ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ; ನಟ ಪರ್ಲ್ ವಿ ಪುರಿಗೆ ಜಾಮೀನು
ಅಪ್ರಾಪ್ತೆ ಮೇಲೆ ಅತ್ಯಾಚಾರ ಮತ್ತು ಕಿರುಕುಳ ಆರೋಪದ ಮೇರೆಗೆ ಜೈಲು ಸೇರಿದ್ದ ಹಿಂದಿ ಕಿರುತೆರೆಯ ಖ್ಯಾತ ನಟ ಪರ್ಲ್ ವಿ ಪುರಿಗೆ ಜಾಮೀನು ಸಿಕ್ಕಿದೆ. ಜೂನ್ 4ರಂದು ಪರ್ಲ್ ವಿ ಪುರಿಯನ್ನು ಮುಂಬೈನ ವಾಲೀವ್ ಪೊಲೀಸರು ಬಂಧಿಸಿದ್ದರು.
''ಇಂದು (ಜೂನ್ 15) ಪರ್ಲ್ ವಿ ಪುರಿ ಪ್ರಕರಣದ ವಿಚಾರಣೆ ನಡೆಸಿದ ವಾಸೈ ಸೆಷನ್ಸ್ ಕೋರ್ಟ್ ನಮ್ಮ ಕಕ್ಷಿದಾರ ಪರ್ಲ್ ವಿ ಪುರಿಗೆ ಜಾಮೀನು ನೀಡಿದೆ,'' ಎಂದು ಪರ್ಲ್ ಪರ ವಕೀಲರಾದ ಜಿತೇಶ್ ಅಗರ್ವಾಲ್ ಸುದ್ದಿ ಖಚಿತಪಡಿಸಿದ್ದಾರೆ. ಸುಮಾರು 11 ದಿನಗಳ ನ್ಯಾಯಾಂಗ ಬಂಧನದ ಬಳಿಕ ಪರ್ಲ್ ಹೊರಬರುತ್ತಿದ್ದಾರೆ. ಜೂನ್ 7ರಂದು ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಜಾಮೀನು ನಿರಾಕರಿಸಿ ವಿಚಾರಣೆಯನ್ನು ಕೋರ್ಟ್ ಮುಂದೂಡಿತ್ತು.
ಎರಡು ವರ್ಷಗಳ ಹಿಂದೆ 2019ರಲ್ಲಿ ಧಾರಾವಾಹಿಯಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ, ಬಾಲಕಿ ಮೇಲೆ ಅತ್ಯಾಚಾರ ವೆಸಗಿದ್ದಾರು ಮತ್ತು ಕಿರುಕುಳ ನೀಡಿದ್ದರು ಎಂದು ಸಂತ್ರಸ್ತೆ ಕುಟುಂಬದವರು ಆರೋಪ ಮಾಡಿ ದೂರು ದಾಖಲಿಸಿದ್ದರು.

ಇತ್ತೀಚಿಗಷ್ಟೆ ಸಂತ್ರಸ್ತೆ ತಾಯಿ ಏಕ್ತಾ ಶರ್ಮಾ ಪರ್ಲ್ ವಿ ಪುರಿ ಬೆಂಬಲಕ್ಕೆ ನಿಲ್ಲುವ ಮೂಲಕ ಅಚ್ಚರಿ ಮೂಡಿಸಿದ್ದರು. ತನ್ನ ಮಗಳನ್ನು ಸುಪರ್ದಿಗೆ ಪಡೆಯುವ ಉದ್ದೇಶದಿಂದ ಪರ್ಲ್ ವಿ ಪುರಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಸಂತ್ರಸ್ತೆ ತಂದೆಯ ವಿರುದ್ಧ ಏಕ್ತಾ ಶರ್ಮಾ ಆರೋಪ ಮಾಡಿದ್ದರು.
31 ವರ್ಷದ ನಟ ಪರ್ಲ್ ವಿ ಪುರಿ ವಿರುದ್ಧ ಸೆಕ್ಷನ್ 376 ಮತ್ತು 2012ರ ಪೋಕ್ಸೋ ಕಾಯ್ದೆಯಡೆ ಪ್ರಕರಣ ದಾಖಲಾಗಿದೆ. ಪರ್ಲ್ ವಿ ಪುರಿ ಬಂಧನ ಖಂಡಿಸಿ ಕಿರುತೆರೆಯ ಅನೇಕ ಕಲಾವಿದರು ಬೇಸರ ವ್ಯಕ್ತಪಡಿಸಿದ್ದರು. ಪರ್ಲ್ ಬೆಂಬಲಕ್ಕೆ ನಿಲ್ಲುವ ಮೂಲಕ ಬಿಡುಗಡೆಗೆ ಆಗ್ರಹಿಸಿದ್ದರು.


Click it and Unblock the Notifications











