»   » ಜೀ ಕನ್ನಡದಲ್ಲಿ ಎರಡು ಹೊಸ ಅಲೆಯ ಧಾರಾವಾಹಿ

ಜೀ ಕನ್ನಡದಲ್ಲಿ ಎರಡು ಹೊಸ ಅಲೆಯ ಧಾರಾವಾಹಿ

Posted By:
Subscribe to Filmibeat Kannada

ಹೊಸ ಅಲೆಯ ವಿನೂತನ ಧಾರಾವಾಹಿಗಳನ್ನು ಕನ್ನಡಿಗರಿಗೆ ನೀಡುವಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ ಜೀ ಕನ್ನಡವಾಹಿನಿ ಸೋಮವಾರದಿಂದ (ಫೆ.16) ಮತ್ತೆರಡು ಸೀರಿಯಲ್ ಗಳನ್ನು ಆರಂಭಿಸುತ್ತಿದೆ.

ಫೆಬ್ರವರಿ 16 ರಿಂದ ರಾತ್ರಿ 8ಕ್ಕೆ 'ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ' ಹಾಗೂ 8.30 ಕ್ಕೆ 'ಒಂದೂರ್ನಲ್ಲಿ ರಾಜರಾಣಿ' ಎಂಬ ಹೊಸ ಕಥಾನಕಗಳನ್ನು ನೋಡುವ ಅವಕಾಶ ಕಿರುತೆರೆ ವೀಕ್ಷಕರಿಗೆ ದೊರೆಯಲಿದೆ.

ಈ ಮೊದಲು ಕಾವ್ಯಾಂಜಲಿ, ಕೃಷ್ಣ ರುಕ್ಮಿಣಿ, ಅಮೃತವರ್ಷಿಣಿ, ಅರಗಿಣಿ, ಅವನು ಮತ್ತೆ ಶ್ರಾವಣಿಯಂಥ ಜನಪ್ರಿಯ ಧಾರಾವಾಹಿಗಳನ್ನು ಕೊಡುಗೆಯಾಗಿ ನೀಡಿದ ರವಿ.ಆರ್. ಗರಣಿ ಈ ಎರಡು ಮೆಗಾ ಸೀರಿಯಲ್ ಗಳ ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ. ಎಂದಿನ ಹಾಗೆ ಈ ಎರಡೂ ಧಾರಾವಾಹಿಗಳಲ್ಲಿ ಹೆಚ್ಚಾಗಿ ಹೊಸ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.

'ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ' ಒಂದು ಅಪ್ಪಟ ಹಳ್ಳಿಯ ಸೊಗಡಿನ ಕಥೆಯಾಗಿದೆ. ಕಥಾನಾಯಕ ರಂಗೇಗೌಡ ಅವಿದ್ಯಾವಂಥನಾದರೂ ಊರಿನ ಮುಖ್ಯಸ್ಥ ನ್ಯಾಯ ಹೇಳುವ ಧೀಮಂತ ವ್ಯಕ್ತಿತ್ವದವನು. ಹಳ್ಳಿಯ ಬಗ್ಗೆ ಹೆಮ್ಮೆ ಪಡುವ, ಪುಂಡರನ್ನು ಸದೆ ಬಡಿಯಬಲ್ಲ ಶಕ್ತಿವಂತ.

Two new serials on Zee Kannada

ಮಲತಾಯಿಯೇ ತನ್ನ ದೇವರೆಂದು ನಂಬಿರುವ ರಂಗೇಗೌಡ ಅಮ್ಮ ಹಾಕಿದ ಗೆರೆಯನ್ನು ಎಂದಿಗೂ ದಾಟುವುದಿಲ್ಲ. ರಂಗೇಗೌಡನ ಮಲತಾಯಿ ಗೋಮುಖ ವ್ಯಾಘ್ರವಾದರೂ ರಂಗೇಗೌಡನನ್ನು ತನ್ನ ಮಮತೆಯ ಮಡಿಲಲ್ಲಿ ಬಂಧಿಸಿಟ್ಟಿರುತ್ತಾಳೆ. ಕಥಾನಾಯಕಿ ಐಶ್ವರ್ಯಾ ಬೆಂಗಳೂರು ನಗರದಲ್ಲಿ ಬೆಳೆದಿರುವ ಮಾರ್ಡನ್ ಹುಡುಗಿ. ಪದವೀಧರಳಾಗಿದ್ದ ಐಶ್ವರ್ಯಾ ತನಗಿಂತಲೂ ಹೆಚ್ಚು ಓದಿರುವ ಹುಡುಗನನ್ನು ಮದುವೆಯಾಗಿ ನಗರ ಜೀವನದಲ್ಲೇ ನೆಲೆಸುವ ಆಶಯ ಹೊಂದಿರುತ್ತಾಳೆ.

ಆದರೆ ರಂಗೇಗೌಡ ಹಾಗೂ ಐಶ್ವರ್ಯಾ ಇಬ್ಬರಿಗೂ ಒಂದು ವಿಶೇಷ ಸಂದರ್ಭದಲ್ಲಿ ಪರಿಚಯವಾಗಿ ಮದುವೆಯಾಗಿರುತ್ತದೆ. ಸಿಟಿ ಹುಡುಗಿ ಐಶ್ವರ್ಯಾ ಹಳ್ಳಿ ಜೀವನಕ್ಕೆ ಒಗ್ಗಿಕೊಳ್ಳುವಳೆ? ರಂಗೇಗೌಡನ ಮಲತಾಯಿಯ ದುರುದ್ದೇಶವನ್ನು ಗಂಡನಿಗೆ ಅರ್ಥ ಮಾಡಿಸುವಲ್ಲಿ ಸಫಲಳಾದವಳೇ? ಇಲ್ಲವೇ? ಎಂಬುದು ಕಥೆಯ ಮೂಲ ಎಳೆ.

'ಒಂದೂರ್ನಲ್ಲಿ ರಾಜ ರಾಣಿ', ಒಂದು ವಿಶಿಷ್ಟವಾದ ಕಥೆ, ತಾಯಿ ಬದುಕಿದ್ದರೂ ತಂದೆ ಅನಿವಾರ್ಯವಾಗಿ ಹೇಳಿದ್ದ ಸುಳ್ಳನ್ನೇ ನಂಬಿ, ಅಪ್ಪನಿಗೆ ಮರು ಮದುವೆ ಮಾಡಿಸಲು ಯತ್ನಿಸುತ್ತಿರೋ ತುಂಟಾಟದ ಹುಡುಗಿ ಇಶಾರಾಣಿಯ ಕಥೆ ಇದು. ಕಥಾನಾಯಕ ರಾಜ್ ದೇವ್ ಒಬ್ಬ ಶ್ರೀಮಂತ ಮನೆತನದ ಹುಡುಗನಾದರೂ ಸಾದಾಸೀದಾ ಲೋಕಲ್ ಅಭ್ಯಾಸಗಳನ್ನು ಬೆಳೆಸಿಕೊಂಡ ಗೆಳೆಯರ ಗೆಳೆಯ ರಾಜ ತನ್ನ ಸ್ವಂತ ತಾಯಿಗಿಂತಲೂ ಸೋದರತ್ತೆ ಗೀತಾಂಜಲಿಯನ್ನೇ ತುಂಬ ಹಚ್ಚಿಕೊಂಡಿರುತ್ತಾನೆ.

ಹಲವು ವರ್ಷಗಳ ಹಿಂದೆಯೇ ದೂರವಾಗಿರುವ ಅತ್ತೆಯ ಗಂಡ ಹಾಗೂ ಮಗಳನ್ನು ರಾಜ್ ದೇವ್ ಹುಡುಕುತ್ತಿರುತ್ತಾನೆ. ರಾಜ ರಾಣಿಯ ಹುಡುಕಾಟದ ಸಂದರ್ಭದಲ್ಲಿ ಅವರಿಬ್ಬರ ಭೇಟಿ ಜಗಳದಿಂದಲೇ ಆಗುತ್ತದೆ. ಜಗಳದಲ್ಲೇ ಮುಂದುವರೆಯುತ್ತದೆ.

ರಾಣಿಯ ತಂದೆ ಹಾಗೂ ರಾಜನ ಅತ್ತೆ ಗಂಡ ಹೆಂಡತಿ ಎಂಬ ಸತ್ಯ ಇಬ್ಬರಿಗೂ ತಿಳಿದಾಗ ಮುಂದೆ ನಡೆಯುವ ಸಂಬಂಧಗಳ ತೊಳಲಾಟ, ತಾಕಲಾಟದಂಥಹ ಕಥೆಯನ್ನು ವೀಕ್ಷಕರ ಮನಕ್ಕೊಪ್ಪುವಂತೆ ಸೊಗಸಾಗಿ ನಿರೂಪಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Get set to watch two new soap operas on Zee Kannada from 16th February. Mr and Mrs Rangegwoda (8 pm) and Vondurnalli Raajarani (8.30 pm). Both the serials are directed by well known television director Ravi Garani.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada