ಹುಡುಗನನ್ನು ನೋಡಲು ತಯಾರಾದ ನಟಿ ಶೋಭಾ ಶೆಟ್ಟಿ ವೀಡಿಯೋ 30 ಲಕ್ಷ ವೀಕ್ಷಣೆ
ಕಿರುತೆರೆಯಲ್ಲಿ ಈಗ ಸಾಲು ಸಾಲು ಮದುವೆಯದ್ದೇ ಸುದ್ದಿ. ಕಿರುತೆರೆ ನಟ-ನಟಿಯರೆಲ್ಲರೂ ದಾಂಪತ್ಯ ಜೀವನ ನಡೆಸಲು ಮುಂದಾಗುತ್ತಿದ್ದಾರೆ. ಈಗಾಗಲೇ ಜನವರಿ ತಿಂಗಳು ಒಂದರಲ್ಲೇ ಮೂರರಿಂದ ನಾಲ್ಕು ಕಿರುತೆರೆ ಜೋಡಿಗಳು ಸಪ್ತಪದಿ ತುಳಿದಿವೆ.
ಇನ್ನೂ ಕೆಲವರು ತಮ್ಮ ಮದುವೆಯ ದಿನಾಂಕವನ್ನು ಘೋಷಿಸಿದ್ದು, ಪ್ರೀ ವೆಡ್ಡಿಂಗ್ ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ನಟಿಯರು ನಾನು ಮದುವೆಗೆ ಸಿದ್ಧ, ರಾಜಕುಮಾರನ ಹುಡುಕಾಟದಲ್ಲಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಕೂಡ ಮಾಡಿದ್ದಾರೆ.
ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ನಟಿ ರಜಿನಿ ಅವರು ತಾವೂ ಪ್ರೀತಿಯಲ್ಲಿ ಬಿದ್ದಿರುವ ವಿಚಾರವನ್ನು ರಟ್ಟು ಮಾಡಿದ್ದರು. ಇದೀಗ ನಟಿ ಶೋಭಾ ಶೆಟ್ಟಿ ಅವರ ಸರದಿ. ತಮ್ಮ ಹುಟ್ಟುಹಬ್ಬದ ದಿನವೇ ಹುಡುಗನ ಬಗ್ಗೆ ಹೇಳಿದ್ದಾರೆ.

ಅರ್ಧಕ್ಕೆ ಹೊರ ನಡೆದಿದ್ದ ಶೋಭಾ
ಅಷ್ಟಕ್ಕೂ ಯಾರಪ್ಪಾ ಇವರು ಶೋಭಾ ಶೆಟ್ಟಿ ಎಂದು ಕೆಲವರು ಯೋಚಿಸುತ್ತಿರಬಹುದು. ಯಾಕೆಂದರೆ, ಕಿರುತೆರೆ ನಟಿ ಶೋಭಾ ಶೆಟ್ಟಿ ಕನ್ನಡದಿಂದ ಪರಭಾಷೆಗೆ ತೆರಳಿ ಬಹಳ ಕಾಲವಾಗಿದೆ. ಹೀಗಾಗಿ ಹಲವರಿಗೆ ನೆನಪಿರುವುದು ಕಷ್ಟ. ಕನ್ನಡದಲ್ಲಿ ಸುಮಾರು ಏಳು ವರ್ಷಗಳ ಕಾಲ ಮೂಡಿ ಬಂದ ಎಲ್ಲರ ಫೇವರಿಟ್ ಧಾರಾವಾಹಿ 'ಅಗ್ನಿಸಾಕ್ಷಿ'. ಈ ಧಾರಾವಾಹಿಯಂತೂ ಈಗಲೂ ಎಲ್ಲರಿಗೂ ನೆನಪಿದೆ. ಇದೇ ಧಾರಾವಾಹಿಯಲ್ಲೇ ನಟಿ ಶೋಭಾ ಶೆಟ್ಟಿ ಅವರು ಬಣ್ಣ ಹಚ್ಚಿದ್ದರು. ಕೆಲ ದಿನಗಳ ಕಾಲ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿದ ಇವರು, ಕಾರಣಾಂತರಗಳಿಂದ ಅರ್ಧಕ್ಕೆ ತಂಡದಿಂದ ಹೊರ ನಡೆದಿದ್ದರು. 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಸನ್ನಿಧಿ ಸಹೋದರಿ ತನು ಪಾತ್ರದಲ್ಲಿ ನಟಿಸಿದ್ದರು.

ತೆಲುಗು, ತಮಿಳು ಕಿರುತೆರೆಯಲ್ಲಿ ಬ್ಯುಸಿ
'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರ ನಡೆದ ಮೇಲೆ ನಟಿ ಶೋಭಾ ಶೆಟ್ಟಿ ಅವರು ತೆಲುಗು ಹಾಗೂ ತಮಿಳು ಕಿರುತೆರೆಯಲ್ಲಿ ಸಕ್ರಿಯರಾದರು. ಈಗಲೂ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಕನ್ನಡದಲ್ಲಿ ಪಡುವಾರಹಳ್ಳಿ ಪಡ್ಡೆಗಳು ಧಾರಾವಾಹಿ ಮೂಲಕ ಶೋಭಾ ಶೆಟ್ಟಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ನಂತರ ಅಗ್ನಿಸಾಕ್ಷಿ, ರುಕ್ಕು ಧಾರಾವಾಹಿಗಳಲ್ಲಿ ನಟಿಸಿದರು. ಕನ್ನಡದಲ್ಲಿ ಶೋಭಾ ಶೆಟ್ಟಿ ಅವರು ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬಂದ ರುಕ್ಕು ಧಾರಾವಾಹಿಯಲ್ಲೂ ನಟಿಸಿದ್ದರು.

ಲೀಡ್ ರೋಲ್‌ಗಳಲ್ಲಿ ನಟನೆ
ಕನ್ನಡ ಕಿರುತೆರೆಯಲ್ಲಿ ಹೆಚ್ಚು ಪೋಷಕ ಪಾತ್ರಗಳಲ್ಲಿ ನಟಿಸಿದ ಶೋಭಾ ಅವರು ತಮಿಳು ಮತ್ತು ತೆಲುಗು ಇಂಡಸ್ಟ್ರಿಯಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಪಾತ್ರದಲ್ಲಿ ಮಿಂಚುತ್ತಿರುವ ಶೋಭಾ ಶೆಟ್ಟಿ ಅವರು ನೆಲೆಸಿರುವುದು ಬೆಂಗಳೂರಿನಲ್ಲಿ. ಶೂಟಿಂಗ್ ಇರುವಾಗ ಮಾತ್ರವೇ ಹೈದ್ರಾಬಾದ್‌ಗೆ ತೆರಳುತ್ತಾರೆ. ಇನ್ನು ಶೋಭಾ ಶೆಟ್ಟಿ ಅವರು ಯುಟ್ಯೂಬ್ ಚಾನೆಲ್ ಅನ್ನು ತೆರೆದಿದ್ದಾರೆ. ಇದರಲ್ಲಿ ಮೇಕಪ್, ಶಾಪಿಂಗ್ ಸೇರಿದಂತೆ ತಮ್ಮ ದಿನಚರಿ ಬಗ್ಗೆಯೂ ಇದರಲ್ಲಿ ವೀಡಿಯೋ ಮಾಡಿ ಅಪ್ ಲೋಡ್ ಮಾಡುತ್ತಿರುತ್ತಾರೆ. ತೆಲುಗು ಭಾಷೆಯಲ್ಲೇ ಹೆಚ್ಚು ವೀಡಿಯೋ ಮಾಡಿದ್ದಾರೆ.

30 ಲಕ್ಷ ವೀವ್ಸ್ ಸಾಧಿಸಿದ ವಿಡಿಯೋ
ಇತ್ತೀಚೆಗಷ್ಟೇ ಶೋಭಾ ಶೆಟ್ಟಿ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಹುಟ್ಟುಹಬ್ಬ ಹಿನ್ನೆಲೆ ಮನೆಯಲ್ಲಿ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು. ಈ ದಿನವೇ ಶೋಭಾ ಶೆಟ್ಟಿ ಅವರನ್ನು ನೋಡಲು ಮನೆಗೆ ಹುಡುಗ ಬರ್ತಿದ್ದಾನೆ. ಅದಕ್ಕಾಗಿ ವಿಶೇಷವಾಗಿ ರೆಡಿ ಆಗುತ್ತಿದ್ದೀನಿ ಎಂದು ವಿಡಿಯೋ ಮಾಡಿದ್ದರು.ಈ ವೀಡಿಯೋ ಕೇವಲ ಎಂಟು ದಿನಕ್ಕೆ ಬರೋಬ್ಬರಿ ಮೂರು ಮಿಲಿಯನ್ ವ್ಯೂವ್ಸ್ ಕಂಡಿದೆ. ಆದರೆ, ಮತ್ತೊಂದು ವೀಡಿಯೋವನ್ನು ಅಪ್ ಮಾಡಿದ್ದು, ಇದರಲ್ಲಿ ಹುಡುಗನನ್ನು ನೋಡುವ ಕಾರ್ಯಕ್ರಮ ನಡೆಯಲಿಲ್ಲ ಎಂದು ಶೋಭಾ ಹೇಳಿದ್ದಾರೆ.


Click it and Unblock the Notifications











