Shambavi: ಧಾರಾವಾಹಿ ಲೋಕಕ್ಕೆ ಸಿಂಪಲ್ ಸುನಿ: ದೇವರಾಗಿ, ದೆವ್ವವಾಗಿ ಕಾಡುವ ಮಗು ಕರೆ ತಂದರು ಡೈರೆಕ್ಟರ್..!
ಇದು ಧಾರಾವಾಹಿಗಳ ಜಗತ್ತು. ಧಾರಾವಾಹಿಗಳ ನಡುವೆಯೇ ಸ್ಪರ್ಧೆ ನಡೆಯುತ್ತಿದೆ. ಧಾರಾವಾಹಿ ಲೋಕದಲ್ಲಿ ಉದಯ ಟಿವಿ ಮೊದಲ ಸ್ಥಾನದಲ್ಲಿ ಇತ್ತು. 80-90ರ ದಶಕದಲ್ಲಿ ಉದಯ ಟಿವಿಯಲ್ಲಿ ಬರುವ ಎಲ್ಲಾ ಧಾರಾವಾಹಿಗಳು ಮಕ್ಕಳಿಂದ ಹಿಡಿದು ವೃದ್ಧರ ತನಕ ಅಚ್ಚು ಮೆಚ್ಚಾಗಿದ್ದವು. ಒಂದು ದಿನ ಕೂಡ ಯಾರೂ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ಇದೀಗ ಮತ್ತೆ ಅಷ್ಟೇ ಸದ್ದು ಮಾಡುವುದಕ್ಕೆ ಉದಯ ಟಿವಿ ಹೊರಟಿದೆ. ಹೊಸ ಹೊಸ ಧಾರಾವಾಹಿ ಮೂಲಕ.
ಈಗಾಗಲೇ ಉದಯ ಟಿವಿಯಲ್ಲಿ ಉತ್ತಮವಾದ ಧಾರಾವಾಹಿಗಳು ಬರುತ್ತಿವೆ. 'ಕನ್ಯಾದಾನ', 'ಆನಂದರಾಗ', 'ಅಣ್ಣತಂಗಿ', 'ಸೇವಂತಿ', 'ಜನನಿ', 'ರಾಧಿಕಾ', 'ಗೌರಿಪುರದ ಗಯ್ಯಾಳಿಗಳು' ಹೀಗೆ ಹಲವು ಧಾರಾವಾಹಿಗಳು ಎಲ್ಲರ ಮನಸ್ಸನ್ನು ಮುಟ್ಟುತ್ತಿವೆ. ಆ ಸಾಲಿಗೆ ಈಗ ಹೊಸದಾಗಿ 'ಶಾಂಭವಿ' ಎಂಬ ಧಾರಾವಾಹಿ ಸೇರಿಕೊಂಡಿದೆ.

ಸಿಂಪಲ್ ಸುನಿ ನಿರ್ದೇಶನದ ಶಾಂಭವಿ
ಇಷ್ಟು ದಿನ ಸಿನಿಮಾಗಳಲ್ಲಿ ಹೆಸರು ಮಾಡಿದ್ದಂತ ನಿರ್ದೇಶಕ ಸಿಂಪಲ್ ಸುನಿ. 'ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ' ಸಿನಿಮಾ ಮೂಲಕ ಖ್ಯಾತಿ ಪಡೆದು ಹಲವು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದ ಸಿಂಪಲ್ ಸುನಿ, ಇದೀಗ ಧಾರಾವಾಹಿ ಲೋಕಕ್ಕೆ ಬಂದಿದ್ದಾರೆ. ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಉದಯ ಟಿವಿಯಲ್ಲಿ ಸಿಂಪಲ್ ಸುನಿ ನಿರ್ದೇಶನದಲ್ಲಿ 'ಶಾಂಭವಿ' ಧಾರಾವಾಹಿ ಶುರುವಾಗಲಿದೆ.
ಪುಟ್ಟ ಹುಡುಗಿಯ ಕಥೆ
ಶಾಂಭವಿ ಮುದ್ದಾದ 6 ವರ್ಷದ ಮಗು. ಇವಳ ಅಮ್ಮ ಶಿವಗಾಮಿ ಸಾವಿರಾರು ಕೋಟಿ ಆಸ್ತಿಯ ಒಡತಿ. ಶ್ರೀ ಶಾಂಭವಿ ಶಿಕ್ಷಣ ಸಂಸ್ಥೆ ಜೊತೆ ಇನ್ನೂ ಹಲವು ಉದ್ಯಮಗಳಿವೆ. ಇವಳಿಗೊಬ್ಬ ಅಣ್ಣ ಹರಿಪ್ರಸಾದ್. ಅಣ್ಣತಂಗಿಗೆ ಅವರಿಬ್ಬರೇ ಪ್ರಪಂಚ. ನಾಯಕ ಅಶೋಕ ಅವರ ಸಂಸ್ಥೆಯಲ್ಲಿ ಶಿಕ್ಷಕನಾಗಿ ಸೇರುವುದರೊಂದಿಗೆ ಕಥೆ ತಿರುವು ಪಡೆದುಕೊಳ್ಳುತ್ತದೆ. ಅಶೋಕನ ಮನೆಯವರು ದುಡ್ಡಿಗಾಗಿ ಹಪಹಪಿಸುವ ಮಂದಿ. ಅವನ ಅಮ್ಮ ಮತ್ತು ತಮ್ಮಂದಿರು ತುಂಬಾ ಖತರ್ನಾಕ್.

ಕಾಣೆಯಾದ 'ಶಾಂಭವಿ'
ಎಂತೆಂಥ ಸಂಬಂಧ ಬಂದರೂ ಮದುವೆಗೆ ಒಪ್ಪದಿದ್ದ ಶಿವಗಾಮಿ ಮಧ್ಯಮ ವರ್ಗದ ಅಶೋಕ್ ಪ್ರೀತಿಯಲ್ಲಿ ಬೀಳುತ್ತಾಳೆ. ಅವನ ಹಿಂದಿನ ಷಡ್ಯಂತ್ರದ ಬಲೆಯಲ್ಲಿ ಸಿಲುಕಿಕೊಳ್ಳುತ್ತಾಳೆ. ಮದುವೆಯೂ ಆಗುತ್ತದೆ. ಅವರಿಗೆ ಹುಟ್ಟಿದ ಮಗುವೇ ಶಾಂಭವಿ. ಮುಂದೆ ಒಂದು ದಿನ 'ಶಾಂಭವಿ' ಕಾಣೆಯಾಗುತ್ತಾಳೆ. ಶಿವಗಾಮಿ ಹುಚ್ಚಿಯಾಗುತ್ತಾಳೆ. ಅದೇ ಸಮಯಕ್ಕೆ ಒಂದು ದೇವಿಯ ಪ್ರತಿಷ್ಠಾಪನೆ ಆಗುತ್ತದೆ. ಕಾಣೆಯಾದ ಶಾಂಭವಿಗೂ ಈ ದೇವಿ ಇರುವ ಜಾಗಕ್ಕೂ ಸಂಬಂಧವಿದೆ.
ಪ್ರೋಮೊ ಹಂಚಿಕೊಂಡ ಐಶ್ವರ್ಯ
ಒಂದು ದಿನ ಶಾಂಭವಿ ಇನ್ನು ಮರಳಿ ಬರುವುದಿಲ್ಲ ಎಂದೇ ನಂಬಿದ್ದ ದುಷ್ಟಪಡೆಗೆ ಚಳ್ಳೆಹಣ್ಣು ತಿನ್ನಿಸಲು ಪುಟ್ಟ ಶಾಂಭವಿ ಮರಳಿ ಬರುತ್ತಾಳೆ. ಅವರ ಪಾಲಿಗೆ ಕಾಡುವ ದೆವ್ವವಾಗಿ, ಒಳ್ಳೆಯವರ ಪಾಲಿಗೆ ದೇವತೆಯಾಗಿ. ಐಶ್ವರ್ಯಾ ಸಿಂಧೋಗಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಶಾಂಭವಿ ಧಾರಾವಾಹಿಯ ಪ್ರೋಮೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಹುಲಿ ಕುಣಿತದ ನಡುವೆ ನಿಂತು ಪೋಸ್ ಕೊಟ್ಟಿರುವುದನ್ನು ಹಂಚಿಕೊಂಡಿದ್ದಾರೆ.
ಶಾಂಭವಿ ಧಾರಾವಾಹಿ ಮಾಹಿತಿ
ಈ ಧಾರಾವಾಹಿಯಲ್ಲಿ ಐಶ್ವರ್ಯಾ ಸಿಂಧೋಗಿ, ಹರೀಶ್ ಟಿವಿ, ವಿನಯ ಗೌಡ, ಅಂಬುಜಾಕ್ಷಿ ನಟಿಸಿದರೆ ಪೂಜಿತಾ, ಡಾಲಿ ರಾಜೇಶ್, ಸೂರ್ಯ ಕುಂದಾಪುರ, ರೋಹಿತ್ ನಾಯರ್ , ಶ್ಯಾಮಲಮ್ಮ ಮುಂತಾದವರು ನಟಿಸಿದ್ದಾರೆ. ಅದರ ಜೊತೆಗೆ 'ಶಾಂಭವಿ'ಯಾಗಿ ರಚನಾ ಎಂಬ ಪುಟ್ಟ ಬಾಲಕಿ ಕಾಣಿಸಿಕೊಂಡಿದ್ದಾಳೆ. ಈ ಧಾರಾವಾಹಿ ಸೆಪ್ಟೆಂಬರ್ 11ರಿಂದ, ಸೋಮವಾರದಿಂದ ಶನಿವಾರದವರಗೆ ರಾತ್ರಿ 7.30 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











