ಹೆಸರಿನ ಸಮೇತ 5 ತಿಂಗಳ ಬಳಿಕ ಮಗನನ್ನು ಪರಿಚಯಿಸಿದ ರಾಧಿಕಾ ರಾವ್
'ರಾಧಾ ಕಲ್ಯಾಣ' ಧಾರಾವಾಹಿಯ ನಟಿ ರಾಧಿಕಾ ರಾವ್ ಗಂಡು ಮಗುವಿಗೆ ಜನ್ಮ ನೀಡಿ 5ತಿಂಗಳಾಗಿದೆ. ಇದೀಗ ತಮ್ಮ ಮಗನ ನಾಮಕರಣವನ್ನು ನೆರವೇರಿಸಿದ್ದು, ಕಂದನ ಫೋಟೋವನ್ನು ರಿವೀಲ್ ಮಾಡಿದ್ದಾರೆ.
ನಟಿ ರಾಧಿಕಾ ರಾವ್ 'ಮಂಗಳೂರ್ ಹುಡ್ಗಿ ಹುಬ್ಳಿ ಹುಡ್ಗ' ಹಾಗೂ 'ರಾಧಾ ಕಲ್ಯಾಣ' ಸೀರಿಯಲ್‌ಗಳ ಮೂಲಕ ಮನೆ ಮಾತಾಗಿದ್ದರು. ತುಳು ಕಿರುತೆರೆಯಲ್ಲೂ ಮಿಂಚಿದ್ದ ನಟಿ ಈಕೆ.
ಇತ್ತೀಚೆಗೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಕರಾವಳಿ ನಟಿ ರಾಧಿಕಾ ರಾವ್ ಸದ್ಯ ಮೊದಲ ಮಗುವಿನ ಆರೈಕೆಯಲ್ಲಿ ಬ್ಯೂಸಿಯಾಗಿದ್ದಾರೆ ಎಂಬ ಸತ್ಯವೂ ಎಲ್ಲರಿಗೂ ಗೊತ್ತಿರುವುದೇ.

ಸ್ನೇಹಿತ ಆಕರ್ಷ್ ಜೊತೆಗೆ ದಾಂಪತ್ಯ
ರಾಧಿಕಾ ರಾವ್ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆಕರ್ಷ್ ಎಂಬುವರ ಜೊತೆಗೆ ಸಪ್ತಪದಿ ತುಳಿದ ಈ ಜೋಡಿ ಈಗ ತಂದೆ ತಾಯಿಯಾಗಿ ಪ್ರಮೋಷನ್ ತೆಗೆದುಕೊಂಡಿದ್ದಾರೆ. ರಾಧಿಕಾ ಮತ್ತು ಆಕರ್ಷ್ ಭಟ್ ಇಬ್ಬರೂ ಸ್ನೇಹಿತರಾಗಿದ್ದರು. ಬಳಿಕ ಪ್ರೀತಿಯ ಬಲೆಯಲ್ಲಿ ಬಿದ್ದು, ಮನೆಯವರೆಲ್ಲಾ ಒಪ್ಪಿಕೊಂಡ ನಂತರ ಕುಟುಂಬದ ಸಮ್ಮುಖದಲ್ಲಿ ವಿವಾಹವಾದರು. ರಾಧಿಕಾ ಪತಿ ಆಕರ್ಷ್ ಭಟ್ ಇಂಟರ್ನ್ಯಾಷನಲ್ ಮ್ಯಾಜೀಷಿಯನ್ ಮತ್ತು ಮೈಂಡ್ ರೀಡರ್ ಆಗಿದ್ದಾರೆ. ಆಕರ್ಷ್ ಕೂಡ ಮೂಲತಃ ಮಂಗಳೂರಿನವರು. ಕಳೆದ ಐದು ತಿಂಗಳ ಹಿಂದೆ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದರು.
ಮಗುವಿನ ಫೋಟೋ ರಿವೀಲ್
ರಾಧಿಕಾ ಇಲ್ಲಿಯವರೆಗೆ ತಮ್ಮ ಮಗನ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಐದು ತಿಂಗಳು ತುಂಬಿದ ಈ ಸಂದರ್ಭದಲ್ಲಿ ತಮ್ಮ ಮಗುವಿಗೆ ನಾಮಕರಣವನ್ನು ನೆರವೇರಿಸಿದ್ದಾರೆ. ಕಂದನಿಗೆ ಹೆಸರಿಟ್ಟು, ಮಗುವಿನ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮಗನಿಗೆ ಅಗಸ್ತ್ಯ ಎಂದು ಹೆಸರನ್ನಿಟ್ಟಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಮಗು ನಿಮ್ಮ ಹಾಗೆಯೇ ಇದೆ ಎಂದು ಕಮೆಂಟ್ ಮಾಡಿದ್ದು, ಕೆಲವರು ಮಗುವಿಗೆ ದೃಷ್ಟಿಯಾದೀತು ಎಂದು ಹೇಳಿದ್ದಾರೆ. ಮುದ್ದು ಮಗುವಿನ ಫೋಟೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಧಾರಾವಾಹಿಗಳಲ್ಲಿ ರಾಧಿಕಾ ಅಭಿನಯ
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಂಗಳೂರು ಹುಡ್ಗಿ, ಹುಬ್ಬಳ್ಳಿ ಹುಡ್ಗ' ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ನವಿರಾದ ಪ್ರೇಮಕಥೆಯನ್ನು ಹಾಸ್ಯವಾಗಿ ಪ್ರದರ್ಶಿಸಿದ್ದ ಈ ಧಾರಾವಾಹಿ ಅಂತೂ ಜನರ ಮನಸ್ಸನ್ನು ಸೆಳೆದು ಬಹುಬೇಗನೆ ಹಿಟ್ ಆಗಿತ್ತು. ಮನೆಮನಗಳಲ್ಲಿ 'ಮಂಗಳೂರು ಹುಡ್ಗಿ ಅಮೂಲ್ಯ' ಆಗಿಯೇ ಗುರುತಿಸಿಕೊಂಡರು. ಇದಾದ ಬಳಿಕ ರಾಧಿಕಾ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯುವರಾಣಿ'ಯಲ್ಲಿ ಇಶಾ ಆಗಿ ನಟಿಸಿ ಸೈ ಎನಿಸಿಕೊಂಡರು. ಕೇವಲ ಧಾರಾವಾಹಿ ಅಲ್ಲದೇ, ಸಿನಿಮಾ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲೂ ಬಣ್ಣ ಹಚ್ಚಿದರು.
ಮಗನ ಹಾರೈಕೆಯಲ್ಲಿ ರಾಧಿಕಾ ಬ್ಯುಸಿ
'ಪುದರುಗೊಂಜಿ ಬುಡೆದಿ', 'ಏಸ' ಎಂಬ ತುಳು ಸಿನಿಮಾಗಳಲ್ಲಿ ಅಭಿನಯಿಸಿದ್ದ ರಾಧಿಕಾ ರಾವ್ 'ಲುಂಗಿ' ಎಂಬ ಸಿನಿಮಾದಲ್ಲಿಯೂ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದರು. ಇನ್ನು ಸೃಜನ್ ಲೋಕೇಶ್ ಜೊತೆ'ಎಲ್ಲಿದ್ದೆ ಇಲ್ಲಿ ತನಕ' ಎಂಬ ಸಿನಿಮಾದಲ್ಲೂ ನಟಿಸಿದ್ದರು. ನಟನೆಯ ಹೊರತಾಗಿ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ರಾಧಿಕಾ ಗುರುತಿಸಿಕೊಂಡಿದ್ದಾರೆ. ಜ್ಯುವೆಲ್ಲರಿ ಜಾಹೀರಾತು, ಧಾತ್ರಿ ಹೇರ್ ಆಯಿಲ್, 2016ರ ಹ್ಯಾಂಗ್ಯೂ ಕ್ಯಾಲೆಂಡರ್ ನಲ್ಲಿ ರೂಪದರ್ಶಿಯಾಗಿ ಮಿಂಚಿದರು. ಗರ್ಭಿಣಿಯಾದ ಬಳಿಕ ಕುಟುಂಬಕ್ಕೆ ಹೆಚ್ಚು ಸಮಯಕೊಟ್ಟ ರಾಧಿಕಾ ಸದ್ಯ ಮಗನ ಹಾರೈಕೆಯಲ್ಲಿ ತೊಡಗಿದ್ದಾರೆ.


Click it and Unblock the Notifications











