ಈ ಕಿರುತೆರೆ ನಟಿ ಮೇಕಪ್ ಅಕಾಡೆಮಿ ಮಾಲೀಕರು ಹೌದು; ಯಾರಿವರು ಗೊತ್ತೇ?
ನಟಿಯಾಗಬೇಕು, ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬುದು ಆಕೆಯ ಕನಸಾಗಿತ್ತು. ಅಂತೆಯೇ ಕಿರುತೆರೆಗೆ ಕಾಲಿಟ್ಟ ಈಕೆ ಬಹುದಿನದ ಕನಸನ್ನು ಕೂಡಾ ನನಸು ಮಾಡಿಕೊಂಡಿದ್ದರು. ಆದರೆ ಇದೀಗ ನಟನೆಯಿಂದ ದೂರವಿರುವ ಈಕೆ ಸದ್ಯ ಮೇಕಪ್ ಆರ್ಟಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದ ಹಾಗೇ ನಾವಿಂದು ಮಾತನಾಡುತ್ತಿರುವುದು ಕಾವೇರಿ ಬಾಗಲಕೋಟೆ ಅವರ ಬಗ್ಗೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಉತ್ತರಕನ್ನಡ ಸೊಬಗಿನ ಆಡುಭಾಷೆಯ 'ಗಿಣಿರಾಮ' ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು ನಟಿ ಕಾವೇರಿ. 'ಗಿಣಿರಾಮ' ಧಾರಾವಾಹಿಯಲ್ಲಿ ನಾಯಕ ಶಿವರಾಮು ತಂಗಿ ಸೀಮಾ ಆಗಿ ಕಿರುತೆರೆಗೆ ಕಾಲಿಟ್ಟ ಕಾವೇರಿ ಕಾಣಿಸಿಕೊಂಡಿದ್ದು ಪೋಷಕ ಪಾತ್ರದಲ್ಲಿ ಆದರೂ ತಮ್ಮ ನಟನೆಯ ಮೂಲಕ ಮೋಡಿ ಮಾಡಿರುವ ಬೆಡಗಿ.

ಮೊದಲ ಧಾರಾವಾಹಿಯಲ್ಲಿಯೇ 'ಬೆಸ್ಟ್ ಸಹೋದರಿ' ಪ್ರಶಸ್ತಿಯನ್ನು ಪಡೆದುಕೊಂಡಿರುವ ಕಾವೇರಿ ತದ ನಂತರ ಕಾರಣಾಂತರಗಳಿಂದ ಸೀಮಾ ಪಾತ್ರದಿಂದ ಹೊರಬಂದಿದ್ದರು. ಇನ್ನು ಕಾವೇರಿ ಅವರು ಶಾಲಾ, ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಕ್ರಿಯರಾಗಿ ತೊಡಗಿಸಿಕೊಂಡವರು. ಬಿ.ಕಾಂ ಪದವೀಧರೆಯಾಗಿರುವ ಕಾವೇರಿ ನಂತರ ಬದಲಾದುದು ಸೀಮಾಳಾಗಿ. ಮೊದಲ ಆಡಿಶನ್ ನಲ್ಲಿ ಆಯ್ಕೆಯಾದ ಈಕೆಗೆ ಧಾರಾವಾಹಿಯಲ್ಲಿ ಅಭಿನಯಿಸಲು ಕಷ್ಟವಾಗಲಿಲ್ಲ.
ಹೌದು, ಬಾಗಲಕೋಟೆ ಮೂಲದವರಾದ ಕಾವೇರಿ ಅವರಿಗೆ ಉತ್ತರ ಕನ್ನಡ ಭಾಷೆ ತಿಳಿದಿರುವ ಕಾರಣ ಸೀಮಾ ಪಾತ್ರದಲ್ಲಿ ನಟಿಸಲು ಕಷ್ಟವಾಗಲಿಲ್ಲ. ಅಪ್ಪನ ಮುದ್ದಿನ ಮಗಳಾಗಿರುವ ಸೀಮಾಳಿಗೆ ಅಣ್ಣ ಎಂದರೆ ಪ್ರಾಣ. ಇನ್ನು ಅತ್ತಿಗೆಯನ್ನು ಸ್ನೇಹಿತೆಯಂತೆ ನೋಡಿಕೊಳ್ಳುವಂತಹ ಮನಸ್ಸಿನ ಹುಡುಗಿಯಾಗಿ ತೆರೆ ಮೇಲೆ ಮೋಡಿ ಮಾಡಿದ ಕಾವೇರಿ ವೀಕ್ಷಕರ ಮನ ಸೆಳೆದಿದ್ದಾರೆ ಎಂದರೆ ಅದಕ್ಕೆ ಅವರು ಪಡೆದ 'ಬೆಸ್ಟ್ ಸಹೋದರಿ' ಪ್ರಶಸ್ತಿಯೇ ಕಾರಣ.

ಅಂದ ಹಾಗೇ ಕಾವೇರಿ ಅವರ ನಿಜ ಜೀವನಕ್ಕೂ, ಸೀಮಾ ಪಾತ್ರಕ್ಕೂ ಸಾಮ್ಯತೆ ಇದ್ದ ಕಾರಣ ಆರಾಮವಾಗಿ ಸೀಮಾ ಪಾತ್ರದಲ್ಲಿ ನಟಿಸಲು ಸಾಧ್ಯವಾಯಿತು ಎಂಬುದು ಕಾವೇರಿಯವರ ಅಂಬೋಣ. ಮಾತ್ರವಲ್ಲದೇ ಸೀಮಾ ಪಾತ್ರದ ಮೂಲಕ ಕರುನಾಡಿನಾದ್ಯಂತ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿರುವ ಕಾವೇರಿಯವರಿಗೆ ಪರಭಾಷೆಯಿಂದಲೂ ಅವಕಾಶಗಳು ಬರುತ್ತಿತ್ತು.
ಅಮ್ಮ ಮತ್ತು ಅಕ್ಕನ ಸಹಕಾರದಿಂದಲೇ ನಟನೆಗೆ ಕಾಲಿಟ್ಟ ಕಾವೇರಿ ಬಾಗಲಕೋಟೆಯವರು ಮುಂದೆ ಮೇಕಪ್ ಆರ್ಟಿಸ್ಟ್ ಆಗಿ ಭಡ್ತಿ ಪಡೆದರು. ಇದೀಗ ತಮ್ಮ ಊರಿನಲ್ಲಿ ಮೇಕಪ್ ಕೋರ್ಸ್ ತರಗತಿಯನ್ನು ನಡೆಸುತ್ತಿರುವ ಕಾವೇರಿಯವರು ಈಗಾಗಲೇ ಸುಮಾರು ಜನರಿಗೆ ತರಬೇತಿ ನೀಡಿ ಸೈ ಎನಿಸಿಕೊಂಡಿದ್ದಾರೆ.
ಇನ್ನು ಸೈನಿಕ ವಿಠ್ಠಲ್ ಹಿರಣ್ಣನವರ್ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ಕಾವೇರಿ ಅವರದ್ದು ಪ್ರೇಮ ವಿವಾಹ ಹೌದು. ಬರೋಬ್ಬರಿ ಎಂಟು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಈ ಜೋಡಿ ಕಳೆದ ವರ್ಷವಷ್ಟೇ ಗುರು ಹಿರಿಯರ ಆಶೀರ್ವಾದ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.


Click it and Unblock the Notifications











