ನೆಗೆಟಿವ್ ಕಮೆಂಟ್‌ಗಳಿಗೆ ಖಡಕ್ ಪ್ರತಿಕ್ರಿಯೆ: ಸಾರಾ ಅಣ್ಣಯ್ಯ, ನಿವೇದಿತಾ ಗೌಡ ಸೇರಿದಂತೆ ನಟಿಯರು ಏನಂತಾರೆ?
ಸೆಲೆಬ್ರಿಟಿಗಳು ಅಂದ ಮೇಲೆ ಅಭಿಮಾನಿ ಬಳಗ, ಸಕಾರಾತ್ಮಕ ಚಿಂತನೆ, ಉತ್ತಮ ಜೀವನದೊಂದಿಗೆ ನಕಾರಾತ್ಮಕ ಕಾಮೆಂಟುಗಳು ಹಾಗೂ ಮಾನಸಿಕ ಒತ್ತಡವು ಸಹಜ. ಅದರಲ್ಲೂ ಕಿರುತೆರೆ ನಟರು ಜನರಿಗೆ ಬೇಗ ಹತ್ತಿರವಾಗುವುದರ ಜೊತೆಗೆ ಸುಲಭದಲ್ಲಿ ಸಿಗುವುದರಿಂದ ಅವರ ವೈಯಕ್ತಿಕ ಜೀವನದಲ್ಲಿ ಏನೇನು ಆಗುತ್ತದೆ ಎಂಬುದು ಪ್ರೇಕ್ಷಕರಿಗೆ ಸದಾ ಕುತೂಹಲವನ್ನು ಮೂಡಿಸಿರುತ್ತದೆ.
ಕೆಲವೊಮ್ಮೆ ಅನಾವಶ್ಯಕವಾಗಿ ಕೆಟ್ಟ ಕೆಟ್ಟ ಕಾಮೆಂಟ್‌ಗಳನ್ನು ಕೇಳಬೇಕಾಗುತ್ತದೆ. ಅಭಿನಯದ ಬಗ್ಗೆ, ವೈಯಕ್ತಿಕ ಜೀವನದ ಬಗ್ಗೆ, ಉಡುಗೆ ತೊಡುಗೆ ಬಗ್ಗೆ ಹೀಗೆ ಪ್ರತಿಯೊಂದು ಮೇಲೆಯೂ ಕೆಟ್ಟ ಮಾತುಗಳನ್ನು ಇಂತಹ ಸೆಲೆಬ್ರಿಟಿಗಳು ಕೇಳಬೇಕಾಗುತ್ತದೆ. ಈ ರೀತಿಯ ನಕಾರಾತ್ಮಕ ಕಾಮೆಂಟುಗಳಿಗೆ ಹಾಗೂ ಮಾತುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ನಮ್ಮ ಸೆಲೆಬ್ರಿಟಿಗಳು ಎಂದು ನೋಡೋಣ ಬನ್ನಿ..

ಸಾರಾ ಅಣ್ಣಯ್ಯ
'ಕನ್ನಡತಿ' ಧಾರಾವಾಹಿ ಮೂಲಕ ಖ್ಯಾತಿ ಪಡೆದ ನಟಿ ಸಾರಾ ಅಣ್ಣಯ್ಯ ನೆಗೆಟಿವ್ ಕಾಮೆಂಟ್‌ಗಳ ಬಗ್ಗೆ ಮಾತನಾಡಿದ್ದಾರೆ. ಮೊದಮೊದಲು ನನಗೆ ಈ ರೀತಿಯ ನಕಾರಾತ್ಮಕ ಕಾಮೆಂಟ್‌ಗಳು, ಬೇಡದ ಹೇಳಿಕೆಗಳು ಮನಸ್ಸಿಗೆ ತುಂಬಾ ನೋವು ಕೊಡುತ್ತಿತ್ತು. ಆದರೆ, ಕ್ರಮೇಣ ನಾನು ಅದನ್ನು ಕೇರ್ ಮಾಡುವುದನ್ನು ಬಿಟ್ಟೆ. ನಾವು ಕಷ್ಟಪಟ್ಟು ದುಡಿಯುತ್ತಿರುವಾಗ ಬೇರೆಯವರ ನಕಾರಾತ್ಮಕ ಚಿಂತನೆಗಳಿಗೆ ಮನಸ್ಸು ಕೊಟ್ಟು ನಮ್ಮ ಮನಸ್ಸನ್ನು ಜೊತೆಗೆ ಜೀವನವನ್ನು ಹಾಳು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂಬುದು ನನಗೆ ಇವಾಗ ಅರಿವಾಗಿದೆ. ಹಾಗಾಗಿ ನಕಾರಾತ್ಮಕ ಚಿಂತನೆಗಳು ಜನರು ಎಲ್ಲೆಡೆಯೂ ಇರುತ್ತಾರೆ ನಾವು ನಮ್ಮ ಪಾಡಿಗೆ ನಮ್ಮ ಕೆಲಸವನ್ನು ಮಾಡಿಕೊಂಡು ಸಂತೋಷದಿಂದ ಇದ್ದರೆ ಅಷ್ಟೇ ಸಾಕು ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.
ನಿವೇದಿತಾ ಗೌಡ
ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟಿವ್ ಇರುವ ನಟಿ ನಿವೇದಿತಾ ಗೌಡ ನಕಾರಾತ್ಮಕ ಕಾಮೆಂಟುಗಳ ಬಗ್ಗೆ ಮಾತನಾಡಿದ್ದು ನಾನು ಬಹಳಷ್ಟು ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿದ್ದೇನೆ. ನನಗೆ ಮೊದಲಿಂದಲೂ ಸಕಾರಾತ್ಮಕ ಜೊತೆಗೆ ನಕಾರಾತ್ಮಕ ಕಾಮೆಂಟುಗಳು ಬರುತ್ತಲೇ ಇರುತ್ತವೆ. ಇದಕ್ಕೆಲ್ಲ ತಲೆ ಕೆಡಿಸಿಕೊಂಡರೆ, ನಮ್ಮ ಸಂತೋಷ ನಮ್ಮ ಸುಖ ಜೀವನವನ್ನು ನಾವೇ ಹಾಳು ಮಾಡಿಕೊಂಡಂತೆ. ಹಾಗಾಗಿ ನಾನು ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಒಳ್ಳೊಳ್ಳೆಯ ಕಾಮೆಂಟ್‌ಗಳು ನನಗೆ ನಿಜವಾಗಲೂ ಖುಷಿ ಕೊಡುತ್ತದೆ. ಅಭಿಮಾನಿಗಳು ಪ್ರೋತ್ಸಾಹಿಸುವಾಗ ನನಗೆ ಖುಷಿಯಾಗುತ್ತದೆ ಅದೇ ರೀತಿ ಕೆಟ್ಟ ಕಾಮೆಂಟ್‌ಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಅನು ಜನಾರ್ಧನ್
ತಮ್ಮ ಸೋಶಿಯಲ್ ಮೀಡಿಯಾ ಬಗ್ಗೆ ಮಾತನಾಡಿರುವ ನಟಿ ಅನು ಜನಾರ್ಧನ್ ಕೆಲ ಗಂಡಸರು ತುಂಬಾ ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡಿದಾಗ ನನಗೆ ನಿಜವಾಗಲೂ ಬೇಸರವಾಗುತ್ತದೆ. ಇದ್ಯಾಕೆ ಹೀಗೆಲ್ಲ ಮಾತನಾಡುತ್ತಾರೆ ಎಂದು ತುಂಬಾ ಯೋಚಿಸುತ್ತೇನೆ. ಆದರೆ ಇನ್ನು ಕೆಲವರು ನಿಜವಾಗಿ ಒಳ್ಳೊಳ್ಳೆ ಕಮೆಂಟ್ ಗಳನ್ನು ಹಾಕುವ ಮೂಲಕ ನನ್ನ ದಿನವನ್ನು ಚೆನ್ನಾಗಿ ಇಡುತ್ತಾರೆ. ಕೆಟ್ಟ ಕಮೆಂಟ್‌ಗಳನ್ನು ನಾನು ಅದಷ್ಟು ನೋಡುವುದೇ ಇಲ್ಲ. ಕೆಲವೊಮ್ಮೆ ಸಾಧ್ಯವಾಗದೆ ಹೋದಾಗ, ವಿಪರೀತ ಎನಿಸಿದಾಗ ಅಲ್ಲೇ ಪ್ರತಿಕ್ರಿಯಿಸಿ ಅಂತದ್ದನ್ನು ಅಲ್ಲಿಗೆ ನಿಲ್ಲಿಸುವಂತೆಯೂ ಮಾಡುತ್ತೇನೆ ಎಂದಿದ್ದಾರೆ.
ಅನಿಕಾ ಸಿಂದ್ಯಾ
ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಖಳನಾಯಕ ಪಾತ್ರ ಮಾಡಿಕೊಂಡು ಬಂದಿರುವ ನಟಿ ಅನಿಕ ಸಿಂಧ್ಯಾ ಅವರು ಕೆಟ್ಟ ಕಾಮೆಂಟ್ ಗಳ ಬಗ್ಗೆ ಮಾತನಾಡಿದ್ದು ನಾನು ತೆರೆ ಮೇಲೆ ಖಳನಾಯಕಿ ಪಾತ್ರಗಳನ್ನೇ ಮಾಡಿಕೊಂಡು ಬಂದಿರುವುದರಿಂದ ಜನ ನನ್ನನ್ನು ನಿಜವಾಗಿಯೂ ಬಹಳಷ್ಟು ದ್ವೇಷಿಸುತ್ತಾರೆ. ಸೋಶಿಯಲ್ ಮೀಡಿಯಾ ಅಷ್ಟೇ ಅಲ್ಲದೆ ಕಂಡ ಕಂಡಲ್ಲಿಯೂ ನನ್ನನ್ನು ಬೈಯುತ್ತಾರೆ. ಮೊದಮೊದಲಿಗೆ ನನಗಿದು ಬಹಳ ಬೇಸರ ತರುತ್ತಿತ್ತು. ನನ್ನ ವೈಯಕ್ತಿಕ ಜೀವನಕ್ಕೂ ಇದು ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಿತ್ತು. ಆದರೆ ಇತ್ತೀಚೆಗೆ ಇಂತಹ ಕಾಮೆಂಟ್‌ಗಳು ಕಮ್ಮಿ ಆಗಿರುವುದು ನನ್ನ ಪುಣ್ಯವೇ ಸರಿ. ಜೊತೆಗೆ ನಾನು ಕೂಡ ಇವನ್ನೆಲ್ಲ ಬಿಟ್ಟಿರಲು ಕಲಿತಿದ್ದೇನೆ ಎಂದಿದ್ದಾರೆ.

ಪ್ರಿಯಾಂಕಾ ಸುರೇಶ್
ನಟಿ ಪ್ರಿಯಾಂಕಾ ಸುರೇಶ್ ಅವರು ಈ ಬಗ್ಗೆ ಮಾತನಾಡಿದ್ದು, ಸಾಮಾನ್ಯವಾಗಿ ಮನುಷ್ಯರು ಎರಡು ರೀತಿಯ ಸಂದರ್ಭಗಳಲ್ಲಿ ನಮ್ಮನ್ನು ಕೆಟ್ಟದಾಗಿ ನೋಡುತ್ತಾರೆ. ಒಂದು ನಾವು ಬಹಳಷ್ಟು ಯಶಸ್ಸುಗೊಂಡಾಗ ಮತ್ತೊಂದು ನಾವು ತುಂಬಾ ಕೆಳಮಟ್ಟದಲ್ಲಿದ್ದಾಗ. ನಾವು ಯಾರೇ ಆದರೂ ಬಹಳಷ್ಟು ಯಶಸ್ಸನ್ನು ಕಂಡ ತಕ್ಷಣ ಮನುಷ್ಯರಿಗೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಅವರು ನಮ್ಮ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತನಾಡಲು ಶುರು ಮಾಡುತ್ತಾರೆ. ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ತಿರಸ್ಕರಿಸಿ, ನಮ್ಮ ಬದುಕನ್ನು ಜೀವಿಸಲು ಕಲಿತರೆ ನಮಗೆ ಒಳ್ಳೆಯದು. ಸೋಶಿಯಲ್ ಮೀಡಿಯಾದಲ್ಲಿ ಬರುವ ನೆಗೆಟಿವ್ ಕಾಮೆಂಟ್‌ಗಳಿಗೆ ನಾವೆಂದೂ ಪ್ರಾಮುಖ್ಯತೆ ಕೊಡಲೇಬಾರದು". ಎಂದಿದ್ದಾರೆ.


Click it and Unblock the Notifications











