Actress Rajini: 'ಅಂಬುಜಾ'ಳಾಗಿ ರಂಜಿಸಲು ರೆಡಿಯಾದ 'ಹಿಟ್ಲರ್ ಕಲ್ಯಾಣ' ಸೀರಿಯಲ್‌ನ ಅಂತರಾ
ಕಿರುತೆರೆಯ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟ ಅನೇಕರು ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ತೀರಾ ಮಾಮೂಲಿಯಾಗಿರುವ ಸಂಗತಿ. ಕಿರುತೆರೆಯ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ರಾಧಿಕಾ ಪಂಡಿತ್, ರಚಿತಾ ರಾಮ್, ಅದಿತಿ ಪ್ರಭುದೇವ, ಸಂಗೀತಾ ಶೃಂಗೇರಿ, ಮೇಘಾ ಶೆಟ್ಟಿ, ಸುಪ್ರೀತಾ ಸತ್ಯನಾರಾಯಣ, ತೇಜಸ್ವಿನಿ ಶೇಖರ್, ಬೃಂದಾ ಆಚಾರ್ಯ ಹೀಗೆ ಅನೇಕ ಕಲಾವಿದರುಗಳು ಸದ್ಯ ಹಿರಿತೆರೆಯ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ ರಜಿನಿ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಹಿಟ್ ಧಾರಾವಾಹಿ 'ಅಮೃತವರ್ಷಿಣಿ'ಯಲ್ಲಿ ನಾಯಕಿ ಅಮೃತಳಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟು ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡ ರಜಿನಿ ಕಿರುತೆರೆ ವೀಕ್ಷಕರ ಪಾಲಿಗೆ ಪ್ರೀತಿಯ ಮನೆಮಗಳು. ಇದ್ದರೆ ಅಮೃತಳಂಥ ಮಗಳು, ಸೊಸೆ, ಹೆಂಡತಿ ಬೇಕು ಎಂದು ಅದೆಷ್ಟೋ ಜನ ಬಯಸಿದ್ದರೋ? ಅಷ್ಟರ ಮಟ್ಟಿಗೆ ಆ ಪಾತ್ರ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿತ್ತು.

ಲಾವಣಿಯಾಗಿ ಬದಲಾದ ರಜಿನಿ
ಅಮೃತವರ್ಷಿಣಿ ಧಾರಾವಾಹಿಯ ಅಮೃತ ಇದೀಗ ಸಿನಿಮಾಗೂ ಹಾರಿದ್ದಾಗಿದೆ. ಶ್ರೀನಿ ಹನುಮಂತರಾಜು ಅವರ ನಿರ್ದೇಶನದ ಮೊದಲ ಸಿನಿಮಾ "ಅಂಬುಜಾ" ದಲ್ಲಿ ನಟಿಸುವ ಮೂಲಕ ಇದೇ ಮೊದಲ ಬಾರಿಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ರಜಿನಿ. ಅಂದ ಹಾಗೇ ಇದೇ ಶುಕ್ರವಾರ ಜುಲೈ 21 ರಂದು ಸಿನಿಮಾ ತೆರೆ ಕಾಣಲಿದೆ.
ಮೊದಲಿನಿಂದಲೂ ನಟಿಸುವ ಕನಸಿತ್ತು
ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟಿಸುತ್ತಿರುವ ಸಮಯದಲ್ಲಿಯೇ ರಜಿನಿ ಅವರಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುವ ಮಹಾದಾಸೆಯಿತ್ತು. ಜೊತೆಗೆ ಆ ಸಮಯದಲ್ಲಿ ಅವರಿಗೆ ಕೆಲವೊಂದು ಅವಕಾಶಗಳು ಕೂಡಾ ದೊರಕಿತ್ತು. ಆದರೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ಕಾರಣದಿಂದಲೋ ಏನೋ ಅವಕಾಶಗಳನ್ನು ಬಳಸಿಕೊಳ್ಳಲಾಗಲಿಲ್ಲವಂತೆ.
ಮಹಿಳಾ ಪ್ರಧಾನ ಸಿನಿಮಾ ಅಂಬುಜಾ
ಅಂಬುಜಾ ಸಿನಿಮಾ ಮಹಿಳಾ ಪ್ರಧಾನ ಸಿನಿಮಾ. ನಿರ್ದೇಶಕ ಶ್ರೀನಿ ಹನುಮಂತರಾಜು ಅವರು ರಜಿನಿ ಅವರನ್ನು ಸಂಪರ್ಕಿಸಿ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದಾಗ ಮಹಿಳಾ ಪ್ರಧಾನ ಸಿನಿಮಾವಾದ ಕಾರಣ ಕೂಡಲೇ ಒಪ್ಪಿಕೊಂಡರಂತೆ ರಜಿನಿ. ಮಾತ್ರವಲ್ಲದೇ ರಜಿನಿ ಅವರದು ಶೀರ್ಷಿಕೆಯ ಪಾತ್ರವೂ ಹೌದು. ಹಾಗಾಗಿ ಅವಕಾಶ ಬಂದಾಗ ಬೇಡ ಎನ್ನಲಾಗದೇ ಒಪ್ಪಿಕೊಂಡರಂತೆ. ಈಗ ರಜಿನಿಗೆ ತಾನು ಕೂಡಾ ಈ ಸಿನಿಮಾದ ಭಾಗವಾಗಿದ್ದೇನೆ ಎಂದು ಹೇಳಿಕೊಳ್ಳುವುದು ಖುಷಿ ತಂದಿದೆಯಂತೆ.

ಕಾಸ್ಟ್ಯೂಮ್ ತೂಕವೇ ಜಾಸ್ತಿಯಾಗಿತ್ತು
ಆಗಲೇ ಹೇಳಿದಂತೆ ರಜಿನಿ ಅವರು ಈ ಸಿನಿಮಾದಲ್ಲಿ ಟೈಟಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಲಂಬಾಣಿಯ ಪಾತ್ರ ಅದಾಗಿದ್ದು ಲಂಬಾಣಿ ಉಡುಗೆಯೇ ಸುಮಾರು 25ಕೆಜಿಯಷ್ಟು ತೂಕವಿರುತ್ತದೆಯಂತೆ. ಅಷ್ಟು ತೂಕದ ಬಟ್ಟೆ ಧರಿಸಿ ಆಕೆ ನಟಿಸಿದ್ದು ಮಾತ್ರವಲ್ಲದೇ ನೃತ್ಯವನ್ನು ಕೂಡಾ ಮಾಡಿದ್ದಾರೆಯಂತೆ. ನೃತ್ಯ ಮಾಡುವಾಗ ಕೊಂಚ ಕಷ್ಟವಾದರೂ ಆ ಪಾತ್ರಕ್ಕೆ ನ್ಯಾಯ ಒದಗಿಸಿರುವ ಸಂತಸ ರಜಿನಿಗಿದೆ.
ಕಿರುತೆರೆಯಲ್ಲಿ ಬ್ಯುಸಿ
'ಅಸುರನ ಕೈಯಲ್ಲಿ ಪಾರಿವಾಳ' ಹಾಗೂ ಇನ್ನು ಹೆಸರಿಡಬೇಕಾಗಿರುವ ಸಿನಿಮಾದಲ್ಲಿ ನಟಿಸಿರುವ ರಜಿನಿ ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಹಿಟ್ಲರ್ ಕಲ್ಯಾಣ" ಧಾರಾವಾಹಿಯಲ್ಲಿ ಅಂತರಾ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ ರಜಿನಿ.


Click it and Unblock the Notifications











