ಅತಿಯಾಗಿ ಟಿವಿ ನೋಡಿದರೆ ಕಥೆ ಅಷ್ಟೇ ಕಣಣ್ಣೋ

ದಿನಕ್ಕೆ ನಾಲ್ಕು ಗಂಟೆಗಳಿಗೂ ಅಧಿಕ ಸಮಯ ಟಿವಿ ನೋಡುವುದರಿಂದ ವೃದ್ಧರಲ್ಲಿ ಟೈಪ್ 2 ಮಧುಮೇಹ ಹೆಚ್ಚಾಗುತ್ತಿದೆ ಎಂದಿದ್ದಾರೆ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು.
ಒಬ್ಬ ವ್ಯಕ್ತಿ ಟಿವಿ ನೋಡುತ್ತಾ ಕಳೆಯುವ ಪ್ರತಿಗಂಟೆಯಲ್ಲೂ ಆತನ ಚಯಾಪಚಯ ಕ್ರಿಯೆಗಳು ಕುಂಟಿತವಾಗುತ್ತವೆ. ಇದರಿಂದ ಹೃದಯಕ್ಕೂ ತೊಂದರೆ ತಪ್ಪಿದ್ದಲ್ಲ. ಬಳಿಕ ಟೈಪ್ 2 ಮಧುಮೇಹಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ.
ಇದುವರೆಗೂ ನಡೆದ ಸಂಶೋಧನೆಗಳು ಟಿವಿಯಿಂದ ಮಕ್ಕಳ ಮೇಲೆ ಆಗಬಹುದಾದ ಅನಾಹುತಗಳ ಬಗ್ಗೆ ಬೆಳಕು ಚೆಲ್ಲಿದ್ದವು. ಆದರೆ ವೃದ್ಧರ ಮೇಲೆ ಟಿವಿಯಿಂದ ಆಗಬಹುದಾದ ದುಷ್ಪರಿಣಾಮಗಳ ಮೇಲೆ ಇದೇ ಮೊದಲ ಬಾರಿಗೆ ಸಂಶೋಧನೆ ಮಾಡಿರುವುದಾಗಿ ತಿಳಿಸಿದ್ದಾರೆ.
ಆದರೆ ಟಿವಿ ನೋಡುತ್ತಾ ಸಣ್ಣಪುಟ್ಟ ಕೆಲಸಗಳನ್ನು ಮಾಡುವುದರಿಂದ, ನಿಯಮಿತ ವ್ಯಾಯಾಮ ಮಾಡುವುದರಿಂದ, ಮದ್ಯಪಾನ, ಧೂಮಪಾನ ಕಡಿಮೆ ಮಾಡಿಕೊಳ್ಳುವುದರಿಂದ ಟೈಪ್ 2 ಮಧುಮೇಹ ತಡೆಯಬಹುದು ಎಂದಿದ್ದಾರೆ.
ಆಸ್ಟ್ರೇಲಿಯಾದ 2000 ವೃದ್ಧರ ಮೇಲೆ ನಡೆಸಿದ ಸಂಶೋಧನೆಯ ಫಲವಿದು. ಡಾ. ಪೌಲ್ ಗಾರ್ಡಿನರ್ ಅವರ ನೇತೃತ್ವದಲ್ಲಿ ಈ ಸಂಶೋಧನೆ ನಡೆದಿದೆ. ಕೆಲವರೇನೋ ಸಂಶೋಧನೆ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದರೆ ಇನ್ನೂ ಕೆಲವರು ಅಯ್ಯೋ ಅದೇ ಹಳೆ ಕಥೆ ಹೋಗ್ರಿ ಎಂದಿದ್ದಾರೆ.


Click it and Unblock the Notifications











