ಒಟ್ಟೊಟ್ಟಿಗೆ ಮೂರು ಸಿಹಿ ಸುದ್ದಿ ಹಂಚಿಕೊಂಡ ಕಿರುತೆರೆ ನಟಿ ದಿವ್ಯಾ ಶ್ರೀಧರ್
ಕಿರುತೆರೆಯ ನಟಿಯರು ಮದುವೆಯಾದ ಮೇಲೆ ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿ ಬಿಡುತ್ತಾರೆ. ಕೆಲವರಷ್ಟೇ ತಮ್ಮ ಕಿರುತೆರೆಯ ಜರ್ನಿಯನ್ನು ಮುಂದುವರಿಸುತ್ತಾರೆ. ಇನ್ನೂ ಕೆಲವರು ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಬಯಸುತ್ತಾರೆ.
ಅಂತಹವರಿಗೆ ಈಗ ಸೋಶಿಯಲ್ ಮೀಡಿಯಾ ಇದೆ. ಸೋಶಿಯಲ್ ಮೀಡಿಯಾ ಮೂಲಕ ಕಿರುತೆರೆ ನಟಿಯರು ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿರುವುದರ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಅಪ್ ಡೇಟ್ ಮಾಡುತ್ತಿರುತ್ತಾರೆ.
ಇದೀಗ ಕಣ್ಮಣಿ ಧಾರಾವಾಹಿಯ ಬೆಡಗಿ ದಿವ್ಯಾ ಶ್ರೀಧರ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಅಲ್ಲದೇ, ಒಂದೇ ಬಾರಿಗೆ ಅಭಿಮಾನಿಗಳಿಗೆ ಮೂರು ಮೂರು ಸಿಹಿ ಸುದ್ದಿಯನ್ನು ಹೇಳಿದ್ದು, ಸಂತಸದಲ್ಲಿ ದಿವ್ಯಾ ಶ್ರೀಧರ್ ಇದ್ದಾರೆ.

'ಕಣ್ಮಣಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ
ದಿವ್ಯಾ ಶ್ರೀಧರ್ ಅವರು ಮೂಲತಃ ಮಂಗಳೂರಿನವರು. ದಿವ್ಯಾ ಶ್ರೀಧರ್ ಅವರ ಫ್ಯಾಮಿಲಿ ಬಗ್ಗೆ ನಿರ್ಮಾಪಕ ಆನೇಕಲ್ ಬಾಲರಾಜ್ ಅವರಿಗೆ ತಿಳಿದಿತ್ತು. ಆಗಾಗ ದಿವ್ಯಾ ಅವರ ಮನೆಗೆ ಬಾಲರಾಜ್ ಅವರು ಬರುತ್ತಿದ್ದರು. ದಿವ್ಯಾ ಅವರು ಕಾಮರ್ಸ್ ಓದುವಾಗ ಅರ್ಧಕ್ಕೆ ನಿಲ್ಲಿಸಿ ಕಲಾವಿದರಾದರು. ಉದಯ ವಾಹಿನಿಯಲ್ಲಿ ಪ್ರಸಾರವಾದ ಕಣ್ಮಣಿ ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಧಾರಾವಾಹಿಗಳಲ್ಲಷ್ಟೇ ಅಲ್ಲದೇ, ದಿವ್ಯಾ ಅವರು ಸಿನಿಮಾಗಳಲ್ಲೂ ನಟಿಸಿದರು.

ತಮಿಳು ಧಾರಾವಾಹಿಯಲ್ಲೂ ನಟನೆ
ದಿವ್ಯಾ ಶ್ರೀಧರ್ ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಕಣ್ಮಣಿ', 'ಆಕಾಶದೀಪ', 'ಅಮ್ಮ', 'ಸಾಗುತ ದೂರ ದೂರ' ಸೇರಿದಂತೆ ಇನ್ನೂ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ 'ಕಣ್ಮಣಿ' ಹಾಗೂ 'ಆಕಾಶದೀಪ' ಧಾರಾವಾಹಿ ಒಳ್ಳೆ ಹೆಸರನ್ನು ತಂದುಕೊಟ್ಟಿತು. ಇನ್ನು ಕನ್ನಡ ಮಾತ್ರವಲ್ಲದೇ ದಿವ್ಯಾ ಶ್ರೀಧರ್ ಅವರು ತಮಿಳಿನ ಕಿರುತೆರೆಯಲ್ಲೂ ಮಿಂಚಿದ್ದಾರೆ. 'ಕೆಳದಿ ಕಣ್ಮಣಿ', ʼಮಹಾರಸಿʼ ಎಂಬ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಸಿನಿಮಾಗಿಂತಲೂ ಕಿರುತೆರೆಯೇ ಅಚ್ಚುಮೆಚ್ಚು
ಕಿರುತೆರೆಗಷ್ಟೇ ಸೀಮಿತವಾಗಿರದೇ ದಿವ್ಯಾ ಶ್ರೀಧರ್ ಅವರು ಸಿನಿಮಾಗಳಲ್ಲೂ ನಟಿಸಿದರು. ಕಾಶಿನಾಥ್ ಅವರ ಮಗ ಅಲೋಕ್ ಜೊತೆ '12AM ಮಧ್ಯರಾತ್ರಿ', 'ಸನಿಹ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವು ಹೊರತು ಪಡಿಸಿ, 'ಹುಚ್ ಹುಡುಗಿ', 'ಹೀಗೂ ಉಂಟೆ', 'ಸಾಚಾ', 'ವಿಚಿತ್ರ ಪ್ರೇಮಿ' ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇನ್ನು ದಿವ್ಯಾ ಶ್ರೀಧರ್ ಅವರಿಗೆ ಸಿನಿಮಾಗಳಿಗಿಂತಲೂ ಧಾರಾವಾಹಿಯಲ್ಲಿ ನಟಿಸುವುದೇ ಹೆಚ್ಚು ಇಷ್ಟವಂತೆ. ಸಿನಿಮಾಗಳನ್ನು ಜನ ಥಿಯೇಟರ್‌ಗೆ ಬಂದು ನೋಡಿ ಹೋಗುತ್ತಾರೆ ಅಷ್ಟೇ. ಅದೇ ಧಾರಾವಾಹಿಯಾದರೆ ಜನ ನಿತ್ಯ ನಮ್ಮನ್ನು ನೋಡುತ್ತಾರೆ. ನಾವು ಅವರಿಗೆ ಇನ್ನಷ್ಟು ಹತ್ತಿರವಾಗಿರಬಹುದು. ಹಾಗಾಗಿ ನನಗೆ ಸಿನಿಮಾಗಳಲ್ಲಿ ನಟಿಸುವುದಕ್ಕಿಂತಲೂ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು ಇಷ್ಟ ಎಂದು ಹೇಳುತ್ತಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿ
'ಕೆಳದಿ ಕಣ್ಮಣಿ' ಧಾರಾವಾಹಿಯಲ್ಲಿ ಸಹ ನಟನಾಗಿದ್ದ ಆರ್ನವ್ ಜೊತೆಗಿನ ಸ್ನೇಹ ಪ್ರೀತಿಗೆ ತಿರುಗಿತ್ತು. 5 ಐದು ವರ್ಷಗಳ ಕಾಲ ಪ್ರೀತಿಸಿ, ಕಳೆದ ವರ್ಷ ಇಬ್ಬರೂ ಸಪ್ತಪದಿ ತುಳಿದರು. ಇದೀಗ ಈ ಜೋಡಿ ತಮ್ಮ ಕನಸಿನ ಮನೆಯ ಗೃಹಪ್ರವೇಶ ಮಾಡಿದ್ದಾರೆ. ಇದೇ ಸಂತಸದಲ್ಲಿರುವಾಗಲೇ ಈ ಜೋಡಿಗಳು ಪೋಷಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಈ ಸಂತಸದ ವಿಚಾರವನ್ನು ದಿವ್ಯಾ ತಮ್ಮ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಒಟ್ಟೊಟ್ಟಿಗೆ ಮೂರು ವಿಚಾರಗಳನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications











