ಒಂದೊಳ್ಳೆ ಕೆಲಸಕ್ಕೆ ತಲೆ ಕೂದಲು ದಾನ ಮಾಡಿದ ನಿರೂಪಕಿ ಕಾವ್ಯ ಶಾಸ್ತ್ರಿ
ಕನ್ನಡದ ಖ್ಯಾತ ಟಿವಿ ನಿರೂಪಕಿ ಕಾವ್ಯ ಶಾಸ್ತ್ರಿಯ ಹೊಸ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ಉದ್ದನೇಯ ಕೂದಲು ಬಿಟ್ಕೊಂಡು, ಸ್ಟೈಲ್ ಆಗಿ ಮಿಂಚುತ್ತಿದ್ದ ಕಾವ್ಯ ಈಗ ಬಾಬ್ ಕಟ್ ಮಾಡಿಸಿಕೊಂಡು ಸ್ಮೈಲ್ ಮಾಡ್ತಿದ್ದಾರೆ. ಈ ಲುಕ್ ಏಕೆ ಎಂದು ನೋಡಿದಾಗ, ತಮ್ಮ ತಲೆ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿರುವ ವಿಚಾರ ತಿಳಿದಿದೆ.
ಹೌದು, ಕಾವ್ಯ ಶಾಸ್ತ್ರಿ ತನ್ನ ತಲೆ ಕೂದಲನ್ನು ಕ್ಯಾನ್ಸರ್ ರೋಗಿಗಳಿಗಾಗಿ ದಾನ ಮಾಡಿದ್ದಾರೆ. ಈ ಕುರಿತು ಜನರಲ್ಲಿ ಅರಿವು ಮೂಡಿಸಿರುವ ನಟಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಉಪಯೋಗವಾಗಲಿ ಎಂದು ಕೂದಲು ದಾನ ಮಾಡಿದ್ದೇನೆ. ನೀವು ನಮ್ಮ ಜೊತೆ ಕೈ ಜೋಡಿಸಿ ರೋಗಿಗಳ ಸಹಾಯಕ್ಕೆ ಬನ್ನಿ ಎಂದು ವಿನಂತಿಸಿದ್ದಾರೆ. ಅಂದ್ಹಾಗೆ, ಕಾವ್ಯ ಶಾಸ್ತ್ರಿಗೂ ಮುಂಚೆ ಹಲವು ಸೆಲೆಬ್ರಿಟಿಗಳು ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ್ದಾರೆ. ಯಾರವರು? ಮುಂದೆ ಓದಿ...

ನಮ್ಮ ಚಿಕ್ಕಪ್ಪನ ಸಾವು ನೋಡಿದೆ
''ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರಿಗೆ ಉಪಯೋಗವಾಗಲಿ ಎಂದು ನನ್ನ ಕೂದಲು ದಾನ ಮಾಡಿದೆ. ಕ್ಯಾನ್ಸರ್‌ನಿಂದ ನನ್ನ ಚಿಕ್ಕಪ್ಪ ನಿಧನರಾದರು. ಕೀಮೋ ಥೆರಪಿ, ಅದರಿಂದ ಉಂಟಾಗು ನೋವು ಎಲ್ಲವನ್ನು ಕಣ್ಣಾರೆ ಕಂಡು ಈ ನಿರ್ಧಾರ ಮಾಡಿದ್ದೇನೆ. ಇದೊಂದು ಸಣ್ಣ ಕೆಲಸವಿರಬಹುದು. ನನ್ನಿಂದ ಸಾಧ್ಯವಾದದ್ದನ್ನು ಮಾಡಿದೆ. ನನ್ನ ಈ ಒಳ್ಳೆಯ ಕೆಲಸಕ್ಕೆ ನೀವು ಕೈ ಜೋಡಿಸಿ'' ಎಂದು ಇನ್ಸ್ಟಾಗ್ರಾಂನಲ್ಲಿ ವಿನಂತಿಸಿದ್ದಾರೆ.

ಕೂದಲು ದಾನ ಮಾಡಿದ್ದ ಕಾರುಣ್ಯ
ಈ ಹಿಂದೆ ಕನ್ನಡ ಚಲನಚಿತ್ರ ನಟಿ ಕಾರುಣ್ಯ ರಾಮ್ ಸಹ ಕೂದಲು ದಾನ ಮಾಡಿದ್ದರು. 2021ನೇ ವರ್ಷದ ಆರಂಭದಲ್ಲೇ ಅಂದ್ರೆ ಜನವರಿಯಲ್ಲಿ ತಮ್ಮ 11 ಇಂಚಿನ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿ ಗಮನ ಸೆಳೆದಿದ್ದರು ಕಾರುಣ್ಯ.

ಧ್ರುವ ಸರ್ಜಾ ದಾನ
ಪೊಗರು ಸಿನಿಮಾಗಾಗಿ ಸುಮಾರು 3 ವರ್ಷಕ್ಕಿಂತ ಹೆಚ್ಚು ಸಮಯ ಕಾಪಾಡಿಕೊಂಡಿದ್ದ ಉದ್ದನೇಯ ಕೂದಲನ್ನು ದಾನ ಮಾಡಿದ್ದರು. 2020ರ ನವೆಂಬರ್ ತಿಂಗಳಲ್ಲಿ ಧ್ರುವ ಹೇರ್ ಕಟ್ ಮಾಡಿಸಿದ್ದರು. 10 ಇಂಚಿನ ಉದ್ದನೇಯ ಕೂದಲನ್ನು ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ದಾನ ಮಾಡಿದ್ದರು.

ಸುಕೃತಾ ವಾಗ್ಲೆ ಕೂದಲು ದಾನ
ಸ್ಯಾಂಡಲ್ ವುಡ್ ನಟಿ ಕಮ್ ಮಾಡೆಲ್ ಸುಕೃತಾ ವಾಗ್ಲೆ ಸಹ ಈ ಹಿಂದೆ ಕ್ಯಾನ್ಸರ್ ರೋಗಿಗಳಿಗಾಗಿ ಕೂದಲು ದಾನ ಮಾಡಿದ್ದರು. ಕೊರೊನಾ ಲಾಕ್‌ಡೌನ್‌ನಲ್ಲಿ ಮನೆಯಲ್ಲಿದ್ದ ಸುಕೃತ ವಾಗ್ಲೆ ತಮ್ಮ ತಲೆ ಕೂದಲು ಕ್ಯಾನ್ಸರ್ ಪೀಡಿತರಿಗೆ ಉಪಯೋಗಕ್ಕೆ ಬರಲಿ ಎಂದು ಕತ್ತರಿಸಿ ದಾನ ಮಾಡಿದ್ದರು.


Click it and Unblock the Notifications











