ಬದುಕಿನ ಎಪಿಸೋಡ್ ಮುಗಿಸಿದ ಪ್ರಶಾಂತ್ ಹಾಲ್ದೊಡ್ಡೇರಿ

ಜೀ ಕನ್ನಡ ವಾಹಿನಿಯ 'ರಾಧಾ ಕಲ್ಯಾಣ' ಧಾರಾವಾಹಿಯ ನಿರ್ದೇಶಕರೂ ಆಗಿದ್ದರು ಪ್ರಶಾಂತ್ ಹಾಲ್ದೊಡ್ಡೇರಿ. ಖ್ಯಾತ ನಾಟಕಕಾರ, ಟಿವಿ ಧಾರಾವಾಹಿಗಳ ನಿರ್ದೇಶಕ ಟಿ.ಎನ್.ಸೀತಾರಾಂ ಅವರ ಭೂಮಿಕಾ ತಂಡದ ಸದಸ್ಯರೂ ಆಗಿದ್ದರು.
ಅವರ ಹಠಾತ್ ನಿಧನಕ್ಕೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅವರ ಅಭಿಮಾನಿಗಳು, ಹಿತೈಶಿಗಳು ಹಾಗೂ ಸ್ನೇಹಿತರು ಕಂಬನಿ ಗರೆದಿದ್ದಾರೆ.
ಅವರ ನಿಧನದ ಬಗ್ಗೆ ಅವರ ಆತ್ಮೀಯ ಗೆಳೆಯ ಹಾಗೂ ನಟ, ನಿರ್ದೇಶಕ, ರಂಗ ಕಲಾವಿದ ಬಿ ಸುರೇಶ್ ಅವರು ಕಂಬನಿ ಮಿಡಿದಿದ್ದು, ನನ್ನ ಆತ್ಮೀಯ ಗೆಳೆಯನೊಬ್ಬನನ್ನು ಕಳೆದುಕೊಂಡ ಸಂಕಟವೊಂದು ಕಾಡುತ್ತಿದೆ ಎಂದಿದ್ದಾರೆ.
ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನಲ್ಲಿರುವ ಪುಟ್ಟ ಗ್ರಾಮ ಹಾಲ್ದೊಡ್ಡೇರಿ ಗ್ರಾಮದ ವಂಶಸ್ಥರಾದ ಪ್ರಶಾಂತ್ ಹಾಲ್ದೊಡ್ಡೇರಿ ಅವರು ಪತ್ನಿ ಸುಷ್ಮಾ ಪ್ರಶಾಂತ್ ಹಾಗೂ ಪುತ್ರನನ್ನು ಅಗಲಿದ್ದಾರೆ. ಪ್ರಶಾಂತ್ ಹಾಲ್ದೊಡ್ಡೇರಿ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಒನ್ಇಂಡಿಯಾ ಕನ್ನಡ ಬಳಗ ಪ್ರಾರ್ಥಿಸುತ್ತದೆ.
ಪ್ರಶಾಂತ್ ಹಾಲ್ದೊಡ್ಡೇರಿ ಅವರ ಅಗಲಿಕೆಯ ನೋವನ್ನು ಅವರ ಬಾಳಸಂಗಾತಿ ಸುಷ್ಮಾ ಅವರು ಫೇಸ್ ಬುಕ್ ನಲ್ಲಿ ತೋಡಿಕೊಂಡಿದ್ದು, ಓದುತ್ತಿದ್ದರೆ ನಿಜಕ್ಕೂ ಹೃದಯತುಂಬಿ ಬರುತ್ತದೆ...
"ನನ್ನ ಇನಿಯ ಇನ್ನಿಲ್ಲ.
ನನ್ನನ್ನು ಒಬ್ಬೊಂಟಿಯಾಗೂ ಬಿಟ್ಟಿಲ್ಲ ಮಡಿಲಲ್ಲಿ ಅವನದೇ ತದ್ರೂಪು ಮಗನನ್ನು ಜೊತೆ ಮಾಡಿ ಹೋಗಿದ್ದಾನೆ.
ಹೋಗಿದ್ದಾನೆ? ಇಲ್ಲ ನನ್ನ ನೆನಪಿನಂಗಳದಲ್ಲಿ
ನನ್ನ ಮನದಲ್ಲಿ ಸದಾ ಮುಗುಳ್ನಗುತ್ತ ನನ್ನಲ್ಲಿ ಚೈತನ್ಯ ತುಂಬುತ್ತಿರುತ್ತಾನೆ
ನನ್ನ ಇನಿಯ ಇನ್ನಿಲ್ಲ ಮನೆಯಲ್ಲಿ, ಇರುವನು ಸದಾ ನನ್ನ ಮನದಲ್ಲಿ"
ವಿಧಿವಶರಾದ ತಾರೆಗಳು: ಕನ್ನಡ ನಟ ದಿಲೀಪ್ ವಿಧಿವಶ | ಹಾಸ್ಯ ನಟ ಕರಿಬಸವಯ್ಯ ಇನ್ನಿಲ್ಲ | ಎಂ ಎಸ್ ಕಾರಂತ್ ಇನ್ನು ನೆನಪು ಮಾತ್ರ


Click it and Unblock the Notifications











