ಟಿ ಆರ್‌ ಪಿ ಕಳ್ಳರ ಬುಡಕ್ಕೆ ಬೆಂಕಿ! ಮುಂದೈತೆ ಮಾರಿಹಬ್ಬ!

By ಫಿಲ್ಮಿಬೀಟ್ ಡೆಸ್ಕ್

ಕನ್ನಡ ಕಿರುತೆರೆಯಲ್ಲಿ ಟಿ ಆರ್‌ ಪಿ ಕಳ್ಳಾಟ ಹಗರಣದ ವಿಚಾರದಲ್ಲಿ ಒಂದಷ್ಟು ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. ಈಗಾಗಲೇ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC)ನ ಕರ್ನಾಟಕ ವಿಭಾಗ ಕಳ್ಳಾಟ ಮಾಡುತ್ತಿರುವ ಕೆಲ ಧಾರಾವಾಹಿಯ ಟಿ ಆರ್ ಪಿ ಯನ್ನು ಸೂಕ್ಷ್ಮವಾಗಿ ಮಾನಿಟರ್‌ ಮಾಡುವುದರ ಜೊತೆಗೆ ವಾಹಿನಿಗಳಿಂದ ಡಿಜಿಟಲ್‌ ವೀವ್ಸ್‌ ಅಂದರೆ OTTಯಲ್ಲಿ ಎಷ್ಟು ಜನ ವೀಕ್ಷಕರು ಧಾರಾವಾಹಿಯನ್ನು ನೋಡುತ್ತಾರೆ ಎಂಬ ಡಾಟಾವನ್ನು ಕೂಡಾ ಸಂಗ್ರಹಿಸುತ್ತಿದ್ದಾರಂತೆ.

ಹಾಗಾದರೆ ಕರ್ನಾಟಕದಲ್ಲಿ ಟಿ ಆರ್‌ ಪಿ ಕಳ್ಳಾಟ ನಿಂತು ಹೋಗುತ್ತದಾ? ಒಂದು ವೇಳೆ ಕಳ್ಳಾಟವನ್ನು ಸಂಪೂರ್ಣವಾಗಿ ಮಟ್ಟಹಾಕಿದರೆ ಇದನ್ನೇ ನಂಬಿಕೊಂಡು ಬದುಕುತ್ತಿರುವ ಎರಡು ವಾಹಿನಿಗಳು ಮತ್ತು ಅಲ್ಲಿರುವ ನಿರ್ಮಾಪಕರ ಕತೆ ಏನು? ಅಸಲಿಗೆ ಈ ಕಳ್ಳಾಟ ನಡೆಯುವುದಾದರೂ ಹೇಗೆ ? 2018ರಲ್ಲಿ ಸಿಸಿಬಿ ಪೋಲಿಸರಿಂದ ಕಳ್ಳಾಟದ ಕಾರಣಕ್ಕೆ ಅರೆಸ್ಟ್‌ ಆಗಿದ್ದ ಟಿ ಆರ್‌ ಪಿ ರಾಜು ಮತ್ತು ಅವನ ಪುಡಿ ರೌಡಿ ಪಡೆ ಮತ್ತೆ ಹೇಗೆ ಕಿರುತೆರೆಗೆ ರೀ ಎಂಟ್ರಿ ಕೊಡ್ತು? ಪ್ರಸ್ತುತ ಕಳ್ಳಾಟದ ರಾಡಾರ್‌ನಲ್ಲಿ ತುಂಬ ಸಕ್ರಿಯವಾಗಿರುವವರು ಯಾರು? ಕೆಲ ವರ್ಷಗಳ ಹಿಂದೆ ನಟಿ ಮಾಳವಿಕಾ ಅವಿನಾಶ್‌ ಟಿ ಆರ್‌ ಪಿ ಕದಿಯುತ್ತಿದ್ದ ನಿರ್ಮಾಪಕನೊಬ್ಬನಿಗೆ ಬಿಸಿ ಮುಟ್ಟಿಸಿದ್ದು ಹೇಗೆ? ಈ ಎಲ್ಲಾ ಮಾಹಿತಿಗಳನ್ನು ನಿಮ್ಮ ಮುಂದೆ ಸಂಪೂರ್ಣವಾಗಿ ತೆರೆದಿಡುವ ತನಿಖಾ ವರದಿಯಿದು. ತುಂಬ ವಿಸ್ತಾರವಾದ ಮಾಹಿತಿಯಾದ್ದರಿಂದ ಎರಡು ಅಥವಾ ಮೂರು ಭಾಗಗಳಲ್ಲಿ ಈ ಕಳ್ಳರ ಬಣ್ಣ ಬಯಲು ಮಾಡುತ್ತೇವೆ.

Inside TRP Tampering in Kannada Entertainment Channels do you know How Ratings Are Manipulated

ಟಿ ಆರ್‌ ಪಿ ಅಂದರೆ ?

ಟಿ ಆರ್‌ ಪಿ ಅಂದರೆ, Television Rating Point ಎಂದು ಅರ್ಥ. ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಎಂಬ ಟಿ ಆರ್‌ ಪಿ ಲೆಕ್ಕಾಚಾರ ಮಾಡುವ ಸಂಸ್ಥೆಯು, ಹನ್ಸಾ ರಿಸರ್ಚ್ ಗ್ರೂಪ್ (Hansa Research Group) ಮೂಲಕ ದೇಶದಾದ್ಯಂತ ಟಿ ಆರ್‌ ಪಿ ಡೇಟಾವನ್ನು ಪಡೆಯುತ್ತದೆ. ಈ ಹನ್ಸಾ ಸಂಸ್ಥೆ ಒಂದಷ್ಟು ಮನೆಗಳನ್ನು ಆಯ್ಕೆ ಮಾಡಿಕೊಂಡು ಆ ಮನೆಗಳಿಗೆ ಪೀಪಲ್ ಮೀಟರ್‌ (People Meter)ಗಳನ್ನು ಅಳವಡಿಸುತ್ತದೆ. ಬಾರ್ಕ್‌ ಸಂಸ್ಥೆ ಹೇಳಿಕೊಳ್ಳುವ ಪ್ರಕಾರ ಈ ಮೀಟರುಗಳನ್ನು ಯಾವ ಮನೆಗಳಿಗೆ ಅಳವಡಿಸಿದ್ದೇವೆ ಎಂಬುದನ್ನು ರಹಸ್ಯವಾಗಿಡಲಾಗುತ್ತದೆ.

ಈ ಮೀಟರ್‌ ಪ್ರತಿ ದಿನ ವೀಕ್ಷಕರು-ಯಾವ ಸಮಯದಲ್ಲಿ, ಯಾವ ವಾಹಿನಿಯ, ಯಾವ ಕಾರ್ಯಕ್ರಮವನ್ನು, ಎಷ್ಟು ಹೊತ್ತು ನೋಡುತ್ತಾರೆ ಎಂಬ ಮಾಹಿತಿಯನ್ನು ಸಂಗ್ರಹಿಸುತ್ತದೆ. ಹಾಗೆಯೇ ಪಿಕ್ಚರ್ ಮ್ಯಾಚಿಂಗ್ ಟೆಕ್ನಿಕ್ (Picture Matching Technique)ಎಂಬ ಇನ್ನೊಂದು ಸೋರ್ಸ್‌ ಮೂಲಕ ಕೂಡಾ ಟಿ ಆರ್‌ ಪಿಯನ್ನು ಅಳೆಯಲಾಗುತ್ತದೆ. ಇದು ಟಿವಿ ಪರದೆಯ ಮೇಲೆ ನೋಡುಗರು ವೀಕ್ಷಿಸುತ್ತಿರುವ ಕಾರ್ಯಕ್ರಮದ ಸಣ್ಣ ಭಾಗವನ್ನು (Picture Fragment) ದಾಖಲಿಸಿಕೊಳ್ಳುತ್ತದೆ. ನಂತರ ಈ ತುಣುಕನ್ನು ಮುಖ್ಯ ಡಾಟಾ ಬ್ಯಾಂಕ್‌ನಲ್ಲಿರುವ ಚಾನೆಲ್‌ಗಳ ಪ್ರಸಾರದ ಡೇಟಾದೊಂದಿಗೆ ಹೋಲಿಸಿ, ನಿಖರವಾಗಿ ಯಾವ ಕಾರ್ಯಕ್ರಮ ಅಥವಾ ವಾಹಿನಿಯನ್ನು ವೀಕ್ಷಿಸಲಾಗಿದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಅಂತಿಮವಾಗಿ ಈ ಎರಡೂ ಕಡೆಯ ಡೇಟಾವನ್ನು Analysis ಮಾಡಿ ಪ್ರತಿ ಗುರುವಾರದಂದು ಆಯಾ ವಾಹಿನಿಗಳಿಗೆ ಒಂದು ವಾರದ ಅವಧಿಯಲ್ಲಿ ಧಾರಾವಾಹಿಗಳು ಮತ್ತು ಕಾರ್ಯಕ್ರಮಗಳಿಗೆ ಎಷ್ಟು ಟಿ ಆರ್‌ ಪಿ ಬಂದಿದೆ ಎಂಬುದನ್ನು ಕಳಿಸುವ ಕೆಲಸ ಮಾಡುತ್ತದೆ ಬಾರ್ಕ್ ಸಂಸ್ಥೆ. ಈ ಟಿಆರ್‌ ಪಿ ಆಧರಿಸಿ ಟಿವಿ ಚಾನೆಲ್‌ಗಳು ತಮ್ಮ ಜಾಹೀರಾತುಗಳ ದರವನ್ನು ನಿಗದಿಪಡಿಸುತ್ತವೆ. ಹೆಚ್ಚು ಟಿ ಆರ್‌ ಪಿ ಬಂದರೆ ಹೆಚ್ಚು ಹಣ ಎಂಬ ಲೆಕ್ಕದಲ್ಲಿ ವಾಹಿನಿಗಳ ವ್ಯಾಪಾರ ನಡೆಯುತ್ತದೆ.

ಕಳ್ಳಾಟ ಹೇಗೆ ನಡೆಯುತ್ತೆ ?

ಟಿ ಆರ್‌ ಪಿ ಯನ್ನು ಅಳೆಯಲು ಒಂದಷ್ಟು ಮನೆಗಳಿಗೆ ರಹಸ್ಯವಾಗಿ ಅಳವಡಿಸುವ ರೇಟಿಂಗ್‌ ಮೀಟರುಗಳನ್ನು ಮೊದಲು ಪತ್ತೆ ಮಾಡುತ್ತಾರೆ ಈ ಟಿ ಆರ್‌ ಪಿ ಕಳ್ಳರು. ಮೀಟರು ಅಳವಡಿಸುವ ಹನ್ಸಾ ಎಜೆನ್ಸಿಯ ಕೆಲವು ಫಿಲ್ಡ್‌ ವರ್ಕ್‌ರ್‌ ಗಳನ್ನು ಡೀಲ್‌ ಮಾಡಿಕೊಳ್ಳುವ ಈ ಖದೀಮರು ಅವರ ಮೂಲಕ ರಹಸ್ಯವಾಗಿ ಅಳವಡಿಸಿರುವ ಮೀಟರು ಮನೆಯ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ. ಬಳಿಕ ತಾವು ಸೂಚಿಸುವ ಸಮಯಕ್ಕೆ ಇದೇ ಧಾರಾವಾಹಿಗಳನ್ನು ನೋಡಿ ಎಂದು ತಿಳಿಸಿ ಆ ಮನೆಗಳಲ್ಲಿರುವವರಿಗೆ ಹಣದ ಆಮಿಷ ಒಡ್ಡುತ್ತಾರೆ. ಈ ರೀತಿ ಹಣ ಕೊಟ್ಟು ಕೃತಕವಾಗಿ ರೇಟಿಂಗ್ ಹೆಚ್ಚಿಸಿಕೊಂಡು ಕಿರುತೆರೆಯಲ್ಲಿ ತಮ್ಮ ನಿರ್ಮಾಣದ ಧಾರಾವಾಹಿ ಅತ್ಯಂತ ಜನಪ್ರಿಯವಾದದ್ದು ಎಂಬಂತೆ ಬಿಂಬಿಸಿಕೊಳ್ಳುತ್ತಾರೆ. ಹೀಗೆ ಕೃತಕವಾಗಿ ಹೆಚ್ಚಿಸಿದ ಟಿ ಆರ್‌ ಪಿ ಯಿಂದಾಗಿ, ಆ ಚಾನೆಲ್‌ಗಳು ಜಾಹೀರಾತುದಾರರಿಂದ ಹೆಚ್ಚಿನ ಮೊತ್ತದ ಜಾಹೀರಾತು ಆದಾಯವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಿಂದಾಗಿ ಇತರ ಪ್ರಾಮಾಣಿಕ ಸ್ಪರ್ಧಾತ್ಮಕ ಚಾನೆಲ್‌ಗಳು ಮತ್ತು ಜಾಹೀರಾತು ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತದೆ.

ವರ್ಷಾ-ಶಿಲ್ಪಾ!

ಈ ಟಿ ಆರ್ ಪಿ ಕಳ್ಳಾಟವನ್ನು ಸರಳವಾಗಿ ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳುವುದಾದರೆ-ಒಂದು ವಾಹಿನಿಯಲ್ಲಿ ವರ್ಷಾ ಎಂಬ ಧಾರಾವಾಹಿ ರಾತ್ರಿ 09 ಗಂಟೆಗೆ ಪ್ರಸಾರವಾಗುತ್ತದೆ ಅಂದುಕೊಳ್ಳಿ. ಅದೇ ಸಮಯಕ್ಕೆ ಇನ್ನೊಂದು ವಾಹಿನಿಯಲ್ಲಿ ಶಿಲ್ಪಾ ಎಂಬ ಮತ್ತೊಂದು ಧಾರಾವಾಹಿ ಕೂಡಾ ಪ್ರಸಾರವಾಗುತ್ತಿರುತ್ತದೆ. ವರ್ಷಾ ಎಂಬ ಧಾರಾವಾಹಿಯ ನಿರ್ಮಾಪಕರು ಒಳ್ಳೆಯ ಕತೆಗಾರರನ್ನು ಆಯ್ಕೆ ಮಾಡಿಕೊಂಡು,ಹೊಸತನವಿರುವ ಚಿತ್ರಕತೆ ಬರೆಸಿ, ಹೆಸರು ಮಾಡಿರುವ ಕಲಾವಿದರನ್ನು ಸೇರಿಸಿ, ಅದ್ದೂರಿ ಮೇಕಿಂಗ್‌ ಕಟ್ಟಿಕೊಟ್ಟು ಪ್ರತಿ ಸಂಚಿಕೆಯಲ್ಲೂ 08 ರಿಂದ 09 ಸೀನ್‌ಗಳನ್ನು ಹಾಕಿ, ವೀಕ್ಷಕರು ಪ್ರತಿ ದಿನ ಕಾದು ಕುಳಿತು ತಮ್ಮ ಧಾರಾವಾಹಿಯನ್ನು ನೋಡುವಂತೆ ಮಾಡಿ, ಪ್ರಾಮಾಣಿಕ ದಾರಿಯಲ್ಲಿ ಟಿ ಆರ್‌ ಪಿ ಪಡೆಯುತ್ತಿರುತ್ತಾರೆ. ಪ್ರಸ್ತುತ ಒಂದು ಧಾರಾವಾಹಿಯ ಸಂಚಿಕೆಗೆ ವಾಹಿನಿಯವರು ನಿರ್ಮಾಪಕರಿಗೆ ಒಂದೂವರೆ ಲಕ್ಷ ಹಣ ಕೊಡುತ್ತಾರೆ. ಅದರಲ್ಲಿ ಒಂದು ಲಕ್ಷದ ನಲವತೈದು ಸಾವಿರದಷ್ಟು ಹಣವನ್ನು ಮೇಲೆ ತಿಳಿಸಿದ ಎಲ್ಲಾ ವಿಭಾಗಗಳಿಗೂ ಸೇರಿಸಿ ಖರ್ಚು ಮಾಡುತ್ತಾರೆ ನಿಷ್ಟಾವಂತ ನಿರ್ಮಾಪಕರು. ಕೊನೆಯಲ್ಲಿ ಈ ನಿರ್ಮಾಪಕರಿಗೆ ಎಲ್ಲಾ ಖರ್ಚು ತೆಗೆದು ಪ್ರತಿ ಸಂಚಿಕೆಗೆ ಉಳಿಯುವುದು ಬರೀ ಐದು ಸಾವಿರ ಮಾತ್ರ. ಅದು ಕೂಡಾ ಧಾರಾವಾಹಿ 200 ಸಂಚಿಕೆ ದಾಟಿದ ಮೇಲೆಯೇ ಈ ಐದು ಸಾವಿರ ಲಾಭ ಸಿಗುವುದು ಎನ್ನುತ್ತಾರೆ ಕಿರುತೆರೆಯಲ್ಲಿ ನುರಿತ ನಿರ್ಮಾಪಕರೊಬ್ಬರು.

ಕಳ್ಳರ ಲೆಕ್ಕಾಚಾರ!

ಆದರೆ ಶಿಲ್ಪಾ ಎಂಬ ಧಾರಾವಾಹಿಯ ನಿರ್ಮಾಪಕರು ಈ ರೀತಿ ಮಾಡುವುದಿಲ್ಲ ಅವರು ಕತೆಗಾರರ ಬಳಿ ತಮಗೆ ಬೇಕಾದ ಹಾಗೆ ಕಡಿಮೆ ಖರ್ಚಿನಲ್ಲಿ ಚಿತ್ರೀಕರಣ ಮುಗಿಯವಂತೆ ಚಿತ್ರಕತೆ ಬರೆಸಿಕೊಂಡು, ದೂರದರ್ಶನ ಕಾಲದ ಮೇಕಿಂಗ್‌ ತುರುಕಿ, ಒಂದು ಸಂಚಿಕೆಗೆ ಕೇವಲ ಎರಡರಿಂದ ಮೂರು ಸೀನ್‌ ಗಳನ್ನು ಜಡಿದು, ಹಳಸಲು ಎಪಿಸೋಡುಗಳನ್ನು ಕನ್ಮಡಿಗರಿಗೆ ತೋರಿಸುತ್ತಾರೆ. ವಾಹಿನಿಯವರು ಪ್ರತಿ ಸಂಚಿಕೆಗೆ ನೀಡುವ ಒಂದೂವರೆ ಲಕ್ಷ ಹಣವನ್ನು ಈ ಕಳ್ಳ ನಿರ್ಮಾಪಕರು ತಮ್ಮದೇ ಆದ ಲೆಕ್ಕಾಚಾರ ಮಾಡಿಕೊಂಡು ಡಿವೈಡ್‌ ಮಾಡಿಕೊಳ್ಳುತ್ತಾರೆ. ತಮ್ಮ ಧಾರಾವಾಹಿಯನ್ನು ಕಳಪೆಯಾಗಿ ಶೂಟಿಂಗ್‌ ಮಾಡಿಕೊಂಡು ಒಂದು ಸಂಚಿಕೆಗೆ ಅಬ್ಬಬ್ಬಾ ಅಂದರೆ ಕೇವಲ 80 ಸಾವಿರ ಮಾತ್ರ ಖರ್ಚು ಮಾಡುತ್ತಾರೆ. ಉಳಿದಂತೆ ಪ್ರತಿ ಸಂಚಿಕೆಗೆ 17 ಸಾವಿರದಷ್ಟು ಹಣವನ್ನು ಕಳ್ಳದಾರಿಯಲ್ಲಿ ಟಿಆರ್‌ಪಿ ತರುವುದನ್ನೇ ಹಲವಾರು ವರ್ಷಗಳಿಂದ ಕಾಯಕ ಮಾಡಿಕೊಂಡಿರುವ T-ಗ್ಯಾಂಗ್‌ ಸದಸ್ಯರುಗಳಾದ - ಟಿ ಆರ್‌ ಪಿ ರಾಜು, ಸೀರೆ ಗಂಗಾಧರ, ಕಿಲೇಡಿ ಲಕ್ಷ್ಮಿ, ಮತ್ತು ಪರನಾರಿ ಕುಮಾರ ತರದ ಕಳ್ಳರ ಬಳಿ ತಂದು ಕೊಡುತ್ತಾರೆ.

ತಿಂಗಳಿಗೆ ಐದು ಲಕ್ಷ!

ಒಂದು ಧಾರಾವಾಹಿಗೆ ಎರಡರಿಂದ ಎರಡೂವರೆಯ ತನಕ ಆರ್ಗ್ಯಾನಿಕ್ ಆಗಿಯೇ ಟಿ ಆರ್‌ ಪಿ ಬರುತ್ತಿರುತ್ತೆ ಇದನ್ನು ಮೂರರಿಂದ ನಾಲ್ಕರಷ್ಟು ಜಾಸ್ತಿ ಮಾಡಲು ಅಂದರೆ ಇನ್ನೂ ಒಂದು ಟಿ ಆರ್ ಪಿ ‌ಜಾಸ್ತಿ ಮಾಡಲು ಪ್ರತಿ ಸಂಚಿಕೆಗೆ T-ಗ್ಯಾಂಗ್‌ ಸದಸ್ಯರು ಹದಿನೇಳು ಸಾವಿರದಷ್ಟು ಹಣ ಪಡೆಯುತ್ತಾರಂತೆ. ಪ್ರತಿ ಸಂಚಿಕೆಗೆ ಹದಿನೇಳು ಸಾವಿರ ಅಂದರೆ ತಿಂಗಳಿಗೆ 30 ಸಂಚಿಕೆಯಿರುತ್ತದಾದ್ದರಿಂದ ಐದು ಲಕ್ಷಕ್ಕಿಂತ ಹೆಚ್ಚು ಹಣ ಟಿ ಆರ್‌ ಪಿ ಕಳ್ಳರಿಗೆ ಒಂದು ಧಾರಾವಾಹಿಯಿಂದಲೇ ಬರುತ್ತದೆ. ಇಲ್ಲಿ ನಿರ್ಮಾಪಕರ ಲೆಕ್ಕಾಚಾರ ಹೇಗಿರುತ್ತೆ ಅಂದರೆ ವಾಹಿನಿಯವರು ಪ್ರತಿ ಸಂಚಿಕೆಗೆ ಕೊಡುವ ಒಂದೂವರೆ ಲಕ್ಷದಲ್ಲಿ 80 ಸಾವಿರದಷ್ಟು ಹಣವನ್ನು ಮಾತ್ರ ಖರ್ಚು ಮಾಡಿ ತುಂಬ ಕಳಪೆಯಾಗಿ ಧಾರಾವಾಹಿಯ ಸಂಚಿಕೆಯನ್ನು ಚಿತ್ರೀಕರಿಸುತ್ತಾರೆ. ಬಳಿಕ ಕಳ್ಳಾಟಕ್ಕೆ ಅಂತ 17 ಸಾವಿರದಷ್ಟು ಹಣ ಕೊಟ್ಟು ಒಟ್ಟು ಒಂದು ಲಕ್ಷದಲ್ಲಿ ಇಡೀ ಸಂಚಿಕೆಯ ಖರ್ಚನ್ನು ತೂಗಿಸಿಕೊಳ್ಳುತ್ತಾರೆ. ಆಗ ಇವರಿಗೆ ಪ್ರತಿ ಸಂಚಿಕೆಗೆ ಐವತ್ತು ಸಾವಿರದಷ್ಟು ಹಣ ಉಳಿಯುತ್ತದೆ. ಇದರಿಂದ ಕಳ್ಳ ನಿರ್ಮಾಪಕರಿಗೆ ಪ್ರತಿ ಸಂಚಿಕೆಗೂ ಉತ್ತಮ ಕತೆ ಮಾಡುವ ಸಂಕಟವಿಲ್ಲ. ಟಿ ಆರ್‌ ಪಿ ಕಡಿಮೆ ಆಗುತ್ತೆ ಅದರಿಂದ ವಾಹಿನಿಯವರು ಧಾರಾವಾಹಿ ನಿಲ್ಲಿಸುತ್ತಾರೆ ಎಂಬ ಭಯವಿಲ್ಲ ʼಮೂರು ಬಿಟ್ಟು ನಿಂತವರು. ಅಂತ ಕಿರುತೆರೆ ಮಂದಿ ಮಾತಾಡಿಕೊಳ್ಳುತ್ತಾರೆ ಎಂಬ ಅವಮಾನದ ಗೆರೆಯಂತೂ ಯಾರ ಮುಖದಲ್ಲೂ ಇಲ್ಲ. ಇವರ ಧಾರಾವಾಹಿಗಳಿಂದ ನಟರು, ಬರಹಗಾರರು, ತಂತ್ರಜ್ಞರು ಬಿಟ್ಟು ಹೋದರೂ ಇವರಿಗೆ ಅದು ದೊಡ್ಡ ವಿಚಾರವಾಗುವುದಿಲ್ಲ.

ಮುಂದುವರೆಯುತ್ತದೆ....(ಮುಂದಿನ ಭಾಗದಲ್ಲಿ : ಹಿಂದೆ ಮಾಳವಿಕಾ ಅವಿನಾಶ್‌ ಕಳ್ಳ ನಿರ್ಮಾಪಕನಿಗೆ ಮುಟ್ಟಿಸಿದ ಬಿಸಿ ಹೇಗಿತ್ತು ? ವಾಹಿನಿಯೊಂದರಲ್ಲಿ ರೇಟಿಂಗ್‌ ನಿರ್ಮಾಪಕ ಮತ್ತು ಮೂಲ ನಿರ್ಮಾಪಕ ಅಂತ ಇಬ್ಬರು ಯಾಕಿರುತ್ತಾರೆ ? ಈ ಸಲ ಬಾರ್ಕ್‌ ನಲ್ಲಿ ಆಗುತ್ತಿರುವ ತನಿಖೆ ಯಾರ ಬುಡಕ್ಕೆ ಬೆಂಕಿ ಹಾಕುತ್ತೆ ? ಟಿ ಆರ್ ಪಿ ಕಳ್ಳಾಟದಲ್ಲಿ ಪ್ರಮುಖ ರಾಜಕೀಯ ಪಕ್ಷದ ನಾಯಕರೊಬ್ಬರು ಹಣ ಹಾಕಿದ್ದಾರಾ? ಸಿ ಸಿ ಬಿ ಪೊಲೀಸರು ಅದೊಂದು ಕಳ್ಳಾಟದ ವಿಡಿಯೋ ಹುಡುಕುತ್ತಿರುವುದು ಹೌದಾ ?

More from Filmibeat

English summary
Inside TRP Tampering in Kannada Entertainment Channels do you know How Ratings Are Manipulated.
Read more about: trp serials tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X