ಉದಯ ಟಿವಿ 'ಸೇವಂತಿ' ಧಾರಾವಾಹಿಯ ಸಂಗೀತಾ ರಿಯಲ್ ಲೈಫ್‌ನಲ್ಲಿ ಹೀಗಿಲ್ಲ!
ಸಂಗೀತಾ ಎಂದ ಕೂಡಲೇ ಯಾರಿಗೆ ತಾನೇ ನೆನಪಿರುವುದಿಲ್ಲ ಹೇಳಿ. ಅಣ್ಣಾವ್ರ ಸಿನಿಮಾದಲ್ಲಿ ಬಾಲ ನಟಿಯಾಗಿ, ದೇವರಾಜ್, ಕುಮಾರ್ ಗೋವಿಂದ್ ಸೇರಿದಂತೆ ಹಲವರ ಜೊತೆ ನಟಿಯಾಗಿ ಸ್ಕ್ರೀನ್ ಶೇರ್ ಮಾಡಿದವರು. ಆದರೆ ಇವರನ್ನು ಈಗ ನೋಡಿದರು ಹಿರಿಯ ನಟಿ ಎನ್ನುವುದಕ್ಕೆ ಖಂಡಿತಾ ಮನಸ್ಸು ಒಪ್ಪುವುದಿಲ್ಲ. ಹೆಂಗಳೆಯರು ನಾಚುವಂತೆ ಯಂಗ್ ಇದ್ದಾರೆ. ಸ್ಟಾರ್ ಸುವರ್ಣದಲ್ಲಿ ಬರುತ್ತಿದ್ದ 'ಇಂತಿ ನಿಮ್ಮ ಆಶಾ ಧಾರಾವಾಹಿ'ಯಲ್ಲಂತೂ ಇವರೇ ಹೈಲೈಟ್. ಉದಯ ಟಿವಿಯ ಸೇವಂತಿಯಲ್ಲಿ ಇವರೆಂದರೆ ಇಷ್ಟ. ಬರೀ ಪೋಷಕ ನಟಿ ಪಾತ್ರದಲ್ಲಿಯೇ ಕಾಣಿಸಿಕೊಳ್ಳುವ ಸಂಗೀತಾ ರಿಯಲ್ ಲೈಫ್ ಹೇಗಿದೆ ಗೊತ್ತಾ..?
ಸಂಗೀತಾ ಗುಬ್ಬಿ ವೀರಣ್ಣ ಅವರ ಮೊಮ್ಮಗಳು. ಹೀಗಾಗಿ ಕಲೆ ಎಂಬುದು ಕರಗತವಾಗಿಯೇ ಇರುತ್ತೆ. ಸಂಗೀತಾ ಕಲೆಯ ಜರ್ನಿಗೆ ಇದೀಗ 26 ವರ್ಷ ತುಂಬಿದೆ. ಬಾಲ ನಟಿಯಾಗಿ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ನೀನು ನನ್ನ ಗೆಲ್ಲಲಾರೆ', 'ಹಾಲು ಜೇನು' ಸಿನಿಮಾದಲ್ಲಿ ಅಣ್ಣಾವ್ರ ಜೊತೆಗೂ ನಟಸಿದ್ದಾರೆ. 10ನೇ ತರಗತಿಯಲ್ಲಿದ್ದಾಗಲೇ 'ಕಾವೇರಿ ತೀರದಲ್ಲಿ' ಸಿನಿಮಾದಲ್ಲಿ ನಟಿಯಾಗಿ ಎಂಟ್ರಿಯಾದವರು. ಪಿಯುಸಿವರೆಗೂ ಅವಕಾಶಗಳ ಸುರಿಮಳೆ ಬಂದಿತ್ತು. ಅಪ್ಪನ ಮಾತಿಗೆ ಕಟ್ಟುಬಿದ್ದು ಪದವಿ ಮಾಡಲು ಹೊರಟ ಸಂಗೀತಾ ಜರ್ನಿ ಇದೀಗ ಸೇವಂತಿವರೆಗೂ ಮುಂದುವರೆದಿದೆ.

ತೆರೆ ಹಿಂದೆ ಗ್ಲಾಮರ್ ಗೊಂಬೆ
ಸಂಗೀತಾರನ್ನು ನಾವೂ ಹೆಚ್ಚು ನೋಡಿರುವುದು ಸೀರೆಯಲ್ಲಿಯೇ. ಸೀರೆಯಲ್ಲಿಯೇ ತುಂಬಾ ಮುದ್ದಾಗಿ ಕಾಣುವುದು ಕೂಡ. ಉದ್ದನೆಯ ಕೂದಲನ್ನು ಕೊಂಚ ಫ್ರೀ ಬಿಟ್ಟು ಜಡೆ ಹೆಣೆದು, ಸೀರೆ ಉಟ್ಟರೆ ಅಬ್ಬಬ್ಬಾ ಅದೆಷ್ಟು ಮುದ್ದಾಗಿ ಕಾಣುತ್ತಾರೆ. ನೋಡುಗರಿಗೂ ಈ ಲುಕ್ ಸಿಕ್ಕಾಪಟ್ಟೆ ಇಷ್ಟವಾಗಿರುವುದಂತು ಸುಳ್ಳಲ್ಲ. ಅದರ ಜೊತೆಗೆ ಸಂಗೀತಾಗೆ ಯಾವ ಡ್ರೆಸ್ ಹಾಕಿದರೂ ಅದ್ಭುತವಾಗಿ ಕಾಣುತ್ತಾರೆ ಅನ್ನೋದಕ್ಕೆ ಅವರು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೊ ವಿಡಿಯೋಗಳೇ ಕಾರಣ. ಅಮ್ಮನ ಲುಕ್ಕಿಗೂ ಸೈ.. ಮಾಡರ್ನ್ ಲುಕ್ಕಿಗೂ ಜೈ ಅನ್ನೋದು ಸಂಗೀತಾ ಫೋಟೊಗಳನ್ನು ನೋಡಿದರೇನೆ ಗೊತ್ತಾಗುತ್ತೆ.

ನಾಯಕಿಯಾಗಲು ಬಂದು ಪೋಷಕ ನಟಿಯಾದೆ
10 ನೇ ತರಗತಿಯಿಂದ ನಟಿಯಾಗಿ ಸಂಗೀತ ತನ್ನ ವೃತ್ತಿ ಜೀವನ ಶುರು ಮಾಡಿದ್ದರು. ಆ ಬಳಿಕ ವಿದ್ಯಾಭ್ಯಾಸ ಅಂತ ಅವರ ತಂದೆ ನಟಿಸುವುದು ಬೇಡ ಎಂದು ಹೇಳಿದ್ದರಂತೆ. ಸರಿ ಅಂತ ಪದವಿ ಮುಗಿದ ಬಳಿಕ ಧಾರಾವಾಹಿಯಲ್ಲಿ ನಟಿಸುತ್ತಾ ಇರುವಾಗಲೇ ಮದುವೆಯನ್ನು ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಯೂಟ್ಯೂಬ್ ಒಂದರ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ, ಮಗುವಾದ ಮೇಲು ಸಾಕಷ್ಟು ಅವಕಾಶಗಳು ಬರುತ್ತಿದ್ದವು. ಆದರೆ ನಾನು ರಿಜೆಕ್ಟ್ ಮಾಡುತ್ತಿದ್ದೆ. ಬಳಿಕ ಪತಿನೇ ಸಿನಿಮಾದಲ್ಲಿ ನಟಿಸು ಎಂದಾಗ 'ಗಜ' ಸಿನಿಮಾದಲ್ಲಿ ಪೋಷಕ ನಟಿ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡೆ ಎನ್ನುತ್ತಾರೆ. ಮದುವೆಯಾಗಿದೆ, ಇನ್ನು ನಟಿಯಾಗುವುದಕ್ಕೆ ಸಾಧ್ಯವಿಲ್ಲ ಅಂತ ನಾನೇ ಸುಮ್ಮನಾಗಿಬಿಟ್ಟಿದ್ದೆ. ಪ್ರಯತ್ನ ಪಟ್ಟಿದ್ದರೆ ನಾನು ಅವತ್ತೂ ನಟಿಯಾಗುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

ಸಂಭಾವನೆ ಬಗ್ಗೆ ಸಂಗೀತಾ ಬೇಸರ
ಕೆಲವೊಬ್ಬರು ಈ ಸಮಸ್ಯೆ ಬಗ್ಗೆ ಮಾತಾಡುತ್ತಾರೆ. ಇನ್ನು ಕೆಲವೊಬ್ಬರು ಮಾತನಾಡುವುದಿಲ್ಲ. ಆದರೆ, ಸಂಗೀತಾ ಈ ಬಗ್ಗೆ ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಸಂಭಾವನೆ ವಿಚಾರದಲ್ಲೂ ತುಂಬಾ ಬೇಸರ ಇದೆ. ಗಂಡು ಮಕ್ಕಳಿಗೆ ಹೆಚ್ಚು ಸಂಭಾವನೆ ಸಿಗುತ್ತೆ. ಹೆಣ್ಣು ಮಕ್ಕಳಿಗೆ ಕಡಿಮೆ ಸಂಭಾವನೆ ಸಿಗುತ್ತೆ. ಇದು ಯಾವಾಗ ಸರಿಯಾಗುತ್ತೆ ಅನ್ನೋದು ಬೇಸರ ನಿಜಕ್ಕೂ ಕಾಡುತ್ತಿದೆ. ಇನ್ನು ಪಾತ್ರಗಳಲ್ಲೂ ಅಷ್ಟೇ ಕನ್ನಡದಲ್ಲಿ ಕನ್ನಡಿಗರಿಗೆ ಅವಕಾಶ ನೀಡುತ್ತಿಲ್ಲ. ಒಂದು ಸಿನಿಮಾದಲ್ಲಿ ಒಳ್ಳೆ ಪಾತ್ರ ಇದೆ ಎಂದಾಗ ಅದಕ್ಕೆ ಕನ್ನಡದ ನಟಿಯರಿಗಿಂತ ತೆಲುಗಿನಲ್ಲಿ ಯಾರು ಒಪ್ಪುತ್ತಾರೆ ಎಂಬುದನ್ನು ಯೋಚಿಸುತ್ತಾ ಇರುತ್ತಾರೆ. ಕನ್ನಡದವರೇ ಕನ್ನಡ ಕಲಾವಿದರನ್ನು ಬೆಳೆಸಲ್ಲ ಎಂಬ ಬೇಸರ ಯಾವಾಗಲೂ ಇದೆ ಎಂದಿದ್ದಾರೆ.

ಮಗ ಅಂದರೆ ಪಂಚ ಪ್ರಾಣ
ಧಾರಾವಾಹಿ, ಸಿನಿಮಾ ಅಂತ ಸಂಗೀತಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅಮ್ಮನ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಿರುವ ಸಂಗೀತಾ ರಿಯಲ್ ಲೈಫ್‌ನಲ್ಲೂ ಪರ್ಫೆಕ್ಟ್ ಅಮ್ಮ. ಸಮಯ ಸಿಕ್ಕಾಗೆಲ್ಲಾ ಮಗನ ಜೊತೆ ರೀಲ್ಸ್ ಮಾಡಿಕೊಂಡಿರುತ್ತಾರೆ. ಅಷ್ಟೇ ಅಲ್ಲ ಮಗನ ಜೊತೆ ಆಗಾಗ ಟ್ರಿಪ್ ಹಾಕುತ್ತಾ ಇರುತ್ತಾರೆ. ಅವರ ಸೋಶಿಯಲ್ ಮೀಡಿಯಾದಲ್ಲೂ ಮಗನ ಜೊತೆಗಿನ ಫೋಟೊಗಳೇ ಹೆಚ್ಚು ರಾರಾಜಿಸುತ್ತಿವೆ.


Click it and Unblock the Notifications











