'ಮಿಸ್ಟರ್ ಮದಿಮಯೆ' ತುಳು ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್
ಕೋಸ್ಟಲ್‌ವುಡ್‌ನಲ್ಲಿ ಒಂದಷ್ಟು ಸಿನಿಮಾಗಳು ನಿರ್ಮಾಣವಾಗಿ ಪ್ರೇಕ್ಷಕರನ್ನು ರಂಜಿಸುತ್ತಿವೆ. ತುಳು ಸಿನಿಮಾ ನೋಡುವ ತುಳು ಸಿನಿರಸಿಕರು ಬಹಳಷ್ಟು ಮಂದಿ ಇದ್ದಾರೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗುವ ಸಿನಿಮಾಗಳು ಉತ್ತಮ ಗಳಿಕೆ ಕಾಣುವುದು ಇದೆ. ಇತ್ತೀಚಿನ ದಿನಗಳಲ್ಲಿ ಜನ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವ ಹವ್ಯಾಸ ಬೆಳೆಸಿಕೊಂಡಿರುವುದು ಉತ್ತಮ ಬೆಳವಣಿಗೆ.
ತುಳುವಿನಲ್ಲಿ 'ಮಿಸ್ಟರ್ ಮದಿಮಯೆ ' ಎನ್ನುವ ಹಾಸ್ಯ ಪ್ರಧಾನ ಚಿತ್ರ ತೆರೆಗೆ ಬಂದಿದೆ. ಸಿನಿಮಾ ನೋಡಿದವರು ಹೊಟ್ಟೆ ಹುಣ್ಣಾಗುವ ಹಾಗೆ ನಕ್ಕಿದ್ದಾರೆ. ಅಷ್ಟು ಸೊಗಸಾಗಿ ಮೂಡಿ ಬಂದಿದೆ ಮಿಸ್ಟರ್ ಮದಿಮಯೆ ಚಿತ್ರ. ಮನರಂಜನೆ ನೀಡುವ ಜೊತೆಗೆ ಸಮಾಜಕ್ಕೆ ಒಂದೊಳ್ಳೆಯ ಸಂದೇಶವನ್ನು ನೀಡುವ ಚಿತ್ರ ಇದಾಗಿದ್ದು, ಸಿನಿಮಾ ನೋಡಿದ ಪ್ರತಿಯೊಬ್ಬರೂ ಕೂಡ ಬಹಳ ಖುಷಿ ಪಟ್ಟಿದ್ದಾರೆ.

ವೆಂಚರ್ ಎಂಟರ್ ಟೈನ್ ಮೆಂಟ್ಸ್ ಸಾರಥ್ಯದಲ್ಲಿ , ಎಂ.ಎಂ.ಎಂ. ಗ್ರೂಪ್ಸ್ ನಿರ್ಮಾಣದ 'ಮಿಸ್ಟರ್ ಮದಿಮಯೆ' ಸಿನಿಮಾ ಮಸ್ಕತ್‌ನ ವೋಕ್ಸ್ ಮತ್ತು ಸಲಲಾದ ಸಿನಿಪೊಲಿಸ್ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದೆ. ಮಸ್ಕತ್‌ನಲ್ಲಿ ಇರುವಂತಹ ತುಳು ಸಿನಿರಸಿಕರಿಗೂ ಸಿನಿಮಾ ಇಷ್ಟವಾಗಿದೆ.
ಮಸ್ಕತ್ ನಲ್ಲಿ ಛಾಪು ಮೂಡಿಸಿದ ಚಿತ್ರ
ಎಂಎಂ ಗ್ರೂಪ್ಸ್ ಬ್ಯಾನರ್‌ನಡಿ 'ಮಿಸ್ಟರ್ ಮದಿಮಯೆ' ತುಳು ಸಿನಿಮಾ ಬಿಡುಗಡೆ ಆಗಿದೆ. ಮಂಗಳೂರಿನಲ್ಲಿ ಬಿಗ್ ಸಿನೆಮಾಸ್, ಸಿನಿಪೊಲಿಸ್, ಪಿವಿಆರ್, ಸುರತ್ಕಲ್‌ನಲ್ಲಿ ಸಿನೆಗ್ಯಾಲಕ್ಸಿ, ಪಡುಬಿದ್ರಿಯಲ್ಲಿ ಬಿಗ್ ಸಿನೆಮಾಸ್, ಉಡುಪಿ, ಪುತ್ತೂರಿನಲ್ಲಿ ಬಿಗ್ ಸಿನೆಮಾಸ್, ಬೆಳ್ತಂಗಡಿಯಲ್ಲಿ ಭಾರತ್, ಕಾರ್ಕಳದಲ್ಲಿ ರಾಧಿಕಾ ಹಾಗೂ ಪ್ಲಾನೆಟ್, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆ ಕಂಡಿದ್ದು ಪ್ರದರ್ಶನ ಕಾಣುತ್ತಿದೆ.

ಹಾಸ್ಯ ಪ್ರಧಾನ ಸಿನಿಮಾ
ನವೀನ್ ಜಿ ಪೂಜಾರಿ ನಿರ್ದೇಶನದ 'ಮಿಸ್ಟರ್ ಮದಿಮಯೆ' ಚಿತ್ರದಲ್ಲಿ ನಾಯಕನಾಗಿ ಸಾಯಿಕೃಷ್ಣ ಕುಡ್ಲ ಮಿಂಚಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಶ್ವೇತಾ ಸುವರ್ಣ, ರವಿಕಾಂತ್ ಪೂಜಾರಿ, ಜ್ಯೋತಿಷ್ ಶೆಟ್ಟಿ, ಸುನೀಲ್ ನೆಲ್ಲಿಗುಡ್ಡೆ, ಪಿಂಕಿ ರಾಣಿ ನಟಿಸಿದ್ದು ಕರಾವಳಿ ಜನತೆಯನ್ನು ರಂಜಿಸಿದ ಸಿನಿಮಾ ಇದಾಗಿದೆ. ಚಿತ್ರಕ್ಕೆ ಸಾಕಷ್ಟು ಪ್ರೋತ್ಸಾಹವನ್ನು ಕೂಡ ಕರಾವಳಿ ಜನತೆ ನೀಡಿದ್ದಾರೆ ಎಂದು ಹೇಳಿದರೆ ತಪ್ಪಗಲಾರದು. ಇನ್ನು ಈ ಸಿನಿಮಾದ ಕಥಾ ಹಂದರ ಮದುವೆ ಸಮಾರಂಭದ ಸುತ್ತ ನಡೆಯುವ ಕಥೆಗೆ ಹಾಸ್ಯದ ಲೇಪನ ಹಚ್ಚಲಾಗಿದೆ.
ಚಿತ್ರ ವೀಕ್ಷಿಸಿದ ಸಾಯಿಕೃಷ್ಣ ಕುಡ್ಲ
ಮಸ್ಕತ್‌ನಲ್ಲಿ 'ಮಿಸ್ಟರ್ ಮದಿಮಯೆ' ಸಿನಿಮಾ ರಿಲೀಸ್ ಆಗುವ ವೇಳೆ ಸ್ಪೆಷಲ್ ಪ್ರೀಮಿಯರ್ ಶೋಗೆ ಸಾಯಿ ಕೃಷ್ಣ ಕುಡ್ಲ ಸೇರಿದಂತೆ ಇಡೀ ಚಿತ್ರತಂಡ ಭಾಗಿ ಆಗಿತ್ತು. ಸಿನಿಮಾ ನೋಡುವ ವೇಳೆ ಸಿನಿರಸಿಕರ ಸಂಭ್ರಮ, ಶಿಳ್ಳೆ ಚಪ್ಪಾಳೆ ನೋಡಿ ಸಾಯಿಕೃಷ್ಣ ಬಹಳ ಖುಷಿ ಪಟ್ಟಿದ್ದಾರೆ. ಹಾಗೆಯೇ ಸಿನಿಮಾ ಮಾಡಿದ ಸಾರ್ಥಕತೆ ಅವರ ಮೊಗದಲ್ಲಿ ಎದ್ದು ಕಾಣುತ್ತಿದೆ.
ಸಮಾಜಕ್ಕೆ ಸಂದೇಶ ನೀಡುವ ಚಿತ್ರ
ಇನ್ನು ಸಂಪೂರ್ಣ ಹಾಸ್ಯ ಚಿತ್ರದಲ್ಲಿ ಒಳ್ಳೆಯ ಕತೆ ಇದೆ. ಸಮಾಜಕ್ಕೆ ಸಂದೇಶವೂ ಇದೆ. ಸಿನಿಮಾ ನೋಡಿದ ಅಭಿಮಾನಿಗಳು ಮಾತ್ರ ಸಿನಿಮಾ ಮಾಡಿದ ನಿರ್ದೇಶಕರನ್ನು ಹಾಡಿ ಹೊಗಳಿದ್ದಾರೆ. ಬಹುತೇಕ ಹೊಸ ಕಲಾವಿದರನ್ನು ಒಳಗೊಂಡಿರುವ ಈ ಚಿತ್ರದ ಹಾಡುಗಳು ಹಿಟ್ ಆಗಿದೆ. ಮಿಥುನ್ ಕೆ.ಎಸ್ ಹಾಗೂ ರಾಜೇಶ್ ಫೆರಾವೋ ಚಿತ್ರ ನಿರ್ಮಿಸಿದ್ದಾರೆ. ಕೆ.ಪಿ. ಮಿಲನ್ ಸಂಗೀತ, ಪ್ರಶಾಂತ್ ಧರ್ಮಸ್ಥಳ ಛಾಯಾಗ್ರಹಣವಿದೆ. ಸಿನಿಮಾ ಕೂಡ ಅಷ್ಟೇ ಅದ್ಭುತವಾಗಿ ಮೂಡಿ ಬಂದಿದ್ದು ಅಭಿಮಾನಿಗಳಿಗೆ ಬಹಳ ಖುಷಿ ನೀಡಿದೆ . 'ಮಿಸ್ಟರ್ ಮದಿಮಯೆ' ಚಿತ್ರ ಜನವರಿ 5 ರಂದು ಕರಾವಳಿಯಾದ್ಯಂತ ಬಿಡುಗಡೆ ಆಗಿತ್ತು.


Click it and Unblock the Notifications











