ಗಗನ ಸಖಿಯಾಗಿದ್ದ ವಿದ್ಯಾಶ್ರೀ ಕಿರುತೆರೆಗೆ ಎಂಟ್ರಿಯಾಗಿದ್ದು ಹೇಗೆ ಗೊತ್ತಾ?
ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳು ಜನರನ್ನು ಪ್ರತಿದಿನ ರಂಜಿಸುತ್ತಿವೆ. ಇಂತಹ ಧಾರವಾಹಿಗಳಲ್ಲಿ ಉದಯ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾವ್ಯಾಂಜಲಿ ಧಾರಾವಾಹಿ ಕೂಡ ಒಂದು. ಕಾವ್ಯಾಂಜಲಿ ಧಾರಾವಾಹಿ ನಾಯಕ ನಟಿಯಾಗಿ ಕಾವ್ಯಾ ಎಂಬ ಪಾತ್ರದಲ್ಲಿ ನಟಿಸುತ್ತಿರುವ ಚೆಲುವೆಯ ಹೆಸರು ವಿದ್ಯಾಶ್ರೀ ಜಯರಾಮ್. ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿದ ವಿದ್ಯಾಶ್ರೀ ಅವರು ನಟಿಸುವುದನ್ನು ಬಿಡಿ, ಅದರ ಬಗ್ಗೆ ಕನಸು ಕೂಡ ಕಂಡಿರಲಿಲ್ಲ. ಆದರೆ ವಿಧಿಯೇ ಅವರನ್ನು ನಟನಾ ಕ್ಷೇತ್ರಕ್ಕೆ ಎಳೆದು ತಂದಿತು.
ವಿದ್ಯಾ ನಟನಾ ಕ್ಷೇತ್ರಕ್ಕೆ ಬಂದಿದ್ದು ಬಹು ಆಕಸ್ಮಿಕ. ಎವಿಯೇಶನ್ ಡಿಪ್ಲೋಮಾ ಕೋರ್ಸ್ ಮುಗಿಸಿರುವ ವಿದ್ಯಾಶ್ರೀ ಗೋ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿದ್ದರು. ಮೂರು ವರ್ಷಗಳ ಕಾಲ ಗಗನಸಖಿಯಾಗಿ ಕಾರ್ಯ ನಿರ್ವಹಿಸಿದ ವಿದ್ಯಾಗೆ ಆ ವೃತ್ತಿಯಲ್ಲಿ ಸಂತೃಪ್ತಿ ಸಿಗದೆ, ಜೀವನದಲ್ಲಿ ಇನ್ನೇದರೂ ಹೊಸತು ಮಾಡಬೇಕೆಂಬ ಹಂಬಲ ಕಾಡುತ್ತಲೇ ಇತ್ತು. ಇದೇ ಹಂಬಲ ವಿದ್ಯಾರನ್ನು ನಟಿಯಾಗುವಂತೆ ಪ್ರೇರೇಪಿಸಿತು.

ನಟನಾ ಕ್ಷೇತ್ರಕ್ಕೆ ಬಂದಿದ್ದು ಆಕಸ್ಮಿಕ
ಜಯರಾಮ್ ಮತ್ತು ಪ್ರಭಾಮಣಿ ದಂಪತಿಗಳ ಮಗಳು ವಿದ್ಯಾಶ್ರೀ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ತೀರಾ ಆಕಸ್ಮಿಕ. ಮೊದಲೇ ಹೇಳಿದಂತೆ ಸಾಂಪ್ರದಾಯಿಕ ವಾತಾವರಣದಲ್ಲಿ ಬೆಳೆದ ಆಕೆ ನಟಿಸುವುದು ಬಿಡಿ, ಅದರ ಬಗ್ಗೆ ಕನಸು ಕಾಣುವುದು ಕೂಡಾ ಸಾಧ್ಯವಿರಲಿಲ್ಲ. ಆದರೆ ಮನೊರಂಜನಾ ಕ್ಷೇತ್ರದ ಕಡೆಗೆ ಸೆಳೆತವಂತೂ ವಿದ್ಯಾಶ್ರೀಗೆ ಇತ್ತು.

ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ವಿದ್ಯಾಶ್ರೀ
ಏನು ಮಾಡಬೇಕು ಎಂದು ಆಲೋಚಿಸುತ್ತಿರುವಾಗಲೇ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಅವಕಾಶ ದೊರಕಿತು. ಖಾಸಗಿ ವಾಹಿನಿಯಲ್ಲಿ ತಕಧಿಮಿತ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ವಿದ್ಯಾಶ್ರೀ ಅಗ್ನಿಸಾಕ್ಷಿಯ ಅಖಿಲ್ ಖ್ಯಾತಿಯ ರಾಜೇಶ್ ಧ್ರುವ ಅವರಿಗೆ ಡ್ಯಾನ್ಸ್ ಪಾರ್ಟನರ್ ಆಗಿ ಕಾಣಿಸಿಕೊಂಡರು. ತಮ್ಮ ನೃತ್ಯ ಪ್ರತಿಭೆ ಮೂಲಕ ಪ್ರತಿ ವಾರವೂ ಕಿರುತೆರೆ ವೀಕ್ಷಕರ ಜೊತೆಗೆ ತೀರ್ಪುಗಾರರ ಮನ ಸೆಳೆಯುತ್ತಿದ್ದ ಈ ಜೋಡಿ ಹದಿನಾಲ್ಕು ರೌಂಡ್ ಪಾಸ್ ಆಗಿತ್ತು. ತಕಧಿಮಿತ ಶೋವಿನಿಂದ ಹೊರಬಂದ ಬಳಿಕ ವಿದ್ಯಾಶ್ರೀ ಆಯ್ದುಕೊಂಡಿದ್ದು ನಟನಾ ಕ್ಷೇತ್ರವನ್ನು! ಧಾರಾವಾಹಿಗಳಲ್ಲಿ ನಟಿಸಬೇಕು ಎಂಬ ತಮ್ಮ ಬಯಕೆಯನ್ನು ಅಪ್ಪನಲ್ಲಿ ಹೇಳಿದಾಗ ಅಪ್ಪ ಒಕೆ ಅಂದರು. ಮುಂದೆ ಧಾರಾವಾಹಿಗಳ ಆಡಿಶನ್ ಗಳಿಗೆ ಹೋಗಲಾರಂಭಿಸಿದರು.

ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ನಟಿ
ಆಡಿಶನ್‌ಗಳಿಗೆ ಹೋಗುತ್ತಿದ್ದ ವಿದ್ಯಾಶ್ರೀಗೆ 'ಕಾಯಿರಿ, ಹೇಳುತ್ತೇವೆ' ಎಂಬ ಉತ್ತರಗಳೇ ಸಿಗುತ್ತಿತ್ತೇ ಹೊರತು ನೀವು ಆಯ್ಕೆ ಆಗಿದ್ದೀರಿ ಎಂಬ ಉತ್ತರ ಯಾವ ಕಡೆಯಿಂದಲೂ ಬರಲಿಲ್ಲ. ಆದರೂ ತಮ್ಮ ಪ್ರಯತ್ನ ಬಿಡಲಿಲ್ಲ. ಇನ್ನೇನು ಪ್ರಯತ್ನ ಕೈಬಿಡಬೇಕು ಎಂದುಕೊಳ್ಳುವಷ್ಟರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಬೇಕಿದ್ದ ಧಾರಾವಾಹಿಗೆ ಕೊಟ್ಟ ಆಡಿಶನ್‌ಗೆ ಆಯ್ಕೆ ಆದರು.

ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಂಡ ನಟಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವರಲಕ್ಷ್ಮಿ ಸ್ಟೋರ್ಸ್' ಧಾರಾವಾಹಿಯಲ್ಲಿ ರಮ್ಯಾ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ವಿದ್ಯಾಶ್ರೀ ಮೊದಲ ಧಾರಾವಾಹಿಯಲ್ಲಿಯೇ ಪಾಸಿಟಿವ್ ಮತ್ತು ನೆಗೆಟಿವ್ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಮನೋಜ್ಞ ನಟನೆಯ ಮೂಲಕ ಮನೆ ಮಾತಾದ ವಿದ್ಯಾಶ್ರೀ ಸದ್ಯ 'ಕಾವ್ಯಾಂಜಲಿ'ಯ ಕಾವ್ಯಳಾಗಿ ಮಿಂಚುತ್ತಿದ್ದಾರೆ. ಇದರ ಹೊರತಾಗಿ ವಿದ್ಯಾಶ್ರೀಗೆ ಸಿನಿಮಾರಂಗದಿಂದಲೂ ಅವಕಾಶಗಳು ದೊರೆಯುತ್ತಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡರೆ ಅಚ್ಚರಿಯೇನಿಲ್ಲ.


Click it and Unblock the Notifications











