"ಕ್ರೈಸ್ತ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡಿದ್ದೇನೆ.. ಅದರಲ್ಲೇನಿದೆ?"– ಕಿರುತೆರೆ ನಟ ವಿವಿಯನ್
ಹಿಂದಿಯ ಜನಪ್ರಿಯ ಕಿರುತೆರೆ ನಟ ವಿವಿಯನ್ ಡಿಸೇನಾ. ತನ್ನ ಬದುಕಿನ ಖಾಸಗಿ ವಿಚಾರಗಳನ್ನು ಮಾಧ್ಯಮಗಳ ಮುಂದೆ ಎಂದೂ ತಂದಿದ್ದೇ ಇಲ್ಲ. ಸಾರ್ವಜನಿಕ ಬದುಕಿನಲ್ಲಿ ಇದ್ದರೂ, ವಿವಿಯನ್ ಡಿಸೇನಾ ತನ್ನ ಕುಟುಂಬವನ್ನು ಲೈಮ್‌ಲೈನ್‌ನಿಂದ ದೂರವೇ ಇಟ್ಟಿದ್ದಾರೆ.
ಇತ್ತೀಚೆಗೆ ವಿವಿಯನ್ ಡಿಸೇನಾ ಬಗ್ಗೆ ಗುಟ್ಟಾಗಿ ಮದುವೆ ಆಗಿದ್ದಾರೆ ಅನ್ನೋ ಸುದ್ದಿ ಹಲ್‌ಚಲ್ ಎಬ್ಬಿಸಿತ್ತು. ಈ ಬಗ್ಗೆ ಕಿರುತೆರೆ ನಟ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ಕಿರುತೆರೆ ನಟ ವಿವಿಯನ್ ಡಿಸೇನಾ ಎರಡೆರಡು ಶಾಕಿಂಗ್ ಸುದ್ದಿಗಳನ್ನು ನೀಡಿದ್ದಾರೆ.

ಕಿರುತೆರೆ ನಟ ವಿವಿಯನ್ ಡಿಸೇನಾ ತಾವು ಒಂದು ವರ್ಷದ ಹಿಂದೆನೇ ಮದುವೆ ಆಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಈಜಿಪ್ಟ್‌ನ ಮಾಜಿ ಪತ್ರಕರ್ತ ನೌರಾನ್ ಅಲಿಯನ್ನು ವಿವಾಹವಾಗಿದ್ದಾಗಿ ಹೇಳಿದ್ದಾರೆ. ಅಲ್ಲದೆ ತನಗೆ ನಾಲ್ಕು ತಿಂಗಳ ಮಗಳು ಇದ್ದಾಳೆಂದು ರಿವೀಲ್ ಮಾಡಿದ್ದಾರೆ.
ಮದುವೆಯಾಗಿದ್ದೇನೆ.. ಅದರಲ್ಲೇನಿದೆ?
ವಿವಿಯನ್ ಡಿಸೇನಾ ಸೆಲೆಬ್ರೆಟಿಯಾಗಿದ್ದರೂ, ತನ್ನ ಬದುಕಿನ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ. ಈಗ ಸಂದರ್ಶನವೊಂದರಲ್ಲಿ ಮದುವೆ ಆಗಿರುವ ಮ್ಯಾಟರ್ ಅನ್ನು ರಿವೀಲ್ ಮಾಡಿದ್ದು, ಅದರಲ್ಲೇನು ದೊಡ್ಡ ವಿಷಯ ಎಂದು ಹೇಳಿದ್ದಾರೆ. " ಹೌದು, ನಾನು ಮದುವೆ ಆಗಿದ್ದೇನೆ. ನನಗೆ ನಾಲ್ಕು ತಿಂಗಳ ಮಗಳು ಇದ್ದಾಳೆ. ಇದೇನು ದೊಡ್ಡ ವಿಷಯ?" ಅಂತ ಪ್ರಶ್ನೆ ಮಾಡಿದ್ದಾರೆ.
"ನಮ್ಮ ಮದುವೆ ವಿಷಯವನ್ನು ಅನೌನ್ಸ್ ಮಾಡಬೇಕು ಅಂತ ಇದ್ದೆವು. ಮಗಳ ಬಗ್ಗೆನೂ ಹೇಳಬೇಕು ಅಂತ ಇದ್ದೆವು ಆದರೆ ಸರಿಯಾದ ಸಮಯಕ್ಕೆ ಕಾಯುತ್ತಿದ್ದೆವು. ತಂದೆಯಾಗಿರೋ ಖುಷಿಕೊಟ್ಟಿದೆ. ಇನ್ನೇನು ಕೇಳಲು ಸಾಧ್ಯ? ನನ್ನ ಮಗಳನ್ನು ಎತ್ತಿಕೊಂಡಾಗ ನಾನು ಜಗತ್ತಿನ ತುತ್ತತುದಿಯಲ್ಲಿ ಇದ್ದೇನೆ ಎಂದು ಎನಿಸುತ್ತೆ. ನನ್ನ ಮಗಳಿಗೆ ಲಯನ್ ವಿವಿಯನ್ ಎಂದು ಹೆಸರಿಟ್ಟಿದ್ದೇವೆ" ಎಂದು ವಿವಿಯನ್ ಡಿಸೇನಾ ಹೇಳಿಕೊಂಡಿದ್ದಾರೆ.

"ಇಸ್ಲಾಂ ಅನ್ನು ಫಾಲೋ ಮಾಡುತ್ತಿದ್ದೇನೆ"
ಇದೇ ಸಂದರ್ಶನದಲ್ಲಿ ನಾನು ಇಸ್ಲಾಂ ಧರ್ಮವನ್ನು ಫಾಲೋ ಮಾಡುತ್ತಿದ್ದೇನೆ ಎಂದು ವಿವಿಯನ್ ಡಿಸೇನಾ ಖಚಿತ ಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ವಿಷಯ ಕೂಡ ಚರ್ಚೆಯಲ್ಲಿ ಇತ್ತು. " ನನ್ನ ಬದುಕಿನಲ್ಲಿ ಅಂತಹ ಬದಲಾವಣೆ ಏನೂ ಆಗಿಲ್ಲ. ನಾನು ಕ್ರಿಶ್ಚಿಯನ್ ಧರ್ಮದಲ್ಲಿ ಹುಟ್ಟಿದ್ದೇನೆ. ಈಗ ಇಸ್ಲಾಂ ಧರ್ಮವನ್ನು ಫಾಲೋ ಮಾಡುತ್ತಿದ್ದೇನೆ." ಎಂದು ವಿವಿಯನ್ ಹೇಳಿದ್ದಾರೆ.
"2019 ಪವಿತ್ರ ರಂಜಾನ್ ತಿಂಗಳಲ್ಲಿ ಇಸ್ಲಾಂ ಧರ್ಮವನ್ನು ಫಾಲೋ ಮಾಡುತ್ತಿದ್ದೇನೆ. ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುವುದರಿಂದ ನನಗೆ ಶಾಂತಿ ಹಾಗೂ ನೆಮ್ಮದಿ ಸಿಗುತ್ತಿದೆ. ಈ ಮೂಲಕ ನಾನು ಬೇಡದ ಎಲ್ಲಾ ಊಹಾ ಪೋಹಗಳಿಗೂ ತೆರೆ ಎಳೆಯುತ್ತಿದ್ದೇನೆ." ಎಂದು ವಿವಿಯನ್ ಡಿಸೇನಾ ಸ್ಪಷ್ಟನೆ ನೀಡಿದ್ದಾರೆ.
ಹಿಂದಿಯ ಜನಪ್ರಿಯ ನಟ ವಿವಿಯನ್ ಡಿಸೇನಾ
ಹಿಂದಿಯ ಜನಪ್ರಿಯ ಧಾರಾವಾಹಿಗಳಲ್ಲಿ ವಿವಿಯನ್ ಡಿಸೇನಾ ನಟಿಸಿದ್ದಾರೆ. 'ಪ್ಯಾರ್ ಕಿ ಯೇ ಏಕ್ ಕಹಾನಿ', 'ಮಧುಬಾಲ: ಏಕ್ ಇಶ್ಕ್ ಏಕ್ ಜುನೂನ್' ಅಂತ ಮೆಗಾ ಧಾರಾವಾಹಿಗಳಲ್ಲಿ ವಿವಿಯನ್ ಡಿಸೇನಾ ನಟಿಸಿದ್ದಾರೆ.
ವಿವಿಯನ್ ಡಿಸೇನಾ ನಟಿ ವಹ್ಬಿಜ್ ದೊರಾಬ್ಜಿಯನ್ನು ವಿವಾಹವಾಗಿದ್ದರು. 'ಪ್ಯಾರ್ ಕಿ ಯೇ ಏಕ್ ಕಹಾನಿ' ಧಾರಾವಾಹಿ ವೇಳೆ ಇಬ್ಬರಿಗೂ ಲವ್ ಆಗಿತ್ತು. 2013ರಲ್ಲಿ ಮದುವೆಯಾಗಿದ್ದ ಜೋಡಿ 2016ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. 2021ಕ್ಕೆ ಇಬ್ಬರಿಗೂ ವಿಚ್ಛೇದನ ಸಿಕ್ಕಿತ್ತು.


Click it and Unblock the Notifications











