ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾದ ನಟ ಸಿದ್ದು ಮೂಲಿಮನಿ
ನಟ ಸಿದ್ದು ಮೂಲಿಮನಿ ಕಿರುತೆರೆ ಹಾಗೂ ಸ್ಯಾಂಡಲ್‌ವುಡ್ ಜೊತೆಗೆ ಹೊಸ ಜೀವನಕ್ಕೂ ಕಾಲಿಟ್ಟಿದ್ದು, ಈಗ ಫುಲ್ ಬ್ಯುಸಿಯಾಗಿದ್ದಾರೆ. ಈ ನಡುವೆಯೂ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಸಿದ್ದು ಮೂಲಿಮನಿ ಅವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ ಕಿರುತೆರೆ. ಹಾಗಾಗಿ ಸಿದ್ದು ಕಿರುತೆರೆಯನ್ನು ಬಹಳ ಇಷ್ಟಪಡುತ್ತಾರೆ.
ಚಿಕ್ಕವರಿದ್ದಾಗಿನಿಂದಲೂ ನಟಿಸಬೇಕು ಎಂದು ಕನಸು ಕಾಣುತ್ತಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಅವರಂತೆ ತಾವು ಒಬ್ಬ ಉತ್ತಮ ನಟನಾಗಬೇಕು ಎಂದು ಸಿನಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಚಿಕ್ಕವಯಸ್ಸಿನಿಂದಲೂ ತಾನೊಬ್ಬ ನಟನಾಗಬೇಕು ಎಂದು ಸಿದ್ದು ಮೂಲಿಮನಿ ಕನಸು ಕಂಡವರು. 2015ರಲ್ಲಿ 'ರಂಗಿತರಂಗ' ಸಿನಿಮಾದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.

ಅನುಪ್ ಭಂಡಾರಿ ನಿರ್ದೇಶನದ 'ರಂಗಿತರಂಗ' ಸಿನಿಮಾಗೆ ಸಿದ್ದು ಅವರು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ರಂಗಿತರಂಗ ಚಿತ್ರದ ಮೂಲಕ ಸಿನಿ ಪಯಣವನ್ನು ಆರಂಭಿಸಿದರು. ಬಳಿಕ 'ಕೃಷ್ಣ ರುಕ್ಕು', 'ಒನ್ಸ್ ಮೋರ್ ಕೌರವʼ ಸಿನಿಮಾಗಳಲ್ಲಿ ನಟಿಸಿದರು. 2017 ರಲ್ಲಿ ತೆರೆಕಂಡ ಟೋರ ಟೋರ ಚಿತ್ರದಲ್ಲಿ ಅಭಿನಯಿಸಿದ್ದರು. ನಂತರ 2018 ರಲ್ಲಿ ತೆರೆಕಂಡ ಲಂಬೋದರ ಚಿತ್ರದಲ್ಲಿ ನಟಿಸಿದ್ದಾರೆ.
ಸಿದ್ದು ನಟಿಸಿದ ಚಿತ್ರಗಳು
ಪುನಃ ಅನುಪ್ ಭಂಡಾರಿ ಅವರ 'ರಾಜರಥ' ಸಿನಿಮಾದಲ್ಲೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. 'ವಿಕ್ರಾಂತ್ ರೋಣ' ಚಿತ್ರದಲ್ಲಿ ಮುನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಲಂಬೋದರ' ಹಾಗೂ 'ಬಸವನಗುಡಿ ಬೆಂಗಳೂರು', 'ಸಾರ್ವಜನಿಕರಿಗೆ ಸುವರ್ಣಾವಕಾಶ' ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ, 'ಧರಣಿ ಮಂಡಲ ಮಧ್ಯದೊಳಗೆ', 'ಅಭಿರಾಮ ಚಂದ್ರ', 'ಓಮಿನಿ', 'ಹ್ಯಾಪಿ ಬರ್ತ್ಡೇ ಟು ಮಿ', 'ಧಮಾಕ', 'ನಂದಿನಿ' ಚಿತ್ರಗಳಲ್ಲಿ ಸಿದ್ದು ನಟಿಸಿದ್ದಾರೆ.

ಕಿರುತೆರೆಯಲ್ಲಿ ಸಿದ್ದು ಮೂಲಿಮನಿ ಬ್ಯುಸಿ
'ಪಾರು' ಧಾರಾವಾಹಿಯಲ್ಲಿ ಪ್ರೀತು ಪಾತ್ರದಲ್ಲಿ ಗಮನ ಸೆಳೆದು ಸಿದ್ದು ಮೂಲಿಮನಿ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. 'ಅನುರಾಗ ಸಂಗಮ', 'ಒಂದೂರಲ್ಲಿ ರಾಜರಾಣಿ', 'ಕೃಷ್ಣ ತುಳಸಿ' ಸೀರಿಯಲ್‌ಗಳಲ್ಲಿ ಸಿದ್ದು ಅವರು ನಟಿಸಿದ್ದಾರೆ. ಇದಲ್ಲದೇ ಡ್ಯಾನ್ಸ್ ಶೋ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾರೆ. ಕಿರುತೆರೆಯಲ್ಲೇ ನಟಿ ಪ್ರಯಾ ಜೆ ಆಚಾರ್ ಅವರ ಪರಿಚಯವಾಗಿ ಪ್ರೀತಿಸಿ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸೈಲೆಂಟ್ ಆಗಿ ಸಕ್ಸಸ್ ಕಾಣುತ್ತಿರುವ ನಟ
ಇನ್ನು ಸದ್ಯ ಸಿದ್ದು ಅವರ ಕೈಯಲ್ಲಿ ಸಾಕಷ್ಟು ಚಿತ್ರಗಳಿದ್ದು, 'ಗೊಂಬೆ ರಾಮ', 'ಅಭಿರಾಮಚಂದ್ರ', 'ಅಜ್ಷಾತವಾಸಿ' ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. 'ಅಜ್ಞಾತವಾಸಿ' ಚಿತ್ರವು ಗುಲ್ಟು ಖ್ಯಾತಿಯ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿದೆ.

ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ರಂಗಾಯಣ ರಘು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರೆ, ಸಿದ್ದು ಮೂಲಿಮನಿ ಹಾಗೂ ಪಾವನ ಗೌಡ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ನಲ್ಲಿ ಸಿದ್ದು ಮೂಲಿಮನಿ ಅವರು ಸೈಲೆಂಟ್ ಆಗಿ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಲು ಮುಂದಾಗಿದ್ದಾರೆ. ಹೀಗೆ ಸೈಲೆಂಟ್ ಆಗಿ ಸಕ್ಸಸ್ ಕಾಣುತ್ತಿರುವ ಸಿದ್ದು, ಮುಂದೆ ಒಂದು ದಿನ ಬೇಡಿಕೆಯ ನಟನಾಗುವುದರಲ್ಲಿ ಅನುಮಾನವಿಲ್ಲ.


Click it and Unblock the Notifications











