಿಟಲ್ ನಲ್ಲಿ (OTT ಯಲ್ಲಿ) ಅಪ್ ಲೋಡ್ ಆಗುತ್ತಿವೆ ವಾಹಿನಿಗಳೂ ಕೂಡಾ 'ಟಿ.ವಿ ಗಿಂತ ಮೊದಲೇ ಒಟಿಟಿ ನಲ್ಲಿ ನೋಡಿ' ಅಂತ ಪ್ರಚಾರ ಮಾಡುತ್ತಿವೆ. ಒಟಿಟಿಯಲ್ಲಿ ವೀಕ್ಷಕರು ತಮಗೆ ಬೇಕಾದ ಕಾರ್ಯಕ್ರಮವನ್ನು ತಮಗೆ ಅನುಕೂಲವಾದ ಸಮಯಕ್ಕೆ ನೋಡಬಹುದು. ಟಿ.ವಿಯಲ್ಲಿ 23 ನಿಮಿಷದ ಧಾರಾವಾಹಿಯನ್ನು ಭರ್ತಿ 30 ನಿಮಿಷದ ಜಾಹೀರಾತುಗಳ ಜೊತೆ ನೋಬೇಕಾದ ಅನಿವಾರ್ಯತೆ ಇದೆ. ಆದರೆ ಒಟಿಟಿ ಯಲ್ಲಿ ಅದೇ 30 ನಿಮಿಷದ ಕಟೆಂಟ್ ಅನ್ನು 23 ನಿಮಿಷಗಳಲ್ಲಿ ಜಾಹೀರಾತು ಇಲ್ಲದೆ ನೋಡಬಹುದು, ಜೊತೆಗೆ 2x ಮೋಡ್ ನಲ್ಲಿ ವೇಗವಾಗಿಯೂ ವೀಕ್ಷಿಸಬಹುದು.ಈ ಎಲ್ಲ ಕಾರಣಗಳಿಂದ ಟಿವಿ ಇಂಡಸ್ಟ್ರಿ ವೇಗವಾಗಿ ಒಟಿಟಿ ಇಂಡಸ್ಟ್ರಿಯಾಗಿ ಬದಲಾಗುತ್ತಿದೆ.

Also Read
TRP Scam: ಟಿ ಆರ್ ಪಿ ಕಳ್ಳರ ಅಂಗಡಿ ಬಂದ್! ಕಿರುತೆರೆಯಲ್ಲಿ ಬದಲಾವಣೆಯ ಪರ್ವ!
TRP Scam: ಟಿ ಆರ್ ಪಿ ಕಳ್ಳರ ಅಂಗಡಿ ಬಂದ್! ಕಿರುತೆರೆಯಲ್ಲಿ ಬದಲಾವಣೆಯ ಪರ್ವ!

ಕಳ್ಳರ ಬುಡಕ್ಕೆ ಬೆಂಕಿ!

ಈ ಬದಲಾವಣೆ ತುಂಬ ಜನ ಕಳ್ಳರ ಬುಡಕ್ಕೆ ಬಿಸಿ ಮುಟ್ಟಿಸಿದೆ. ವಾಹಿನಿಯ ಶಿಲ್ಪಿಗಳು ಇಷ್ಟು ದಿನ ರೇಟಿಂಗ್ ರೇಟಿಂಗ್ ಅಂತ ನಿರ್ಮಾಪಕರ ಜೀವ ಹಿಂಡಿ, ಈಗ ಡಿಜಿಟಲ್ ವೀವ್ಸ್ ಎಲ್ಲಾದರೂ ಸಿಗುತ್ತಾ ಅಂತ ಹಲಸೂರು ಕೆರೆಯತ್ತ ನೋಡುತ್ತಿದ್ದಾರೆ. ಅವರಿಗೆ ಇನ್ನು ತಮ್ಮ ಚಾನಲ್ ಕೆಲಸ ಎಷ್ಟು ದಿನ ಇರುತ್ತೆ ಎಂಬ ಬಗ್ಗೆ ಖಾತ್ರಿಯಿಲ್ಲದಂತಾಗಿದೆ. ಹಾಗೆಯೇ ಕಳ್ಳ ದಾರಿಯಲ್ಲಿ ಮೀಟರು ಮುಟ್ಟಿ, ನಿರ್ಮಾಪಕನಂತೆ ಜೀವನ ನಡೆಸಿ, ಅದೇ ಹಣದಲ್ಲಿ ಮಾಡಬಾರದ ಶೋಕಿ ಮಾಡಿ,ಗಣ್ಯರಂತೆ ಇಮೇಜ್ ಗಳಿಸಿಕೊಂಡವರು ಕೂಡಾ ಬೇರೆ ಯಾವ ಬ್ಯುಸಿನೆಸ್ ಮಾಡಿದರೆ ಉತ್ತಮ ಎಂದು ಯೋಚಿಸುತ್ತಿದ್ದಾರೆ.

ವಾಹಿನಿ ನಿರ್ಮಾಪಕರನ್ನು ಯಾಕೆ ಬದಲಾಯಿಸುತ್ತಿದೆ?!

ಡಿಜಿಟಲ್ ವೀವ್ಸ್ ಎಷ್ಟೆಂಬುದರ ಮೇಲೆ Advertising revenue ಎಂಬ ಕಾನ್ಸೆಪ್ಟ್ ಬಂದಾಗಿನಿಂದ ಚಾನಲ್‌ನಲ್ಲಿ ನಿರ್ಮಾಪಕರನ್ನು ಬದಲಾಯಿಸುವ ಟ್ರೆಂಡ್ ಶುರುವಾಗಿದೆ.
ಯಾಕೆ ಹೀಗೆ ಎಂದು ವಿಚಾರಿಸಿದಾಗ ಇಂಟರೆಸ್ಟಿಂಗ್ ಸಂಗತಿ ಹೊರಬರುತ್ತಿದೆ. ಯಾವಾಗ ಡಿಜಿಟಲ್ ವೀವ್ಸ್ ಮೇಲೆ ಆದಾಯ ನಿರ್ಧಾರವಾಗುತ್ತದೆ ಎಂಬುದು ಅರ್ಥವಾಯಿತೋ, ವಾಹಿನಿಯ ಶಿಲ್ಪಿಗಳಿಗೆ ಕಳ್ಳಾಟದಿಂದ ರೇಟಿಂಗ್ ತರುವ ನಿರ್ಮಾಪಕರು ಬೇಡವಾಗಿದ್ದಾರೆ. ಯಾಕೆಂದರೆ, ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಕಳ್ಳಾಟ ಮಾಡಿ ವೀವ್ಸ್ ತರಲು ಸಾಧ್ಯವಿಲ್ಲ. ಹಾಗಾಗಿ ಪ್ರಾಮಾಣಿಕವಾಗಿ ಕಂಟೆಂಟ್ ಮಾಡಿ ಗೊತ್ತಿರುವವರನ್ನು ಕರೆಸಿ ಅವರಿಗೆ ನಿರ್ಮಾಣದ ಹೊಣೆ ನೀಡಿದರೆ, ಅವರು ವಾಹಿನಿಯವರು ಕೊಡುವ ಕತೆಗೆ ನ್ಯಾಯ ಒದಗಿಸುತ್ತಾರೆ. ಇದರಿಂದ ಡಿಜಿಟಲ್‌ನಲ್ಲಿ ನೋಡುಗರ ಸಂಖ್ಯೆ ಜಾಸ್ತಿ ಆಗುತ್ತದೆ. ರೆವಿನ್ಯೂ ಕೂಡಾ ಹರಿದು ಬರುತ್ತದೆ. ಬಾರ್ಕ್ ಸಂಸ್ಥೆ ವಾರಕ್ಕೊಮ್ಮೆ ರೇಟಿಂಗ್ ನೀಡಿದರೆ, ಒಟಿಟಿ ಯಲ್ಲಿ ಪ್ರತಿ ದಿನದ ಲೆಕ್ಕ ಸಿಗುತ್ತದೆ.ಇವತ್ತಿನ ಸಂಚಿಕೆಯ ಹಣೆಬರಹ ನಾಳೆ ಬೆಳಗ್ಗೆಯ ಹೊತ್ತಿಗೆ ಗೊತ್ತಾಗುತ್ತದೆ.

TRP scam Part 2 entertainment channels seeking advertising revenue from digital views

ಚಾಯ್ ವಾಲಾ ನಿರ್ಮಾಪಕ!

ಅದೆಲ್ಲ ಸರಿ,ಹೀಗೆ ಪ್ರಾಮಾಣಿಕವಾಗಿ ಕಂಟೆಂಟ್ ಮಾಡುವ ಕೆಲಸವನ್ನು ಹಳೆಯ ನಿರ್ಮಾಪಕರೇ ಮಾಡಬಹುದಲ್ಲವೇ ? ಯಾಕೆ ಅವರನ್ನು ಬದಲಾಯಿಸಬೇಕು ? ಎಂಬ ಪ್ರಶ್ನೆ ಬರಬಹುದು. ಹೌದು, ಚಹಾ ಮಾರುವ ಬದಲು ಆ ಕೆಲಸವನ್ನು ಹಳೆಯ ನಿರ್ಮಾಪಕರೇ ಮಾಡಬಹುದು,ಆದರೆ ಅವರು ಮಾಡುವುದಿಲ್ಲ ಮತ್ತು ಮಾಡುವ ಉತ್ಸಾಹ ಅವರಲ್ಲಿ ಹೊರಟು ಹೋಗಿದೆ.ಅದಕ್ಕೆ ಕಾರಣ ವಾಹಿನಿಯ ಶಿಲ್ಪಿಗಳು.ಇಷ್ಟು ದಿನ 'ಕಳ್ಳಾಟದಿಂದ ರೇಟಿಂಗ್ ತನ್ನಿ' ಎಂದು ನಿರ್ಮಾಪಕರ ಮೇಲೆ ಒತ್ತಡ ಹಾಕುತ್ತಿದ್ದ ವಾಹಿನಿಯ ಶಿಲ್ಪಿಗಳು ನಿರ್ಮಾಪಕ ಹಾಗೂ ನಿರ್ದೇಶಕರ ಕ್ರಿಯೇಟಿವ್ ಹುಮ್ಮಸ್ಸನ್ನು ಸಂಪೂರ್ಣ ನಾಶಮಾಡಿಬಿಟ್ಟಿದ್ದಾರೆ. ಮೀಟರು ಮುಟ್ಟಿ ಕಳ್ಳಾಟದಿಂದ ರೇಟಿಂಗ್ ಬರುತ್ತೆ ಅಂದ ಮೇಲೆ - ಕತೆ ಬರೆದು, ಚಿತ್ರಕತೆ ಮಾಡಿ, ಒಳ್ಳೆಯ ಕಾಸ್ಟಿಂಗ್ ಮಾಡಿಸಿ, ಸಂಭಾಷಣೆ ಬರೆಸಿ, ಅದ್ಭುತವಾದ ಮೇಕಿಂಗ್ ಕಟ್ಟಿಕೊಡಲು ಯಾರು ಮುಂದೆ ಬರುತ್ತಾರೆ? ಅದರ ಬದಲಿಗೆ ತಿಂಗಳಿಗೆ 05 ಲಕ್ಷದಷ್ಟು ಹಣ ಕೊಟ್ಟು ಅಡ್ಡದಾರಿಯಿಂದ ರೇಟಿಂಗ್ ತಂದರಾಯಿತು ಅಂದುಕೊಳ್ಳುತ್ತಾರೆ. ಅಸಲಿ ಸಮಸ್ಯೆ ಇರುವುದೇ ಇಲ್ಲಿ;ಕೆಲ ದಿನಗಳಿಂದ ವಾಹಿನಿಯವರು ಕಳ್ಳಾಟಕ್ಕೂ ಹಣ ಹಾಕಿಸಿ, ಕಂಟೆಂಟ್ ಕೂಡಾ ಚೆನ್ನಾಗಿ ಮಾಡಿ ಎಂದು ಒತ್ತಡ ಹಾಕುತ್ತಿರುವುದು ನಿರ್ಮಾಪಕರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ. ಹಣಕಾಸಿನ ಒತ್ತಡ,ಕಲಾವಿದರ ಹೊಂದಾಣಿಕೆ,ಸಾಲದ ಬಡ್ಡಿ,ಜೊತೆಗೆ ಜೀವನ ನಿರ್ವಹಣೆ -ಸಾಲದ್ದಕ್ಕೆ ಇಷ್ಟು ದಿನ ರೇಟಿಂಗ್ ಮೇಲೆ ನೀಡುತ್ತಿದ್ದ ಇನ್ಸೆಟಿವ್ ಕೂಡಾ ನಿಲ್ಲಿಸಿಬಿಟ್ಟಿದ್ದಾರಂತೆ ವಾಹಿನಿಯವರು. ಇದೆಲ್ಲದರಿಂದ ಬೇಸತ್ತ ನಿರ್ಮಾಪಕ ಟೀ ಅಂಗಡಿ ತೆರೆಯದೇ ಏನು ಮಾಡುತ್ತಾರೆ ?

ನಿರ್ಮಾಪಕರು ಊರು ಬಿಟ್ಟರು

ಕನ್ನಡದ ಒಂದೇ ವಾಹಿನಿಯಲ್ಲಿ ಕಳೆದ ಒಂದು ವರ್ಷದಲ್ಲಿ ಒಟ್ಟು ಮೂರು ಜನ ನಿರ್ಮಾಪಕರು 'ಸಾಕಪ್ಪೋ ಈ ಫಿಕ್ಷನ್ ಹೆಡ್ ಸಹವಾಸ..' ಅಂತ ಓಡಿ ಹೋಗಿದ್ದಾರೆ.ಅದರಲ್ಲಿ ಮೊದಲನೆಯವರು ಪ್ರೀತಮ್ ಶೆಟ್ಟಿ. ಕನ್ನಡ ಕಿರುತೆರೆಯ ಟಾಪ್ 05 ಉತ್ತಮ ನಿರ್ದೇಶಕರಲ್ಲಿ ಇವರ ಹೆಸರು ಕೇಳಿಬರುತ್ತಿತ್ತು. ಕೈ - ಬಾಯಿ ಶುದ್ದವಿರುವ ವ್ಯಕ್ತಿ ಅಂತ ಇವರ ಬಗ್ಗೆ ಕಿರುತೆರೆ ಮಾತಾಡುತ್ತಿತ್ತು. 'ಗಿಣಿರಾಮ' ಮತ್ತು 'ಕೆಂಡಸಂಪಿಗೆ' ಯಂತಹ ಹಿಟ್ ಧಾರಾವಾಹಿಗಳ ಹಿಂದೆ ಇವರ ನಿರ್ದೇಶನ ಇತ್ತು. ಅದು ಯಾವ ಕೆಟ್ಟ ಗಳಿಗೆಯೋ ವಾಹಿನಿಯ ಶಿಲ್ಪಿ ಇವರನ್ನು ನಿರ್ಮಾಪಕರನ್ನಾಗಿ ಮಾಡಿ ಬಿಟ್ಟರು. ನಂತರ ಟಿ ಆರ್ ಪಿ ಕಳ್ಳಾಟ ಮತ್ತು ಕಂಟೆಂಟ್ ಎರಡಕ್ಕೂ ಹಣ ಹಾಕಿ ಎಂದು ಯಾವ ಮಟ್ಟಿಗೆ ಒತ್ತಡ ಹಾಕಿದರು ಅಂದರೆ, ಸಾಲ ಭಾದೆ ತಾಳಲಾರದೇ ಇವತ್ತು ಪ್ರೀತಮ್ ಶೆಟ್ಟಿ ಎಲ್ಲಿ ನಾಪತ್ತೆಯಾಗಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ.

ಅದೇ ರೀತಿ ನಾಗರಭಾವಿ ನಿರ್ಮಾಪಕರು ಕೂಡಾ ಕನ್ನಡದ ಗಟ್ಟಿ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡವರು. ಹಿಂದೆ 'ಗಟ್ಟಿಮೇಳ' ಧಾರಾವಾಹಿಯ ನಿರ್ದೇಶನ ಮಾಡಿ ತುಂಬ ಒಳ್ಳೆಯ ತಂತ್ರಜ್ಞ ಎಂದು ಹೆಸರು ಗಳಿಸಿದ್ದರು ಕೂಡಾ. ಇವರು ಯಾವಾಗ ಶಿಲ್ಪಿಯ ಕಣ್ಣಿಗೆ ಬಿದ್ದು ನಿರ್ಮಾಪಕರಾದರೋ ಇವರ ಜಾತಕಕ್ಕೆ ಶನಿ ವಕ್ಕರಸಿಕೊಂಡಂತಾಗಿ ಇವತ್ತು ಟೀ ಅಂಗಡಿ ಕೂಡಾ ನಡೆಸಲಿಕ್ಕಾಗದ ಹಾಗೇ ಜೀವನಕ್ಕೆ ತೊಂದರೆ ಮಾಡಿಕೊಂಡಿದ್ದಾರೆ. ಇಷ್ಟು ದಿನ ಕಳ್ಳಾಟದಿಂದ ನಡೆಯುತ್ತಿದ್ದ ಇವರ ಧಾರಾವಾಹಿಯನ್ನು ಬೇರೆ ನಿರ್ಮಾಪಕರಿಗೆ ವರ್ಗಾವಣೆ ಮಾಡಿ ಒಟಿಟಿ ಯಲ್ಲಿ ಚೆನ್ನಾಗಿದೆ ಎಂದು ಬೆನ್ನು ತಟ್ಟಿಕೊಳ್ಳುವ ಹಂಬಲ ಶಿಲ್ಪಿಯದ್ದಾಗಿತ್ತು. ಆದರೆ ಈ ವರ್ಗಾವಣೆ ಪ್ರಕ್ರಿಯಲ್ಲಿ ಹಳೆಯ ನಿರ್ಮಾಪಕರಿಗೆ ವಾಹಿನಿಯಿಂದ ಬರಬೇಕಾದ ಸಮಯಕ್ಕೆ ಹಣ ಬಂದಿಲ್ಲ.ಹಾಗಾಗಿ ಅವರು ಕಲಾವಿದರು ಮತ್ತು ತಂತ್ರಜ್ಞರಿಗೆ ಕೊಡಬೇಕಾದ ಹಣ ಕೊಡಲು ಸಾಧ್ಯವಾಗಿಲ್ಲ. ಇದರಿಂದ ನಟಿಯರಾದ ಹಂಸ ಮತ್ತು ಚೈತ್ರ ರೊಚ್ಚಿಗೆದ್ದು ವಿಷಯ ಬೀದಿ ರಂಪಾಟವಾಗಿದೆ.

ಅವರೆಲ್ಲ ಎಲ್ಲಿ ?

ರಾಮ್ ಜೀ,ಆರೂರು ಜಗದೀಶ್, ಮಿಲನ ಪ್ರಕಾಶ್ , ಮಹೇಶ್ ರಾವ್,ಸುಬ್ಬು,ದಿಲೀಪ್ ರಾಜ್ ,ಕಾರ್ತಿಕ್ ಪರಾಡ್ಕರ್,ಭಾಸ್ಕರ್ ಮಂಗಾಡಹಳ್ಳಿ,ಹಾಗೂ ಇತ್ತೀಚೆಗೆ ನಿರ್ಮಾಪಕರಾಗಿರುವ ಮಧು ಉತ್ತಮ್, ಶ್ರವಂತ್, ಅಜಯ್ ಟಿಪಿ ತರದವರು ನಿಜಕ್ಕೂ ಕನ್ನಡ ಕಿರುತೆರೆಯ ರಂಗು ಹೆಚ್ಚಿಸಿದವರು. ಅದರಲ್ಲೂ ಇಲ್ಲಿ ಹೆಸರಿಸಿರುವ ಹಿರಿಯ ನಿರ್ಮಾಪಕರುಗಳು ಅದ್ಭುತ ಕತೆಗಳನ್ನು ನಿರ್ಮಾಣ ಮಾಡಿ ಕನ್ನಡ ಕಿರುತೆರೆಗೆ ಮೆರಗು ತಂದವರು. ಆದರೆ ಮೊನ್ನೆ ನಡೆದ ಹಂಸ ಮತ್ತು ಅನಿಲ್ ಗಲಾಟೆ ಪ್ರಕರಣವನ್ನು ಯಾರೂ ಕೂಡಾ ಸರಿ ಮಾಡುವ ಪ್ರಯತ್ನ ಮಾಡಲಿಲ್ಲ. ಈ ವಿಚಾರದಲ್ಲಿ ನಿರ್ಮಾಪಕರ ಸಂಘ ಮಾತನಾಡದೇ ಇರುವುದು ಯಾಕೆ ?
ಅಲ್ಲಿ ಗಟ್ಟಿ ದನಿಯ ನಾಯಕರುಗಳು ಮುಂಚೂಣಿಯಲ್ಲಿ ಇಲ್ಲವಾ ? ಕಿರುತೆರೆಯ ಟಿ ಆರ್ ಪಿ ಕಳ್ಳರನ್ನು ದೂರ ಮಾಡಿ ಇಲ್ಲಿನ ವಾತಾವರಣ ಕಾಪಾಡುವುದು ಇವರೆಲ್ಲರ ಜವಾಬ್ದಾರಿ ಅಲ್ಲವೇ ? ಪ್ರಾಮಾಣಿಕವಾಗಿ ಕೆಲಸ ಮಾಡಿ ಸಭ್ಯ ನಿರ್ಮಾಪಕರು ಅಂತ ಹೆಸರು ಮಾಡಿರುವ ಇವರುಗಳೇ ಮೌನವಾಗಿದ್ದರೆ ಕಿರುತೆರೆ ಆರೋಗ್ಯ ಏನಾಗಬೇಡ ?

ಇದು ಬದಲಾವಣೆಯ ಕಾಲ!

ಸಧ್ಯಕ್ಕೆ ಕಿರುತೆರೆಯಲ್ಲಿ ಒಟಿಟಿ ಯುಗ ಶುರುವಾಗಿದೆ. ವಾಹಿನಿಯಲ್ಲಿ ಕೆಲಸ ಮಾಡುವ ಪ್ರಾಮಾಣಿಕರು ಕಣ್ಣು ಅರಳಿಸಿಕೊಂಡು ಸಂಭ್ರಮ ಪಡುತ್ತಿದ್ದಾರೆ. ಮೆದುಳಿಗೆ ಕೆಲಸ ಕೊಟ್ಟು ಧಾರಾವಾಹಿ ನಿರ್ಮಾಣ ಮಾಡುವ ನಿರ್ಮಾಪಕರು ಖುಷಿಯಲ್ಲಿದ್ದಾರೆ. ಟಿ.ವಿ ಯಲ್ಲಿ ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿರುವ ಹರ್ಷ ಪ್ರಿಯಾ ಹಾಗೂ ನವಿಲುಗರಿ ಸೋಮು ತರದ ಸಾತ್ವಿಕರು ನಿರ್ಮಾಪಕರಾಗಿ ಕೆಲಸ ಪ್ರಾರಂಭಿಸಿದ್ದಾರೆ. ಟಿ ಆರ್ ಪಿ ಟ್ಯಾಂಪರಿಂಗ್ ಎಂಬ ದಶಕಗಳ ಭೂತಕ್ಕೆ ಕಾಲವೇ ಉತ್ತರ ನೀಡುತ್ತಿದೆ. ವಾಹಿನಿಯ ದೊಡ್ಡ ಹುದ್ದೆಯಲ್ಲಿರುವವರು ಕೂಡಾ ಕಳ್ಳಾಟದ ನಿರ್ಮಾಪಕರಿಗೆ ಇನ್ನು ಮುಂದೆ ನಿರ್ಮಾಣದ ಅವಕಾಶ ನೀಡಬಾರದು ಎಂಬ ನಿಲುವಿಗೆ ಬಂದಿದ್ದಾರಂತೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಕನ್ನಡ ಕಿರುತರೆ ವೈಭವದಿಂದ ಮೆರೆಯಲಿ. ಕನ್ನಡಿಗರು ಉತ್ತಮವಾದ ಕಥೆ ನೋಡುವಂತಾಗಲಿ. ನಾಪತ್ತೆಯಾಗಿರುವ ಪ್ರೀತಮ್ ಶೆಟ್ಟಿ ಅಂತಹ ಒಳ್ಳೆಯ ನಿರ್ದೇಶಕರು ವಾಪಾಸು ಬಂದು ರಂಗು ತುಂಬಲಿ. ಅನಿಲ್ ಕೋರಮಂಗಲ ತರಹದ ಉತ್ತಮ ತಂತ್ರಜ್ಞರು, ಶಿಲ್ಪಿಯ ಸಂಚಿಕೆಯನ್ನು ಕೆಟ್ಟ ಧಾರಾವಾಹಿ ಅಂದುಕೊಂಡು ವೈಂಡ್ ಅಪ್ ಮಾಡಿ ಮತ್ತೆ ಹೊಸ ಕಳೆಯೊಂದಿಗೆ ಟಿ ವಿ ಲೋಕವನ್ನು ಬೆಳಗಿಸಲಿ. (ಅನಿಲ್ ಗೆ ಆ ಶಕ್ತಿ,ಶ್ರದ್ದೆ ಇದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ) ಒಟ್ಟಾರೆ ಕನ್ನಡ ಕಿರುತೆರೆಗೆ ಒಳ್ಳೆಯದಾಗಲಿ ಅಲ್ವೇ ?

English summary
TRP scam Part 2: entertainment channels seeking advertising revenue from digital views.
Read more about: tv show serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X