Vaishnavi: ಹಿರಿತೆರೆಗೆ ಹಾರಿದ ಕಿರುತೆರೆ ಬೆಡಗಿ ವೈಷ್ಣವಿ.. ಯಾವುದು ಆ ಸಿನಿಮಾ ?
'ಮಿಥುನ ರಾಶಿ' ಧಾರಾವಾಹಿಯ ರಾಶಿ ಯಾರಿಗೆ ನೆನಪಿಲ್ಲ ಹೇಳಿ?! ಚಟಪಟ ಅರಳು ಹುರಿದಂತೆ ಮಾತನಾಡುತ್ತಾ ಬಹಳ ಸಣ್ಣ ವಯಸ್ಸಿನಲ್ಲೇ ಮನೆಯ ಜವಾಬ್ದಾರಿ ಹೊತ್ತು ಆಟೋ ಓಡಿಸಿ ಮನೆ ನಡೆಸುವ ಧಿಟ್ಟ ಮಹಿಳೆಯ ಸುತ್ತ ಸುತ್ತುವ ಕತೆ ಅದು. ಈ ಧಾರಾವಾಹಿ ಮುಗಿದು ವರ್ಷ ಒಂದು ಕಳೆಯುತ್ತಾ ಬಂದರೂ ಫೇಮ್ ಕಡಿಮೆ ಆಗಿಲ್ಲ ಅನ್ನುವುದು ವಿಶೇಷ!
ಅಂದ ಹಾಗೆ ಈ ರಾಶಿ ಪಾತ್ರ ಮಾಡಿರುವ ನಟಿ ವೈಷ್ಣವಿ ಅವರು ಸದ್ಯಕ್ಕಂತೂ ಸಕ್ಕತ್ ಬ್ಯುಸಿ ಆಗಿದ್ದಾರೆ. 'ಮಿಥುನ ರಾಶಿ' ಧಾರಾವಾಹಿಗೂ ಮೊದಲು 'ಶಾಂತಂ ಪಾಪಂ' ಎನ್ನುವ ಕ್ರೈಂ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದ ಈಕೆ 'ಮಿಥುನ ರಾಶಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡರು. ಮುಂದೆ ಮುಗಿದ ಮೇಲೆ ಕನ್ನಡದಲ್ಲಿ ಅಷ್ಟಾಗಿ ಕಾಣಿಸದಿದ್ದರೂ ಮಲಯಾಳಂ ಹಾಗೂ ತಮಿಳು ಕಿರುತೆರೆಯಲ್ಲಿ ಬಹಳಷ್ಟು ಹೆಸರು ಮಾಡಿದ್ದಾರೆ.

ಮೊದಲು ತಮಿಳು ರಿಮೇಕ್ 'ಉಲ್ಲೈತ ಅಲೈತ' ಧಾರಾವಾಹಿಯಲ್ಲಿ ಸಹನಾಯಕಿಯಾಗಿ ನಟಿಸಿದ್ದ ವೈಷ್ಣವಿ ಇದಾದ ಮೇಲೆ ಸದ್ಯಕ್ಕೆ ಮಲಯಾಳಂನ ಸೂರ್ಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಕಣ್ಣಲ್ ಪೂವು' ಎಂಬ ಧಾರಾವಾಹಿಯಲ್ಲಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ.
ಮನೋಜ್ಞ ನಟನೆಯ ಮೂಲಕ ಮಲಯಾಳಂ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ವೈಷ್ಣವಿ ವಿಷು ಹಬ್ಬ ದಂದು ಅಪ್ಪಟ ಮಲಯಾಳಿ ಕುಟ್ಟಿಯಂತೆ ಬಿಳಿ ಸೀರೆಯುಟ್ಟು, ಗಂಧದ ನಾಮ ಇಟ್ಟು, ಹಸಿರು ಬಳೆತೊಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವಿಷು ಹಬ್ಬದ ಶುಭ ಕೋರಿದ್ದರು. ವೈಷ್ಣವಿ ಅಂದಕ್ಕೆ ಮಲಯಾಳಂ ಕಿರುತೆರೆ ವೀಕ್ಷಕರು ಸಂಭ್ರಮದಿಂದ ಕಾಮೆಂಟ್ ಸುರಿಮಳೆ ಸುರಿಸಿದ್ದಾರೆ.

ಈಗ ಕಿರುತೆರೆಯಿಂಡ ಹಿರಿತೆರೆ ಕಡೆಗೆ ಹೆಜ್ಜೆ ಇಡುತ್ತಿರುವ ನಟಿ ವೈಷ್ಣವಿ 'ಉಂಡೆನಾಮ' ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಕೆ ಎಲ್ ರಾಜಶೇಖರ್ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ನಟ ಕೋಮಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 'ಉಂಡೆನಾಮ'ದಲ್ಲಿ ನಟಿ ವೈಷ್ಣವಿ ಕಾಲ್ ಗರ್ಲ್ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರ ಈಗಾಗಲೇ ರಿಲೀಸ್ ಆಗಿದೆ. ಇದೊಂದು ಪ್ರಮುಖ ಪಾತ್ರವಾಗಿದ್ದು, ಚಿತ್ರದ ಕಥೆ ಈ ಪಾತ್ರದ ಹಿಂದೆ ಸುತ್ತುತ್ತದೆ ಎಂದಿದೆ ಚಿತ್ರತಂಡ.
ನಟ ಕೊಮಲ್ ನಾಯಕನ ಪಾತ್ರದಲ್ಲಿದ್ದು, ಧನ್ಯಾ ಬಾಲಕೃಷ್ಣ ನಾಯಕಿಯಾಗಿ ನಟಿಸಿದ್ದು, ಅಪೂರ್ವ, ವೈಷ್ಣವಿ, ತನಿಶಾ ಕುಪ್ಪಂಡ ಮತ್ತು ಬ್ಯಾಂಕ್ ಜನಾರ್ದನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇನ್ನು ವೈಷ್ಣವಿ ನಟನೆ ಹಾಗೂ ಚಿತ್ರಕ್ಕೆ ಸಿಗುವ ಸ್ಪಂದನೆಯಿಂದ ವೈಷ್ಣವಿ ಸಿನಿ ಜೀವನ ಹೊಸ ತಿರುವು ಪಡೆದುಕೊಂಡರು ಅಚ್ಚರಿ ಪಡಬೇಕಿಲ್ಲ.


Click it and Unblock the Notifications











